Homeಕರ್ನಾಟಕದಲಿತರ ದೇವಾಲಯ ಪ್ರವೇಶದ ಸುತ್ತ ಅಸಹನೆಯ ಹುತ್ತ

ದಲಿತರ ದೇವಾಲಯ ಪ್ರವೇಶದ ಸುತ್ತ ಅಸಹನೆಯ ಹುತ್ತ

- Advertisement -
- Advertisement -

ಮುಜರಾಯಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಇತಿಹಾಸವು ಮೈಸೂರು ಅರಸರ ಆಳ್ವಿಕೆಯ ಕಾಲಕ್ಕೆ ಹೋಗುತ್ತದೆ. ರಾಜ್ಯದಲ್ಲಿ ಸುಮಾರು 35,000 ದೇವಾಲಯಗಳನ್ನು ಹೊಂದಿರುವ ಈ ಇಲಾಖೆ ಅತ್ಯಂತ ಸೂಕ್ಷ್ಮ ನಡೆಗಳೊಂದಿಗೆ ವ್ಯವಹರಿಸಬೇಕಾದ ಜವಾಬ್ದಾರಿಯನ್ನು ಹೊಂದಿದೆ.

’ಮುಜರಾಯಿ’ ಎಂಬ ಪದವು ಪರ್ಷಿಯನ್ ಪದವಾದ ’ಮುಜ್ರಾ’ದಿಂದ ಬಂದಿದೆ; ಇದರರ್ಥ
ಕಡಿತ ಅಥವಾ ಭತ್ಯೆ ಎಂಬುದಾಗಿದೆ. ಜನ ಬಳಕೆಯಲ್ಲಿ ಮುಜರಾಯಿ ಎಂಬುದೇ ಉಳಿದುಬಂದಿದೆ. ಸಾಮಾನ್ಯವಾಗಿ ಧಾರ್ಮಿಕ ಅಥವಾ ದತ್ತಿ ಉದ್ದೇಶಕ್ಕಾಗಿ, ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಪಾಲನೆಗಾಗಿ ನೀಡಲಾದ ಭತ್ಯೆಗೆ ಮುಜರಾಯಿ ಪದವನ್ನು ಅನ್ವಯಿಸಲಾಯಿತು.

ಮೈಸೂರು ಅರಸರಾದ ಚಿಕ್ಕದೇವರಾಜ ಒಡೆಯರ್ ಅವರ ಕಾಲದಲ್ಲಿ ಈ ಇಲಾಖೆ ’ದೇವಸ್ಥಾನ ಚಾವಡಿ’ ಎಂದು ಜನಪ್ರಿಯವಾಗಿತ್ತು. ಬ್ರಾಹ್ಮಣರಿಗೆ ದಿನನಿತ್ಯದ ಅನ್ನದಾನ, ದೇವಸ್ಥಾನಗಳ ದೀಪಾಲಂಕಾರ, ಧಾರ್ಮಿಕ ಸಂಸ್ಥೆಗಳ ಸ್ಥಾಪನೆ ಇತ್ಯಾದಿಗಳಿಗೆ ಮಂಜೂರಾದ ಈ ಇಲಾಖೆಗೆ ಲೆಕ್ಕಪತ್ರಗಳನ್ನು ಇಡುವ ಜವಾಬ್ದಾರಿಯೂ ಇತ್ತು. ಬಹುಶಃ ಈ ಇಲಾಖೆಯನ್ನು ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಮುಜರಾಯಿ ಎಂದು ಕರೆಯಲಾಗುತ್ತಿತ್ತು. 1956ರಲ್ಲಿ ಮುಜರಾಯಿ ಇಲಾಖೆಯನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆ ಎಂದು ಹೆಸರಿಸಲಾಯಿತು.

1831ರಿಂದ 1881ರ ಅವಧಿಯಲ್ಲಿ ಮೈಸೂರು ರಾಜ್ಯವು ಬ್ರಿಟಿಷ್ ಕಮಿಷನರ್‌ಗಳ ಆಳ್ವಿಕೆಯಲ್ಲಿದ್ದಾಗ, ರಾಜ್ಯದಲ್ಲಿನ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ಭಾರತೀಯ ಅಧಿಕಾರಿಗಳು ನಿರ್ವಹಿಸುತ್ತಿದ್ದರು. ಅಂತಿಮ ಅಧಿಕಾರವನ್ನು ಶಿರಸ್ತೇದಾರ್‌ಗೆ ವಹಿಸಲಾಯಿತು. 1881ರ ನಂತರದಲ್ಲಿ ಮುಜರಾಯಿ ಇಲಾಖೆಯು ದಿವಾನರ ನಿಯಂತ್ರಣಕ್ಕೆ ಬಂದಿತು.

ಈ ಸಂಸ್ಥೆಗಳ ದಕ್ಷ ನಿಯಂತ್ರಣಕ್ಕಾಗಿ, ದುರುಪಯೋಗಗಳನ್ನು ತಪ್ಪಿಸುವುದಕ್ಕಾಗಿ ಪ್ರತ್ಯೇಕ ಮುಜರಾಯಿ ಅಧೀಕ್ಷಕರನ್ನು 1891ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಅವರು ನೇಮಿಸಿದರು. ಆರ್ಕಾಟ್ ಶ್ರೀನಿವಾಸಾಚಾರ್ ಅಧೀಕ್ಷಕರಾಗಿ ನೇಮಕವಾಗಿ ಬಂದು ಹಲವು ಸುಧಾರಣೆಗಳನ್ನು ತಂದರು. ದೇವಾಲಯಗಳಲ್ಲಿ ನೈರ್ಮಲ್ಯ, ಛತ್ರಗಳಲ್ಲಿ ಆಹಾರ ವಿತರಣೆಯ ದುರುಪಯೋಗ, ದೇವಾಲಯಗಳಲ್ಲಿ ನೃತ್ಯ ನಿಷೇಧ ಹೀಗೆ ಹಲವು ಸಂಗತಿಗಳಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸಿದರು. ಹೀಗೆ ಕಾಲಕಾಲಕ್ಕೆ ಬದಲಾವಣೆಗಳನ್ನು ಮುಜರಾಯಿ ಇಲಾಖೆ ಕಾಣಲು ಯತ್ನಿಸಿದೆ.

ರಾಜ್ಯದಲ್ಲಿ ಮುಜರಾಯಿ ಸಂಸ್ಥೆಗಳ ಆಡಳಿತ ಮತ್ತು ನಿಯಂತ್ರಣಕ್ಕಾಗಿ 1913ರ ಮುಜರಾಯಿ ನಿಯಂತ್ರಣ ಕಾಯಿದೆ 1914ರಲ್ಲಿ ಜಾರಿಗೆ ಬಂದಿತು. 1921ರಲ್ಲಿ ಮುಜರಾಯಿ ಸೂಪರಿಂಟೆಂಡೆಂಟ್ ಹುದ್ದೆಯನ್ನು ರದ್ದುಪಡಿಸಲಾಯಿತು. ಇಲಾಖೆಯ ಆಡಳಿತಕ್ಕಾಗಿ ಮುಜರಾಯಿ ಆಯುಕ್ತರನ್ನು ನೇಮಿಸಲಾಯಿತು. 1927ರಲ್ಲಿ ಮೈಸೂರು ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ-1927ಅನ್ನು ಅಂಗೀಕರಿಸಲಾಯಿತು. ಈ ಕಾಯಿದೆ 1997 ರವರೆಗೆ ಜಾರಿಯಲ್ಲಿತ್ತು. 1997ರಲ್ಲಿ ಕರ್ನಾಟಕದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಏಕೀಕೃತ ಕಾಯಿದೆಯನ್ನು ರೂಪಿಸಲಾಯಿತು. ಈ ಕಾಯಿದೆಯನ್ನು ನಂತರ 2011ರಲ್ಲಿ ತಿದ್ದುಪಡಿ ಮಾಡಲಾಯಿತು.

ಮುಜರಾಯಿ ಇಲಾಖೆಯ ಇತಿಹಾಸ ಹೀಗೆ ದೊಡ್ಡ ಮಟ್ಟದಲ್ಲಿದೆ. ಕಾಲಕಾಲಕ್ಕೆ ಬದಲಾವಣೆಗಳನ್ನು ಮುಜರಾಯಿ ಇಲಾಖೆ ಕಂಡಿದ್ದರೂ ಸಾಮಾಜಿಕ ಚಲನೆ ಎಂಬುದು ನಿಂತನೀರಾಗಿಯೇ ಇರುವುದು ವಿಪರ್ಯಾಸದ ಸಂಗತಿ. ದಲಿತರು ದೇವಾಲಯ ಪ್ರವೇಶಿಸಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಾಗ, ಕಾನೂನು, ಸಂವಿಧಾನ ಬಿಳಿಹಾಳೆಯ ಮೇಲಿನ ಬರಹದಂತೆ ಭಾಸವಾಗುತ್ತದೆ. ಒಂದು ವೇಳೆ ದೇವಾಲಯಗಳಿಗೆ ಪ್ರವೇಶಿಸಿದರೂ ದಲಿತರು ಪ್ರವೇಶೋತ್ತರ ಪರಿಣಾಮಗಳನ್ನು ಎದುರಿಸುವಂತಾಗಿದೆ.

ದೇವಾಲಯ ಪ್ರವೇಶ ಮಾಡಿದ ತಕ್ಷಣ ದಲಿತರು ಅಸಮಾನ ಜಗತ್ತಿನಿಂದ ಹೊರಬರುವುದಿಲ್ಲ. ದೇವಾಲಯ ಪ್ರವೇಶದ ಆಸಕ್ತಿ ತೊರೆದು ಬೌದ್ಧತತ್ವದತ್ತ ದಲಿತರು ಹೆಜ್ಜೆ ಇಡಬೇಕು ಎಂಬ ಆಶಯಗಳು ಚಿಂತಕ ವಲಯದಲ್ಲಿವೆ. ದೇವಾಲಯ ಪ್ರವೇಶವೆಂಬುದು ಆಧ್ಯಾತ್ಮಿಕ ನೆಲೆಯ ಚಿಂತನೆಗಿಂತ, ಅದೊಂದು ಸಾಮಾಜಿಕ ಸುಧಾರಣೆಯ ಪ್ರಕ್ರಿಯೆಯಾಗಿದೆ. ಸಂವಿಧಾನ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದ್ದರೂ ದೇವಾಲಯಗಳ ಒಳಗೆ ದಲಿತರು ಪ್ರವೇಶಿಸಿದರೆ ಅಸಹನೆ ವ್ಯಕ್ತವಾಗುವುದು ಏತಕ್ಕೆ?

ಮೇಲ್ಜಾತಿಗಳು ದೇವಾಲಯಗಳ ಮೇಲೆ ಪ್ರಾಬಲ್ಯ ಸಾಧಿಸಿ, ದಲಿತರು ದೇವಾಲಯ ಪ್ರವೇಶಿಸುವುದನ್ನು ತಡೆಯಲು ಯತ್ನಿಸುವುದು, ದೈವಶಕ್ತಿ, ಕಾನೂನಿನ ಶಕ್ತಿಗಿಂತ ಮನುಷ್ಯನ ಮೇಲರಿಮೆಯ ಅಹಂಕಾರವೇ ಪ್ರಾಬಲ್ಯ ಸಾಧಿಸುವುದು ಕುಚೋದ್ಯದ ಸಂಗತಿಯೇ ಸರಿ.

“ಯಾವುದೇ ಜಾತಿ, ಜನಾಂಗ, ಲಿಂಗ ಭೇದವಿಲ್ಲದೆ ದೇವಾಲಯ ಪ್ರವೇಶಿಸಬಹುದು” ಎಂದು ಮುಜರಾಯಿ ಇಲಾಖೆ ಹಾಕುವ ಸೂಚನಾ ಫಲಕವನ್ನೇ ವಿರೂಪಗೊಳಿಸುವ ವಿದ್ಯಮಾನಗಳು ಕಂಡುಬರುತ್ತಿವೆ. ಇಂತಹ ಘಟನೆಗಳು ನಡೆದಾಗ ದಲಿತರು ಅವುಗಳನ್ನು ಪ್ರಶ್ನಿಸುವ ವಿದ್ಯಮಾನಗಳೂ ನಡೆಯುತ್ತಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಚಿಂತಿಸುವ ಹೊಸ ತಲೆಮಾರಿನ ದಲಿತರು ಅಸ್ಪೃಶ್ಯತೆ ಆಚರಣೆಯನ್ನು ಪ್ರಶ್ನಿಸುತ್ತಿದ್ದಾರೆ. ದಲಿತ ಸಂಘಟನೆಗಳು ಎಚ್ಚೆತ್ತುಕೊಂಡು ದಲಿತರಿಗೆ ಧೈರ್ಯ ತುಂಬಿ ದೇವಾಲಯ ಪ್ರವೇಶಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿವೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಿಗನೂರು (ದಿಂಡಗೂರು) ಗ್ರಾಮದಲ್ಲಿ ಭೀಮ್ ಆರ್ಮಿಯ ನೇತೃತ್ವದಲ್ಲಿ ದೇವಾಲಯಗಳಿಗೆ ದಲಿತರು ಕೆಲವು ತಿಂಗಳ ಹಿಂದೆ ಪ್ರವೇಶಿಸಿದ್ದರು. ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಬಳಿಕ ಇಡೀ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿತ್ತು. ಒಂದಲ್ಲ ಒಂದು ಕಡೆ ದಲಿತರು ದೇವಾಲಯ ಪ್ರವೇಶಿಸುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ದಾಸರಕಲ್ಲಹಳ್ಳಿ, ಬ್ಯಾಲಹಳ್ಳಿ ಗ್ರಾಮದಲ್ಲಿ ದಲಿತರು ಮುಜರಾಯಿ ದೇವಾಲಯಗಳಿಗೆ ಪ್ರವೇಶಿಸಿ ಸ್ವಾಭಿಮಾನ ಮೆರೆದಿದ್ದರು. ಇದರ ಜೊತೆಗೆ ದೇವಾಲಯ ಪ್ರವೇಶಿಸಿದಾಗ ದಬ್ಬಾಳಿಕೆಯನ್ನು ನಡೆಸುತ್ತಿರುವುದು ಹೆಚ್ಚಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಮಗುವೊಂದು ಆಕಸ್ಮಿಕವಾಗಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಮಗುವಿನ ಕುಟುಂಬಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದನ್ನು ಕಂಡು ಪ್ರಜ್ಞಾವಂತರು ಘಾಸಿಯಾಗಿದ್ದಾರೆ.

“ಗ್ರಾಮಗಳಲ್ಲಿ ದಲಿತರು ಬಹುತೇಕ ಸವರ್ಣೀಯರ ಮನೆಗಳಿಗೆ, ಹೊಲಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಒಂದು ವೇಳೆ ದೇವಾಲಯ ಪ್ರವೇಶಿಸಿದರೆ ನಮ್ಮನ್ನು ಕೆಲಸಕ್ಕೆ ಕರೆಯುವುದನ್ನು ನಿಲ್ಲಿಸಿಬಿಡುತ್ತಾರೆ ಎಂಬ ಭಯದಲ್ಲಿ ಅನೇಕರು ದೇವಾಲಯ ಪ್ರವೇಶಿಸಲು ಹಿಂಜರಿಯುತ್ತಾರೆ. ಜೊತೆಗೆ ದಲಿತರಲ್ಲಿನ ಹೆದರಿಕೆ, ಮೂಢನಂಬಿಕೆಗಳೂ ಇದಕ್ಕೆ ಕಾರಣ. ನಾನು ನಮ್ಮೂರಿನಲ್ಲಿ ಇತ್ತೀಚೆಗೆ ದೇವಾಲಯ ಪ್ರವೇಶಿಸಿದೆ. ನಮ್ಮ ಊರಿನಲ್ಲಿ ಯಾವುದೇ ವ್ಯವಹಾರ ವಹಿವಾಟನ್ನು ನಾನು ಹೊಂದಿಲ್ಲ. ಕೆಲವು ಪ್ರಜ್ಞಾವಂತ ಸವರ್ಣೀಯರು ನನ್ನೊಂದಿಗೆ ಆತ್ಮೀಯವಾಗಿದ್ದಾರೆ. ಅವರೊಂದಿಗೆ ನನ್ನ ವ್ಯವಹಾರ ಚಟುವಟಿಕೆಗಳು ಇವೆಯಷ್ಟೇ. ಹೀಗಾಗಿ ದಲಿತರು ತಮ್ಮ ಜೀವನ ನಡೆಸಲು ಸವರ್ಣೀಯರನ್ನು ಅವಲಂಬಿಸುವುದು ತಪ್ಪಬೇಕು. ನಾಗರಿಕರಂತೆ ವರ್ತಿಸುವುದನ್ನು ಸವರ್ಣಿಯರೂ ಕಲಿಯಬೇಕು. ನಾನು ದೇವಾಲಯ ಪ್ರವೇಶಿಸಿದಾಗ ಒಬ್ಬಾತ ನಿನಗೆ ದೇವರು ಒಳ್ಳೆಯದು ಮಾಡಲ್ಲ ಎಂದು ಅಸಹನೆ ಹೊರಹಾಕಿದ. ಕಾನೂನಿನ ಅರಿವು, ಸಂವಿಧಾನದ ಮಹತ್ವವನ್ನು ಸ್ಪೃಶ್ಯರು ಅನಿಸಿಕೊಂಡಿರುವವರು ಬೆಳೆಸಿಕೊಂಡರೆ ಸಮಾಜ ಬದಲಾಗುತ್ತದೆ” ಎನ್ನುತ್ತಾರೆ ಬ್ಯಾಲಹಳ್ಳಿ ಗ್ರಾಮದ ದಲಿತ ಮುಖಂಡ ಬಿ.ಸಿ.ರೇಣುಕಪ್ಪ.

“ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದಾಗ ದಲಿತರಿಗೂ ಪ್ರವೇಶ ನೀಡಬೇಕಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ ಮುಜರಾಯಿ ವ್ಯಾಪ್ತಿಯಿಂದ ಹೊರಬರುವುದೇ ದಾರಿ” ಎಂದು ಸವರ್ಣೀಯ ಸಮುದಾಯಗಳು ಚಿಂತಿಸುವುದನ್ನು ಅನೇಕ ಪ್ರಕರಣಗಳಲ್ಲಿ ಕಾಣುತ್ತೇವೆ. ಆದರೆ ಇದು ಅರಿವಿನ ಕೊರತೆಯಿಂದಾದ ಅಸ್ಪೃಶ್ಯತೆಯ ಆಚರಣೆಯಾಗಿದೆ. “ವಾಸ್ತವದಲ್ಲಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿರಲಿ, ಸೇರಿರದೆ ಇರಲಿ; ದಲಿತರಿಗೆ ಪ್ರವೇಶವನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುತ್ತಾರೆ” ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್.

ಈ ಕುರಿತು ವಿಸ್ತೃತವಾಗಿ ತಮ್ಮ ಚಿಂತನೆಯನ್ನು ನ್ಯಾಯಪಥ ಪತ್ರಿಕೆಯೊಂದಿಗೆ ಹಂಚಿಕೊಂಡ ಜಸ್ಟಿಸ್ ನಾಗಮೋಹನ ದಾಸ್ ಅವರು, “ಖಾಸಗಿ ದೇವಾಲಯಗಳೂ ಸಾರ್ವಜನಿಕರಿಗೆ ಸಂಬಂಧಿಸಿರುತ್ತವೆ. ದೇವಾಲಯದ ವ್ಯವಸ್ಥಾಪಕ ಮಂಡಳಿ ಖಾಸಗಿಯವರ ಬಳಿ ಇರಬಹುದು. ಉದಾಹರಣೆಗೆ ಉಡುಪಿ ಕೃಷ್ಣ ದೇವಾಲಯ, ಧರ್ಮಸ್ಥಳದ ಮಂಜುನಾಥ ದೇವಾಲಯಗಳು ಖಾಸಗಿ ಅಧೀನದಲ್ಲಿವೆ. ಅವುಗಳು ಮುಜರಾಯಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಎಲ್ಲ ಜನವರ್ಗವೂ ದೇವಾಲಯ ಪ್ರವೇಶಿಸಬಹುದು. ದಲಿತರು ದೇವಾಲಯಕ್ಕೆ ಬರುವಂತಿಲ್ಲ ಎಂಬುದು ಸಂವಿಧಾನಬಾಹಿರ. ನಮ್ಮ ಸಂವಿಧಾನವೂ ಎಲ್ಲ ವಿಧದ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ” ಎನ್ನುತ್ತಾರೆ.

“ಮುಜರಾಯಿ ದೇವಾಲಯದಲ್ಲಿ ಬೋರ್ಡ್ ಹಾಕಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರಾದರೂ ತಡೆಯಲು ಬಂದರೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಕಠಿಣ ಕ್ರಮ ಎಂದರೆ ಸಂಘರ್ಷಕ್ಕೆ ಎಡೆಮಾಡಬಾರದು. ನೂರಾರು ವರ್ಷಗಳಿಂದ ಈ ಅಸಮಾನತೆ ನಡೆದು ಬಂದಿರುವುದರಿಂದ ಒಂದೇ ಬಾರಿಗೆ ಬದಲಾವಣೆ ಸಾಧ್ಯವಾಗದು. ಆದರೆ ಇಷ್ಟು ವರ್ಷಗಳು ಈ ರೀತಿಯ ಆಚರಣೆ ಮುಂದುವರಿದಿರುವುದು ಅಸಮಾಧಾನದ ಸಂಗತಿ. ಮೇಲ್ಜಾತಿಯ ಜನರೂ ಇದಕ್ಕೆ ಸ್ಪಂದಿಸಬೇಕು. ಮನಪರಿವರ್ತನೆ ಮಾಡಿಕೊಳ್ಳಬೇಕು. ತಿರುಪತಿ, ನಂಜನಗೂಡು, ಚಾಮುಂಡಿ ಬೆಟ್ಟದಲ್ಲಿ ದಲಿತರಿಗೆ ಪ್ರವೇಶವಿದೆ. ನಮ್ಮೂರಿನ ದೇವಾಲಯ ಆ ದೇವಾಲಯಗಳಿಗಿಂತ ದೊಡ್ಡದೇ ಎಂದು ಪ್ರಶ್ನಿಸಿಕೊಳ್ಳಬೇಕು. ದೇವರು ಒಂದು ಜಾತಿಯ ಸ್ವತ್ತಲ್ಲ. ಈ ಆಯಾಮದಲ್ಲಿ ನೋಡಬೇಕು” ಎನ್ನುತ್ತಾರೆ ಜಸ್ಟೀಸ್.

ದಿಂಡಿಗನೂರಿನಲ್ಲಿ ಅಘೋಷಿತ ಬಹಿಷ್ಕಾರ

ಹಾಸನ ಜಿಲ್ಲೆಯ ದಿಂಡಿಗನೂರಿನಲ್ಲಿ ದೇವಾಲಯಗಳಿಗೆ ದಲಿತರು ಪ್ರವೇಶಿಸಿದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸವರ್ಣೀಯರನ್ನು ದಲಿತರು ಅವಲಂಬಿಸಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ದೇವಾಲಯ ಪ್ರವೇಶವನ್ನೇ ನೆಪವಾಗಿಟ್ಟುಕೊಂಡು ದಲಿತರನ್ನು ಮೂಲೆಗುಂಪು ಮಾಡುವ ಪ್ರವೃತ್ತಿಯನ್ನು ಎಲ್ಲೆಡೆ ಕಾಣಬಹುದು. ಇದಕ್ಕೆ ದಿಂಡಿಗನೂರು ಗ್ರಾಮ ಒಂದು ಉದಾಹರಣೆಯಷ್ಟೇ.

ದಿಂಡಿಗನೂರಿನ ದಲಿತ ಮುಖಂಡ, ಭೀಮ್ ಆರ್ಮಿಯ ಸಂಘಟಕ ನಟರಾಜ್ ನ್ಯಾಯಪಥದೊಂದಿಗೆ ಮಾತನಾಡಿ ದೇವಾಲಯ ಪ್ರವೇಶೋತ್ತರ ಪರಿಸ್ಥಿತಿಗಳನ್ನು ಬಿಚ್ಚಿಟ್ಟರು: “ನಾವು ದೇವಾಲಯ ಪ್ರವೇಶ ಮಾಡಿದ್ದು ಸಾಮಾಜಿಕ ನ್ಯಾಯಕ್ಕಾಗಿ. ನಾವು ಕೂಡ ಮನುಷ್ಯರು ಎಂಬುದನ್ನು ಸಾರುವುದಕ್ಕಾಗಿ. ನಮ್ಮ ಧಾರ್ಮಿಕ ಹಕ್ಕಿಗಾಗಿ ದೇವಾಲಯ ಪ್ರವೇಶಿಸಿದೆವು. ಆದರೆ, ಆನಂತರದಲ್ಲಿ ನಮ್ಮ ಮೇಲೆ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕುವುದು ನಡೆಯುತ್ತಿದೆ. ನಮ್ಮ ಊರಿನಲ್ಲಿ ದಲಿತರು ಸೇರಿ ಸುಮಾರು ಏಟೆಂಟು ಜಾತಿಗಳಿವೆ. ದಲಿತರಿಗೆ ಮಾತ್ರ ಬಹಿಷ್ಕಾರ ಹಾಕುವ ಪದ್ಧತಿ ರೂಢಿಗೆ ಬಂದಿದೆ. ನಾವು ದೇವಾಲಯ ಪ್ರವೇಶಿಸಿದ ಬಳಿಕ ಸವರ್ಣೀಯ ಮುಖಂಡರು ಸಭೆ ಸೇರಿ ಅಘೋಷಿತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ದಲಿತರ ಬಳಿ ಯಾವುದೇ ಮಾತುಕತೆ, ವ್ಯವಹಾರ ಮಾಡಬೇಡಿ ಎಂದು ತಮ್ಮ ಜಾತಿಯ ಜನರಿಗೆ ತಿಳಿಸಿದ್ದಾರೆ. ನಮ್ಮ ಜೊತೆ ಮಾತನಾಡಿದವರಿಗೆ ದಂಡ ಹಾಕುವ ಪದ್ಧತಿಯನ್ನು
ಆಂತರಿಕವಾಗಿ ಮಾಡಿಕೊಂಡಿದ್ದಾರೆ. ಈಗಲೂ ಅದು ಚಾಲ್ತಿಯಲ್ಲಿದೆ” ಎಂದು ವಿಷಾದಿಸುತ್ತಾರೆ
ನಟರಾಜ್.

“ಕೂಲಿಯನ್ನೇ ನಂಬಿಕೊಂಡಿದ್ದ ದಲಿತರನ್ನು ಕೂಲಿಗೆ ಕರೆಯುತ್ತಿಲ್ಲ. ಕೇಳಿದರೆ ಅದಕ್ಕೆ ಸಬೂಬುಗಳನ್ನು ಹೇಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇತ್ತು, ಕರೆಯುತ್ತಿದ್ದೆವು; ಈಗ ಕೆಲಸ ಇಲ್ಲ ಎನ್ನುತ್ತಾರೆ. ಮಿಲ್ ಅಂಗಡಿಗೆ ದಲಿತರು ಹೋದರೆ ನಮಗೆ ಹುಷಾರಿಲ್ಲ, ನಾವು ಮಿಲ್ ನಿಲ್ಲಿಸಬೇಕೆಂದಿದ್ದೇವೆ ಎನ್ನುತ್ತಾರೆ. ಅವರಿಗೆ ಸರಿಸಮಾನವಾಗಿ ದೇವಾಲಯ ಪ್ರವೇಶಿಸಿದ್ದೇ ಅವರ ಈ ಅಸಹನೆಗೆ ಕಾರಣ. ನಾವು ಯಾವಾಗಲೂ ಅವರ ಕಾಲಡಿ ಇರಬೇಕೆಂಬುದು ಅವರ ಮನಸ್ಥಿತಿ. ಹೊರಗಿನ ಪ್ರಪಂಚಕ್ಕೆ ಇದು ಗೊತ್ತಾಗುತ್ತಿಲ್ಲ” ಎಂದು ವಿವರಿಸುತ್ತಾರೆ ನಟರಾಜ್.

“ನಾವು ಕೂಲಿನಾಲಿ ಮಾಡಿಕೊಂಡು ಹೇಗೋ ಇದ್ದೆವು. ಸಂಘಟಕರೆಲ್ಲ ಸೇರಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದೇ ಇದಕ್ಕೆಲ್ಲ ಕಾರಣ ಎಂದು ಕೆಲವು ದಲಿತರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಬಹಿಷ್ಕಾರ ಹಾಕಿದ್ದೇವೆ ಎಂದು ಯಾರೂ ತೋರ್ಪಡಿಸಿಕೊಳ್ಳುತ್ತಿಲ್ಲ. ದೇವಾಲಯಕ್ಕೆ ಹೋಗಿ ನಮಗೆ ಆರ್ಥಿಕವಾಗಿ ಹಿನ್ನಡೆಯಾಯಿತು. ಆದರೆ ಧಾರ್ಮಿಕ ಸ್ವತಂತ್ರವನ್ನು ಪಡೆದುಕೊಂಡಿದ್ದೇವೆ” ಎನ್ನುತ್ತಾರವರು.

ಸ್ವಾವಲಂಬನೆಗೆ ಹೆಗಲಾಗುವುದೇ ಸರ್ಕಾರ?

ದಲಿತರು ದೇವಾಲಯ ಪ್ರವೇಶಿಸಿದ ಬಳಿಕ ಅವರನ್ನು ಕೂಲಿ ಕೆಲಸಗಳಿಗೆ ಕರೆಯುವುದನ್ನು ಸವರ್ಣೀಯರು ನಿಲ್ಲಿಸುತ್ತಾರೆ. ಹೀಗಾಗಿ ಸರ್ಕಾರ ಮುಂದೆ ಬಂದು ದಲಿತರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ವಿವಿಧ ಯೋಜನೆಗಳ ಅಡಿಯಲ್ಲಿ ಸಹಕಾರ ನೀಡಿ, ಸ್ವ-ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಬೇಕು.

“ನಮಗೆ ಸರ್ಕಾರಿ ಸವಲತ್ತುಗಳನ್ನು ದೊರಕಿಸಿ, ಸ್ವಾವಲಂಬಿಗಳಾಗಲು ಅವಕಾಶವನ್ನು ಸರ್ಕಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಶಾಸಕರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ವಯಂ ಉದ್ಯೋಗಕ್ಕೆ ಜನಪ್ರತಿನಿಧಿಗಳು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸಂಘವನ್ನು ಆರಂಭಿಸಿದ್ದೇವೆ. ಎಷ್ಟು ದಿನ ಸವರ್ಣೀಯರನ್ನೇ ಅವಲಂಬಿಸಲು ಸಾಧ್ಯ?” ಎಂದು ಕೇಳುವ ನಟರಾಜ್ ಅವರ ಪ್ರಶ್ನೆಯಲ್ಲಿ ಬಿಡುಗಡೆಯ ಮಾರ್ಗ ಎದ್ದುತೋರುತ್ತದೆ.


ಇದನ್ನೂ ಓದಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...