ಶುಕ್ರವಾರ ರಾತ್ರಿ ಘಟಿಸಿದ ಅತ್ಯಂತ ಭೀಕರ ರೈಲು ದುರಂತದಲ್ಲಿ ಕನಿಷ್ಠ 288 ಪ್ರಯಾಣಿಕರು ಸಾವನ್ನಪ್ಪಿ, 900ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇಂತಹ ಘೋರ ದುರಂತ ಘಟಿಸುವ ಸೂಚನೆಯನ್ನು ಕಳೆದ ಆರು ತಿಂಗಳಲ್ಲಿ ಎರಡು ಬಾರಿ ನೀಡಲಾಗಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ರೈಲು ಹಳಿ ತಪ್ಪಲು ಕಾರಣವಾಗುವ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತು ಎಂಬ ಅಂಶ ಈಗ ಬಯಲಾಗಿದೆ.
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕಳೆದ ಡಿಸೆಂಬರ್‌ನಲ್ಲಿ ವರದಿಯನ್ನು ಮಂಡಿಸಿದ್ದರು. ರೈಲುಗಳು ತಪ್ಪಾದ ಹಳಿಯಲ್ಲಿ ಚಲಿಸಲು ಕಾರಣವಾಗುವ 24 ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 2017ರಿಂದ ಮಾರ್ಚ್ 2021ರ ನಡುವೆ ಎಷ್ಟು ರೈಲುಗಳು ತಪ್ಪಾದ ಹಳಿಯಲ್ಲಿ ಚಲಿಸಿವೆ, ಅದಕ್ಕೆ ಕಾರಣಗಳೇನು ಎಂಬುದನ್ನು “ಭಾರತೀಯ ರೈಲ್ವೇಯಲ್ಲಿನ ಹಳಿತಪ್ಪುವಿಕೆಗಳು” ವರದಿ ಪಟ್ಟಿ ಮಾಡಿದೆ. ಹಳಿಗಳ ಅಸಮರ್ಪಕ ನಿರ್ವಹಣೆಯೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ವರದಿ ಎಚ್ಚರಿಸಿದೆ.
ಫೆಬ್ರವರಿಯಲ್ಲಿ ನಡೆದ ಪ್ರತ್ಯೇಕ ಬೆಳವಣಿಗೆಯೊಂದಕ್ಕೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕರು ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ‘ಗಂಭೀರ ನ್ಯೂನತೆ’ಗಳ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಫೆಬ್ರುವರಿಯಲ್ಲಿ ಭೀಕರ ರೈಲು ಅಪಘಾತ ಕೂದಲೆಳೆಯಲ್ಲಿ ತಪ್ಪಿ ಹೋಗಿತ್ತು. ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆಯುವ ಸನ್ನಿವೇಶವೇ ನಿರ್ಮಾಣವಾಗಿತ್ತು. “ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸದಿದ್ದರೆ, ಇಂತಹ ಘಟನೆಗಳು ಮರು ಕಳಿಸಬಹುದು ಮತ್ತು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು” ಎಂದು ಅಧಿಕಾರಿ ಎಚ್ಚರಿಸಿದ್ದರು.
ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಒಡಿಶಾದ ಬಾಲಸೋರ್‌ನಲ್ಲಿ ಈಗ ಅಪಘಾತ ಸಂಭವಿಸಿದ್ದು, ತಪ್ಪಾದ ಹಳಿಯಲ್ಲಿ ಬಂದ ಕೋರ ಮಂಡಲ್ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲು ಕೂಡ ಹಳಿ ತಪ್ಪಿ, ಕೋರಮಂಡಲ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಬಂದು ಡಿಕ್ಕಿ ಹೊಡೆದಿವೆ. ಮೂರು ರೈಲುಗಳು ಅಪಘಾತದೊಳಗೆ ಸಿಲುಕಿವೆ.
ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ವೈಫಲ್ಯದಿಂದ ಅಪಘಾತ ಸಂಭವಿಸಿರಬಹುದು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಮೇಲ್ಮುಖ ಮಾರ್ಗದಲ್ಲಿ ಪ್ರವೇಶಿಸುವಂತೆ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಆರಂಭದಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೆ ನಂತರ ಸಿಗ್ನಲ್ ತೆಗೆಯಲಾಯಿತು. ಬಳಿಕ ಎಕ್ಸ್‌ಪ್ರೆಸ್ ಲೂಪ್ ಲೈನ್‌ಗೆ ಪ್ರವೇಶಿಸಿತು. ಅಲ್ಲಿ ನಿಂತಿದ್ದ ಗೂಡ್ಸ್ ರೈಲು ಗಾಡಿಗೆ ಡಿಕ್ಕಿ ಹೊಡೆಯಿತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಿಗ್ನಲಿಂಗ್‌ನಲ್ಲಿನ ದೋಷಗಳ ಬಗ್ಗೆ ಪತ್ರ
ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಗಾಡಿಯು ಗೂಡ್ಸ್ ರೈಲಿಗೆ ಡಿಕ್ಕಿಯಾಗುವ ಅಪಾಯದಿಂದ ಕೂದಲೆಳೆಯಲ್ಲಿ ಪಾರಾದ ನಂತರ ನೈಋತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕರು ಫೆಬ್ರವರಿ 9 ರಂದು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ತಿಳಿಸಿದೆ.
“ಎಸ್‌ಎಂಎಸ್ (ಸಿಗ್ನಲ್ ನಿರ್ವಹಣಾ ವ್ಯವಸ್ಥೆ)ನಲ್ಲಿ ಗಂಭೀರ ದೋಷಗಳಿವೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೇಲಿನ ಘಟನೆಯಲ್ಲಿ ಏನಾಗಿತ್ತೆಂದರೆ, ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ಕರ್ನಾಟಕದ ಹೊಸದುರ್ಗ ರಸ್ತೆ ನಿಲ್ದಾಣದ ಬಳಿ ಡೌನ್‌ಲೈನ್‌ಗೆ ಪ್ರವೇಶಿಸುವಂತೆ ಸಿಗ್ನಲಿಂಗ್ ವ್ಯವಸ್ಥೆಯು ತಪ್ಪಾಗಿ ಅನುಮತಿ ನೀಡಿತ್ತು. ಗೂಡ್ಸ್ ರೈಲಿಗೆ ಮುಖಾಮುಖಿ ಡಿಕ್ಕಿಯಾಗುವ ಅಪಾಯವು ‘ಲೋಕೋ ಪೈಲಟ್‌ನ ಎಚ್ಚರಿಕೆ’ಯಿಂದಾಗಿ ತಪ್ಪಿತ್ತು. ಮಾರ್ಗವನ್ನು ಪ್ರವೇಶಿಸುವ ಮೊದಲೇ ಎಚ್ಚೆತ್ತುಕೊಂಡು ಅಪಾಯವನ್ನು ತಡೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹಳಿತಪ್ಪಿದ ಬಗ್ಗೆ ಸಿಎಜಿ ವರದಿ
ಏಪ್ರಿಲ್ 2017 ಮತ್ತು ಮಾರ್ಚ್ 2021ರ ನಡುವೆ ಹಳಿತಪ್ಪುವಿಕೆಯಿಂದ ಸಂಭವಿಸಿದ ಅಪಘಾತಗಳ 1,129 ವಿಚಾರಣೆಗಳನ್ನು ಸಿಎಜಿ (ಕಂಟ್ರೋಲರ್ ಮತ್ತು ಆಡಿಟರ್ ಜನರಲ್) ವರದಿ ಮಾಡಿದೆ.
ಸಿಎಜಿ ವರದಿಯು ಹಲವಾರು ಅಂಶಗಳತ್ತ ಬೊಟ್ಟು ಮಾಡಿದೆ. ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶ್‌ನ ಆದ್ಯತಾ-1ರ ಕಾಮಗಾರಿ ವೆಚ್ಚದಲ್ಲಿ ಕಡಿತವಾಗಿರುವುದನ್ನು ವರದಿ ಉಲ್ಲೇಖಿಸಿದೆ. ಈ ವೆಚ್ಚವು 2017-18 ರಲ್ಲಿ 81.55% ಇತ್ತು. 2019-20ರಲ್ಲಿ 73.76%ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿರಿ: ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡ ಭೀಕರ ರೈಲು ದುರಂತಗಳಿವು
ರೈಲ್ವೇ ಸಚಿವಾಲಯವು 2017-18 ರಿಂದ ಐದು ವರ್ಷಗಳ ಅವಧಿಯಲ್ಲಿ ‘ರಾಷ್ಟ್ರೀಯ ರೈಲು ಸಂರಕ್ಷಾ ಕೋಶ್ – ರೈಲು ಸುರಕ್ಷತೆ’ಗಾಗಿ ಮೀಸಲು ನಿಧಿಗೆ 1 ಲಕ್ಷ ಕೋಟಿ ರೂ.ಗಳ ಹಂಚಿಕೆಯನ್ನು ಘೋಷಿಸಿತ್ತು.
ಟ್ರ್ಯಾಕ್ ನವೀಕರಣ ನಿಧಿಯು 2018-19ರಲ್ಲಿ 9,607.65 ಕೋಟಿ ರೂ. ಇತ್ತು. 2019-20ರಲ್ಲಿ 7,417 ಕೋಟಿ ರೂ.ಗಳಿಗೆ ಆ ನಿಧಿಯನ್ನು ಇಳಿಸಲಾಗಿದೆ ಎಂಬುದನ್ನು ಸಿಎಜಿ ವರದಿ ಉಲ್ಲೇಖಿಸಿದೆ. ನಿಗದಿಪಡಿಸಿದ ಹಣವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ ಎಂದೂ ಆಕ್ಷೇಪ ವ್ಯಕ್ತಪಡಿಸಿದೆ.
ಹಳಿ ತಪ್ಪಿದ ಘಟನೆಗಳ ಶೇ. 63ರಷ್ಟು ಪ್ರಕರಣಗಳಲ್ಲಿ, ತನಿಖಾ ವರದಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಲಾಗಿಲ್ಲ. ಶೇ.49ರಷ್ಟು ಪ್ರಕರಣಗಳಲ್ಲಿ ವರದಿಯನ್ನು ಸ್ವೀಕರಿಸುವಲ್ಲಿ ಅಧಿಕಾರಿಗಳಿಂದ ವಿಳಂಬವಾಗಿದೆ ಎಂಬುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ.


