ಪೊಲೀಸ್ ಠಾಣೆಯಲ್ಲಿ 35 ವರ್ಷದ ದಲಿತ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಡಿಸೆಂಬರ್ 28ರಂದು ನಡೆದಿದ್ದು, ಆತನ ಕುಟುಂಬಸ್ಥರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಪೊಲೀಸರ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ.
ಮೃತ ವ್ಯಕ್ತಿಯನ್ನು ಮುಖೇಶ್ ಲಾಂಗರೆ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 26ರಂದು ಮುಖೇಶ್ ಅವರ ಗ್ರಾಮದ ಮಹಿಳೆಯೊಬ್ಬರು ಮುಖೇಶ್ ವಿರುದ್ದ ದೂರು ನೀಡಿದ್ದರು. ದೂರು ಆಧರಿಸಿ ಹೇಳಿಕೆ ದಾಖಲಿಸಿಕೊಳ್ಳಲು ಮುಖೇಶ್ ಅವರನ್ನು ಡಿಸೆಂಬರ್ 28ರಂದು ಸತ್ವಾಸ್ ಪೊಲೀಸ್ ಠಾಣೆಗೆ ಕರೆಯಲಾಗಿತ್ತು. ಈ ವೇಳೆ ಅವರು ಠಾಣೆಯಲ್ಲಿ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪುವ ವೇಳೆ ಮುಖೇಶ್ ಅವರು ಪೊಲೀಸ್ ಕಸ್ಟಡಿಯಲ್ಲಿ ಇರಲಿಲ್ಲ. ಅವರು ಠಾಣೆಯ ಉಸ್ತುವಾರಿ ಅಧಿಕಾರಿ ಆಶಿಶ್ ರಜಪೂತ್ ಅವರ ಮುಂದೆ ವಿಚಾರಣಾ ಕೊಠಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದರು ಎಂದು ದೇವಾಸ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಪುನೀತ್ ಗಹ್ಲೋಟ್ ತಿಳಿಸಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಮಹಿಳೆ ದೂರು ನೀಡಿದ ಬಳಿಕ ಮುಖೇಶ್ ವಿರುದ್ದದ ಪ್ರಕರಣವನ್ನು ಠಾಣೆಯ ಉಸ್ತುವಾರಿ ಅಧಿಕಾರಿ ಆಶಿಶ್ ರಜಪೂತ್ ನೋಡಿಕೊಳ್ಳುತ್ತಿದ್ದರು. ಮುಖೇಶ್ ಸಾವನ್ನಪ್ಪುವ ವೇಳೆ ಆಶಿಶ್ ಅವರು ಇನ್ನೊಂದು ಪ್ರಕರಣ ಸಂಬಂಧ ವಿಚಾರಣಾ ಕೊಠಡಿಯಿಂದ ಹೊರ ಹೋಗಿದ್ದರು. ಈ ವೇಳೆ ಮುಖೇಶ್ ಅವರು ತನ್ನಲ್ಲಿದ್ದ ಶಲ್ಯವನ್ನು ಕಿಟಕಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಠಾಣೆಯ ಸಿಬ್ಬಂದಿ ನೋಡಿದ ತಕ್ಷಣ ಅವರನ್ನು ನೇಣಿನಿಂದ ಬಿಡಿಸಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಪುನೀತ್ ಗಹ್ಲೋಟ್ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ನ್ಯಾಯಾಂಗ ತನಿಖೆ
“ವಿಷಯ ತಿಳಿದ ಕೂಡಲೇ ಹಿರಿಯ ಅಧಿಕಾರಿಗಳನ್ನು ಸತ್ವಾಸ್‌ಗೆ ದೌಡಾಯಿಸಿದ್ದೇವೆ. ಮುಖೇಶ್ ಅವರು ಠಾಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ, ಕಸ್ಟಡಿ ಸಾವಿನ ಪ್ರಕರಣಗಳಲ್ಲಿ ಅನುಸರಿಸುವ ಎಲ್ಲಾ ಮಾನವ ಹಕ್ಕುಗಳ ಆಯೋಗದ ಎಲ್ಲಾ ಮಾರ್ಗಸೂಚಿಗಳನ್ನು ನಾವು ಅನುಸರಿಸಿದ್ದೇವೆ. ಉದಾ : ಕೊಠಡಿಯನ್ನು ಸೀಲ್ ಮಾಡುವುದು ಮತ್ತು ನ್ಯಾಯಾಂಗ ತನಿಖೆಗಾಗಿ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸುವುದು” ಎಂದು ಎಸ್‌ಪಿ ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆ ನಡೆಸಲು ಶನಿವಾರ (ಡಿಸೆಂಬರ್ 28, 2024) ಸಂಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ನಂದನಿ ಉಯಿಕೆ ಅವರನ್ನು ನೇಮಿಸಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ನ್ಯಾಯಾಧೀಶರು ಮೂವರು ವೈದ್ಯರ ಸಮಿತಿಯನ್ನು ಹೆಸರಿಸಿದ್ದಾರೆ ಎಂದು ಎಸ್‌ಪಿ ಗಹ್ಲೋಟ್ ಮಾಹಿತಿ ನೀಡಿದ್ದಾರೆ.
“ನಾವು ಘಟನಾ ಸ್ಥಳದ ಪರಿಶೀಲನೆಗಾಗಿ ಉಜ್ಜಯಿನಿಯಿಂದ ವಿಧಿವಿಜ್ಞಾನ ಅಧಿಕಾರಿಯನ್ನು ಕರೆಸಿದ್ದೇವೆ. ಶನಿವಾರ (ಡಿಸೆಂಬರ್ 28, 2024) ತಡರಾತ್ರಿ ಠಾಣಾ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ. ಠಾಣೆಯ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಂಗ ತನಿಖಾ ತಂಡ ವಶಪಡಿಸಿಕೊಂಡಿದೆ. ಮ್ಯಾಜಿಸ್ಟ್ರೇಟ್ ಉಯಿಕೆ ಮತ್ತು ವಿಧಿವಿಜ್ಞಾನ ತಂಡ ಭಾನುವಾರ (ಡಿಸೆಂಬರ್ 29, 2024) ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಗಹ್ಲೋಟ್ ಹೇಳಿದ್ದಾರೆ.
ಕೊಲೆ ಆರೋಪ
ಮುಖೇಶ್ ಅವರ ಸಾವಿಗೆ ಸಂಬಂಧಿಸಿದಂತೆ ಭೀಮ್ ಆರ್ಮಿ ಕಾರ್ಯಕರ್ತರು ಮತ್ತು ಮೃತರ ಕುಟುಂಬಸ್ಥರು ಸ್ಥಳೀಯ ಪೊಲೀಸರ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಭೀಮ್ ಆರ್ಮಿ ಕಾರ್ಯಕರ್ತರು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ : ನ್ಯಾಯಾಂಗ ತನಿಖೆ, ಅಪರಾಧಿಗಳಿಗೆ ಶಿಕ್ಷೆ ಮತ್ತು ಕುಟುಂಬಕ್ಕೆ ಆರ್ಥಿಕ ಪರಿಹಾರ. “ಅವರ ಎರಡು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಮತ್ತು ಪರಿಹಾರದ ಬಗ್ಗೆ ನಾವು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ” ಎಂದು ಎಸ್‌ಪಿ ಹೇಳಿದ್ದಾರೆ.
ಭಾನುವಾರ (ಡಿಸೆಂಬರ್ 29, 2024) ಮಧ್ಯಾಹ್ನ, ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಅವರು ಸತ್ವಾಸ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದು, ಠಾಣೆಯ ಎಲ್ಲಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಮತ್ತು ಮೃತನ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಒತ್ತಾಯಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮುಖೇಶ್ ಲಾಂಗ್ರೆ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದ ಕಾರಣ ಕೊಲೆ ಮಾಡಿದ್ದಾರೆ ಎಂದು ಜಿತು ಪಟ್ವಾರಿ ಆರೋಪಿಸಿದ್ದಾರೆ.
ಪ್ರಕರಣದ ಹಿಂದೆ ರಾಜಕೀಯ
ಮೃತ ಮುಖೇಶ್ ಅವರ ಕುಟುಂಬವು ಆರಂಭದಲ್ಲಿ ಯಾವುದೇ ಆರೋಪವನ್ನು ಮಾಡಿರಲಿಲ್ಲ. ಮರಣೋತ್ತರ ಪರೀಕ್ಷೆಗೆ ಮಾಡುವುದಕ್ಕೆ ಮಾತ್ರ ನಿರಾಕದ್ದರು. ಕೆಲ ರಾಜಕಾರಣಿಗಳ ಸಂಪರ್ಕಕ್ಕೆ ಬಂದ ನಂತರವೇ ಅವರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನ್ಯಾಯಾಂಗ ತನಿಖೆ ನಡೆಯುತ್ತಿದೆ ಮತ್ತು ಹೆಚ್ಚುವರಿ ಎಸ್ಪಿ (ಗ್ರಾಮೀಣ) ಅವರು ಲಂಚದ ಆರೋಪದ ಬಗ್ಗೆಯೂ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಭಾನುವಾರ (ಡಿಸೆಂಬರ್ 29, 2024) ರಾತ್ರಿ ನಡೆಸಲಾದ ಮರಣೋತ್ತರ ಪರೀಕ್ಷೆಗೆ ಮುಖೇಶ್ ಅವರ ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ ಎಂದು ಎಸ್‌ಪಿ ಗಹ್ಲೋಟ್ ತಿಳಿಸಿದ್ದಾರೆ.
ಮತ್ತೊಬ್ಬರು ಪೊಲೀಸ್ ಅಧಿಕಾರಿ ಮಾತನಾಡಿ, ” ಮೃತ ಮುಖೇಶ್ ಲಾಂಗ್ರೆ ಅವರ ವಿರುದ್ದ 6 ಕ್ರಿಮಿನಲ್ ಪ್ರಕರಣಗಳಿವೆ. ಮುಖೇಶ್ ವಿರುದ್ದ ದೂರು ನೀಡಿರುವ ಮಹಿಳೆ ಕಳೆದ ಆಗಸ್ಟ್‌ನಲ್ಲಿಯೂ ದೂರು ನೀಡಿದ್ದರು. ಇತ್ತೀಚಿನ ದೂರಿನಲ್ಲಿ, ಮುಖೇಶ್ ಅವರು ಪಾನಮತ್ತನಾಗಿ ಬಂದು ತನಗೆ ಮತ್ತು ತನ್ನ ಗಂಡನಿಗೆ ನಿಂದಿಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಒಡಿಶಾ | ಬುಡಕಟ್ಟು ಮಹಿಳೆಯರನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು


