ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದ ಧುಲೆ ಕ್ಷೇತ್ರದಲ್ಲಿ ಶೋಭಾ ಬಚಾವ್ ಪರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ತಮ್ಮ ಪಕ್ಷವನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯದ ಮೊದಲು ಬಡವರು, ದಲಿತರು ಮತ್ತು ಆದಿವಾಸಿಗಳನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿತ್ತು. ನೀವು ಮೋದಿ ಮತ್ತು ಶಾಗೆ ಮೂರನೇ ಅವಧಿಗೆ ಅಧಿಕಾರವನ್ನು ನೀಡಿದರೆ, ಅದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆ, ನಾವು ಮತ್ತೆ ಗುಲಾಮರಾಗುತ್ತೇವೆ. ನೀವು ನಿಮ್ಮ ಸ್ವಂತಕ್ಕಾಗಿ ಮತ್ತು ನಿಮ್ಮ ಸ್ವಂತ ಜನರಿಗಾಗಿ ಮತ ಚಲಾಯಿಸಬೇಕು. ನಾವು ಸಂವಿಧಾನವನ್ನು ಉಳಿಸಬೇಕಾಗಿದೆ. ಈ ಚುನಾವಣೆ ದೇಶದ ಭವಿಷ್ಯವನ್ನು ರೂಪಿಸುತ್ತದೆ ಹೀಗಾಗಿ ಇದೊಂದು ಮಹತ್ವದ ಚುನಾವಣೆಯಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ ಇಲ್ಲದಿದ್ದರೆ, ನಿಮ್ಮನ್ನು ಉಳಿಸಲು ಯಾರೂ ಇರುವುದಿಲ್ಲ, ಸಂವಿಧಾನವನ್ನು ಬದಲಾಯಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 2015ರಲ್ಲಿ ಹೇಳಿದ್ದರು. ನಂತರ ಹಲವು ಬಿಜೆಪಿ ಸಂಸದರು ಮತ್ತು ಕೇಸರಿ ಪಕ್ಷದ ನಾಯಕರು ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಪ್ರಧಾನಿ ಮೋದಿ ಸುಳ್ಳುಗಳನ್ನು ಹರಡುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರುವ ಬೇಡಿಕೆಯನ್ನು ಮೋದಿ ಈಡೇರಿಸಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿಕೊಂಡಿದ್ದರು, ಆದರೆ ಉದ್ಯೋಗ ಸೃಷ್ಟಿಸಿಲ್ಲ. ಮೋದಿ ಹೇಳಿರುವಂತೆ ರೈತರ ಆದಾಯ ಹೆಚ್ಚಳವಾಗಿಲ್ಲ, ಬದಲಾಗಿ ತಪ್ಪು ನೀತಿಗಳಿಂದ ಬೆಳೆಗಾರರ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಹೀಗಾಗಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಉತ್ತರ ಮಹಾರಾಷ್ಟ್ರದ ಧುಲೆಯಲ್ಲಿ ಮೇ 20ರಂದು ಐದನೇ ಹಂತದ ಸಾರ್ವತ್ರಿಕ ಚುನಾವಣೆ ವೇಳೆ ಮತದಾನ ನಡೆಯಲಿದೆ. ಇಲ್ಲಿ ಬಿಜೆಪಿ ಮಾಜಿ ಕೇಂದ್ರ ಸಚಿವ ಸುಭಾಷ್ ಭಮ್ರೆ ಅವರನ್ನು ಕಣಕ್ಕಿಳಿಸಿದೆ.
ಇದನ್ನು ಓದಿ: ‘ನನ್ನನ್ನು ಯಾರೂ ಅಪಹರಣ ಮಾಡಿಲ್ಲ’: ರೇವಣ್ಣ ಕಿಡ್ನಾಪ್ ಮಾಡಿಸಿದ್ದಾರೆ ಎನ್ನಲಾಗಿದ್ದ ಮಹಿಳೆಯಿಂದ ವಿಡಿಯೋ ಹೇಳಿಕೆ


