ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಜನರ ಮನವೊಲಿಸಲು ಪ್ರಯತ್ನಿಸಿದರು ಎಂಬ ಆರೋಪದ ಮೇಲೆ 47 ವರ್ಷದ ದಲಿತ ವ್ಯಕ್ತಿಗೆ ಥಳಿಸಿ, ತಲೆ ಬೋಳಿಸಿ ಮೆರವಣಿಗೆ ನಡೆಸಿದ ಆರೋಪ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಬೆಹ್ಲೋಪುರ್ ಅಲೈ ಗ್ರಾಮದಲ್ಲಿ ಶುಕ್ರವಾರ (ಡಿ.27) ನಡೆದಿದೆ.
“ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ ಆರೋಪ ಮಾಡಿ, ನನಗೆ ಸರಿಯಾದ ಪಾಠ ಕಲಿಸುವುದಾಗಿ ಹೇಳಿ ಪ್ರಬಲವರ್ಗದ (ಮೇಲ್ಜಾತಿ) ಜನರ ಗುಂಪು ನನಗೆ ಮತ್ತು ನನ್ನ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದೆ” ಎಂದು ಸಂತ್ರಸ್ತ ಶಿವಬದನ್ ಅವರು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಮತಾಂತರ ತಡೆ ಕಾಯ್ದೆಯಡಿ ಎರಡು ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ಶಿವಬದನ್ ಅವರು ಜಾಮೀನು ಪಡೆದು ಹೊರ ಬಂದಿದ್ದರು. ಈ ವೇಳೆ ನಡುವೆ ಅವರಿಗೆ ಥಳಿಸಲಾಗಿದೆ. ಘಟನೆ ಸಂಬಂಧ ಶಿವಬದನ್ ನೀಡಿದ ದೂರು ಆಧರಿಸಿ ಫತೇಪುರ್ ಪೊಲೀಸರು ರೋಹಿತ್ ದೀಕ್ಷಿತ್, ಲವಲೇಶ್ ಸಿಂಗ್, ಸೋಮಕರನ್ ಮತ್ತು ಕೆಲ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈ ಮೂವರೂ ಹಿಂದುತ್ವ ಸಂಘಟನೆ ಬಜರಂಗದಳದೊಂದಿಗೆ ಸಂಬಂಧ ಹೊಂದಿರುವವರು ಎಂದು ಹೇಳಲಾಗಿದೆ.
“ಪ್ರಕರಣದ ತನಿಖೆ ನಡೆಯುತ್ತಿದೆ. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಯಾರನ್ನೂ ಬಂಧಿಸಿಲ್ಲ” ಎಂದು ಫತೇಪುರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಎಸ್.ಮಿಶ್ರಾ ಮಾಹಿತಿ ನೀಡಿದ್ದಾರೆ.
“ಡಿಸೆಂಬರ್ 26ರಂದು ರೈಲ್ವೆ ನಿಲ್ದಾಣಕ್ಕೆ ತೆರಳುವ ಸಲುವಾಗಿ ಟ್ಯಾಕ್ಸಿ ಹಿಡಿಯಲು ನಾನು ಹಳ್ಳಿಯ ಕ್ರಾಸಿಂಗ್‌ನಲ್ಲಿ ನಿಂತಿದ್ದೆ. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ನನಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿ ನಿಂದಿಸಿದರು. ಮರುದಿನ ಬೆಳಿಗ್ಗೆ ಮನೆಗೆ ಹಿಂದಿರುಗಿದಾಗ ಆರೋಪಿಗಳಾದ ರೋಹಿತ್ ದೀಕ್ಷಿತ್, ಲವಲೇಶ್ ಸಿಂಗ್ ಮತ್ತು ಸೋಮಕರನ್ ನೇತೃತ್ವದ ಜನರ ಗುಂಪು ನನ್ನ ಮೇಲೆ ಹಲ್ಲೆ ನಡೆಸಿತು. ಅವರು ಹೆಂಡತಿ ಮಕ್ಕಳು ಸೇರಿದಂತೆ ನನ್ನ ಕುಟುಂಬವನ್ನೂ ಗುರಿಯಾಗಿಸಿದ್ದಾರೆ” ಎಂದು ಶಿವಬದನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಮುಂದುವರಿದು, “ಆರೋಪಿಗಳು ನನ್ನನ್ನು ಸಮೀಪದ ದೇವಸ್ಥಾನಕ್ಕೆ ಎಳೆದೊಯ್ದು ತಲೆ ಬೋಳಿಸಿದರು. ನಂತರ ಗ್ರಾಮದಾದ್ಯಂತ ಮೆರವಣಿಗೆ ಮಾಡಿ ಮತ್ತೊಂದು ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿ ಹನುಮಾನ್ ಚಾಲೀಸಾ ಪಠಿಸುವಂತೆ ಒತ್ತಾಯಿಸಿ ಪದೇ ಪದೇ ಥಳಿಸಿದ್ದಾರೆ” ಎಂದು ವಿವರಿಸಿದ್ದಾರೆ.
“ನಾನು ಕ್ರೈಸ್ತ ಧರ್ಮ ಅನುಸರಿಸದಿದ್ದರೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ” ಎಂದು ಶಿವಬದನ್ ಹೇಳಿದ್ದಾರೆ.
ಮತ್ತೊಂದೆಡೆ ಆರೋಪಿ ರೋಹಿತ್ ದೀಕ್ಷಿತ್ ಕೂಡ ದೂರು ದಾಖಲಿಸಿದ್ದು, ಅದರಲ್ಲಿ ” ಡಿಸೆಂಬರ್ 26ರಂದು ನಾನು ಗ್ರಾಮದ ಅಂಗಡಿಯಲ್ಲಿ ಕುಳಿತಿದ್ದಾಗ ರಾಮ್ ಬಹದ್ದೂರ್, ಸಂತೋಷ್ ಮತ್ತು ಶಿವಪಾಲ್ ಪಾಸ್ವಾನ್ ಎಂಬ ಮೂವರು ಸಹಚರರು ಮತ್ತು ಇತರ ನಾಲ್ವರು ಅಪರಿಚಿತರ ಜೊತೆ ಕಾರಿನಲ್ಲಿ ಆಗಮಿಸಿದ ಶಿವಬದನ್ ಅವರು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಿ ನಿಮಗೆ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ. ಪ್ರಾರ್ಥನೆಗೆ ಬಂದವರಿಂದ ಹಣ ಸಂಗ್ರಹಿಸಿ ನೀಡುತ್ತೇನೆ ಎಂದು ಹೇಳಿದರು. ನಾನು ಮತಾಂತರಗೊಳ್ಳಲು ವಿರೋಧಿಸಿದಾಗ ಶಿವಬದನ್ ನನಗೆ ಕಿರುಕುಳ ನೀಡಿ, ಸುಳ್ಳು ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದಾರೆ”ಎಂದು ಆರೋಪಿಸಿದ್ದಾರೆ.
ರೋಹಿತ್ ದೀಕ್ಷಿತ್ ದೂರು ಆಧರಿಸಿ ಶಿವಬದನ್ ಆತನ ಸಹಚರರಾದ ರಾಮ್ ಬಹದ್ದೂರ್, ಸಂತೋಷ್ ಮತ್ತು ಶಿವಪಾಲ್ ಪಾಸ್ವಾನ್ ಹಾಗೂ ನಾಲ್ವರು ಅಪರಿಚಿತರ ವಿರುದ್ದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಒಡಿಶಾ | ಬುಡಕಟ್ಟು ಮಹಿಳೆಯರನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು


