2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು ತನ್ನ ಸಾಕ್ಷ್ಯಚಿತ್ರವನ್ನು ಉನ್ನತ ಸಂಪಾದಕೀಯ ಮಾನದಂಡಗಳ ಪ್ರಕಾರ ಆಳವಾದ ಸಂಶೋಧನೆಯ ನಂತರವೇ ನಿರ್ಮಿಸಲಾಗಿದೆ ಎಂದು ಬಿಬಿಸಿ ಹೇಳಿಕೆ ಎಂದು ವೆರೈಟಿ ಮ್ಯಾಗಜೀನ್ ವರದಿ ಮಾಡಿದೆ.
ಸಾಕ್ಷ್ಯಚಿತ್ರ ನಿರ್ಮಾಣದ ಸಂದರ್ಭದಲ್ಲಿ ಬಿಬಿಸಿ ವಕ್ತಾರರು ಭಾರತದ ಸರ್ಕಾರವು ತನ್ನ ವಾದವನ್ನು ಮುಂದಿಡಲು ಕೇಳಿಕೊಂಡರು. ಆದರೆ ಅದಕ್ಕೆ ಭಾರತ ಸರ್ಕಾರ ನಿರಾಕರಿಸಿತು ಎಂದು ಬಿಬಿಸಿ ಹೇಳಿಕೊಂಡಿದೆ.
ಸಾಕ್ಷ್ಯಚಿತ್ರವು ಮೋದಿಯವರ ಕುರಿತು ಕಳಂಕಿತ ನಿರೂಪಣೆ ತೇಲಿಬಿಡಲು ವಿನ್ಯಾಸಗೊಳಿಸಲಾದ ಪ್ರೊಪೊಗಂಡ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆರೋಪಿಸಿದೆ. “ಈ ಸಾಕ್ಷ್ಯಚಿತ್ರದಲ್ಲಿ ಪಕ್ಷಪಾತ, ವಸ್ತುನಿಷ್ಠತೆಯ ಕೊರತೆ ಮತ್ತು ಮುಂದುವರಿದ ವಸಾಹತುಶಾಹಿ ಮನಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತದೆ. ಅದಕ್ಕಾಗಿ ಇದನ್ನು ಈ ನಿರೂಪಣೆಯನ್ನು ಮತ್ತೆ ಮತ್ತೆ ತೇಲಿಬಿಡಲಾಗುತ್ತಿ” ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಸಿ ತನ್ನ ಸಾಕ್ಷ್ಯಚಿತ್ರವನ್ನು ಸಮರ್ಥಿಸಿಕೊಂಡಿದ್ದು ‘ಈ ಸಾಕ್ಷ್ಯಚಿತ್ರವು ಬಿಜೆಪಿ ಪಕ್ಷದ ಸದಸ್ಯರ ಪ್ರತಿಕ್ರಿಯೆಗಳನ್ನು ಒಳಗೊಂಡಂತೆ ಹಲವಾರು ಅಭಿಪ್ರಾಯಗಳನ್ನು ಒಳಗೊಂಡಿದ್ದು, ಆಳವಾದ ಸಂಶೋಧನೆಯ ನಂತರವೇ ಇದನ್ನು ನಿರ್ಮಿಸಲಾಗಿದೆ ಎಂದಿದೆ.
‘ಮೋದಿ ಪ್ರಶ್ನೆ’ ಎಂಬ ಶೀರ್ಷಿಕೆಯಲ್ಲಿ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಇದೇ ಮಂಗಳವಾರ ಬಿಬಿಸಿ ಬಿಡುಗಡೆ ಮಾಡಿತ್ತು. ಆದರೆ ಯೂಟ್ಯೂಬ್‌ನಿಂದ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಆ ನಂತರ ಬಿಬಿಸಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ 2002 ರ ಗಲಭೆಗಳ ಸಮಯದಲ್ಲಿ ಹಿಂಸಾಚಾರದ ಪ್ರಮಾಣವು “ವರದಿ ಮಾಡಿದ್ದಕ್ಕಿಂತ ಹೆಚ್ಚು” ಎಂದು ಬ್ರಿಟಿಷ್ ತನಿಖಾ ತಂಡವು ತೀರ್ಮಾನಿಸಿದೆ ಎಂದು ಸಾಕ್ಷ್ಯಚಿತ್ರವು ಹೇಳಿಕೊಂಡಿದೆ. ಫೆಬ್ರವರಿ 27, 2002 ರಂದು ಅಂದಿನ ಗುಜರಾತ್ ಸಿಎಂ ಮೋದಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದರು ಮತ್ತು ಗಲಭೆಯಲ್ಲಿ ಮಧ್ಯಪ್ರವೇಶಿಸದಂತೆ ಅವರಿಗೆ ಆದೇಶಿಸಿದರು ಎಂದು “ವಿಶ್ವಾಸಾರ್ಹ ಸಂಪರ್ಕಗಳನ್ನು” ಅದು ಉಲ್ಲೇಖಿಸಿದೆ.
ತನಿಖಾ ತಂಡದ ಭಾಗವಾಗಿದ್ದ ಬ್ರಿಟಿಷ್ ಮಾಜಿ ಹಿರಿಯ ರಾಜತಾಂತ್ರಿಕರು, ಗುಜರಾತ್‌ನಲ್ಲಿ ನಡೆದ ಹಿಂಸಾಚಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ತು ಯೋಜಿಸಿದೆ ಎಂದು ಆರೋಪಿಸಿದ್ದಾರೆ. ಆ ಗಲಭೆಗೆ ನರೇಂದ್ರ ಮೋದಿಯವರೆ ಸಂಪೂರ್ಣ ಹೊಣೆ ಎಂದು ಸಾಕ್ಷ್ಯಚಿತ್ರ ತೋರಿಸಿದೆ.
2019 ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರ ಮೋದಿ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ಅನ್ನು ಪರಿಶೀಲಿಸುವ ಸಾಕ್ಷ್ಯಚಿತ್ರದ ಎರಡನೇ ಭಾಗವು ಜನವರಿ 24ರ ಮಂಗಳವಾರ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಬಿಸಿ ಹೇಳಿದೆ.
ಇದನ್ನೂ ಓದಿ: ಗುಜರಾತ್ ಗಲಭೆಗೆ ನರೇಂದ್ರ ಮೋದಿಯವರೆ ಹೊಣೆ: ಡಿಲೀಟ್ ಆಗಿದ್ದ ಬಿಬಿಸಿ ಸಾಕ್ಷ್ಯಚಿತ್ರ ನೋಡಿ


