ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ಜೊತೆಗೆ ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರನ್ನು ಕೂಡ ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.
ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಗೆ ಸಂಸದೀಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಹಂಚಿಕೊಂಡಿದ್ದಾರೆ ಎಂದು ಮಾಜಿ ಸಂಸದ ಮಹುವಾ ಮೊಯಿತ್ರಾ ವಿರುದ್ಧ ಈ ಹಿಂದೆ ಆರೋಪ ಮಾಡಲಾಗಿತ್ತು. ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ ಈ ವಾರದ ಆರಂಭದಲ್ಲಿ ಮೊಯಿತ್ರಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡಿ ಆರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಕೇಳಿತ್ತು. ಇದಲ್ಲದೆ ಪ್ರತಿ ತಿಂಗಳು ತನಿಖೆಯ ಸ್ಥಿತಿಗತಿಗಳ ಬಗ್ಗೆ ವರದಿಗಳನ್ನು ಸಲ್ಲಿಸುವಂತೆ ಸಿಬಿಐಗೆ ತಿಳಿಸಿತ್ತು.
ಲೋಕಪಾಲ್ ಅವರ ಆದೇಶಕ್ಕೆ ಅನುಗುಣವಾಗಿ ಹೊರಡಿಸಲಾದ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಮೊಯಿತ್ರಾ, ಹಿರಾನಂದನಿ ಮತ್ತು ಅಪರಿಚಿತ ಇತರರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಮೋಯಿತ್ರಾ ತಪ್ಪನ್ನು ನಿರಾಕರಿಸಿದ್ದಾರೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ತೃಣಮೂಲ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಮಹುವಾ ಮೊಯಿತ್ರಾ ಅವರು ಲಂಚ ಮತ್ತು ಇತರ ಪ್ರಯೋಜನಗಳನ್ನು ಪಡೆಯುವುದು ಸೇರಿದಂತೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿ ಮಹುವಾ ಮೊಯಿತ್ರಾ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು. ಕೈಗಾರಿಕೋದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ದುಬಾರಿ ಉಡುಗೊರೆಗಳನ್ನು ಪಡೆದುಕೊಂಡು ತನ್ನ ಸಂಸತ್ತಿನ ಲಾಗಿನ್ ಐಡಿ ನೀಡಿದ್ದಾರೆ ಮತ್ತು ಪ್ರಧಾನಿ ಮೋದಿ, ಅದಾನಿ ಸಮೂಹದ ವಿರುದ್ಧ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪ ಸಂಸದೆ ಮಹುವಾ ಮೊಯಿತ್ರಾ ಮೇಲಿದೆ. ಈ ಸಂಬಂಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಲೋಕಸಭೆಗೆ ದೂರು ನೀಡಿದ್ದರು.
ಮಹುವಾ ಮೊಯಿತ್ರಾ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಲೋಕಸಭೆಯ ನೈತಿಕ ಸಮಿತಿಯ ವರದಿಯನ್ನು ಸಮಿತಿಯ ಮುಖ್ಯಸ್ಥ, ಬಿಜೆಪಿ ಸಂಸದ ವಿಜಯ್ ಸೋನ್ಕರ್ ಲೋಕಸಭೆಯಲ್ಲಿ ಮಂಡಿಸಿದ್ದರು. ಹಣ ಪಡೆದು ತಮ್ಮ ಸಂಸದೀಯ ಪೋರ್ಟಲ್ ಬಳಸಿ ಉದ್ಯಮಿ ದರ್ಶನ್ ಹಿರಾನಂದಾನಿಗೆ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವಕಾಶ ಕೊಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ಆಧಾರದಲ್ಲಿ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿತ್ತು. ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತನ್ನನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿರುವುದನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನು ಓದಿ: ಲೋಕಸಭೆ ಚುನಾವಣೆ: ಬಿಜೆಪಿ ಸೇರಿದ್ದ ಜಡ್ಜ್ ವಿರುದ್ಧ ವಿದ್ಯಾರ್ಥಿ ನಾಯಕನನ್ನು ಕಣಕ್ಕಿಳಿಸಿದ ದೀದಿ


