ಇನ್ನಾದರು ನಮ್ಮ ಅಜೆಂಡಾದ ಮೇಲೆ ಕೆಲಸ ಮಾಡೋಣ

0

ಬಂಧುಗಳೇ,
ಇಂದು ಬೆಳಿಗ್ಗೆ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ. ನನಗನ್ನಿಸುತ್ತದೆ, ಈಗ ಬಹುಶಃ ಕೆಲವು ಆಯ್ದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿ ಫಲಿತಾಂಶ ಬರುವ ರೀತಿಯಲ್ಲಿ ಕೆಲಸ ಮಾಡುವ ಸಮಯ ಬಂದಿದೆ. ಆ ಕುರಿತ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
ಪ್ರತಿಯೊಂದು ದಿನವೂ, ಜನಾಂದೋಲನಗಳ ಮೇಲೆ, ಹೋರಾಟಗಾರರ ಮೇಲೆ, ದಲಿತರು ರೈತರು ಅಲ್ಪಸಂಖ್ಯಾತರ ಮೇಲೆ, ಸಂವಿಧಾನದ ಮೇಲೆ ಫ್ಯಾಸಿಸ್ಟರ ದಾಳಿ ಹೆಚ್ಚುತ್ತಿದೆ. ನಿನ್ನೆ ಗೌರಿ ಲಂಕೇಶ್ ಹತ್ಯೆಗೆ ಒಂದು ವರ್ಷ. ದೇಶಾದ್ಯಂತ ಗೌರಿಯವರನ್ನು ನೆನಪಿಸಿಕೊಂಡು ಕಾರ್ಯಕ್ರಮಗಳಾದವು. ಅದೇ ಸಮಯದಲ್ಲಿ, ಮುಂಬೈ, ಗುಜರಾತ್, ರಾಜಸ್ಥಾನ ಎಲ್ಲೆಡೆ ಇನ್ನೂ ಒಂದು ಪ್ರತಿಭಟನೆ ನಡೆಯಿತು-ಭೀಮಾ ಕೋರೆಗಾಂವ್ ಹೋರಾಟದ ಮುಂದಾಳುಗಳನ್ನು ಬಂಧಿಸಿರುವುದನ್ನು ಮತ್ತು ಅವರ ಪರವಾಗಿ ದನಿಯೆತ್ತಿದವರ ಮೇಲೆ ದಾಳಿ ಮಾಡುತ್ತಿರುವುದರ ವಿರುದ್ಧ!
ಏಕೆ ಸರ್ಕಾರ ಭೀಮಾ ಕೋರೆಗಾಂವ್ ಹೋರಾಟಕ್ಕೆ ಮಾವೋವಾದದ ಜೊತೆ ನಂಟು ಕಲ್ಪಿಸಿತು? ಪೂನಾದಲ್ಲಿ ‘ಏಲ್‍ಗಾರ್ ಪರಿಷತ್’ (ಶೋಷಿತರ ವೇದಿಕೆ) ನಡೆಯಿತು. ಪ್ರಕಾಶ್ ಅಂಬೇಡ್ಕರ್, ರಾಧಿಕಾ ವೇಮುಲಾ, ನಾನು ಮೊದಲಾದ ಅನೇಕರಿದ್ದೆವು. ಆ ಹೋರಾಟದ ಆಯೋಜನೆ ಮಾಡಿದವರು ಜಸ್ಟೀಸ್ ಪಿಬಿ ಸಾವಂತ್, ಜಸ್ಟೀಸ್ ಕೋಲ್ಸೆ ಪಾಟೀಲ್, ಇವರಿಬ್ಬರೂ ಅತ್ಯಂತ ಗೌರವಾನ್ವಿತ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು. ನ್ಯಾಯಾಧೀಶರು ನಿವೃತ್ತರಾದ ನಂತರ ಚಳವಳಿಗೆ ಸೇರುವುದು ಉಂಟು. ಆದರೆ ಜಸ್ಟೀಸ್ ಕೋಲ್ಸೆ ಪಾಟೀಲರು ಆಂದೋಲನ ನಡೆಸುವುದಕ್ಕಾಗಿ ಮುಂಬೈ ಹೈಕೋರ್ಟ್‍ನ ತಮ್ಮ ನ್ಯಾಯಾಧೀಶ ಹುದ್ದೆ ತ್ಯಜಿಸಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹವರು ಈ ಶೋಷಿತರ ವೇದಿಕೆಯ ಯೋಜನೆ ಮಾಡಿದರು. ಭೀಮಾ ಕೋರೆಗಾಂವ್ ವಿಚಾರವೂ ಚರ್ಚೆಯಾಗಬೇಕು, ಜೊತೆಗೆ ಇಡೀ ದೇಶದಲ್ಲಿ ಹೆಚ್ಚುತ್ತಿರುವ ಫ್ಯಾಸಿಸ್ಟ್ ದಾಳಿಯೂ ಚರ್ಚೆಯಾಗಬೇಕೆಂಬ ಉದ್ದೇಶದೊಂದಿಗೆ ಕಾರ್ಯಕ್ರಮ.
ನನ್ನ ಮೇಲೆ ಈ ವಿಚಾರದಲ್ಲಿ ಎಫ್.ಐ.ಆರ್ ಆಯಿತು, ಉಮರ್ ಖಾಲಿದ್ ಮೇಲೆಯೂ ಸಹಾ. ಕಾರಣ ‘ಇವರಿಬ್ಬರು ಮಾಡಿದ ಭಾಷಣದಿಂದ ಗಲಭೆಗಳಾದವು’ ಎಂದು ಹೇಳಲಾಯಿತು. ಯಾರು ಪ್ರತಿದಿನ ಪ್ರಚೋದನಾಕಾರಿ ಭಾಷಣ ಮಾಡುತ್ತಾರೋ, ತ್ರಿಶೂಲ ಹಿಡಿದು ಕೊಲ್ಲುತ್ತಾರೋ, ಸಂವಿಧಾನ ಸುಡುತ್ತಾರೋ ಅವರ ಮೇಲೆ ಕಾನೂನು ಕ್ರಮ ಇಲ್ಲ, ನಮ್ಮ ಮೇಲೆ ಎಫ್.ಐ.ಆರ್.
ಅಲ್ಲಿ ನಾನು ಮಾಡಿದ ಭಾಷಣದ ಕೆಲವು ವಿಚಾರಗಳನ್ನು ಇಲ್ಲಿಯೂ ಹೇಳುತ್ತೇನೆ.
ನಾನು ಎಂಎಲ್‍ಎ ಆದ ನಂತರ ಕೆಲವು ಯುವ ಹೋರಾಟಗಾರರು ತಾವೂ ಹಾಗೆ ಹೋಗಬಹುದು ಎಂದು ಯೋಚಿಸುತ್ತಿದ್ದಾರೆ. ಹೌದು, ಹೋರಾಟಗಾರರು ವಿಧಾನಸಭೆಗಳ ಒಳಗೆ ಹೋಗಬೇಕು. ಆದರೆ ಕ್ರಾಂತಿ ಸಂಭವಿಸುವುದು ಬೀದಿಗಳಲ್ಲಿ ನಡೆಯುವ ಸಂಘರ್ಷದಿಂದ. ಜನಾಂದೋಲನಕ್ಕೆ ಪರ್ಯಾಯವಾದುದು ಯಾವುದೂ ಇಲ್ಲ. ಇಲ್ಲಿರುವ ಕೆಲವು ಗೆಳೆಯರೂ ನಾಳೆ ಎಂಎಲ್‍ಎ ಆಗಬಹುದು. ಆದರೆ ದೇಶದ ಎಲ್ಲ ಜನರಿಗೆ ಊಟ ಬಟ್ಟೆ ಶಿಕ್ಷಣ ಕೊಡಲು ಅದರಿಂದ ಸಾಧ್ಯವಿಲ್ಲ.
ಇದು ನಾನು ಅಲ್ಲಿ ಮಾಡಿದ ಭಾಷಣ. ಇದರಲ್ಲಿ ಏನಾದರೂ ಪ್ರಚೋದನಾಕಾರಿ ಅಂಶವಿದೆಯೇ? ಹೇಳಿ. ನನಗೆ ಅನಿಸಿತು ನಾನು ಬಹಳ ಒಳ್ಳೆಯ ವಿಷಯಗಳನ್ನು ಹೇಳಿದೆ ಎಂದು. ಆದರೆ ಇದನ್ನು ಮಾತಾಡಿದ ಕಾರಣಕ್ಕೆ ಕೇಸು ದಾಖಲಾಯಿತು.
ಈ ಕಾರ್ಯಕ್ರಮದ ಎರಡು ಮೂರು ದಿನ ಮೊದಲು ಭೀಮಾ ಕೋರೆಗಾಂವ್‍ನಲ್ಲಿ ದಲಿತರ ಮೇಲೆ ಹಲ್ಲೆ ದಂಗೆ ನಡೆಯಿತು. ಇದಕ್ಕೆ ಕಾರಣ ಸಾಂಭಾಜಿ ಭೀಡೆ ಎಂಬ ಆರೆಸ್ಸೆಸ್ ವ್ಯಕ್ತಿ. ಈತನನ್ನು ಮೋದಿ ತನ್ನ ಗುರು ಎನ್ನುತ್ತಾರೆ. ಈತನ ಕಾರಣಕ್ಕೆ ದಲಿತರ ಮೇಲೆ ದಾಳಿ. ಈತನ ಮೇಲೆ ಅಟ್ರಾಸಿಟಿ ಕಾಯ್ದೆ ಪ್ರಕಾರ ಕೇಸ್ ದಾಖಲಾಯಿತು. ಆತನ ಬಂಧನ ಆಗಬೇಕಿತ್ತು. ಆದರೆ ಮೋದಿಯ ಗುರು ಎಂಬ ಕಾರಣಕ್ಕೆ ಆಗಿಲ್ಲ. ಆದರೆ ದಲಿತರ ಶೋಷಿತರ ಪರವಾಗಿ ಮಾತನಾಡುವವರ ಮೇಲÉ ನಕ್ಸಲ್ ಎಂಬ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ.
ಈ ದೇಶದಲ್ಲಿ ಬಡವರು ದಲಿತರು ಮುಸ್ಲಿಮರ ಮೇಲೆ ದಾಳಿಗಳಾಗುತ್ತಿವೆ. ಆದರೆ ಮೋದಿಯ ಮೇಲಲ್ಲ. ಅವರ ಪ್ರಸಿದ್ಧಿ ಕಡಿಮೆಯಾಗಿದೆ. ಜನರಿಗೆ ಈತ ನಂಬರ್ ಒನ್ ಸುಳ್ಳುಗಾರ ಎಂಬುದು ಅರಿವಾಗಿದೆ.
ಪೆಟ್ರೋಲ್ ಡೀಸೆಲ್ ಬೆಲೆ ಆಕಾಶ ಮುಟ್ಟಿದೆ. ರಫೇಲ್ ಖರೀದಿ ಕೋಟಿಗಟ್ಟಲೆ ಹಗರಣ. 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಾಲ ಮನ್ನಾ ಮಾಡಲಿಲ್ಲ. ಕಾರ್ಪೊರೇಟ್‍ಗಳ 5 ಲಕ್ಷ 37 ಸಾವಿರ ಕೋಟಿ ರೂಗಳನ್ನು ಮನ್ನಾ ಮಾಡಿದರು. ಒಟ್ಟಿನಲ್ಲಿ ಮೋದಿಯವರ ಅಚ್ಛೇ ದಿನ್ ಘೋಷಣೆಯಿಂದ ಏನೂ ಹೊರಬರಲಿಲ್ಲ ಎಂದು ಜನರಿಗೆ ಗೊತ್ತಾಗುತ್ತಾ ಬಂದಂತೆ, ಈಗ ತನ್ನ ಮೇಲೆ ಕೊಲೆ ಪ್ರಯತ್ನ ನಡೆಯುತ್ತಿದೆಯಿಂಬ ಸುದ್ದಿ ಹರಡಿಸಿ ಸಹಾನುಭೂತಿ ಪಡೆಯುವ ಪ್ರಯತ್ನ.
ಗುಜರಾತ್‍ನಲ್ಲಿ 2004, 05, 06 ಪ್ರತಿವರ್ಷ ಪೊಲೀಸರು ಒಂದೊಂದು ಎನ್‍ಕೌಂಟರ್ ಮಾಡುತ್ತಿದ್ದರು. ಆಮೇಲೆ ಕಥೆ ಕಟ್ಟುತ್ತಿದ್ದರು. ಮೋದಿಯವರನ್ನು ಕೊಲ್ಲಲು ಬಂದರು ಅಂತ, ಈಗ ಮತ್ತೊಂದು ನಾಟಕ.
ಈಗ ಬಂಧಿತರಾದವರು ದಲಿತರು ಆದಿವಾಸಿಗಳ ಮೇಲೆ ಹಲ್ಲೆಗಳಾದಾಗ ಸುಪ್ರೀಂ ಕೋರ್ಟ್‍ನಲ್ಲಿ ಹೋರಾಡುತ್ತಾರೆ, ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಹೋರಾಡುತ್ತಾರೆ, ಈಗ ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಹಾಗೆಯೇ ದಲಿತ ಚಳವಳಿಯನ್ನು ಅಮಾನ್ಯಗೊಳಿಸುವ ಪ್ರಯತ್ನ. ಏಕೆ? ಏಕೆಂದರೆ ಹಿಂದುತ್ವಕ್ಕೆ ಅತಿದೊಡ್ಡ ಸವಾಲು ಬಂದಿರುವುದು ಜೈಭೀಮ್ ಘೋಷಣೆಯಿಂದ. ರಾವಣ್ ಬಂಧನ, ಭೀಮಾ ಕೋರೆಗಾಂವ್, ರೋಹಿತ್ ವೇಮುಲಾ ಆಂದೋಲನ ಪ್ರತಿಯೊಂದು ಹೋರಾಟದಲ್ಲೂ ದಲಿತ ಸಮುದಾಯ ಬೀದಿಗಿಳಿದು ಹೋರಾಡಿದೆ. ಈಗ ಅದಕ್ಕಾಗಿ ದಲಿತ ಆಂದೋಲನ ಮುರಿಯಲು, ‘ದಲಿತರನ್ನು ನಕ್ಸಲರು ಎತ್ತಿಕಟ್ಟುತ್ತಿದ್ದಾರೆ’ ಎಂದು ಪ್ರಚಾರ ಮಾಡಲಾಗುತ್ತಿದೆ.
ಊನಾ ಘಟನೆಯ ನಂತರ ಬಂದ ಲಕ್ಷಾಂತರ ಜನರನ್ನು ಯಾವ ನಕ್ಸಲರು ಕಳಿಸಿದ್ದರು? ಅವರಾಗಿಯೇ ಬಂದವರು. ರೋಹಿತ್ ವೇಮುಲಾ ಸಾವಿನ ನಂತರ ಸೇರಿದವರನ್ನು ಮಾವೋವಾದಿಗಳು ಕಳಿಸಿರಲಿಲ್ಲ, ಎಸ್‍ಸಿ ಎಸ್‍ಟಿ ಕಾಯ್ದೆ ವಿರುದ್ಧ ಹೋರಾಡಿದವರು ಸ್ವಯಂಪ್ರೇರಣೆಯಿಂದ ಬಂದವರು. ತಮ್ಮ ಮೇಲಿನ ದಾಳಿಗಳ ವಿರುದ್ಧ ದನಿಯೆತ್ತಿದ ದಲಿತ ಹೋರಾಟಗಾರರ ಮೇಲೆ ದಾಳಿ. ಚಂದ್ರಶೇಖರ್ ರಾವಣ್‍ಗೆ ಎರಡು ವರ್ಷದಿಂದ ಜಾಮೀನು ಸಿಕ್ಕಿಲ್ಲ. ರಾಧಿಕಾ ವೇಮುಲಾ ಮೇಲಿನ ಕೇಸು ಮುಗಿದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಮುಂದಿರುವ ಒಂದೇ ಒಂದು ಗುರಿಯೆಂದರೆ ಆರೆಸ್ಸೆಸ್ ಬಿಜೆಪಿಯನ್ನು ಸೋಲಿಸುವುದು. ಇನ್ನು ಮುಂದೆ ಒಂದುಬಾರಿಯೂ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳಬೇಕು; ಅದೇನೆ ಸಂದರ್ಭದಲ್ಲೂ.
ನಾನೇಕೆ ಕರ್ನಾಟಕಕ್ಕೆ ಮತ್ತೆ ಮತ್ತೆ ಬರುತ್ತೇನೆ? ನನ್ನದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಇನ್ನಷ್ಟು ಹೆಚ್ಚು ಮತಗಳು ಬರಬಹುದು, ಆದರೆ ಕರ್ನಾಟಕದಲ್ಲಿ ಬಿಜೆಪಿಯ ವಿರುದ್ಧ ಮಾತನಾಡಲಿಕ್ಕಾಗಿ ನಾನು ಇಲ್ಲಿಗೆ ಬಂದೆ. ಮೇ 12ಕ್ಕೆ ಇಲ್ಲಿನ ಚುನಾವಣೆ ಮುಗಿಯಿತು, 14ಕ್ಕೆ ರಾಜಸ್ಥಾನಕ್ಕೆ ಹೋದೆ. ಪ್ರತಿ ದಿನ 16 ಗಂಟೆಗಳ ಕಾಲ ಬಿಜೆಪಿ ಆರೆಸ್ಸೆಸ್ ವಿರುದ್ಧ ಕೆಲಸ ಮಾಡುತ್ತಿದ್ದೇನೆ. ಮುಂದಿನ 8 ತಿಂಗಳು ಬೇರೆಲ್ಲಾ ಕೆಲಸ ಬಿಟ್ಟುಬಿಡಿ. ಮತ್ತೊಮ್ಮೆ ಮೋದಿ ಸರ್ಕಾರ ಬಂದರೆ, ಇದೇ ಸಭಾಂಗಣದೊಳಕ್ಕೆ ಬಂದು ಅವರು ನಮಗೆ ಗುಂಡು ಹೊಡೆದು ಹೋಗಬಹುದು, ನಾವೇನೂ ಮಾಡಲು ಸಾಧ್ಯವಿಲ್ಲ, ನಿಜಕ್ಕೂ. ಅವರನ್ನು ಸೋಲಿಸಬೇಕೆಂದರೆ, ಛತ್ತೀಸಗಡ್, ಬಿಹಾರ್ ಎಲ್ಲೆಡೆ ಹೋಗಿ ಅವರ ವಿರುದ್ಧ ಮಾತನಾಡಬೇಕು. ಈವರೆಗೆ ನಾವು ಮಾಡಿರುವ ಕೆಲಸ ಮುಂದಕ್ಕೂ ಮಾಡಬಹುದು. ಆದರೆ ನಮ್ಮ ಮಾತನಾಡುವ ಸ್ವಾತಂತ್ರ್ಯ ಶೇ.50ರಷ್ಟು ಕಡಿತವಾಗುತ್ತದೆ.
ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಎಸ್‍ಎಸ್ಟಿ ಕಾಯ್ದೆ ಕಿತ್ತುಹಾಕಲು ನೋಡಿದರು. ಅದರ ವಿರುದ್ಧ ಹೋರಾಡುತ್ತಿದ್ದ ದಲಿತರ ಮೇಲೆ ಗುಂಡು ಹಾರಿಸಿದರು, ಸಾವಿರಾರು ಜನರ ಮೇಲೆ ಕೇಸ್ ದಾಖಲಿಸಿದರು. ಆದರೆ ಹೀಗೆ ದಾಳಿಗೊಳಗಾದವರು ಬಿಜೆಪಿ ವಿರುದ್ಧ ಮಾತನಾಡಲು ಕರ್ನಾಟಕಕ್ಕೆ ಬಂದು ಏಕೆ ಬಿಜೆಪಿ ವಿರುದ್ಧ ಪ್ರಚಾರ ಮಾಡಲಿಲ್ಲ?
ನಾನು ಇಲ್ಲಿಗೆ ಚಪ್ಪಾಳೆ ಗಿಟ್ಟಿಸಲು ಬಂದಿಲ್ಲ. ಮಾತನಾಡುವ ಎಲ್ಲರ ಮೇಲೆ ದಾಳಿ ಮಾಡುತ್ತಿರುವಾಗ, ನಾವೇನು ಮಾಡುತ್ತೇವೆ? ನಮ್ಮ ನಮ್ಮ ಜಿಲ್ಲೆಗಳಲ್ಲಿ ರಾಜ್ಯಗಳಲ್ಲಿ ನಮ್ಮ ನಮ್ಮ ಬ್ಯಾನರ್ ಇಟ್ಟುಕೊಂಡೇ ಇರುತ್ತೇವೆ ಹಾಗೂ ಅವರ ಕೈಗೆ ಸಿಕ್ಕಿ ಎಲ್ಲರೂ ಸಾಯುತ್ತೇವೆ. ಉಮರ್ ಮೇಲೆ ಗುಂಡಿನ ದಾಳಿಯಾಯಿತು, ಗೌರಿಯನ್ನು ಕೊಂದರು, ನನಗೆ ಕೊಲೆ ಬೆದರಿಕೆಗಳಿವೆ. ನಾವು ಫ್ಯಾಸಿಸಂ ಈ ಕಾಲದ ದೊಡ್ಡ ಅಪಾಯ ಎಂಬ ಬಗ್ಗೆ ಹೌದು ಎನ್ನುತ್ತೇವೆ, ಆದರೆ ಅದರ ವಿರುದ್ಧ ಏಕೆ ಒಂದಾಗಿ ಎಲ್ಲಾ ರಾಜ್ಯಗಳಿಗೂ ಹೋಗಿ ಬಿಜೆಪಿಯನ್ನು ಸೋಲಿಸಲು ಕೆಲಸ ಮಾಡುವುದಿಲ್ಲ?
ಒಂದು ವೇಳೆ ಮಾಡುವುದಿಲ್ಲ ಎಂದರೆ ಅದರ ಅರ್ಥ ಈಗಲೂ ನಮ್ಮ ಕಣ್ಣುಗಳ ಮೇಲೆ ಪಟ್ಟಿ ಕಟ್ಟಲ್ಪಟ್ಟಿದೆ. 2019ರ ಎದುರಿನಲ್ಲಿ, ಎಲ್ಲಾ ದಲಿತರ ಮಹಿಳೆಯರ ಯುವಕರ ಆದಿವಾಸಿಗಳ ಅಜೆಂಡಾ ಒಂದೇ ಆಗಿರಬೇಕು. ಮೋದಿ -ಬಿಜೆಪಿಯನ್ನು ಸೋಲಿಸುವುದು. ನಾನು ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದೇನೆ, ಅವರು ಸೋಲುವವರೆಗೂ ಇದನ್ನೇ ಮಾತನಾಡುತ್ತೇನೆ. ನನಗೆ ನಾನೇ ಒಂದು ಪ್ರಶ್ನೆ ಕೇಳಿಕೊಳ್ಳುತ್ತೇನೆ. ಏನೂ ಕಾರಣವಿಲ್ಲದೆ ಚಂದ್ರಶೇಖರ್ ಆಝಾದ್ ರಾವಣ್‍ರನ್ನು ಜೈಲಿಗೆ ಹಾಕಲಾಗಿದೆ ಎಂದು ನಿಮಗೆ ಗೊತ್ತಿದೆಯಲ್ಲವೇ? ಹಾಗಿದ್ದರೆ ದೇಶದ ಯಾವ ರಾಜ್ಯದಿಂದ ದಲಿತರು ರಾವಣ್‍ರನ್ನು ಬಿಡಿಸಲು ಏನು ಕೆಲಸ ಮಾಡಿದ್ದಾರೆ? ನಾಳೆ ನಮ್ಮೆಲ್ಲರನ್ನೂ ಬಂಧಿಸಬಹುದು. ನಾವು ಏನೂ ಮಾಡುವುದಿಲ್ಲವೇ?
ಚಂದ್ರಶೇಖರ್‍ರ ಭೀಮ್ ಆರ್ಮಿಯ ದಲಿತ ಪರ ಕೆಲಸಗಳ ಕಾರಣಕ್ಕಾಗಿ ಅವರನ್ನು ಒಂದು ವರ್ಷದಿಂದ ಜೈಲಿಗೆ ಹಾಕಿದ್ದಾರೆ. ಪ್ರತಿ ರಾಜ್ಯದಿಂದ 500 ಮಂದಿ ಅವರನ್ನು ನೋಡಲು ಹೋದರೆ ಅದೇ ಒಂದು ಚಳವಳಿ. ನನಗೆ ನಿಜಕ್ಕೂ ಈ ದೇಶದ ದಲಿತ ಚಳವಳಿಯ ಬಗ್ಗೆ ಬೇಸರವಾಗಿದೆ. ನಾಳೆ ನನ್ನನ್ನೂ ಜೈಲಿಗೆ ಹಾಕಿದರೆ ನೀವೆಲ್ಲ ನನ್ನನ್ನು ಭಾಷಣಕ್ಕೆ ಕರೆದವರು, ಸೆಲ್ಫಿ ತೆಗೆದುಕೊಂಡವರು, ಚಪ್ಪಾಳೆ ತಟ್ಟಿದವರು ಏನೂ ಮಾಡುತ್ತೀರಿ? ಚಂದ್ರಶೇಖರ್ ಅವರ ತಾಯಿಗೆ ಏನನ್ನಿಸುತ್ತಿರಬಹುದು?
ಯುಪಿಯಲ್ಲೂ ಸಣ್ಣ ದೊಡ್ಡ 40-50 ದಲಿತ ಗುಂಪುಗಳಿರಬಹುದು, ಅವರೆಲ್ಲ ಕರ್ನಾಟಕಕ್ಕೆ ಬರಬಹುದಿತ್ತಲ್ಲಾ ಬಿಜೆಪಿ ಸೋಲಿಸಿ ಎಂದು ಹೇಳಲು.
ಇಂದು ದಲಿತ ಆದಿವಾಸಿ ಯುವ ಸಮುದಾಯ ನಿಜಕ್ಕೂ ಏನಾದರೂ ಮಾಡಲು ಬಯಸುತ್ತದೆ. ಊನಾ ಭೀಮಾ-ಕೋರೆಗಾಂವ್ ಎಲ್ಲಾ ಹೋರಾಟಗಳಲ್ಲೂ ಅದನ್ನು ನೋಡಿದ್ದೇವೆ. ಕರ್ಣಾಟಕದಲ್ಲೂ ಎಲ್ಲಾ ದಲಿತ ಗುಂಪುಗಳನ್ನು ಒಂದೇ ವೇದಿಕೆಯಡಿ ಜೊತೆಗೂಡಿಸೋಣ, ಇಲ್ಲಿ ನೂರಾರು ಭಿನ್ನಾಭಿಪ್ರಾಯಗಳಿರಬಹುದು, ವಿಚಾರಗಳಲ್ಲಿ ವ್ಯತ್ಯಾಸಗಳಿರಬಹುದು, ಇರಲಿ. ಈ ಫ್ಯಾಸಿಸ್ಟ್ ಶಕ್ತಿಗಳ ಎದುರು ಎಲ್ಲರೂ ಒಂದಾಗೋಣ. ನಾವು ಎಲ್ಲರೂ ಸೇರಿದರೆ ಖಂಡಿತ ಅದ್ಭುತಗಳನ್ನು ಸಾಧಿಸಬಹುದು. ಮೋದಿ ಸುಮ್ಮನೆ ಘೋಷಣೆ ಕೊಡುತ್ತಾರಷ್ಟೆ, ಆದರೆ ನಿಜಕ್ಕೂ ನಾವು ಹೊಸ ಭಾರತ ಕಟ್ಟಬಲ್ಲೆವು. ಹೊಸ ದೇಶ ನಿರ್ಮಿಸಬಲ್ಲೆವು.
ಅವರ ಬಳಿ ಏನಿದೆ? ಚಡ್ಡಿ ಹಾಕಿಕೊಂಡ ಆರೆಸ್ಸೆಸ್ಸಿಗರು, ನಾವು ಉದ್ಯೋಗದ ಬಗ್ಗೆ ಮಾತನಾಡಿದರೆ ಅವರು ದನದ ಉಚ್ಚೆಯ ಬಗ್ಗೆ ಮಾತಾಡುತ್ತಾರೆ. ಒಬ್ಬರು ಹೇಳುತ್ತಿದ್ದರು, ‘ನಮ್ಮ ಶಕ್ತಿ ಹೋಗುತ್ತಿರುವುದು ಮೋದಿ ಹೇಳುತ್ತಿರುವುದಕ್ಕೆಲ್ಲ ಪ್ರತಿಕ್ರಿಯೆ ಕೊಡುವುದರಲ್ಲಿ, ನಮ್ಮದೇ ಆದ ಏನನ್ನು ಮಾಡಲಾಗುತ್ತಿಲ್ಲ’.
ಇದನ್ನು ಕೇಳಿ ಒಂದು ಆಲೋಚನೆ ಬಂತು. ಎಸ್‍ಸಿಪಿ ಹಣ ದಲಿತರಿಗೆಂದು ಮೀಸಲಾಗಿರಬೇಕಾದದ್ದು ಬೇರೆ ಏನೇನೋ ಕೆಲಸಗಳಿಗೆ ಹೋಗುತ್ತಿದೆ. 5 ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಹಣ ಕೊಡಬೇಕು. ಅದು ದಲಿತರ ಹಣದಿಂದ ಅಲ್ಲ ಆಗಬೇಕಾದದ್ದು. ಗುಜರಾತ್ ಪತ್ರಿಕೆ ಪ್ರಕಟವಾಗಲು, ಇನ್ಯಾವುದೋ 20 ಕಿಮೀ ರಸ್ತೆ ಮಾಡಲು, ಶೆಡ್ಯೂಲ್ಡ್ ಕಾಸ್ಟ್ ಶೆಡ್ಯೂಲ್ಡ್ ಟ್ರೈಬ್ ಸಬ್ ಪ್ಲಾನ್ ಇಂದ ಹಣ ತೆಗೆಯಬಾರದು. ಸರ್ದಾರ್ ಪಟೇಲ್‍ನ ಬೃಹತ್ ಪ್ರತಿಮೆ ಕುರಿತ ಜಾಹೀರಾತಿಗೆ ಭಾರೀ ಮೊತ್ತ ಖರ್ಚಾದದ್ದು ದಲಿತರ ಸಬ್ ಪ್ಲಾನ್ ಹಣದಿಂದ. ಬಜೆಟ್ ಇಟ್ಟಿರುವುದು ಇವರಿಗಾಗಿ; ಆದರೆ ಖರ್ಚಾಗುತ್ತಿರುವುದು ಇನ್ಯಾರಿಗೋ!
ಮುಂದಿನ 10 ವರ್ಷಗಳಲ್ಲಿ ಈ ಬಜೆಟ್‍ನ ಸಂಪೂರ್ಣ ಹಣ ಖರ್ಚಾದ ಪಕ್ಷದಲ್ಲಿ 4 ಲಕ್ಷ ಕೋಟಿಯಷ್ಟು ಹಣದ ಪ್ರಯೋಜನ ಗುಜರಾತಿನ ದಲಿತರು ಆದಿವಾಸಿಗಳಿಗೆ ಸಿಗಬೇಕು. ಆದರೆ ಅಷ್ಟೆಲ್ಲ ಹಣ ಎಲ್ಲಿ ಹೋಗುತ್ತಿದೆ? ಇಡೀ ದೇಶದ ಸಾವಿರಾರು ದಲಿತರು ಆದಿವಾಸಿಗಳ ಬದುಕು ಈ ಹಣದಿಂದ ಬದಲಾಗಬಹುದು, ನಾವು ಎಲ್ಲಾ ದಲಿತರು, ಆದಿವಾಸಿಗಳು, ನ್ಯಾಯವನ್ನು ಬಯಸುವ ಎಲ್ಲಾ ಜನರು, ಪ್ರಗತಿಪರರು ಸೇರಿ, ಸರ್ಕಾರವು ಎಸ್‍ಸಿ-ಎಸ್ಟಿ ಸಬ್ ಪ್ಲಾನ್‍ಗೆ ಪ್ರತ್ಯೇಕ ಕಾನೂನು ಮಾಡಬೇಕೆಂದು ಏಕೆ ಹೋರಾಟ ಮಾಡಬಾರದು? ಇದರಿಂದಾಗಿ ಮುಂದಿನ 10 ವರ್ಷಗಳಲ್ಲಿ 40-50 ಲಕ್ಷ ಕೋಟಿಯಷ್ಟು ಹಣ ದಲಿತರು ಆದಿವಾಸಿಗಳಿಗೆ ಸಿಗುತ್ತದೆ.
ಇದು ನಮ್ಮ ಅಜೆಂಡಾ ಆಗಬಾರದೇ?
ಈ ನಿಟ್ಟಿನಲ್ಲಿ ಕರ್ನಾಟಕದ ದಲಿತ ಸಂಘಟನೆಗಳೆಲ್ಲ ಒಂದೆಡೆ ಸೇರಿ ಒಂದೇ ವೇದಿಕೆಯಡಿ ಕೆಲಸ ಮಾಡಲು ಮುಂದಾಗಬೇಕೆಂದು ಇಲ್ಲಿರುವ ಎಲ್ಲರಲ್ಲೂ ಮನವಿ ಮಾಡುತ್ತಿದ್ದೇನೆ.

ಅನುವಾದ: ಮಲ್ಲಿಗೆ ಸಿರಿಮನೆ

LEAVE A REPLY

Please enter your comment!
Please enter your name here