HomeಮುಖಪುಟEWS ಎಂಬ ಕಣ್ಕಟ್ಟಿನ ಮೀಸಲಾತಿ; ಸುಪ್ರೀಂಕೋರ್ಟ್‌ನಲ್ಲಾದರೂ ನ್ಯಾಯ ದೊರಕುವುದೇ?

EWS ಎಂಬ ಕಣ್ಕಟ್ಟಿನ ಮೀಸಲಾತಿ; ಸುಪ್ರೀಂಕೋರ್ಟ್‌ನಲ್ಲಾದರೂ ನ್ಯಾಯ ದೊರಕುವುದೇ?

- Advertisement -

ಮೀಸಲಾತಿ ಪರ-ವಿರೋಧದ ಚರ್ಚೆ ಕಳೆದ 70 ವರ್ಷಗಳಲ್ಲಿ ನಿರಂತರವಾಗಿ ನಡೆದು ಬಂದಿದೆ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಮಂಡಲ್ ವರದಿ ಜಾರಿಯಾದಾಗ ಮೇಲ್ಜಾತಿಗಳು ಮತ್ತು ಅದರ ಮಹತ್ವದ ಅರಿವಿರದ ಕೆಲವು ಹಿಂದುಳಿದ ಜಾತಿಗಳು ಅದನ್ನು ವಿರೋಧಿಸಿ ದೊಡ್ಡ ಹೋರಾಟ ಮಾಡಿದ್ದುಂಟು. ಇಂತಹ ಮೀಸಲಾತಿಯ ವಿರುದ್ಧ ಸದಾ ಅಸಹನೆ ವ್ಯಕ್ತಪಡಿಸುತ್ತಿದ್ದ ಬಿಜೆಪಿ ಪಕ್ಷಕ್ಕೆ ಸೇರಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2019ರ ಲೋಕಸಭಾ ಚುನಾವಣೆಗೂ ಮೊದಲು ಸಂವಿಧಾನ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲರಾದ ಮೇಲ್ಜಾತಿಗಳಿಗೆ (EWS) ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿಯನ್ನು ಘೋಷಿಸಿತು. ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ನೂರಾರು ಪಿಟಿಷನ್‌ಗಳು ದಾಖಲಾಗಿದ್ದು ವಿಚಾರಣೆಯನ್ನು ಪ್ರಾರಂಭವಾಗಬೇಕಿದೆ.

ಈ ಆರ್ಥಿಕವಾಗಿ ಹಿಂದುಳಿದ ಬಡವರು ಯಾರು ಎಂಬ ಪ್ರಶ್ನೆಗೆ “8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ, 5 ಎಕರೆಗಿಂತ ಕಡಿಮೆ ಜಮೀನು ಮತ್ತು 1000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರಬೇಕು”ಎಂಬ ಮಾನದಂಡವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಇದಕ್ಕೆ ಆರಂಭದಿಂದಲೂ ತೀವ್ರ ವಿರೋಧ ದಾಖಲಾಗಿತ್ತು. ಈಗ ಸುಪ್ರೀಂ ಕೋರ್ಟ್ ಸಹ ಈ ಮಾನದಂಡವನ್ನು ಪ್ರಶ್ನಿಸಿದೆ.

ಸ್ನಾತಕೋತ್ತರ ವೈದ್ಯಕೀಯ (ಪಿ.ಜಿ) ಕೋರ್ಸ್‌ಗೆ ನೀಟ್ ಮೂಲಕ ಪ್ರವೇಶಾತಿಗೆ EWS ವರ್ಗಕ್ಕೆ ಶೇ.10 ಮತ್ತು ಒಬಿಸಿಗೆ ಶೇ.27ರಷ್ಟು ಮೀಸಲಾತಿ ನಿಗದಿಗೊಳಿಸಿರುವುದನ್ನು ಮತ್ತು 8 ಲಕ್ಷ ಆದಾಯ ಮಿತಿ ನಿಗದಿ ಮಾಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನು ಒಟ್ಟಿಗೆ ಆಲಿಸುತ್ತಿರುವ ಜಸ್ಟೀಸ್ ಡಿ.ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಂ ನಾಥ್‌ರವರನ್ನೊಳಗೊಂಡ ಪೀಠ ಈ EWS ವರ್ಗಕ್ಕೆ 8 ಲಕ್ಷ ಆದಾಯ ಮಿತಿಯ ಮಾನದಂಡವನ್ನು ಹೇಗೆ ನಿರ್ಧರಿಸಿದ್ದೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಅಲ್ಲದೆ, ‘ಒಬಿಸಿಗಳಿಗೂ ಸಹ 8 ಲಕ್ಷ ರೂ.ಗಳು ’ಕ್ರೀಮಿ ಲೇಯರ್’ ಮಾನದಂಡವಾಗಿದೆ. ಆದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ಹಿಂದುಳಿದಿಲ್ಲದಿರುವ EWS ವರ್ಗಕ್ಕೂ ಅದೇ ಮಾನದಂಡವನ್ನು ಹೇಗೆ ಅಳವಡಿಸಲು ಸಾಧ್ಯ?’ ಎಂದು ಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ’ಈ ಆದಾಯ ಮಿತಿಯನ್ನು ಪರಿಷ್ಕರಿಸುತ್ತೇವೆ ಮತ್ತು ಅದಕ್ಕಾಗಿ ಸಮಿತಿ ರಚನೆ ಮಾಡುತ್ತೇವೆ, ನಾಲ್ಕು ವಾರಗಳ ಸಮಯಾವಕಾಶ ಕೊಡಿ ಎಂದು ಕೋರಿದ್ದಾರೆ’. ಅಲ್ಲಿಯವರೆಗೂ ಪಿ.ಜಿ ಕೌನ್ಸೆಲಿಂಗ್‌ಅನ್ನು ಮುಂದೂಡಬೇಕೆಂದು ಕೋರ್ಟ್ ಹೇಳಿದೆ.

ಇದೇ ವಿಷಯ ಕುರಿತು ಅಕ್ಟೋಬರ್‌ನಲ್ಲಿ ಜಸ್ಟೀಸ್ ಡಿ.ವೈ ಚಂದ್ರಚೂಡ್‌ರವರು, “ನೀವು (ಕೇಂದ್ರ ಸರ್ಕಾರ) ಈ 8 ಲಕ್ಷ ರೂಗಳ ಆದಾಯ ಮಿತಿಯನ್ನು ಏಕಾಏಕಿ ಶೂನ್ಯದಿಂದ ತಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಿತಿಗತಿಯ ಅಧ್ಯಯನ ಅಥವಾ ಆರ್ಥಿಕ-ಸಾಮಾಜಿಕ ಡೇಟಾ ಹೊಂದಿರಬೇಕು. ರೂ. 8 ಲಕ್ಷದ ಮಿತಿಯನ್ನು ಅನ್ವಯಿಸುವ ಮೂಲಕ ನೀವು ಸಮಾಜದಲ್ಲಿನ ಅಸಮಾನತೆಯನ್ನು ಮರೆಮಾಚಿ ಎಲ್ಲರೂ ಸಮಾನರನ್ನಾಗಿ ಬಿಂಬಿಸುತ್ತಿದ್ದೀರಿ” ಎಂದು ಕಿಡಿಕಾರಿದ್ದರು. ಒಬಿಸಿ ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಆದರೆ 8 ಲಕ್ಷಕ್ಕಿಂತ ಕಡಿಮೆ
ಆದಾಯ ಇರುವ EWS ಸಮುದಾಯವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದರು.

ಇದೇ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಾದ ಅರವಿಂದ್ ದಾತರ್‌ರವರು ಮಾಸಿಕ 70 ಸಾವಿರ ಸಂಬಳ ಪಡೆಯುವವರನ್ನು EWS ಎಂದು ಹೇಗೆ ಕರೆಯಬಹುದು ಎಂಬ ಅಹವಾಲು ಸಲ್ಲಿಸಿದ್ದಾರೆ. ಇದನ್ನು ಜನವರಿಯಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ತಿಳಿಸಿದೆ.

EWS ಮೀಸಲಾತಿ ಜಾರಿಯಾದರೆ ಏನೆಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರೊ ಅವೆಲ್ಲವೂ ನಿಜವಾಗುತ್ತಿರುವುದನ್ನು ಮೇಲಿನ ವಿದ್ಯಮಾನಗಳು ಸಾಬೀತುಪಡಿಸುತ್ತಿವೆ.

ನಿಂತುಹೋದ ಒಬಿಸಿ ಆದಾಯಮಿತಿ ಪರಿಷ್ಕರಣೆ – ಕೇಂದ್ರೀಯ ಹುದ್ದೆಗಳಲ್ಲಿ ಒಬಿಸಿ ಪ್ರಾತಿನಿಧ್ಯದ ಕುಂಠಿತ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಒಬಿಸಿ ಮೀಸಲಾತಿಗೆ ಆದಾಯ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸುತ್ತದೆ. ಸೆಪ್ಟೆಂಬರ್ 8, 1993ರಂದು ಮೊದಲು ಒಬಿಸಿ ಕೋಟಾ
ಜಾರಿಯಾದಾಗ ಆದಾಯ ಮಿತಿ ವರ್ಷಕ್ಕೆ 1 ಲಕ್ಷ ರೂ ಇತ್ತು. ಮಾರ್ಚ್ 9, 2004ರಂದು 2.50 ಲಕ್ಷ ರೂ.ಗೆ ಏರಿತು. ನಂತರ ಅಕ್ಟೋಬರ್ 2008ರಲ್ಲಿ ರೂ. 4.50 ಲಕ್ಷ ರೂ, ಮೇ 2013ರಲ್ಲಿ ರೂ. 6 ಲಕ್ಷ ಮತ್ತು ಸೆಪ್ಟೆಂಬರ್ 13, 2017ರಲ್ಲಿ ರೂ. 8ಲಕ್ಷ ರೂಗೆ ಏರಿಸಿರುವುದು ಕೊನೆಯ ಪರಿಷ್ಕರಣೆಯಾಗಿದೆ. ಈಗ ನಾಲ್ಕು ವರ್ಷ ಕಳೆದರೂ ಆದಾಯ ಮಿತಿ ಪರಿಷ್ಕರಣೆಯಾಗಿಲ್ಲ. ಇದರ ಪರಿಣಾಮ ಕೇಂದ್ರದ ಸರ್ಕಾರಿ ಹುದ್ದೆಗಳಲ್ಲಿ ಒಬಿಸಿ ಪ್ರಾತಿನಿಧ್ಯದ ಕುಂಠಿತಕ್ಕೆ ಕಾರಣವಾಗಿದೆ.

ಒಬಿಸಿ ಸಮುದಾಯಕ್ಕೆ 27% ಮೀಸಲಾತಿ ಇದ್ದರೆ, ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯವು 2016ರಲ್ಲಿ ಶೇ. 21.57 ಮಾತ್ರ ಇದೆ. 28 ಸಚಿವಾಲಯಗಳು, ಅಧೀನ ಕಚೇರಿಗಳು ಮತ್ತು ಇಲಾಖೆಗಳಿಂದ ಪಡೆದ ಮಾಹಿತಿಯಿಂದ ಇದು ಬಹಿರಂಗಗೊಂಡಿದೆ.

ಭಾರತದಾದ್ಯಂತ ಇರುವ ಕೇಂದ್ರೀಯ ವಿವಿಗಳ ಪ್ರಾಧ್ಯಾಪಕ ಹುದ್ದೆಗಳಲ್ಲಿ ಒಬಿಸಿ ಕೋಟಾದಡಿ ಒಟ್ಟು ಇರುವ ಕೋಟಾದಲ್ಲಿ ಕೇವಲ ಶೇ.2.8 ಮಾತ್ರ ತುಂಬಿದೆ. ಸಹ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಕೇವಲ ಶೇ.5.17ರಷ್ಟನ್ನು ಮಾತ್ರ ತುಂಬಲಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳಲ್ಲಿ ಶೆ.60ರಷ್ಟು ತುಂಬಿದೆ ಎಂದು ಯುಜಿಸಿ ಬಿಡುಗಡೆ ಮಾಡಿದ ಅಂಕಿ ಅಂಶಗಳು ಹೇಳಿವೆ.

ಜಾತಿಗಣತಿ ಮಾಡದಿರಲು EWS ಕಾರಣವೇ?

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1931ರ ಜನಗಣತಿಯೊಂದಿಗೆ ಮೊದಲ ಮತ್ತು ಕೊನೆಯ ಜಾತಿಗಣತಿ ನಡೆದಿತ್ತು. ಅದಾಗಿ 90 ವರ್ಷ ಕಳೆದರೂ ದೇಶಾದ್ಯಂತ ಜಾತಿಗಣತಿ ನಡೆದೇ ಇಲ್ಲ. ಇಷ್ಟು ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದ ಜನಸಂಖ್ಯೆ ಬಹಳ ಹೆಚ್ಚಾಗಿದೆ ಮತ್ತು ಮೇಲ್ಜಾತಿಗಳ ಜನಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು ಈertility Rate ಸ್ಪಷ್ಟಪಡಿಸಿದೆ. ಆದರೂ ಮೀಸಲಾತಿ ಸೇರಿದಂತೆ ಇತರ ಯೋಜನೆಗಳು 1931ರ ಜಾತಿಗಣತಿ ಆಧಾರದಲ್ಲಿಯೇ ನಡೆಯುತ್ತಿವೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಈಗಿರುವ ಶೇ.50 (EWS ಸೇರಿದರೆ 60%) ಮೀಸಲಾತಿಯನ್ನು ಹೆಚ್ಚು ಮಾಡಬೇಕೆಂದು, ಕರ್ನಾಟಕದಲ್ಲಿ ಮೀಸಲಾತಿ ವರ್ಗೀಕರಣವಾಗಬೇಕು, ಒಳಮೀಸಲಾತಿ ಜಾರಿಯಾಗಬೇಕೆಂದು ದೊಡ್ಡ ಹೋರಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದಿದ್ದೆ ಆದಲ್ಲಿ ಎಲ್ಲಾ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ? ಅವರ ಶೈಕ್ಷಣಿಕ ಸಾಧನೆಯೆಷ್ಟು? ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಎಂಬೆಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ. ಅವು ಖಂಡಿತವಾಗಿ ಬಲಾಢ್ಯ ಮೇಲ್ಜಾತಿಗಳು ಈಗ ಸಾರ್ವಜನಿಕವಾಗಿ ಬಿಂಬಿಸುತ್ತಿರುವ ಅಂಕಿಸಂಖ್ಯೆಗಳಿಗೆ ತದ್ವಿರುದ್ಧವಾಗಿರುತ್ತವೆ ಎಂಬ ಅಭಿಪ್ರಾಯವಿದೆ. ಆದರೆ ಜನಗಣತಿ ಮಾಡದ ಸರ್ಕಾರ ಏಕಾಏಕಿ EWS ಮೀಸಲಾತಿಯನ್ನು ಜಾರಿ ಮಾಡುತ್ತಿದೆ.

ಭಾರತದಲ್ಲಿ ಇಂದಿಗೂ ಅತಿಹೆಚ್ಚು ಸವಲತ್ತು ಪಡೆದುಕೊಂಡ ವರ್ಗವೆಂದರೆ ಅದು ಹಿಂದೂ ಮೇಲ್ಜಾತಿಗಳು. ದೇಶದ ಶೇ.20 ರಷ್ಟಿರುವ ಅವರು ದೇಶದ ಶೇ.80ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತರು, ಆದಿವಾಸಿಗಳು ಮತ್ತು ಒಬಿಸಿ ಸಮುದಾಯಗಳು ಅತ್ಯಂತ ಕಡಿಮೆ ಸಂಪತ್ತನ್ನು ಹಂಚಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದರೆ EWSಗೆ ದೊಡ್ಡ ಪ್ರತಿರೋಧ ಬರುತ್ತದೆ ಎಂಬ ಭಯವಿದೆ. ಈ ಪಟ್ಟಭದ್ರ ಹಿತಾಸಕ್ತಿಗಳೇ ಅಂದರೆ ಮುಖ್ಯವಾಗಿ ಹಿಂದೂ ಮೇಲ್ಜಾತಿಗಳು ಈ ಜಾತಿಗಣತಿ ನಡೆಸಲು ಅವಕಾಶ ನೀಡುತ್ತಿಲ್ಲ.

ಒಟ್ಟಾರೆಯಾಗಿ ಈ EWS ಮೀಸಲಾತಿ ಒಬಿಸಿ ಮತ್ತು ದಲಿತರ ಪಾಲಿಗೆ ಇರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂಬ ಅಭಿಪ್ರಾಯಗಳು ದಟ್ಟವಾಗುತ್ತಿವೆ. ಇದು ಮೀಸಲಾತಿಯ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಏಕೆಂದರೆ ಮೀಸಲಾತಿ ಎಂಬುದು ಬಡತನ ನಿವಾರಣ ಕಾರ್ಯಕ್ರಮವಲ್ಲ. ಸಮಾನತೆ ಹಾಗೂ ಪರಿವರ್ತನೆ ತರುವ ಕಾರ್ಯಕ್ರಮವೂ ಅಲ್ಲ. ಬದಲಿಗೆ ಇರುವ ವ್ಯವಸ್ಥೆಯಲ್ಲೇ ಪ್ರಾತಿನಿಧ್ಯವನ್ನು ಖಾತರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವ ಕಾರ್ಯಕ್ರಮವಾಗಿದೆ. ಅದು ಸಾಮಾಜಿಕ ಸಮಾನತೆಯ ತಳಹದಿಯಲ್ಲಿರಬೇಕೆ ಹೊರತು ಆರ್ಥಿಕ ತಳಹದಿಯಲ್ಲಿ ಅಲ್ಲ. ಇದನ್ನು ದೊಡ್ಡ ಮಟ್ಟದಲ್ಲಿ ಚರ್ಚೆಗೆ ತರುವ ಅಗತ್ಯ ಇಂದು ಹೆಚ್ಚಾಗುತ್ತಿದೆ.

ಎಲ್ಲಾ ಜಾತಿಯ ಬಡವರ ಬಗ್ಗೆ ನಾನು ಜೀವನದುದ್ದಕ್ಕೂ ಮಾತಾಡಿಕೊಂಡು ಬಂದಿದ್ದೇನೆ. ಹಾಗಾಗಿ ಮೇಲ್ಜಾತಿಗಳಲ್ಲಿನ/ಸಾಮಾನ್ಯ ವರ್ಗದ ಬಡ ಮಕ್ಕಳ ಪರ ನಾನಿದ್ದೇನೆ. ಅದರಲ್ಲಿ ಎರಡು ಮಾತಿಲ್ಲ. ಎಲ್ಲಾ ಜಾತಿಗಳಲ್ಲಿನ ಬಡವರ ಮಕ್ಕಳಲ್ಲಿಯೂ ಪ್ರತಿಭಾವಂತರಿದ್ದಾರೆ. ಅವರೆಲ್ಲರಿಗೂ ಸಹ ಅವಕಾಶಗಳು ಸಿಕ್ಕಿ, ಅವರಲ್ಲಿನ ಪ್ರತಿಭೆ ಬೆಳೆದು ಅದರಿಂದ ದೇಶಕ್ಕೆ ಉಪಯೋಗವಾಗಬೇಕು. ಆದರೆ ನಮ್ಮ ಜಾತಿವ್ಯವಸ್ಥೆಯಲ್ಲಿ ಕೆಳಜಾತಿಗಳಲ್ಲಿ ಬಡಮಕ್ಕಳು ಮೂರು ರೀತಿಯ ಶೋಷಣೆಯನ್ನು ಅನುಭವಿಸುತ್ತಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅವರು ಹಿಂದುಳಿದಿದ್ದಾರೆ. ಮೇಲ್ಜಾತಿಗಳಲ್ಲಿನ ಬಡವರ ಮಕ್ಕಳು ಕೇವಲ ಆರ್ಥಿಕವಾಗಿ ಮಾತ್ರ ಹಿಂದುಳಿದಿದ್ದಾರೆ. ಮೀಸಲಾತಿಯನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮತ್ತು ಶೋಷಣೆಗೆ ಒಳಗಾದ ಜನರಿಗೆ ಮಾತ್ರ ನೀಡಬೇಕೆಂದು, ಅದರಲ್ಲಿ ಆರ್ಥಿಕ ಮಾನದಂಡ ಇರಕೂಡದೆಂದು ನಮ್ಮ ಹಿರಿಯರು ಸಂವಿಧಾನದಲ್ಲಿ ಬರೆದಿದ್ದಾರೆ. ಎಲ್ಲಾ ನ್ಯಾಯಾಲಯಗಳ ತೀರ್ಪುಗಳು ಸಹ ಇದನ್ನೇ ಹೇಳಿವೆ. ಈ ಹಿನ್ನೆಲೆಯಲ್ಲಿ EWS ಎಂಬುದು ಅಸಂವಿಧಾನಾತ್ಮಕವಾದುದು, ಅಪ್ರಜಾತಾಂತ್ರಿಕವಾದುದು, ಸಮಾಜ ವಿರೋಧಿಯಾದುದು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾವುದು.

ಈ ಕುರಿತು ಮೂವರು ಚಿಂತಕರು ಪ್ರತಿಕ್ರಿಯಿಸಿದ್ದು ಹೀಗೆ..

ಇಂದು ದೇಶದಲ್ಲಿನ ಒಟ್ಟಾರೆ ಉದ್ಯೋಗಗಳಲ್ಲಿ 98% ಉದ್ಯೋಗಗಳು ಖಾಸಗಿ ನಿಯಂತ್ರಣದಲ್ಲಿದ್ದು ಅಲ್ಲಿ ಮೀಸಲಾತಿ ಜಾರಿಯಲ್ಲಿಲ್ಲ. ಸಾರ್ವಜನಿಕ ಸಂಸ್ಥೆಗಳ ಪಾಲು ಕೇವಲ 2% ರಷ್ಟಿದ್ದು, ದಿನೇದಿನೇ ಅವು ಸಹ ಖಾಸಗೀಕರಣಗೊಳ್ಳುವ ಅಪಾಯದಲ್ಲಿವೆ. ಪ್ರತಿ ವರ್ಷ ದೇಶದಲ್ಲಿ 7 ಲಕ್ಷ ಸರ್ಕಾರಿ ಉದ್ಯೋಗಗಳು ತುಂಬತ್ತಿದ್ದರೆ ಅದರಲ್ಲಿ ಈ 10% ಎಂಬುದು ತೀರಾ ಸಣ್ಣ ಸಂಖ್ಯೆಯಾಗಿದೆ. ಅಂದರೆ ಈ ಮೀಸಲಾತಿ ಎಂಬುದು ಒಂದು ಭ್ರಮೆಯಾಗಿದೆ. ಇಂದು ದೇಶದಲ್ಲಿ 60 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಬಿದ್ದಿವೆ. ಕರ್ನಾಟಕದಲ್ಲಿ 2.64 ಲಕ್ಷ ಖಾಲಿ ಬಿದ್ದಿವೆ. ಇವುಗಳನ್ನು ತುಂಬುತ್ತಿಲ್ಲ. ಬದಲಿಗೆ ಮೀಸಲಾತಿ ಕೊಡದೆ ಗುತ್ತಿಗೆ ಆಧಾರದಲ್ಲಿ, ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯುತ್ತಿರುವಾಗ ಮೀಸಲಾತಿ ಎಂಬುದಕ್ಕೆ ಅರ್ಥವೇನು?

ಇಂದು NEP ಹೆಸರಲ್ಲಿ ಶಿಕ್ಷಣವೂ ವೇಗವಾಗಿ ವ್ಯಾಪಾರೀಕರಣವಾಗುತ್ತಿದೆ. ಇದರಿಂದ ದೇಶದ ಬಹುಸಂಖ್ಯಾತ ದಲಿತರು, ಹಿಂದುಳಿದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅಗುತ್ತಿಲ್ಲ. ಇದರಿಂದ ಈ ದೇಶದ ಬಡ ಪ್ರತಿಭೆಗಳಿಗೆ, ಹಿಂದುಳಿದ, ಗ್ರಾಮಾಂತರ ಪ್ರತಿಭೆಗಳಿಗೆ ಬಹಳ ದೊಡ್ಡ ಪೆಟ್ಟು ಉಂಟಾಗುತ್ತಿವೆ. ಈ ಪ್ರತಿಭೆಗಳನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿಲ್ಲವಲ್ಲ? ಪ್ರತಿಭೆ ಎಂಬುದು ಮೇಲ್ಜಾತಿಗಳ, ಮೇಲ್ವರ್ಗಗಳ, ನಗರ ಪ್ರದೇಶದವರ ಏಕಸ್ವಾಮ್ಯವಾಗಬಾರದು. ಬದಲಿಗೆ ಎಲ್ಲಾ ಜಾತಿಗಳ ಪ್ರತಿಭೆಗಳನ್ನು ಹೆಕ್ಕಿ ಬೆಳೆಸಬೇಕಿದೆ.

  • ಜಸ್ಟಿಸ್ ಎಚ್.ಎನ್ ನಾಗಮೋಹನ್ ದಾಸ್ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು

8 ಲಕ್ಷ ವಾರ್ಷಿಕ ಆದಾಯ ಹೊಂದಿರುವವರನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ಕರೆಯುವುದೇ ಹಾಸ್ಯಾಸ್ಪದವಾಗಿದೆ. EWSನ ಶೇ.10 ಮೀಸಲಾತಿ ಎಂಬುದು ಮೇಲ್ಜಾತಿಗಳಲ್ಲಿಯೇ ಬಲಿತರ, ಶ್ರೀಮಂತರ ಪಾಲಾಗುತ್ತದೆ ಹೊರತು ನಿಜವಾದ ಬಡವರಿಗೆ ಸಿಗುವುದಿಲ್ಲ. EWS ಸಮುದಾಯಗಳಿಗೂ 8 ಲಕ್ಷ ವಾರ್ಷಿಕ ಆದಾಯ ಮಿತಿ ಮತ್ತು ಒಬಿಸಿ ಸಮುದಾಯಗಳಿಗೂ 8 ಲಕ್ಷ ವಾರ್ಷಿಕ ಆದಾಯಮಿತಿ ಎಂದಾದರೆ ವ್ಯತ್ಯಾಸವೇನು? ನಮ್ಮ ದೇಶದಲ್ಲಿ ದಿನಕ್ಕೆ ಕೇವಲ 150 ರೂ ಮಾತ್ರ ಸಂಪಾದಿಸುವವರ ಸಂಖ್ಯೆ ನನ್ನ ಪ್ರಕಾರ ಶೇ.46ರಷ್ಟಿದೆ. ಅವರಲ್ಲಿ ಬಹುತೇಕರು ದಲಿತರು ಮತ್ತು ಒಬಿಸಿಗಳು ಆಗಿದ್ದಾರೆ. ಅಂತಹ ಮಕ್ಕಳು ನಮ್ಮ ಕಾಲೇಜಿಗೆ ಬರುವುದನ್ನು ನಾನೇ ನೋಡಿದ್ದೇನೆ. ಅಂತಹ ಮಕ್ಕಳನ್ನು ವಾರ್ಷಿಕ 8 ಲಕ್ಷ ಆದಾಯವಿರುವವರ ಜೊತೆ ಸ್ಪರ್ಧೆಗೆ ಬಿಡುವುದು ಯಾವ ನ್ಯಾಯ? ಇದರಿಂದ ಈ EWS ಸಾಮಾಜಿಕ ಸಮಾನತೆಯನ್ನು ತರುವುದರ ಬದಲಿಗೆ ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಈಗಾಗಲೇ ನಮ್ಮ ದೇಶದಲ್ಲಿರುವ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಜಾತಿ ಆಧಾರಿತವಾದ ಈ ದೇಶದಲ್ಲಿ ಇದರ ಪ್ರಯೋಜನವನ್ನು ದೊಡ್ಡ ಸರ್ಕಾರಿ ನೌಕರಿಯಲ್ಲಿ ಇರುವವರನ್ನು ಬಿಟ್ಟು ಉಳಿದ ಮೇಲ್ಜಾತಿಗಳಲ್ಲಿನ ಬಲಾಢ್ಯರು, ಶ್ರೀಮಂತರು ಪಡೆಯುತ್ತಾರೆ. ಇದು ಒಂದು ಅನಾರೋಗ್ಯಕರ ಸ್ಪರ್ಧೆಗೆ ದಾರಿಮಾಡಿಕೊಡುವುದರ ಜೊತೆಗೆ ಜಾತಿ ಸಂಘರ್ಷಕ್ಕೂ ಕಾರಣವಾಗಲಿದೆ.

  • ಪ್ರೊ. ಮುಜಾಫರ್ ಅಸ್ಸಾದಿ ಖ್ಯಾತ ರಾಜಕೀಯ ಶಾಸ್ತ್ರಜ್ಞರು, ಬರಹಗಾರರು

EWS ಮೀಸಲಾತಿ ಜಾರಿಗೊಳಿಸುವ ಅಗತ್ಯವೇನಿತ್ತು? ಈ ಹಿಂದೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಜಾರಿ ಮಾಡುವ ಮೊದಲು ಆಯೋಗಗಳನ್ನು ರಚಿಸಲಾಗಿತ್ತು. ಅವುಗಳು ಅಧ್ಯಯನ ನಡೆಸಿ, ಅಂಕಿ ಅಂಶಗಳ ಸಮೇತ ವರದಿಗಳನ್ನು ನೀಡಿವೆ. ಅವುಗಳ ಆಧಾರದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ. ಇದರ ಹಿಂದೆ ದೊಡ್ಡ ಹೋರಾಟಗಳು, ಚಳವಳಿಗಳು ನಡೆದಿದ್ದವು. 1894ರಲ್ಲಿ ಜಸ್ಟೀಸ್ ಪಾರ್ಟಿ ಒಳಗೊಂಡಂತೆ ಕರ್ನಾಟಕದ ಮೈಸೂರಿನಲ್ಲಿ ಬೃಹತ್ ಹೋರಾಟ ನಡೆದಿದ್ದವು. ಈ ಅಬ್ರಾಹ್ಮಣ ಹೋರಾಟ, ಚಳವಳಿಗಳ ಪ್ರತಿಫಲವಾಗಿ ಮತ್ತು ಅಂಬೇಡ್ಕರ್‌ರವರ ಶ್ರಮದ ಪ್ರತಿಫಲವಾಗಿ ಮೀಸಲಾತಿ ದಕ್ಕಿದೆ. ಆದರೆ EWS ಮೀಸಲಾತಿ ಜಾರಿಗೊಳಿಸಬೇಕೆಂದು ಯಾವ ಆಯೋಗ ಹೇಳಿದೆ? ಯಾರು ಶಿಫಾರಸ್ಸು ಮಾಡಿದರು? ಯಾರು ಹೋರಾಟ ಮಾಡಿದ್ದರು? ಏಕಾಏಕಿ 10% ಏಕೆ ಕೊಡಲಾಯಿತು? ಅವರು 10% ಜನಸಂಖ್ಯೆ ಇದ್ದಾರೆಯೇ? 10% ಇದ್ದರೂ ಅವರಲ್ಲಿನ ಬಡವರ ಸಂಖ್ಯೆ ಎಷ್ಟು? ನಿಜವಾಗಿಯೂ 10% ಬಡವರೇ ಇದ್ದಾರೆಯೇ? ಇದು ಮುಖ್ಯ ಪ್ರಶ್ನೆ ಆಗಬೇಕಿದೆ. ಇಂದು ನ್ಯಾಯಾಲಯಗಳಲ್ಲಿಯೂ ತಳಸಮುದಾಯದವರ ಸಂಖ್ಯೆ ತೀರಾ ಕಡಿಮೆ ಇದೆ. ಹಾಗಾಗಿ ಅಲ್ಲಿನ ಮೇಲ್ಜಾತಿಗಳು EWS ಪರವಾಗಿರುತ್ತಾರೆ. ಹಾಗಾಗಿ ನಮ್ಮ ಒತ್ತಾಯವೇನೆಂದರೆ ಆದಾಯ ಮಿತಿ 8 ಲಕ್ಷ ಪರಿಷ್ಕರಣೆ ಮಾಡುವುದಲ್ಲ, ಬದಲಿಗೆ ಇಡೀ EWS ಮೀಸಲಾತಿಯೇ ರದ್ದಾಗಬೇಕಿದೆ.

  • ವಿಕಾಸ್ ಆರ್ ಮೌರ್ಯ ಲೇಖಕರು

ಒಬಿಸಿ ಮೀಸಲಾತಿಯ ಇತಿಹಾಸ

ಇತರ ಹಿಂದುಳಿದ ವರ್ಗಗಳಲ್ಲಿ ಹಲವಾರು ಜಾತಿಗಳು ಬರುತ್ತವೆ. ಇವು ಸಾಮಾಜಿಕ ಶ್ರೇಣಿಯಲ್ಲಿ ಮೇಲ್ಜಾತಿ ಮತ್ತು ದಲಿತರ ಮಧ್ಯದಲ್ಲಿವೆ. ಈ ಜಾತಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು 1979ರಲ್ಲಿ ಜನತಾ ಪಕ್ಷದ ಸರ್ಕಾರವು ಬಿಪಿ ಮಂಡಲ್ ನೇತೃತ್ವದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು. ಆಯೋಗವು ಒಬಿಸಿಗಳು ಭಾರತೀಯ ಜನಸಂಖ್ಯೆಯ 52% ಇದ್ದು, ಅವರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ನಿರ್ಧರಿಸಿತು. ಜೊತೆಗೆ ಅವರಿಗೆ ಶೇ.27 ಕೋಟಾವನ್ನು ಶಿಫಾರಸು ಮಾಡಿದೆ. ಅದು ವಿ.ಪಿ ಸಿಂಗ್‌ರವರು ಪ್ರಧಾನಿಯಾಗಿದ್ದಾಗ 1993ರಿಂದ ಜಾರಿಗೆ ಬಂದಿತು. ಇದಕ್ಕೂ ಮೊದಲೇ ತಮಿಳುನಾಡು ರಾಜ್ಯವು ಜಾತಿ ವಿರೋಧಿ ಸಾಮಾಜಿಕ ನ್ಯಾಯ ಚಳವಳಿಗಳ ಬಲವಾದ ಇತಿಹಾಸವನ್ನು ಹೊಂದಿರುವ ಕಾರಣಕ್ಕಾಗಿ ಅಲ್ಲಿ 1951ರಿಂದಲೇ ಒಬಿಸಿ ಮೀಸಲಾತಿ ಜಾರಿಯಲ್ಲಿದೆ.


ಇದನ್ನೂ ಓದಿ: ನ್ಯಾಯಾಂಗದಲ್ಲಿ ಶೇ. 50 ಮಹಿಳಾ ಮೀಸಲಾತಿಗೆ ಸಿಜೆಐ ಕರೆ

Website | + posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Obc ಗಳಿಗೆ ೮.೦೦ ಲಕ್ಷದ ಆದಾಯದ ಮಿತಿಯಿಂದ ಗುರುತಿಸುವುದು ಅಶ್ಟು ಸರಿಕಾಣದು.
    ಸರ್ಕಾರದ ಕೆಲಸದಲ್ಲಿರುವ ಎ,ಬಿ,ಸಿ ಗುಂಪಿನ ಕೆಲಸಗಾರರ ಕುಟುಂಬ, ಮಕ್ಕಳನ್ನು ಮೀಸಲಾತಿಯಿಂದ ಹೊರಗಿಡಬೇಕು.
    ಮೇಲು ಜಾತಿಗಳು ಎಂದು ಹೇಳಲಾಗುವ ಶೇಕಡಾವಾರು ಜನಸಂಕ್ಯೆ, ಬಾರತ ಮಟ್ಟದಲ್ಲಿ, ಆಯಾ ರಾಜ್ಯಗಳ ಮಟ್ಟದಲ್ಲಿ ಶೇಕಡಾವಾರು ಎಶ್ಸು ಎಂದು ತಿಳಿದು , ಕೇಂದ್ರ ಸರ್ಕಾರದ ,ರಾಜ್ಯಸರ್ಕಾರಗಳ ಕೆಲಸಗಳಲ್ಲಿ ಎಲ್ಲರೂ ಒಪ್ಪಬಹುದಾದ ಮಟ್ಟದ ಮೀಸಲಾತಿ ಕೊಡಬೇಕು.
    ಏನೇ ಇರಲಿ, ಆಯಾ ಪಂಗಡಗಳ ಮಂದಿಎಣಿಕೆಯ ನೆಲೆಗಟ್ಟಿನಲ್ಲಿ ಶೇ೧೦೦ ರ ಮೀಸಲಾತಿ ಎಲ್ಲಾ ಗೊಂದಲಗಳಿಗೆ ಪರಿಹಾರ. ಪಂಗಡಗಳೊಳಗೆ, ಹಣಕಾಸು ಮಾನದಂಡವನ್ನು ಸೇರಿಸಿ ಅಲ್ಲಿನ ಬಡವರಿಗೆ ತಕ್ಕಪಾಲು ದೊರಕಿಸಿಕೊಡಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial