ಕೊರೊನಾ ವಾರಿಯರ್ಸ್‌ಗಳಾಗಿ ದುಡಿಯುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ 16 ತಿಂಗಳಿಂದ ಶಿಷ್ಯವೇತನ ನೀಡಿಲ್ಲವೆಂದು ಆರೋಪಿಸಿ ದಾವಣೆಗೆರೆಯಲ್ಲಿ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 7 ದಿನಕ್ಕೆ ಕಾಲಿಟ್ಟಿದೆ.
ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ನಗರದ ಜಯದೇವ ಸರ್ಕಲ್ ನಲ್ಲಿ ಧರಣಿ ನಡೆಸುತ್ತಿದ್ದು, ಶಿಷ್ಯವೇತನ ಸಿಗುವವರೆಗೂ ಹೋರಾಟ ನಿಲ್ಲುಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಸಂಸದರಾದ ಜಿ.ಎಂ ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಭೇಟಿ ನೀಡಿ ಶಿಷ್ಯವೇತನ ದೊರಕಿಸುವ ಭರವಸೆ ನೀಡಿದರೂ ಪ್ರತಿಭಟನೆ ಮುಂದುವರೆದಿದೆ.

ನಾವೆಲ್ಲರೂ ಬಡತನದ ಹಿನ್ನೆಲೆಯಿಂದ ಬಂದವರು. ಕಷ್ಟಪಟ್ಟು ಶುಲ್ಕ ಕಟ್ಟಿ ಓದುತ್ತಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ವಾರಿಯರ್ಸ್‌ಗಳಾಗಿ ದುಡಿದಿದ್ದೇವೆ. ಗೃಹವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ 16 ತಿಂಗಳುಗಳಿಂದ ನಮಗೆ ಶಿಷ್ಯವೇತನ ಬಂದಿಲ್ಲ. ಕಾಲೇಜು ಆಡಳಿತ ಮಂಡಳಿ ಸರ್ಕಾರವನ್ನು ದೂರಿದರೆ, ಸರ್ಕಾರ ಕಾಲೇಜನ್ನು ದೂರುತ್ತಿದೆ. ಇದರ ಮಧ್ಯೆ ನಾವು ಹೇಗೆ ಬದುಕಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಶಿಷ್ಯವೇತನ ಕುರಿತು ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಸ್ಥಳೀಯ ಶಾಸಕರಾದ ಶಾಮನೂರು ಶಿವಶಂಕರಪ್ಪರೊಡನೆ ನಾವು ಉನ್ನತ ಮಟ್ಟದ ಸಭೆ ನಡೆಸಿದ್ದೇವೆ. ಅದರಂತೆ ಜೆಜೆಎಂ ಕಾಲೇಜಿನ ಆಡಳಿತ ಮಂಡಳಿಯೇ ಶಿಷ್ಯವೇತನ ಭರಿಸಬೇಕೆಂದು ಮುಖ್ಯಮಂತ್ರಿಗಳು ತಿಳಿಸಿರುವ ಪ್ರಕಾರ ಆಡಳಿತ ಮಂಡಳಿಯವರು ಒಪ್ಪಿಕೊಂಡಿರುತ್ತಾರೆ. ಸೋಮವಾರದ ನಂತರ ಗೃಹವೈದ್ಯರಿಗೆ ಶಿಷ್ಯವೇತನವನ್ನು ಶೀಘ್ರವಾಗಿ ಬಿಡುಗಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ, ರಿಸರ್ಚ್ ಡಾಕ್ಟರ್ಸ್ ಅಸೋಷಿಯೇಶನ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಇದನ್ನೂ ಓದಿ: ಆಂಬುಲೆನ್ಸ್ ವಿಳಂಬ, ಸೋಂಕಿತ ಸಾವು: ಕೈಮುಗಿದ ಕ್ಷಮೆ ಕೇಳಿದ BBMP ಕಮಿಷನರ್


