ಈ ಚುನಾವಣೆಯ ಫಲಿತಾಂಶ ನೋಡಿದರೆ ಜನ ಪಕ್ಷಾಂತರ ಮಾಡಿ ತೊಂದರೆ ಇಲ್ಲ ಎಂಬಂತಹ ತೀರ್ಪು ನೀಡಿದ್ದಾರೆ. ಒಂದು ಕಡೆ ಮಾತ್ರವಲ್ಲ, ಎರಡೂ ಕಡೆ ಪಕ್ಷಾಂತರಗಳು ಇನ್ನು ಮುಂದೆ ತುಂಬಾ ಹೆಚ್ಚಾಗಲಿವೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಉಪಚುನಾವಣೆಯ ಮತ ಎಣಿಕೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಇನ್ನು ಸುಭದ್ರವಾಗಿದೆ. ಪಕ್ಷ ಹೇಳಿದ ರೀತಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಹಲವಾರು ಕಡೆ ಬಿಜೆಪಿಯ ಅನರ್ಹ ಶಾಸಕರೇ ಗೆಲ್ಲುವ ಸೂಚನೆ ಕಾಣುತ್ತಿದೆ. ಇದು ಪಕ್ಷಾಂತರಿಗಳನ್ನು ಮತದಾರರು ಯಾವುದೇ ಎಗ್ಗಿಲ್ಲದೇ ಬೆಂಬಲಿಸುತ್ತದೆ ಎಂಬ ಅರ್ಥವನ್ನು ಕೊಡುತ್ತಿದೆ. ಹಾಗಾಗಿ ಇನ್ನಷ್ಟು ಪಕ್ಷಾಂತರಗಳು ನಡೆಯಬಹುದು. ಅದು ಕೇವಲ ಒಂದು ಕಡೆಯಲ್ಲಿ ಎರಡೂ ಕಡೆ ನಡೆಯುತ್ತವೆ ಎಂದು ಹೇಳುವು ಮೂಲಕ ಕಾಂಗ್ರೆಸ್ ಕೂಡ ಸುಮ್ಮನೇ ಕೂರುವುದಿಲ್ಲ ಆಪರೇಷನ್‌ಗೆ ಮುಂದಾಗಲಿದೆ ಎಂಬ ಸೂಚನೆ ನೀಡಿದ್ದಾರೆ.
ಪಕ್ಷದ ನಾಯಕತ್ವ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಅದರ ಬಗ್ಗೆ ಮಾತಾಡುವಷ್ಟು ದೊಡ್ಡವ ನಾನಲ್ಲ. ಕೆಲಸ ಮಾಡುವುದಷ್ಟೇ ನನ್ನ ಕೆಲಸ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಮುಖಂಡರು ಕಾಂಗ್ರೆಸ್ ನಿರ್ನಾಮ ಮಾಡುವು ಮಾತಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರಿಗೆ ಒಳ್ಳೇಯದಾಗಲಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


