ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು, ಅವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಮೂರರಿಂದ ನಾಲ್ಕು ಪ್ರವಾಸಿಗರು ಕೂಡ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿ ನೀಡಿದ್ದು, ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿರಲಿಲ್ಲ ಎಂಬುವುದು ಆರಂಭಿಕ ಮಾಹಿತಿಯಿಂದ ತಿಳಿದು ಬಂದಿದ್ದಾರೆ ಎಂದಿದ್ದಾರೆ.
ಗೋವಾದ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿರುವ ಜನಪ್ರಿಯ ಪಾರ್ಟಿ ಸ್ಥಳವಾದ ಬಿರ್ಚ್ ಬೈ ರೋಮಿಯೋ ಲೇನ್ ಕ್ಲಬ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಕ್ಲಬ್ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿತ್ತು ಎಂದು ವರದಿಗಳು ವಿವರಿಸಿವೆ.
“ನಾವು ಕ್ಲಬ್ ಆಡಳಿತ ಮಂಡಳಿಯ ವಿರುದ್ಧ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದರೂ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ” ಎಂದು ಸಿಎಂ ಸಾವಂತ್ ತಿಳಿಸಿದ್ದಾರೆ.
“ಕರಾವಳಿ ರಾಜ್ಯದಲ್ಲಿ ಪ್ರವಾಸಿ ಋತುವಿನ ಗರಿಷ್ಠ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ” ಎಂದು ಸಾವಂತ್ ಹೇಳಿದ್ದಾರೆ.
“ಘಟನೆಯ ಬಗ್ಗೆ ನಾವು ವಿವರವಾದ ತನಿಖೆ ನಡೆಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಸಾವಂತ್ ಭರವಸೆ ನೀಡಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಗೋವಾ ಪೊಲೀಸ್ ಮುಖ್ಯಸ್ಥ ಅಲೋಕ್ ಕುಮಾರ್ ತಿಳಿಸಿದ್ದಾರೆ.
“ಎಲ್ಲಾ ಶವಗಳನ್ನು ಘಟನಾ ಸ್ಥಳದಿಂದ ಬಂಬೋಲಿಮ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಎಂದು ಸ್ಥಳೀಯ ಶಾಸಕ ಮೈಕೆಲ್ ಲೋಬೊ ಹೇಳಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಗಳನ್ನು ನಡೆಸಿವೆ ಎಂದು ಲೋಬೊ ಸುದ್ದಿಗಾರರಿಗೆ ತಿಳಿಸಿದ್ದಾರೆ.


