(ಭಾರತದ Dalit Human Rights Defenders Nertwork ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ಕೆಲವು ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಸಮಯದಲ್ಲಿ ನಡೆದ ದಲಿತರ ಮೇಲಿನ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿ ವ್ಯಕ್ತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದು’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)
ಡಾ.ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಭಾರತ ದೇಶಕ್ಕೆ ನೀಡಿದ ಸಂವಿಧಾನವೇ ಅದಕ್ಕೆ ಸಾಕ್ಷಿ. ಕಾರ್ಮಿಕ ಮಂತ್ರಿಗಳಾಗಿದ್ದಾಗ ಕೈಗೊಂಡ ಕಲ್ಯಾಣ ಕಾರ್ಯಗಳೇ ಅದಕ್ಕೆ ಸಾಕ್ಷಿ. ಹೀಗಿದ್ದರೂ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಅಂಬೇಡ್ಕರ್‌ರನ್ನು ದಲಿತ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ನೋಡಲಾಗುತ್ತಿರುವ ವಿದ್ಯಮಾನ ಇನ್ನೂ ನಿಂತಿಲ್ಲ. ಸ್ವತಃ ಅಂಬೇಡ್ಕರ್‌ರೇ ಮೇಲ್ಜಾತಿ ಹಿಂದೂಗಳ ಇಂತಹ ನಡೆಗೆ ಬೇಸರಗೊಂಡಿದ್ದರು.
ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಹಿರಿಮೆಯನ್ನು ಹೊತ್ತು ನಿಂತಿರುವ ತಮಿಳುನಾಡು ಸಹ ಇದಕ್ಕೆ ಅಪವಾದವಲ್ಲ. ಇಡೀ ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು ದಲಿತರ ಮೇಲೆ ದೌರ್ಜನ್ಯ ನಡೆಯುವುದು ತಮಿಳುನಾಡಿನಲ್ಲಿ ಎಂದರೆ ಕೆಲವರಿಗೆ ಆಶ್ಚರ್ಯವೂ ಆಗಬಹುದು. ಆದರೆ, ಇಂದಿಗೂ ಅದೊಂದು ಜಾತಿಗ್ರಸ್ತರ ನಾಡಾಗಿಯೇ ಗುರುತಿಸಿಕೊಂಡಿದೆ. ಆಗಾಗ ಅಲ್ಲಲ್ಲಿ ಮೂಡುವ ಹೊಂಬೆಳಕು ರಾಜ್ಯದಲ್ಲಿ ಇಡಿಯಾಗಿ ಯಾವಾಗ ವ್ಯಾಪಿಸುತ್ತದೆಯೋ ತಿಳಿಯದಾಗಿದೆ.
ಇದಿಷ್ಟು ಹೇಳಲು ಕಾರಣವಿದೆ. ಲಾಕ್‌ಡೌನ್ ಸಮಯದಲ್ಲಿ ತಮಿಳುನಾಡಿನ ಚೆಂಗಮ್‌ನಲ್ಲಿ ನಡೆದ ಭೀಕರ ಕೃತ್ಯವೊಂದು ಇಡೀ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ.
ಗೌತಮಪ್ರಿಯನ್ 20 ವರ್ಷದ ಯುವಕ. ಊರು ತೊಕ್ಕವಾಡಿ. ಪರಯ್ಯ ಸಮುದಾಯಕ್ಕೆ ಸೇರಿದವನು. ಅಂಬೇಡ್ಕರರನ್ನು ಓದಿಕೊಳ್ಳಲು ಆರಂಭಿಸಿದ್ದ ಯುವಕ. ಈತನ ತಂದೆ ಆರುಮುಗಮ್ ಸರ್ಕಾರಿ ಶಿಕ್ಷಕರು. ಹಾಗಾಗಿ ತಮ್ಮ ಮಗನಿಗೆ ಅತ್ಯುತ್ತಮ ಶಿಕ್ಷಣ ಕೊಡಿಸುತ್ತಿದ್ದರು. ಜೊತೆಗೆ ಸ್ವಾಭಿಮಾನದ ಪಾಠವನ್ನೂ ಕಲಿಸಿದ್ದರು.
ಇದನ್ನೂ ಓದಿ: ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ
ಮಾರ್ಚ್ 31, 2020ರಂದು ಅಪರಾಹ್ನ 4 ಗಂಟೆಯ ಸಮಯದಲ್ಲಿ ಗೌತಮಪ್ರಿಯನ್ ತನ್ನ ತಂಗಿಯನ್ನು ಅವರ ಚಿಕ್ಕಪ್ಪನ ಮನೆಯ ಬಳಿ ಮೋಟಾರ್ ಬೈಕಿನಲ್ಲಿ ಬಿಟ್ಟು ಹಿಂದಿರುಗುತ್ತಿದ್ದಾಗ ಅಚಾನಕ್ಕಾಗಿ ತನ್ನ ಕಾಲೇಜು ಸ್ನೇಹಿತೆ ರಮ್ಯಾಳನ್ನು ಕಂಡನು. ದಾರಿಯಲ್ಲಿಯೇ ಬೈಕ್ ನಿಲ್ಲಿಸಿ ರಮ್ಯಾಳೊಂದಿಗೆ ಮಾತಿಗಿಳಿದಿದ್ದಾನೆ. ಇಬ್ಬರೂ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದಾಗ ಅದೆಲ್ಲಿಂದಲೋ ಬಂದ ದಢೂತಿ ವ್ಯಕ್ತಿಯೊಬ್ಬ ಗೌತಮಪ್ರಿಯನ್‌ನನ್ನು ಉದ್ದೇಶಿಸಿ ರಮ್ಯಾ ಜೊತೆ ಮಾತನಾಡುತ್ತಿರುವುದಕ್ಕೆ ಆಕ್ಷೇಪಿಸಿದ್ದಾನೆ. ಆ ವ್ಯಕ್ತಿಯ ಹೆಸರು ಈಶ್ವರನ್. ಈತ ಸ್ಥಳೀಯ ಪೊಲೀಸ್ ಸ್ಟೇಷನ್ನಿನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಮೇಲಾಗಿ ಆತನು ರಮ್ಯಾಳ ಜಾತಿಗೇ ಸೇರಿದ ವ್ಯಕ್ತಿಯಾಗಿದ್ದ. ಈಶ್ವರನ್ ಪೊಲೀಸ್ ಶೈಲಿಯಲ್ಲಿ ಗೌತಮಪ್ರಿಯನ್‌ಅನ್ನು ವಿಚಾರಿಸಲು ಆರಂಭಿಸಿದ. ಇದೆಲ್ಲವೂ ಇರಿಸುಮುರುಸು ಉಂಟುಮಾಡಿತಾದರೂ ಸಹಿಸಿಕೊಂಡು ಎಲ್ಲದಕ್ಕೂ ಗೌತಮ್ ಉತ್ತರ ನೀಡಿದ್ದಾನೆ. ’ನಮ್ಮ ಜಾತಿಯ ಹುಡುಗಿಯನ್ನು ಮಾತನಾಡಿಸಲು ನೀನ್ಯಾರು?’ ಎಂಬ ಪ್ರಶ್ನೆ ತೂರಿಬಂದಾಗ ಗೌತಮಪ್ರಿಯನ್‌ಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ಶಾಂತನಾಗಿಯೇ ’ತಾನು ತೊಕ್ಕವಾಡಿಯ ಹುಡಗ’ ಎಂದು ಉತ್ತರಿಸಿದನು. ಇದನ್ನು ಕೇಳುತ್ತಲೇ ಕೆರಳಿದ ಈಶ್ವರನ್ ’ಲೇ ಪರಯ್ಯ ನಿನಗೆಷ್ಟೋ ಧೈರ್ಯ ನಮ್ಮ ಜಾತಿ ಹುಡುಗಿಯನ್ನು ಮಾತನಾಡಿಸೋಕೆ’ ಎಂದು ಅಸಲಿ ವಿಷಯಕ್ಕೆ ಬಂದಿದ್ದಾನೆ. ಇದೆಲ್ಲವನ್ನೂ ನಿರೀಕ್ಷಿಸಿದ್ದ ಗೌತಮಪ್ರಿಯನ್ ಈಶ್ವರನ್‌ನನ್ನು ಸಮಾಧಾನಪಡಿಸಲು ಮುಂದಾದಾಗ ಮೇಲೆರಗಿದ ಈಶ್ವರನ್ ಕಾಲಿನಿಂದ ಗೌತಮ್‌ನನ್ನು ಒದ್ದು ನೆಲಕ್ಕೆ ತಳ್ಳಿದನು. ಅಲ್ಲಿ ಸಾರ್ವಜನಿಕರು ಬಂದು ಜಮಾಯಿಸಿದರು. ಕೋಪಗೊಂಡಿದ್ದ ಈಶ್ವರನ್ ಎಂಬ ಪಿಶಾಚಿ ಅಲ್ಲಿಯೇ ಇದ್ದ ಕೇಬಲ್ ವೈರನ್ನು ಕೈಗೆತ್ತಿಕೊಂಡು ಗೌತಮನ ಮೇಲೆ ಹರಿಬಿಟ್ಟನು. ಸುತ್ತ ಸುಮಾರು 80 ಮಂದಿ ಇದ್ದರೂ ಎಲ್ಲರೂ ಕೈಕಟ್ಟಿ ಬಾಯ್ಮುಚ್ಚಿ ನಿಂತರು. ಅಲ್ಲಿಯೇ ನಿಂತಿದ್ದ 7ನೇ ತರಗತಿಯ ಹುಡುಗ ಮಾತ್ರ ತನ್ನ ಕೈಲಿದ್ದ ಮೊಬೈಲ್ ಫೋನಿನಿಂದ ಇದೆಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು.
ಗೌತಮ್ ಈಶ್ವರನ್‌ನನ್ನು ಕೈಮುಗಿದು ಅಂಗಲಾಚಿದರೂ ಬಿಡಲಿಲ್ಲ. ಈಶ್ವರನ್ ಒಳಗಿದ್ದ ಜಾತಿ ಭೂತ ಎದ್ದೆದ್ದು ಕುಣಿಯುತ್ತಿತ್ತು. ಅವನೊಳಗಿನ ಮೇಲ್ಜಾತಿ ಹೇಸಿಗೆ ಹೊರಬಂದು ಹರಿಯುತ್ತಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವಿದೆ. ಬಹಳ ದೂರದಿಂದಲೇ ಗೌತಮಪ್ರಿಯನ್‌ನನ್ನು ದಲಿತ ಎಂದು ಈಶ್ವರನ್ ಗುರುತಿಸಿದ್ದನು. ಅದನ್ನು ಖಚಿತಪಡಿಸಿಕೊಂಡೇ ಬಂದಿದ್ದನು. ಹಾಗೆ ಖಚಿತಪಡಿಸಿಕೊಳ್ಳಲು ಕಾರಣ ಅಂದು ಗೌತಮಪ್ರಿಯನ್ ಅಂಬೇಡ್ಕರರ ಭಾವಚಿತ್ರವಿದ್ದ ಟಿ-ಶರ್ಟ್ ಹಾಕಿದ್ದು! ಗೌತಮಪ್ರಿಯನ್‌ನನ್ನು ಥಳಿಸುವಾಗ ಅಂಬೇಡ್ಕರರ ಮೇಲಿರುವ ಕೋಪವೂ ಮಿಶ್ರಣಗೊಂಡಿತ್ತು.
ಇದನ್ನೂ ಓದಿ: ಮಾತು ಮರೆತ ಭಾರತ-28; ಲಾಕ್‌ಡೌನ್ ಫೈಲ್ಸ್ : ದಲಿತರ ಪಾಲಿನ ಕಗ್ಗತ್ತಲ ದೀಪಾವಳಿ
ಈ ಪ್ರಕರಣದಲ್ಲಿ ಎದ್ದು ಕಾಣುವ ಅಂಶವೆಂದರೆ, ಒಬ್ಬ ಪೊಲೀಸ್ ಪೇದೆಗೇ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತ ಜಾತಿಯವರಾಗಿ ಕಂಡರೆ ಇನ್ನೂ ಸಾಮಾನ್ಯ ಜನರಿಗೆ ಹೇಗೆ ಕಾಣಬೇಕು? ಒಬ್ಬ ದಲಿತ ಯುವಕ ಮೇಲ್ಜಾತಿ ಯುವತಿಯ ಜೊತೆಗೆ ಮಾತನಾಡಲೂ ಸಹ ಸಾಧ್ಯವಿಲ್ಲವೇ? ಇಂತಹ ತಲೆಕೆಟ್ಟ ಪೊಲೀಸ್‌ಗಳು ಈ ದೇಶಕ್ಕೆ ಅಗತ್ಯವಿದ್ದಾರೆಯೇ? ನಮ್ಮ ಮತ ಬ್ಯಾಂಕ್ ರಾಜಕೀಯ ವ್ಯವಸ್ಥೆ ಇಂತಹ ಪೊಲೀಸ್ ಪೇದೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆಯೇ? ಉತ್ತರ ಅಸ್ಪಷ್ಟ. ಆದರೆ ಒಂದಂತೂ ಸ್ಪಷ್ಟ; ದಲಿತರು ಈ ಮೇಲ್ಜಾತಿ ಜಾತಿವಾದಿ ಮೃಗಗಳಿಗೆ ಅಷ್ಟು ಸುಲಭವಾಗಿ ಅರ್ಥವಾಗಲಾರರು. ಅವರಂತೆಯೇ ದಲಿತರೂ ಸಹ ಹಿಂಸಾವಾದವನ್ನು ಒಪ್ಪಿಕೊಂಡರೆ ಗಲ್ಲಿಗಲ್ಲಿಗಳಲ್ಲಿ ರಕ್ತದೋಕುಳಿ ಹರಿಯುತ್ತದೆ ಎಂಬ ಸತ್ಯವನ್ನು ಆದಷ್ಟು ಬೇಗ ಅವರು ಅರಿತುಕೊಳ್ಳಬೇಕು. ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನ ಮಾರ್ಗವನ್ನೇ ದಲಿತರು ಇಂದಿಗೂ ಅನುಸರಿಸುವುದನ್ನು ಅಸಹಾಯಕತೆಯೆಂದು ತಿಳಿದುಕೊಳ್ಳುವುದನ್ನು ಬಿಡಬೇಕಿದೆ.
ಈಶ್ವರನ್ ಈಗ ಜೈಲಿನಲ್ಲಿದ್ದಾನೆ. ಪದೇಪದೇ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾನೆ. ಆದರೆ ನ್ಯಾಯಾಲಯ ಜಾಮೀನು ನೀಡಿಲ್ಲ. ಗೌತಮಪ್ರಿಯನ್ ತನಗಾದ ಅಘಾತವನ್ನು ಮರೆಯುವ ಸ್ಥಿತಿಗೆ ಇನ್ನೂ ತಲುಪಿಲ್ಲ. ಆತ ಮರೆಯುವಂತಹ ಬೆಳವಣಿಗೆಯೂ ಸಹ ಭಾರತದಲ್ಲೇನು ನಡೆಯುವುದಿಲ್ಲ. ಬೇಕಾದರೆ ಅದನ್ನು ನೆನಪಿಸುವ ಲಕ್ಷಾಂತರ ಘಟನೆಗಳು ನ್ಯೂಸ್ ಪೇಪರ್‌ನ ಮುಖಪುಟದಲ್ಲಿ ರಾರಾಜಿಸುತ್ತವೆ. ಕಳೆದ ತಿಂಗಳು ಕೋಲಾರದಲ್ಲಿ ಬೈಕ್‌ನಲ್ಲಿ ಒವರ್ ಟೇಕ್ ಮಾಡಿದ್ದಕ್ಕಾಗಿ ದಲಿತ ಯುವಕನನ್ನು ಮೇಲ್ಜಾತಿ ಪಿಶಾಚಿಗಳು ಥಳಿಸಿದ್ದರು. ಆ ನೋವಿಗೆ ಯುವಕ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಆ ಯುವಕನಿಗೆ ಹೇಡಿತನದ ಪಾಠ ಮಾಡಿದ ನಮ್ಮಂತವರಿಗೆಲ್ಲ ಧಿಕ್ಕಾರವಿರಲಿ.


