ಹೆಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಈ ಕುರಿತು ಮಂಗಳವಾರ (ಅ.29) ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು “ಹೆಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ” ಎಂದಿದ್ದಾರೆ.
“ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ” ಎಂದು ಹೇಳಿದ್ದಾರೆ.
ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ… pic.twitter.com/yrjHhG9kLA
— Eshwar Khandre (@eshwar_khandre) October 29, 2024
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಹೆಚ್ಎಂಟಿ ತನ್ನ ವಶದಲ್ಲಿದ್ದ ಜಮೀನಿನ ಮರ, ಗಿಡಗಳನ್ನು ಕಡಿದು ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆಗೆ ಕೊಟ್ಟಿದೆ. ಈ ಮೂಲಕ ದುಡ್ಡು ಮಾಡುತ್ತಿದ್ದಾರೆ. ಎಲ್ಲಾ ರೀತಿಯ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ರೀತಿ ಮಾಡಲು ಅವರಿಗೆ ಯಾವುದೇ ಅಧಿಕಾರ ಇಲ್ಲ” ಎಂದಿದ್ದಾರೆ.
“ಟಾಕ್ಸಿಕ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನಾನು ಖುದ್ದಾಗಿ ಹೋಗಿ ನೋಡಿದ್ದೇನೆ. ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ, ವಿಲೇಜ್ ರೀತಿಯ ಸೆಟ್ ಹಾಕಿದ್ದಾರೆ. ಇದು ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಕಾನೂನು ಕ್ರಮಕ್ಕೆ ಪಾಲಿಕೆಗೂ ಪತ್ರ ಬರೆದಿದ್ದೇನೆ. ಅವರು (ಬಿಬಿಎಂಪಿ) ಕಮಿಟಿ ಮಾಡಿದ್ದಾರೆ, ನೋಟಿಸ್ ಕೊಟ್ಟಿದ್ದಾರೆ. ಚಿತ್ರ ತಂಡದ್ದೇ ತಪ್ಪು ಅಂತ ನಾನು ಹೇಳುತ್ತಿಲ್ಲ. ಯಾರದ್ದು ತಪ್ಪು ಇದೆಯೋ ನೋಡಬೇಕು. ಸಿನಿಮಾ ತಂಡ ಅನುಮತಿ ಪಡೆದಿದೆಯಾ? ಅಂತ ತನಿಖೆ ಮಾಡಿ ನೋಡುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ನಿರ್ವಹಿಸಲು ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪನೆ : ಸಚಿವ ಹೆಚ್.ಸಿ ಮಹದೇವಪ್ಪ


