Homeಅಂಕಣಗಳುಕಳೆದುಹೋದ ದಿನಗಳುನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

1988ರ ಅಕ್ಟೋಬರ್ 2 ರಂದು ಜೈಕರ್ನಾಟಕ ಸಂಘದ ಉದ್ಘಾಟನೆಯಾಯಿತು. ನಮ್ಮ ರಾತ್ರಿಯ ಶಾಲೆಯ ವಿದ್ಯಾರ್ಥಿ ಕೃಷ್ಣಪ್ಪ ಸಂಘದ ಬೋರ್ಡನ್ನು ಉತ್ಸಾಹದಿಂದ ಬರೆದು ಕೊಟ್ಟ.

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ  -2

ನಮ್ಮ ಕಾರ್ಮಿಕ ಮಿತ್ರಸಂಘ ಮುಂದುವರೆದಿತ್ತು. ನಮ್ಮ ಗೆಳೆಯರೆಲ್ಲರ ಪ್ರಯತ್ನದಿಂದ ರಕ್ಷಿದಿಯಲ್ಲೇ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿದ್ದರಿಂದ ಮಕ್ಕಳೆಲ್ಲ ಶಾಲೆಗೆ ಹೋಗತೊಡಗಿದ್ದರು. ರಾತ್ರಿ ಶಾಲೆ ನಡೆಯುತ್ತಿದ್ದರೂ ನನ್ನ ಹೊರಗಿನ ಸುತ್ತಾಟಗಳು ಹೆಚ್ಚಾಗಿದ್ದುದರಿಂದ ಪ್ರತಿದಿನ ಶಾಲೆ ನಡೆಸಲು ಕಷ್ಟವಾಗುತ್ತಿತ್ತು. ಅದನ್ನು ನಿಲ್ಲಿಸಲೂ ಮನಸ್ಸಿರಲಿಲ್ಲ. ಆ ಸಂದರ್ಭದಲ್ಲಿ ಒಮ್ಮೆ ರವೀಂದ್ರನಾಥರು ನೀನು ತೋಟದಲ್ಲಿ ರಾತ್ರಿ ಶಾಲೆ ನಡೆಸುತ್ತಿದ್ದೀಯೆ ಅಲ್ಲವೆ, ಅದಕ್ಕಾಗಿ ಪ್ರತಿ ತಿಂಗಳು ತೋಟದಿಂದ ನೂರು ರೂಪಾಯಿ ಸಂಭಾವನೆಯನ್ನು ತೆಗೆದುಕೋ ಎಂದರು. ನಾನು ಸುಮ್ಮನೆ ತಲೆಯಾಡಿಸಿದೆ.

ಎರಡು ದಿನ ನಾನೇ ಶಾಲೆ ನಡೆಸಿದೆ. ಅದುವರೆಗೆ ಯಾರಿಂದಲೂ ಶುಲ್ಕ ಪಡೆಯದೇ ನನ್ನ ಖುಷಿಗಾಗಿ ಶಾಲೆ ನಡೆಸುತ್ತಿದ್ದೆ. ಈಗ ಶಾಲೆ ನಡೆಸಲು ನಾನು ಹಣ ಪಡೆಯುತ್ತಿದ್ದೇನೆ ಎನ್ನುವ ಭಾವವೇ ನನ್ನ ಖುಷಿಯನ್ನು ಕಿತ್ತುಕೊಂಡಿತ್ತು. ಮೂರನೆಯ ದಿನವೇ ತೋಟದಲ್ಲೇ ಸ್ವಲ್ಪ ಮಟ್ಟಿಗೆ ವಿದ್ಯಾಭ್ಯಾಸವಿದ್ದ ಕಾರ್ಮಿಕರೊಬ್ಬರಿಗೆ ಶಾಲೆಯನ್ನು ವಹಿಸಿಕೊಟ್ಟು ಸಂಭಾವನೆ ಹಣವನ್ನು ಅವರಿಗೆ ಸಿಗುವಂತೆ ಮಾಡಿದೆ. ಇದರಿಂದ ನನ್ನ ಎರಡೂ ರೀತಿಯ ಸಂದಿಗ್ಧಗಳು ನಿವಾರಣೆಯಾಗಿದ್ದವು.

ನಮ್ಮ ರಂಗ ಮತ್ತಿತರ ಚಟುವಟಿಕೆಗಳು, ತೋಟದಿಂದ ಹೊರಗೆ ವಿಸ್ತರಿಸಿಕೊಂಡಿದ್ದವು. ಬೇರೆ ಬೇರೆ ಕಡೆಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದರಿಂದ ನಮ್ಮ ನಟರು ಮೈ ಚಳಿ ಬಿಟ್ಟು ನಟಿಸತೊಡಗಿದ್ದರು. ಜನರು ನಮ್ಮನ್ನು ಕೂಲಿಕಾರ್ಮಿಕರ ತಂಡವೆಂದು ನೋಡುವುದು ಕಡಿಮೆಯಾಗಿತ್ತು. ಆದರೆ ನಮ್ಮ ನಟರಿಗೆ ಬೇರೆ ತಂಡಗಳ ನಾಟಕಗಳನ್ನು ನೋಡಿ ಅನುಭವ ಇರಲಿಲ್ಲ ಮತ್ತು ರಂಗ ತಂಡಗಳು ಹೇಗೆ ಕೆಲಸ ಮಾಡುತ್ತವೆಂಬ ಕಲ್ಪನೆಯೂ ಇರಲಿಲ್ಲ. ಇದೂ ಸೇರಿದಂತೆ ಹಲವು ಕಾರಣಗಳಿಂದ ನಾವು ಕೆಲವರು ಗೆಳೆಯರು ಸೇರಿ ನೀನಾಸಂ ತಿರುಗಾಟದ ನಾಟಕಗಳನ್ನು ನಮ್ಮಲ್ಲಿಗೆ ಕರೆಸಬೇಕೆಂದು ತೀರ್ಮಾನಿಸಿದೆವು.

1985 ರಲ್ಲಿ ಆಗಷ್ಟೇ ನೀನಾಸಂ ತಿರುಗಾಟ ರೆಪರ್ಟರಿ ಪ್ರಾರಂಭವಾಗಿತ್ತು. ನೀನಾಸಂ ತಿರುಗಾಟದ ಮೊದಲನೆಯ ವರ್ಷವೇ ಸಕಲೇಶಪುರದಲ್ಲಿ ನಾಲ್ಕು ನಾಟಕಗಳ ಐದು ಪ್ರದರ್ಶನಗಳನ್ನು ಮಾಡಿದೆವು. 1986ರ ಮಾರ್ಚ್ ತಿಂಗಳಿನಲ್ಲಿ ನಡೆದ ಆ ನಾಟಕೋತ್ಸವದಲ್ಲಿ ನಮ್ಮ ರಂಗ ತಂಡದ ಹುಡುಗರು ಅವರ ಜೊತೆಯಲ್ಲಿ  ಕೆಲಸಮಾಡಿ, ಓಡಾಡಿ, ನಾಟಕ ನೋಡಿದರು. ಈ ನಾಟಕ ಪ್ರದರ್ಶನಗಳಿಗೆ ಸುತ್ತಲಿನ ಹಲವಾರು ಕಾಫಿ ಬೆಳೆಗಾರರು ಸಹಾಯ ಮಾಡಿದ್ದರು. ಮುಖ್ಯವಾಗಿ ಹಾರ್ಲೆಯ ರವೀಂದ್ರನಾಥರು, ಹಾದಿಗೆಯ ಶಾಂತಪ್ಪನವರು ಹಾಗೂ 1980 ರಲ್ಲಿ ರಕ್ಷಿದಿ ಎಸ್ಟೇಟಿನ  ಒಂದು ಭಾಗವನ್ನು ಕೊಂಡು ಇಲ್ಲೇ ನೆಲೆಸಿದ್ದ ಜಾನ್ ಲೋಬೋ ಅವರು ಪ್ರಮುಖರು.

ಜಾನ್ ಲೋಬೋ ಅವರು ಹಿಂದೆ ಪೂರ್ಣಚಂದ್ರ ತೇಜಸ್ವಿಯವರ ನೆರೆಯವರು. ತೇಜಸ್ವಿಯವರ “ಚಿತ್ರಕೂಟ” ದ ಪಕ್ಕದಲ್ಲೇ ಇವರ ತೋಟವೂ ಇತ್ತು. “ಚಿತ್ರಕೂಟ” ಮೂಡಿಗೆರೆಯ ಹತ್ತಿರದ ಜನ್ನಾಪುರದ ಪಕ್ಕದ ಚಂದ್ರಾಪುರ ಗ್ರಾಮದಲ್ಲಿದೆ. ಹಾಗಾಗಿ ಲೋಬೋ ಕುಟುಂಬದವರಿಗೆ ತೇಜಸ್ವಿಯವರ ನಿಕಟ ಪರಿಚಯ ಇತ್ತು. ಜಾನ್ ಲೋಬೋ ಅವರ ಮಗ ರಿಚರ್ಡ್ ಲೋಬೋ ನಮ್ಮ ಬಳಗ ಸೇರಿದರು. ಮತ್ತು ನಮ್ಮ ಎಲ್ಲ ಸಾಮಾಜಿಕ ಚಟುವಟಿಕೆಗಳ ನಿರಂತರ ಜೊತೆಗಾರ ಮತ್ತು ಪೋಷಕರಲ್ಲಿ ಒಬ್ಬರಾದರು.

ರವೀಂದ್ರನಾಥರ ಜೊತೆ ರಿಚರ್ಡ್ ಲೋಬೋ

ಈ ಸಂದರ್ಭದಲ್ಲೇ ನಮ್ಮ ರಾತ್ರಿ ಶಾಲೆಯ ವಿದ್ಯಾರ್ಥಿಯೊಬ್ಬನ ಕುರಿತಾದ ವಿಚಾರವನ್ನು ಹೇಳುವುದು ಅಗತ್ಯ.

ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ದಂಪತಿಗಳ ಮಗನೊಬ್ಬ ಸಣ್ಣ ಮಗುವಾಗಿದ್ದಾಗ ಅಗ್ನಿ ಅನಾಹುತಕ್ಕೆ ಸಿಲುಕಿ ಹೇಗೋ ಬದುಕಿ ಉಳಿದಿದ್ದ. ಆದರೆ ಸುಟ್ಟಗಾಯಗಳಿಂದ ಮುಖವೊಂದಷ್ಟು ರೂಪುಗೆಟ್ಟಿತ್ತು. ಶಾಲೆಯಲ್ಲಿ ಇತರ ಮಕ್ಕಳು ತಮಾಷೆ ಮಾಡುತ್ತಿದ್ದರಂತೆ. ಇದರಿಂದಾಗಿ ಅವರಿಗೆ ಮಗುವನ್ನು ಶಾಲೆಗೆ ಸೇರಿಸಲೂ ಆಗಿರಲಿಲ್ಲ. ಆಗಲೇ ಅವನಿಗೆ ಎಂಟು ವರ್ಷವಾಗಿತ್ತು. ಆತನ ಹೆಸರು ಕೃಷ್ಣಪ್ಪ. ಆತನನ್ನು ನಮ್ಮ ರಾತ್ರಿ ಶಾಲೆಯಲ್ಲಿ ಸೇರಿಸಿಕೊಂಡಿದ್ದೆ. ಓದಲು ತುಂಬ ಚುರುಕಾಗಿಯೇ ಇದ್ದ ಆತನನ್ನು ಅವನಿಗೆ ಹನ್ನೆರಡು ವರ್ಷವಾದಾಗ ಶಿಕ್ಷಣಾಧಿಕಾರಿಗಳ ಅನುಮತಿ ಪಡೆದು ನೇರವಾಗಿ ನಾಲ್ಕನೇ ತರಗತಿಗೆ ಸೇರಿಸಿದ್ದೆ.  ಕೃಷ್ಣಪ್ಪ ಪಕ್ಕದ ಗಾಣದ ಹೊಳೆಯ ಸರ್ಕಾರಿ ಶಾಲೆಯಲ್ಲಿ ಓದತೊಡಗಿದ. ನಂತರ ನಮ್ಮ ನಾಟಕಗಳಲ್ಲಿಯೂ ಭಾಗವಹಿಸತೊಡಗಿದ. ಕೃಷ್ಣಪ್ಪ ಏಳನೇ ತರಗತಿಯ ಮುಗಿಸುವ ಸಮಯದಲ್ಲಿ ರಾಜ್ಯದಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿ ಚುನಾವಣೆ ಬಂದಿತ್ತು. ಗಣಪಯ್ಯನವರ ಜೊತೆ ಸ್ವತಂತ್ರ ಪಾರ್ಟಿಯಲ್ಲಿದ್ದ ಹಾನುಬಾಳಿನ ಅಜ್ಜೇಗೌಡರು. ಚುನಾವಣೆಗೆ ನಿಂತಿದ್ದರು. ಅವರು ಆಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು.

ಅಜ್ಜೇಗೌಡರು ಚುನಾವಣಾ ಪ್ರಚಾರ ಮಾಡುತ್ತ ಮತಯಾಚನೆಗೆ ನಮ್ಮಲ್ಲಿಗೆ ಬಂದರು. ನಾನು ಹಾನುಬಾಳು ಶಾಲೆಯಲ್ಲಿ ಓದಿದ್ದರಿಂದ ಅಜ್ಜೇಗೌಡರು ನನಗೂ ಸಾಕಷ್ಟು ಪರಿಚಿತರೇ. ಅವರ ಮಕ್ಕಳೂ ನನ್ನ ಸಹಪಾಠಿಗಳಾಗಿದ್ದರು. ಆದರೆ ಆಗ ನಮ್ಮೆಲ್ಲರ ಕಾಂಗ್ರೆಸ್ ವಿರೋಧ ಎಷ್ಟಿತ್ತೆಂದರೆ, ಮತಯಾಚನೆಗೆ ಬಂದ ಅಜ್ಜೇಗೌಡರಿಗೆ “ನೀವು ಯಾಕೆ ಬಂದಿರಿ. ಇಲ್ಲಿ ಯಾರೂ ನಿಮಗೆ ಓಟು ಕೊಡುವವರಿಲ್ಲ” ಎಂದೆಲ್ಲ ತಲೆಗೊಂದು ಮಾತಾಡಿ ಕಳುಹಿಸಿದೆವು.

ಅಜ್ಜೇಗೌಡರು ಚುನಾವಣೆಯಲ್ಲಿ ಗೆದ್ದು ತಾಲ್ಲೂಕು ಬೋರ್ಡ್ ಅಧ್ಯಕ್ಷರಾದರು!.

ನಾನು ಈ ಮೊದಲೇ ಹೇಳಿದ ಕೃಷ್ಣಪ್ಪನೆಂಬ ವಿದ್ಯಾರ್ಥಿ ಏಳನೆಯ ತರಗತಿಯಲ್ಲಿ ಪಾಸಾದ, ಅವನು ಮುಂದೆ ಹೈಸ್ಕೂಲಿಗೆ ಸಕಲೇಶಪುರದ ಸರ್ಕಾರಿ ಪ್ರೌಢಶಾಲೆಗೆ ಹೋಗಬೇಕಿತ್ತು. ಅಲ್ಲಿ ಹಾಸ್ಟೆಲ್ ಇತ್ತು. ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹೇಳಿದರೆ ಹುಡುಗನಿಗೆ ಹಾಸ್ಟೆಲಿನಲ್ಲಿ ಸ್ಥಳ ದೊರೆಯುತ್ತದೆಂದು ತಿಳಿಯಿತು. ಆದರೆ ಅಜ್ಜೇಗೌಡರಿಗೆ ನಾವು ಮುಖ ತೋರಿಸುವುದು ಹೇಗೆ?!

ಅಜ್ಜೇಗೌಡರಿಗೆ ಎಲ್ಲ ವಿಚಾರವನ್ನೂ ವಿವರಿಸಿ ಪತ್ರವೊಂದನ್ನು ಬರೆದು ಕೃಷ್ಣಪ್ಪನಲ್ಲಿ ಕೊಟ್ಟು ಅವರಲ್ಲಿಗೆ ಕಳುಹಿಸಿದೆ. ಅವನು ಅದನ್ನು ತೆಗೆದುಕೊಂಡು ಹೋಗಿ ಅಜ್ಜೇಗೌಡರನ್ನು ಭೇಟಿ ಮಾಡಿದ. ನನ್ನ ಪತ್ರವನ್ನು ನೋಡಿ ಅಜ್ಜೇಗೌಡರು ನಕ್ಕುಬಿಟ್ಟರಂತೆ. ಕೃಷ್ಣಪ್ಪನಿಗೆ ಶಾಲೆ ಮತ್ತು ಹಾಸ್ಟೆಲು ಎರಡೂ ಕಡೆ ವ್ಯವಸ್ಥೆಯಾಯಿತು. ಆತ ಅಲ್ಲಿ ಹತ್ತನೇ ತರಗತಿವರೆಗೆ ಓದಿದ. ನಂತರವೂ ನಮ್ಮ ಹಲವು ನಾಟಕಗಳಲ್ಲಿ ಭಾಗವಹಿಸಿದ, ಮುಂದೆ ಸಂಸಾರಸ್ಥನಾದ. ಇತ್ತೀಚಿನ ವರ್ಷಗಳಲ್ಲಿ ಆತನ ಮಗನೂ ನಮ್ಮ ತಂಡದಲ್ಲಿ ಅಭಿನಯಿಸಿದ. ಆದರೆ ಕೃಷ್ಣಪ್ಪ ಇಂದು ನಮ್ಮೊಂದಿಗೆ ಇಲ್ಲ ಕೆಲವು ಕಾಲದ ಹಿಂದೆ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ.

ಕೃಷ್ಣಪ್ಪನಿಗೆ ಹಾಸ್ಟೆಲಿನಲ್ಲಿ ವ್ಯವಸ್ಥೆ ಮಾಡಿಕೊಟ್ಟ ಅಜ್ಜೇಗೌಡರು. ಕರ್ನಾಟಕ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಐ.ಎಂ.ವಿಠ್ಠಲ ಮೂರ್ತಿಯವರ ಮಾವ.

ಎಪ್ಪತ್ತರ ದಶಕದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂದು ರಾಷ್ಟ್ರ ಪಶಸ್ತಿ ಪಡೆದ ಕನ್ನಡ ಚಿತ್ರ “ಕಂಕಣ” ದ ನಾಯಕ ನಟ ಯಜಮಾನ್ ಅಜ್ಜೇಗೌಡರ ಅಣ್ಣ ಬೈರೇಗೌಡರ ಮಗ. ಯಜಮಾನ್ ಮುಂದೆ ಸಕಲೇಶಪುರದ ಪುರಸಭಾಧ್ಯಕ್ಷರೂ ಆಗಿದ್ದರು.

ರವೀಂದ್ರನಾಥರು ನಮ್ಮ ರಂಗ ಪ್ರದರ್ಶನಗಳಿಗೆ ಬರುತ್ತಿದ್ದುದು ಕಡಿಮೆಯೇ. ನಾವು ಹಾರ್ಲೆ ಎಸ್ಟೇಟಿನಲ್ಲಿಯೇ ನಾಟಕ ಪ್ರದರ್ಶನ ಮಾಡಿದಾಗ ಕುಳಿತು ನೋಡಿದ್ದಿದೆ. ಆದರೆ ಹಾಗೆ ನೋಡಿದಾಗ ನಾಟಕವನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಬಲ್ಲವರಾಗಿದ್ದರು. ಅದರಿಂದ ನಮಗೆ ಮುಂದಿನ ಪ್ರದರ್ಶನಕ್ಕೆ ಒಂದಷ್ಟು ಹೊಸ ಹೊಳಹುಗಳು ದೊರೆಯುತ್ತಿದ್ದವು. ಮುಂದಿನ ದಿನಗಳಲ್ಲಿ ನಮ್ಮ ಎಲ್ಲ ರಂಗ ಚಟುವಟಿಕೆಗಳಿಗೂ ರವೀಂದ್ರನಾಥ ದಂಪತಿ ಖಾಯಂ ಪೋಷಕರಾಗಿದ್ದರು.

ಆದರೆ ನಮಗೇ ನಮ್ಮ ಚಟುವಟಿಕೆಗಳ ಬಗ್ಗೆ ಅತೃಪ್ತಿ ಮೂಡಿತ್ತು. ಅದನ್ನು ಹೊರಗೆ ವಿಸ್ತರಿಸಬೇಕಾದರೆ ನಾವು ಅದಕ್ಕೊಂದು ಹೊಸರೂಪು ಕೊಡುವುದು ಅಗತ್ಯವಿತ್ತು. ಇದೆಲ್ಲವನ್ನೂ ಯೋಚಿಸಿ ಸುತ್ತಲಿನ ಗ್ರಾಮಗಳ ಹಲವರನ್ನೂ ಸೇರಿಸಿಕೊಂಡು  ನಮ್ಮ ಪಂಚಾಯತ್ ಕೇಂದ್ರವಾದ ಬೆಳ್ಳೇಕೆರೆಯನ್ನೇ ಕೇಂದ್ರವಾಗಿಟ್ಟುಕೊಂಡು. ‘ಜೈಕರ್ನಾಟಕ ಸಂಘ ಬೆಳ್ಳೇಕೆರೆ’ ಎಂಬ ಸಂಘವನ್ನು ಸ್ಥಾಪಿಸಿದೆವು. ಕಾರ್ಮಿಕ ಮಿತ್ರ ಸಂಘ ಅದರಲ್ಲಿ ವಿಲೀನವಾಯಿತು.

1988ರ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆಯೊಂದಿಗೆ ಅಂದಿನ ಜಿಲ್ಲಾಪರಿಷತ್ ಸದಸ್ಯರಾಗಿದ್ದ ಕಾಳೀಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಜೈಕರ್ನಾಟಕ ಸಂಘದ ಉದ್ಘಾಟನೆಯಾಯಿತು. ನಮ್ಮ ರಾತ್ರಿಯ ಶಾಲೆಯ ವಿದ್ಯಾರ್ಥಿ ಕೃಷ್ಣಪ್ಪ ಸಂಘದ ಬೋರ್ಡನ್ನು ನಾನೇ ಬರೆಯುತ್ತೇನೆಂದು ಉತ್ಸಾಹದಿಂದ ಬರೆದು ಕೊಟ್ಟ.

ಜೈಕರ್ನಾಟಕ ಸಂಘ ಪ್ರಾರಂಭವಾದ ಮೊದಲ ತಿಂಗಳಿನಲ್ಲೇ ಅಂದರೆ 1988 ನವೆಂಬರ್ ಒಂದರಂದು ನಮ್ಮ ಮೊದಲ ರಂಗತರಭೇತಿ ಶಿಬಿರ ಪ್ರಾರಂಭವಾಯಿತು. ರಂಗ ನಿರ್ದೇಶಕರಾಗಿ ಆಗಷ್ಟೇ ಮೈಸೂರು ರಂಗಾಯಣಕ್ಕೆ ಆಯ್ಕೆಯಾಗಿದ್ದ ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ ಇದ್ದರು. ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಪೂರ್ಣಚಂದ್ರ ತೇಜಸ್ವಿಯವರು ಬಂದಿದ್ದರು.

ನಮ್ಮ ಪ್ರಥಮ ರಂಗ ಶಿಬಿರದಲ್ಲಿ ತೇಜಸ್ವಿ ,1/11/1988

ಆ ವರ್ಷ ನಮ್ಮ ತಂಡದಿಂದ ಮತ್ತೊಂದು ನಾಟಕ ಪ್ರದರ್ಶನವಾಯಿತು. ಅದು ಖ್ಯಾತ ರಂಗ ನಿರ್ದೇಶಕ ದ್ರುವರಾಜ ದೇಶಪಾಂಡೆಯವರು ಬರೆದು ನಿರ್ದೇಶಿದ “ಕಣಿವೆ ಕೆಳಗಿನ ಕ್ರಾಂತಿ” ಅವರು ನಮ್ಮ ಪರಿಸರವನ್ನು ನೋಡಿ ಇಲ್ಲೇ ಕುಳಿತು ಅವರು ಆ ನಾಟಕವನ್ನು ರಚಿಸಿದ್ದರು. ಈ ನಾಟಕದ ಇನ್ನೊಂದು ವಿಶೇಷವೆಂದರೆ ಕವಿ ಸುಬ್ಬು ಹೊಲೆಯಾರ್ ಇಲ್ಲಿ ಬಂದು ಭಾಗವಹಿಸಿ ಆ ನಾಟಕಕ್ಕೆ ಗೀತೆಗಳನ್ನು ರಚಿಸಿದ್ದು. ಅವರು ಆಗಷ್ಟೇ ನಿನಾಸಂ ತರಬೇತಿ ಮತ್ತು ತಿರುಗಾಟವನ್ನು ಮುಗಿಸಿದ್ದರು. ಸುಬ್ಬು ಹೊಲೆಯಾರ್ ಅವರು ಕಾಫಿವಲಯದಿಂದ ಬಂದ ಪ್ರಮುಖ ಕವಿ. ಸಾಹಿತಿ, ಕಾದಂಬರಿಕಾರ ಹಾಡ್ಳಹಳ್ಳಿ ನಾಗರಾಜ್ ಕೂಡಾ ಇದೇ ವಲಯದವರು.

ನಾಟಕ ಕಣಿವೆ ಕೆಳಗಿನ ಕ್ರಾಂತಿ, 30/5/1989

ಇದೇ ಸಮಯಕ್ಕೆ ಕೊಡಗಿನಲ್ಲಿ ಅಡ್ಡಂಡ ಕಾರಿಯಪ್ಪ ಮತ್ತು ಅನಿತಾ ಅವರ ಸೃಷ್ಟಿ ಕೊಡಗು ರಂಗ ಪ್ರಾರಂಭವಾಯಿತು. ಈ ತಂಡ ಕೊಡಗಿನ ಇತಿಹಾಸ ಮತ್ತು ಸಾಮಾಜಿಕ ವಿಚಾರಗಳನ್ನು ಇಟ್ಟುಕೊಂಡ, ದಿವಾನ್ ಬೋಪಣ್ಣ, ಕವಿ ಹರದಾಸ ಅಪ್ಪಚ್ಚ, ಮುಂತಾದ ನಾಟಕಗಳನ್ನಲ್ಲದೆ ಫ್ರೆಂಚ್ ನಾಟಕಕಾರ ಮೊಲಿಯೇರ್‌ನ ಬೂರ್ಜ್ವಾ ಜಂಟಲ್‌ಮನ್ ಅನ್ನು ರಂಗಕ್ಕೆ ತಂದಿತು. ಇವೆಲ್ಲ ನಾಟಕಗಳು ನಮ್ಮಲ್ಲೂ ಪ್ರದರ್ಶನಗಳಾದವು.

ಕಾರಿಯಪ್ಪ ಈಗ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -31: ಕರ್ನಾಟಕ ಕಾಫಿ ಮತ್ತು ಗಣಪಯ್ಯನವರ ನಂಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...