Homeಮುಖಪುಟಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

- Advertisement -
- Advertisement -

ಎಲ್ಲರಿಗೂ ಗೊತ್ತಿರುವ ಸಂಗತಿ ಏನೆಂದರೆ, ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ಸಂಸ್ಥೆಗಳು ಮುಗಿಬಿದ್ದಿರುವುದು ಭ್ರಷ್ಟಾಚಾರ ನಿಗ್ರಹಕ್ಕಲ್ಲ. ಗಣಿ ಲೂಟಿ ಹೊಡೆದ ಆರೋಪ ಹೊತ್ತಿರುವ ಮಾಜಿ ಮಂತ್ರಿ ಜನಾರ್ಧನರೆಡ್ಡಿಯನ್ನು ಜೊತೆಯಲ್ಲಿಟ್ಟುಕೊಂಡ ಬಿಜೆಪಿಯು ಗಣಿ ಕಳ್ಳರನ್ನು ರಕ್ಷಿಸುತ್ತಿದೆ. ಆಪರೇಷನ್ ಕಮಲದ ಮಾತು ಬಂದಾಗಲೆಲ್ಲಾ ಬಿಜೆಪಿ ನಾಯಕರುಗಳು, ‘ಅದರ ಕುರಿತು ನಾವೇನೂ ಹೇಳುವುದಿಲ್ಲ, ಯಡಿಯೂರಪ್ಪನವರು ಮತ್ತು ಶ್ರೀರಾಮುಲು ಅದನ್ನು ನೋಡಿಕೊಳ್ತಾರೆ’ ಎಂದು ಯಾವ ಎಗ್ಗೂ ಸಿಗ್ಗೂ ಇಲ್ಲದೇ ಹೇಳುತ್ತಿದ್ದಾರೆ. ಈಗ ಡಿ.ಕೆ.ಶಿವಕುಮಾರ್‍ರು ಮಾತ್ರ ಭ್ರಷ್ಟರು ಎಂದು ದಾಳಿ ನಡೆಸುತ್ತಿರುವುದು ಕೇವಲ ಅವರನ್ನು ಮಣಿಸಲಿಕ್ಕೆ. ಆ ಮೂಲಕ ಇತರ ನಾಯಕರುಗಳಿಗೂ ಸಂದೇಶ ರವಾನಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಹಾಗೆಂದು ಡಿ.ಕೆ.ಶಿವಕುಮಾರ್‍ರ ಕುಟುಂಬ ಸಾಚಾ ಏನಲ್ಲ. ಅಧಿಕಾರಕ್ಕೇರುವ ಸಂದರ್ಭ ಬಂದಾಗ ಫಲವತ್ತಾದ ಖಾತೆಗಳನ್ನು ಕೇಳುವುದು, ಹೈಕಮ್ಯಾಂಡ್ ಸೇರಿದಂತೆ ಎಲ್ಲರನ್ನೂ ‘ಸಂತೃಪ್ತ’ರನ್ನಾಗಿಸಲು ಸಾಧ್ಯವಾಗುವುದು, ಚುನಾವಣೆಯಲ್ಲೂ ಇತರ ಕ್ಷೇತ್ರಗಳಿಗೂ ಸಂಪನ್ಮೂಲ ಹೊಂದಿಸುವ ಜವಾಬ್ದಾರಿ ಹೊರುವುದು, ವಿವಿಧ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮುಂದೆ ನಿಂತು ‘ಏನೇ ಬರಲಿ ನೋಡಿಕೊಳ್ತೇನೆ’ ಎಂಬ ರೀತಿಯಲ್ಲಿ ಮುಂದೆ ನುಗ್ಗುವುದು ಇವೆಲ್ಲವೂ ಕೇವಲ ರಾಜಕೀಯ ಧೈರ್ಯದ ಹೆಗ್ಗುರುತುಗಳಲ್ಲ. ವಿವಿಧ ರೀತಿಗಳಿಂದ ರಾಶಿ ಮಾಡಿಟ್ಟುಕೊಂಡಿರುವ ಸಂಪತ್ತು ತಂದುಕೊಟ್ಟಿರುವ ಆರ್ಥಿಕ ಧೈರ್ಯದ ಕುರುಹು.
ಇದಕ್ಕಾಗಿ ಡಿ.ಕೆ.ಶಿವಕುಮಾರ್ ಕೆಲವು ರೀತಿಯ ಸಂಬಂಧಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ತಾನೇ ಅವರು ಹೇಳಿದ ‘ಯಡಿಯೂರಪ್ಪನವರು ಈಗಲೂ ನಮ್ಮ ಸ್ನೇಹಿತರೇ’ ಮಾತು ಅರ್ಧ ಸುಳ್ಳಾದರೂ ಅರ್ಧ ಸತ್ಯ ಸಹಾ ಹೌದು. ಬಿಜೆಪಿ ಸರ್ಕಾರವಿದ್ದಾಗ ಇಂಧನ ಸಚಿವರಾಗಿದ್ದು ಶೋಭಾ ಕರಂದ್ಲಾಜೆ; ಅದನ್ನು ನಿರ್ವಹಿಸುತ್ತಿದ್ದ ಶೋಭಾ ಕರಂದ್ಲಾಜೆಯವರು ಮಾಡಿದ ಅವ್ಯವಹಾರವನ್ನು ಮುಚ್ಚಿ ಹಾಕಲು, ಸದನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ವತಃ ಡಿ.ಕೆ. ಹೊತ್ತುಕೊಂಡಿದ್ದರು. ಆಗ ಇಬ್ಬರ ವಿರುದ್ಧವೂ ತೊಡೆ ತಟ್ಟಿದ್ದ ಎಚ್.ಡಿ.ಕೆ. ಈಗ ಡಿ.ಕೆ. ಅವರ ಪಾರ್ಟ್‍ನರ್. ಕೇವಲ ಅಧಿಕಾರ ಹಂಚಿಕೊಳ್ಳುವುದರಲ್ಲಿ ಮಾತ್ರವಲ್ಲ. ಈ ಸದ್ಯ ಬಿಜೆಪಿಯನ್ನು ಎದುರಿಸಲು ಮತ್ತು ಬಿಜೆಪಿಯಿಂದ ತೊಂದರೆ ಅನುಭವಿಸುವುದರಲ್ಲೂ ಪಾರ್ಟ್‍ನರ್‍ಗಳೇ.
ವಾಸ್ತವದಲ್ಲಿ ಯಡಿಯೂರಪ್ಪನವರನ್ನು ಡಿ.ಕೆ. ಪಾರು ಮಾಡಿದ್ದು ಇಂಧನ ಖಾತೆಯ ಅವ್ಯವಹಾರದ ವಿಚಾರದಲ್ಲಿ ಮಾತ್ರವಲ್ಲಾ.. ಅಕ್ಟೋಬರ್ 21, 2016ರಂದು ನಡೆದ ಒಂದು ಸಿನೀಮಿಯ ಘಟನೆಯು ಯಡಿಯೂರಪ್ಪನವರಿಗೆ ಹೆದರಿಕೆ ಹುಟ್ಟಿಸಿತ್ತು. ಅಂದು ವಿಧಾನಸೌಧದ ಪಶ್ಚಿಮ ದ್ವಾರದಿಂದ ಹೊರಟ ಒಂದು ವೋಕ್ಸ್‍ವ್ಯಾಗನ್ ಪೋಲೋ ಕಾರನ್ನು (ಕೆಎ-04, ಎಂ.ಎಂ 9018) ಪೊಲೀಸರು ಶೋಧಿಸಿದಾಗ ಅದರಲ್ಲಿ 1.9 ಕೋಟಿ ಹಣ ಸಿಕ್ಕಿತು. ಕಾರಿನಲ್ಲಿದ್ದ ಸಿದ್ಧಾರ್ಥ ಎಂಬ ವಕೀಲರನ್ನು ಹಣದ ಮೂಲದ ಬಗ್ಗೆ ಪೊಲೀಸರು ಪ್ರಶ್ನಿಸಿದರು. ಆ ವಕೀಲರು 2-3 ಬೇರೆ ಬೇರೆ ಉತ್ತರಗಳನ್ನು ಹೇಳಿದರು. ಪೊಲೀಸರು ಕೇಸು ರಿಜಿಸ್ಟರ್ ಮಾಡಿ ಹಣ ಮತ್ತು ಕಾರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
3 ದಿನಗಳ ನಂತರ ಎಚ್.ಡಿ.ಕುಮಾರಸ್ವಾಮಿಯವರು ಈ ಸಂಬಂಧ ತನಿಖೆಯಾಗಬೇಕು ಮತ್ತು ಆ ಕಾರಿನಲ್ಲಿದ್ದ ಹಣ ಎಲ್ಲಿಂದ ಬಂದಿತು, ಎಲ್ಲಿಗೆ ಹೋಗುತ್ತಿತ್ತು ಎಂಬ ಕುರಿತು ಯಡಿಯೂರಪ್ಪನವರನ್ನು ಪ್ರಶ್ನಿಸಬೇಕು ಎಂದು ಪತ್ರಕರ್ತರ ಮುಂದೆ ಹೇಳಿದರು. ವಾಸ್ತವದಲ್ಲಿ ಒಂದು ತನಿಖೆ ಅಷ್ಟರಲ್ಲಾಗಲೇ ಗುಪ್ತವಾಗಿ ನಡೆದು ಬಿಟ್ಟಿತ್ತು. ಆ ಕಾರು ಬಂದಿದ್ದ ದಿಕ್ಕಿನ ಸಿಸಿಟಿವಿಗಳನ್ನು ಪೊಲೀಸ್ ಇಲಾಖೆಯ ಒಂದು ತಂಡ ಪರಿಶೀಲಿಸಿತು. ಅದು ಸೀದಾ ಕುಮಾರಪಾರ್ಕ್‍ನ ಒಂದು ನಿರ್ದಿಷ್ಟ ಮನೆಯಿಂದ ಹೊರಟಿತ್ತು. ಈ ವಕೀಲ ಸಿದ್ಧಾರ್ಥ, ಕಾರಿನಲ್ಲಿ ಹಣ ಸಿಕ್ಕ ಮರುದಿನ ತೀರ್ಪು ಬಂದ ಕೇಸಿನಲ್ಲಿ ಯಡಿಯೂರಪ್ಪನವರ ಮಗನ ಪರವಾಗಿ ವಾದಿಸಿದ್ದರು.
ಈ ಹಗರಣವನ್ನು ಬಯಲಿಗೆಳೆದು ಸಂಬಂಧಪಟ್ಟವರನ್ನೆಲ್ಲಾ ಹಿಡಿದು ಹಾಕುವ ಧೈರ್ಯವನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತೋರಿದ್ದರೆ, ಅದು ಜನಾರ್ಧನರೆಡ್ಡಿಯ ಜಾಮೀನು ಕೇಸಿನ ರೀತಿ ಆಗುತ್ತಿತ್ತು. ಅದನ್ನಾಗದಂತೆ ತಡೆದವರು ಡಿ.ಕೆ.ಶಿವಕುಮಾರ್ ಎಂದು ವಿಧಾನಸೌಧದ ಹಲವು ಅಧಿಕಾರಿಗಳು ಕಂಡುಕೊಂಡಿದ್ದರು. ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಡಿ.ಕೆ.ಶಿ ಸಹಾ ಉಪಕೃತರಾಗಿದ್ದುದರಿಂದಲೇ ಈ ಮಟ್ಟಿಗಿನ ಪ್ರತ್ಯುಪಕಾರವನ್ನು ಅವರು ಮಾಡಿದ್ದರೆಂಬುದು ಇಬ್ಬರ ಸಂಬಂಧವನ್ನು ಬಲ್ಲವರ ಮಾತಾಗಿತ್ತು.
ಆದ್ದರಿಂದಲೇ ಡಿ.ಕೆ.ಶಿ ಆಸ್ತಿ ಮೇಲೆ ದಾಳಿ ನಡೆದಾಗ ಯಡಿಯೂರಪ್ಪನವರು ಬಹಿರಂಗವಾಗಿ ಮಾತುಗಳನ್ನಾಡದೇ ಮೃದುಧೋರಣೆ ತೋರಿದ್ದರು. ಇದಕ್ಕಾಗಿ ಅವರು ಬಿಜೆಪಿ ಹೈಕಮ್ಯಾಂಡ್‍ನ ಕೋಪವನ್ನೂ ಎದುರಿಸಬೇಕಾಗಿ ಬಂದಿತು. ಅಲ್ಲಿಗೆ ಅವರಿಬ್ಬರ ಸ್ನೇಹ ಕೊನೆಗೊಂಡಿತ್ತು. ಅಲ್ಲಿಂದ ಮುಂದಕ್ಕೆ ಪಕ್ಷದ ವ್ಯೂಹದ ಭಾಗವಾಗಿ ಯಡಿಯೂರಪ್ಪನವರೂ ಆಡುತ್ತಿದ್ದಾರೆ. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲೂ ಸಿದ್ದರಾಮಯ್ಯನವರನ್ನು ಹೊಗಳಿದ ಯಡ್ಡಿ ‘ಅಪ್ಪ ಮಕ್ಕಳ’ ವಿರುದ್ಧ ಹರಿಹಾಯ್ದಿದ್ದರು.
ಈ ಸದ್ಯ ದಕ್ಷಿಣ ಕರ್ನಾಟಕದ ಒಕ್ಕಲಿಗರ ಪ್ರದೇಶಕ್ಕೆ ಲಗ್ಗೆ ಹಾಕಲಿಚ್ಛಿಸಿರುವ ಬಿಜೆಪಿಯು ಗೌಡರ ಫ್ಯಾಮಿಲಿ ಮತ್ತು ಡಿಕೆಶಿ ಫ್ಯಾಮಿಲಿಯನ್ನು ಮಣಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸಿದ್ದರಾಮಯ್ಯನವರು ಮತ್ತು ಜಾರಕಿಹೊಳಿ ಬ್ರದರ್ಸ್ ಬಗ್ಗೆ ಮೃದುವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಬಾರದು, ಅವರಿಗೆ ಯಾರೆಲ್ಲಾ ಮಗ್ಗುಲಮುಳ್ಳಾದರೂ ಒಳ್ಳೆಯದು; ನಂತರ ಉಂಟಾಗುವ ಧ್ರುವೀಕರಣದ ಲಾಭವನ್ನು ಬಿಜೆಪಿಯ ಒಕ್ಕಲಿಗ ನಾಯಕರು ಪಡೆದುಕೊಳ್ಳಬೇಕೆಂಬುದು ಅದರ ಇರಾದೆ.
ಆದರೆ, ಇದು ಅವರ ಪರವಾಗಿ ವರ್ಕೌಟ್ ಆಗುತ್ತಿಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಕ್ಕಲಿಗ ನಾಯಕರನ್ನು ಎದುರು ಹಾಕಿಕೊಳ್ಳಲು ಬಿಜೆಪಿಯ ಯಾವೊಬ್ಬ ಒಕ್ಕಲಿಗ ನಾಯಕರೂ ರೆಡಿಯಾಗುತ್ತಿಲ್ಲ. ಅದು ಮತ್ತೆ ಮತ್ತೆ ಯಡಿಯೂರಪ್ಪನವರಿಗೇ ಬಂದು ಸುತ್ತಿಕೊಳ್ಳುತ್ತಿದೆ. ಸುತ್ತಿಕೊಳ್ಳಲಿ ಎಂದು ಡಿಕೆಶಿ ಬ್ರದರ್ಸ್ ಮತ್ತು ಗೌಡರ ಫ್ಯಾಮಿಲಿ ಬಯಸಿದೆ. ಇದೇ ಕಾರಣಕ್ಕೇನೇ ‘ನಮ್ಮ ವಿರುದ್ಧ ಯಡಿಯೂರಪ್ಪನವರು ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ’ ಎಂದು ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಾರೆ; ‘ಯಡಿಯೂರಪ್ಪನವರ ಮಗ ಪದೇ ಪದೇ ತೆರಿಗೆ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆಂಬುದು ಗೊತ್ತು’ ಎಂದು ಕುಮಾರಸ್ವಾಮಿಯವರೂ ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ. ಕುಮಾರಸ್ವಾಮಿಯವರ ದೊಡ್ಡ ಅಣ್ಣ ಮಾಜಿ ಅಧಿಕಾರಿ ಬಾಲಕೃಷ್ಣೇಗೌಡರ ಮನೆ ಮೇಲೆ ಮತ್ತು ಎಚ್‍ಡಿಕೆಯ ಖಾಸಾ ಚಾರ್ಟರ್ಡ್ ಅಕೌಂಟೆಂಟ್ ಸುನಿಲ್‍ರ ಮನೆ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂದರೆ ತಮ್ಮನ್ನು ಬಲಿಪಶು ಮಾಡಲು ಬಿಜೆಪಿ ಸಂಚು ನಡೆಸುತ್ತಿದೆ, ಅದರಲ್ಲೂ ಯಡಿಯೂರಪ್ಪನವರು ಅಂತಹ ಸಂಚಿನ ರೂವಾರಿ ಎಂಬುದನ್ನು ಮುಂದಿಡಲು ಈ ಎರಡೂ ಕುಟುಂಬಗಳು ಸಂದೇಶ ನೀಡಬಯಸುತ್ತಿವೆ.
ದೆಹಲಿಗೆ ಹೋಗುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥರನ್ನು ಭೇಟಿಯಾಗಿದ್ದೂ ಇಂತಹುದ್ದೇ ಕಾರಣಕ್ಕೆ. ಇದು ಬಿಜೆಪಿಯು ನಡೆಸುತ್ತಿರುವ ಒಕ್ಕಲಿಗ ವಿರೋಧಿ ಪಾಲಿಟಿಕ್ಸ್‍ನ ಭಾಗ ಮತ್ತು ಮಠವು ತಮ್ಮ ಪರವಾಗಿ ನಿಲ್ಲಬೇಕೆಂಬುದು ಡಿಕೆಶಿ ಆಗ್ರಹವಾಗಿತ್ತು.
ಇದಕ್ಕೊಂದು ಜಾತಿ ರೂಪ ಕೊಡಬಹುದೆಂದು ಸಂಬಂಧಪಟ್ಟ ರಾಜಕಾರಣಿಗಳು ಈಗಾಗಲೇ ಲೆಕ್ಕಾಚಾರ ಹಾಕಿಯಾಗಿದೆ. ಡಿ.ಕೆ.ಶಿವಕುಮಾರ್ ಯಾವ ಕಾರಣಕ್ಕೂ ಸಿ.ಎಂ ಆಗುವ ಆಸೆಯನ್ನು ಪಕ್ಕಕ್ಕಿಡುವ ವ್ಯಕ್ತಿಯಲ್ಲ. ಸಿ.ಎಂ. ಆಗುವುದನ್ನು ಬಿಟ್ಟರೆ ಕೇಂದ್ರ ಮಂತ್ರಿಯೋ ಮತ್ತೊಂದೋ ಆಗಿ ತಮ್ಮ ರಾಜಕೀಯ ಜೀವನವನ್ನು ಕೊನೆಗೊಳಿಸಿಕೊಳ್ಳುವುದನ್ನು ಅವರು ಯೋಚಿಸಿಲ್ಲ. ಸಂಪತ್ತು ಗುಡ್ಡೆ ಹಾಕಿಕೊಳ್ಳುತ್ತಿರುವುದು ಮುಂದೊಂದು ದಿನ ‘ರಾಜ್ಯದ ಇಡೀ ಚುನಾವಣೆ ನಾನು ನಡೆಸುತ್ತೇನೆ, ಸಿಎಂ ಮಾಡುತ್ತೇವೆಂಬ ಖಚಿತ ಭರವಸೆ ಕೊಡಿ’ ಎಂದು ಹೈಕಮ್ಯಾಂಡ್ ಮುಂದೆ ಹೇಳಲೂ ಸಹಾ ಆಗಿದೆ.
‘ನಾವು ಏನೂ ತಪ್ಪು ಮಾಡಿಲ್ಲ; ಎಲ್ಲಾ ವ್ಯವಹಾರಗಳನ್ನು ಕ್ರಮಬದ್ಧವಾಗಿಯೇ ಮಾಡಿದ್ದೇವೆ. ಜೈಲಿಗೆಲ್ಲಾ ಹೆದರುವವರಲ್ಲ’ ಎಂದು ಡಿ.ಕೆ. ಅಣ್ಣ ತಮ್ಮಂದಿರಿಬ್ಬರೂ ಹೇಳಿದ್ದಾರೆ. ಬಂದದ್ದು ಬರಲಿ, ತಮ್ಮ ಆಕ್ರಮಣಕಾರಿ ರಾಜಕಾರಣದಿಂದ ಹಿಂತೆಗೆಯಬಾರದು ಎಂದು ತೀರ್ಮಾನಿಸಿಕೊಂಡಿದ್ದಾರೆ. ಒಂದು ವೇಳೆ ಬಂಧನವೇ ಆಗುವುದಾದಲ್ಲಿ ಅದು ತಮಗೇ ಅನುಕಂಪ ತರುವಂತೆ ಮಾಡಿಕೊಳ್ಳಬೇಕೆಂಬುದು ಅವರ ಪ್ಲಾನ್. ಆದರೆ, ಅದಕ್ಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಹೆಚ್ಚಿನ ಸಾಥ್ ಸಿಗಲಾರದು ಎಂಬುದು ಅವರಿಗೆ ಗೊತ್ತು. ಹಾಗಾಗಿಯೇ ಜೆಡಿಎಸ್ ಫ್ಯಾಮಿಲಿಯ ಜೊತೆಗೆ ಹೈಕಮ್ಯಾಂಡ್‍ನ ಬೆಂಬಲ ಸಿಕ್ಕರೆ ಸಾಕೆಂದು ಯೋಚಿಸಿ, ದೆಹಲಿಗೆ ಹೋದರು. ಅಲ್ಲಿಗೆ ಹೋದವರೇ ಅಹ್ಮದ್ ಪಟೇಲರನ್ನು ಕಂಡರು. ಅಲ್ಲಿ ಅವರಿಗೆ ಬೇಕಿದ್ದುಷ್ಟು ಬೆಂಬಲವೂ ಸಿಕ್ಕಿತು. ಅಹ್ಮದ್ ಪಟೇಲರು ರಾಜ್ಯಸಭೆ ಸದಸ್ಯರಾಗಿ ಪುನರಾಯ್ಕೆಯಾಗುವಲ್ಲಿ ಡಿಕೆಶಿಯವರ ರೆಸಾರ್ಟ್ ಪಾಲಿಟಿಕ್ಸ್‍ನ ಪಾತ್ರ ದೊಡ್ಡದಿತ್ತು. ಈಗ ಎಐಸಿಸಿಯ ಖಜಾಂಚಿಯೂ ಆಗಿರುವ ಅಹ್ಮದ್ ಪಟೇಲರಿಗೆ ಡಿಕೆಶಿಯಂತಹ ಕುಳದ ಅಗತ್ಯ ಮುಂದಕ್ಕೂ ಇದೆ. ಹಾಗಾಗಿ ಅಹ್ಮದ್ ಪಟೇಲರು ಜೊತೆಗೆ ನಿಲ್ಲುವುದರ ಬಗ್ಗೆ ಸಂಶಯವಿರಲಿಲ್ಲ.
ಅದರ ಜೊತೆಗೆ ‘ಬಿಎಸ್‍ವೈ ಮತ್ತು ದೆಹಲಿ ನಮ್ಮ ದೋಣಿಯನ್ನು ಮುರಿಯಲು ವಿವಿಧ ಕೇಂದ್ರೀಯ ಏಜೆನ್ಸಿಗಳ ಮೂಲಕ ಯತ್ನಿಸುತ್ತಿದ್ದಾರೆ. ಆದರೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ’ ಎಂಬ ಗೌಡರ ಕುಟುಂಬದ ಸಾರಥಿಯಾದ ಮುಖ್ಯಮಂತ್ರಿಯ ಖಡಕ್ ಮಾತು ಸಹಾ ಬ್ರದರ್ಸ್‍ಗೆ ಬೇಕಿದ್ದ ಸಾಥ್ ಕೊಟ್ಟಿದೆ. ಹಾಗಾಗಿ ಏನೇ ಬಂದರೂ ನೋಡಿಯೇ ಬಿಡೋಣ ಎಂಬ ತೀರ್ಮಾನವನ್ನು ಈರ್ವರೂ ಮಾಡಿಯಾಗಿದೆ.
ಇವೆಲ್ಲವೂ ಎಲ್ಲಿಗೆ ಹೋಗಿ ನಿಲ್ಲುತ್ತದೆಂಬುದನ್ನು ಈಗಲೇ ಹೇಳಲಾಗದು. ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೇ ಹೋಗಿಬಂದ ಯಡಿಯೂರಪ್ಪನವರು ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರೆ, ಡಿಕೆಶಿ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡರೆ ತಪ್ಪು, ಶ್ರೀರಾಮುಲು ರೆಡ್ಡಿಗಳು ಶಾಸಕರನ್ನು ಕೊಂಡುಕೊಂಡರೆ ಸರಿ ಎಂಬ ವಾದವನ್ನು ಮುಂದಿಟ್ಟರೆ ಜನರಿಗೆ ಒಪ್ಪಿಗೆಯಾಗದು. ಭ್ರಷ್ಟಾಚಾರವನ್ನು ನಡೆಸಿ, ಸಂಪತ್ತು ಗುಡ್ಡೆ ಹಾಕಿಕೊಳ್ಳುವುದರಲ್ಲಿ ಈ ಎರಡೂ ಫ್ಯಾಮಿಲಿಗಳು ಬಿಜೆಪಿಯ ಈ ಕುಳಗಳ ಜೊತೆ ಪೈಪೋಟಿ ನೀಡಲು ಪ್ರಯತ್ನಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ದುರಂತವೆಂದರೆ, ಬಿಜೆಪಿಯಂತಹ ಭ್ರಷ್ಟ ಪಕ್ಷವು ಕಾಂಗ್ರೆಸ್-ಜೆಡಿಎಸ್‍ಗಳ ಭ್ರಷ್ಟಾಚಾರದ ಬಗ್ಗೆ ಮಾತಾಡುವುದನ್ನು ರಾಜ್ಯದ ಜನತೆ ಕೇಳಬೇಕಾಗಿ ಬಂದಿದೆ.
ಅಂತಿಮವಾಗಿ ಇವು ಯಾರ ಭ್ರಷ್ಟಾಚಾರವನ್ನೂ ಕಡಿಮೆ ಮಾಡದೇ, ಜಾತಿ ಧ್ರುವೀಕರಣದ ಲೆಕ್ಕಾಚಾರಗಳ ಮೇಲಾಟವೇ ಹೆಚ್ಚಾಗುವ ಸಾಧ್ಯತೆ ಇದೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...