Homeಮುಖಪುಟಡಿಸೆಂಬರ್ 25 - ಅಂಬೇಡ್ಕರ್ 'ಮನುಸ್ಮೃತಿ' ಸುಟ್ಟ ದಿನ

ಡಿಸೆಂಬರ್ 25 – ಅಂಬೇಡ್ಕರ್ ‘ಮನುಸ್ಮೃತಿ’ ಸುಟ್ಟ ದಿನ

ಮನುಸ್ಮೃತಿಗೆ ಪ್ರತಿಯಾಗಿ ಭಾರತಕ್ಕೆ ನಿಜವಾದ‌ ಸಂವಿಧಾನವನ್ನು ಅಂಬೇಡ್ಕರ್ ಬರೆದರು, ಆದರೆ ಇವತ್ತು ಅಂಬೇಡ್ಕರ್ ಸಂವಿಧಾನದ ಮೇಲೆ ಮನುಸ್ಮೃತಿ ಸವಾರಿ ಮಾಡಲು ಪ್ರಯತ್ನಿಸುತ್ತಿದೆ.

- Advertisement -
- Advertisement -

ಭಾರತದ ಚರಿತ್ರೆಯಲ್ಲಿ ಡಿಸೆಂಬರ್ 25 ಬಹು ಮುಖ್ಯವಾದ ದಿನ. ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೇ ಮೌಲ್ಯಗಳನ್ನಾಗಿಸಿ ಭಾರತೀಯ ಸುಪ್ತ ಮನಸ್ಸನ್ನು ಆಳುತ್ತಿರುವ ‘ಮನುಸ್ಮೃತಿ’ ಎಂಬ ‘ಭೂತಕಾಲದ ಸಂವಿಧಾನ’ವನ್ನು ಡಾ‌. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ ದಿನ.

ಭಾರತದ ಹಿಂದೂ ಮನಸ್ಸು ಬದಲಾಗಬಹುದು, ಹಿಂದೂ ಧರ್ಮವನ್ನು ಒಳಗಿದ್ದುಕೊಂಡೇ ಸುಧಾರಿಸಬಹುದೇನೋ ಎನ್ನುವ ನಂಬಿಕೆಯಲ್ಲಿ ಮಹಾಡ್, ಚೌಡಾರ್ ಸತ್ಯಾಗ್ರಹಗಳನ್ನು ನಡೆಸಿದ ಅಂಬೇಡ್ಕರ್ ಅವರಿಗೆ ದೊಡ್ಡ ನಿರಾಶೆ ಕಾದಿತ್ತು. ಆಗಿನ ಸರ್ಕಾರ 1923 ರಲ್ಲೆ The Bole Resolution ಮೂಲಕ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿರುವ ಕೆರೆಗೆಳು, ಬಾವಿಗಳು, ಧರ್ಮಶಾಲೆಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು ಅನ್ನುವ ಕಾಯ್ದೆ ತಂದಿದ್ದರೂ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ: ಬಹುಜನ ಭಾರತ: ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟಿದ್ದು ಸುಳ್ಳೇನು?

ತಮಗೆ ಇದ್ದ ಹಕ್ಕನ್ನು ಪಡೆಯುವುದಕ್ಕಾಗಿಯೇ ಅಂಬೇಡ್ಕರ್ ಚೌಡಾರ್ ಕೆರೆ ನೀರನ್ನು ಸಾರ್ವಜನಿಕವಾಗಿ ಕುಡಿಯುವ ಚಳುವಳಿಯನ್ನು ಆಯೋಜಿಸಿದರು. ಆದರೆ ಅಸ್ಪೃಶ್ಯರು ಮುಟ್ಟಿದ್ದಕ್ಕಾಗಿ ಕೆರೆಯೆ ಮಲಿನವಾಯಿತೆಂದು ಗೋಳಾಡಿದ ಮೇಲ್ಜಾತಿಯ ಜನ ಹಸುವಿನ ಸಗಣಿ, ಗಂಜಲ, ಹಾಲು, ತುಪ್ಪ, ಮೊಸರನ್ನು ಸುರಿದು ವೇದಗಳನ್ನು ಪಠಿಸುತ್ತಾ ಕೆರೆಯ ‘ಶುದ್ದೀಕರಣ’ ಮಾಡಿದರು. ದಲಿತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರೆ ವಿದ್ಯಾವಂತ, ಪ್ರಗತಿಪರ ಹಿಂದೂಗಳು ಅವರ ಜೊತೆಗೂಡಿ ಹೋರಾಟ ಮಾಡಬಹುದು ಹಿಂದೂ ಧರ್ಮ ಸುಧಾರಣೆಗೆ ಇದು ಕೂಡ ನೆರವಾಗಬಹುದು ಎಂಬ ಅಂಬೇಡ್ಕರ್ ನಿರೀಕ್ಷೆ ಸುಳ್ಳಾಯಿತು. ಮಹಾಡ್, ಚೌಡಾರ್ ಸತ್ಯಾಗ್ರಹಗಳಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಹಿಂಸಾತ್ಮಕವಾದ ದಾಳಿಗಳನ್ನು ಮೇಲ್ಜಾತಿಗಳು ಮಾಡಿದವು.

ಇದಾದ ಒಂಬತ್ತು ತಿಂಗಳ ನಂತರ ಚೌಡಾರ್ ಸತ್ಯಾಗ್ರಹವನ್ನು ಅಂಬೇಡ್ಕರ್ ಆಯೋಜಿಸಿದರು. ಆಗ ಮತ್ತೆ ಮೇಲ್ಜಾತಿಯ ಹಿಂದೂಗಳು ಚೌಡಾರ್ ಕೆರೆ ಸಾರ್ವಜನಿಕ ಆಸ್ತಿಯಲ್ಲ ಖಾಸಗಿ ಸ್ವತ್ತು ಎಂದು ಕೋರ್ಟಿಗೆ ಹೋದರು. ಸತ್ಯಾಗ್ರಹ ತಡೆಯಲು ಪ್ರಯತ್ನ ಮಾಡಿದರು. ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶಗಳ ನಡುವೆಯೂ ಸತ್ಯಾಗ್ರಹ ನಡೆಸಿದ ಅಂಬೇಡ್ಕರ್ ಡಿಸೆಂಬರ್ 25, 1927 ರಂದು ಹಿಂದೂ ಧರ್ಮದ ಆಧಾರವಾಗಿರುವ, ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಸೈದ್ದಾಂತಿಕ ಗ್ರಂಥವಾಗಿರುವ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಟ್ಟು ಹಿಂದೂ ಧರ್ಮದ ಕರ್ಮಠತನ, ಅಸಮಾನತೆಯ ವಿರುದ್ಧ ಸಮರ ಸಾರಿದರು.

ಇದನ್ನೂ ಓದಿ: ಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!

PC: bakeryprasad/instagram

ವಿಶೇಷವೆಂದರೆ ಈ ಸಮಾವೇಶದಲ್ಲಿ ಮನುಸ್ಮೃತಿಗೆ ಸಾರ್ವಜನಿಕವಾಗಿ ಬೆಂಕಿ ಇಟ್ಟವರು ಬಾಪೂಸಾಹೇಬ ಸಹಸ್ರಬುದ್ಧೆ ಎನ್ನುವ ಪ್ರಗತಿಪರ ಬ್ರಾಹ್ಮಣ. ಇದಾದ ಮೇಲೆ ಹಿಂದೂ ಧರ್ಮದ ಒಳಗಿದ್ದು ಅದನ್ನು ಸುಧಾರಿಸುವುದು ಸಾಧ್ಯವಿಲ್ಲ ಎಂದು ಮನಗಂಡು ಅಂಬೇಡ್ಕರ್ ಹಿಂದೂ ಧರ್ಮ ತ್ಯಜಿಸುವ ನಿರ್ಧಾರ ಮಾಡಿದರು‌. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದರು.

ಮುಂದೆ ಮನುಸ್ಮೃತಿಗೆ ಪ್ರತಿಯಾಗಿ ಭಾರತಕ್ಕೆ ನಿಜವಾದ‌ ಸಂವಿಧಾನವನ್ನು ಅಂಬೇಡ್ಕರ್ ಅವರೇ ಬರೆದರು. ಆದರೆ ಇವತ್ತು ಅಂಬೇಡ್ಕರ್ ಸಂವಿಧಾನದ ಮೇಲೆ ಮನುಸ್ಮೃತಿ ಸವಾರಿ ಮಾಡಲು ಪ್ರಯತ್ನಿಸುತ್ತಿದೆ. ಭಾರತದ ಮನಸ್ಸಿನಲ್ಲಿರುವ ಈ ಸುಪ್ತ ಸಂವಿಧಾನವನ್ನು ಸುಟ್ಟರೆ ಮಾತ್ರ ಈ ದೇಶಕ್ಕೆ ಬಿಡುಗಡೆ ಸಾಧ್ಯ. ವರ್ತಮಾನದ ಸಂವಿಧಾನದ ಕಾಲೆಳೆಯುತ್ತಿರುವ ಭೂತ ಕಾಲದ ಸಂವಿಧಾನದ ದಾಸರಾಗಿರುವ ದಲಿತರು, ಹಿಂದುಳಿದವರು ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳೊತ್ತಾರೊ ಅಷ್ಟು ಒಳ್ಳೆಯದು.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...