ಏರ್‌ಪ್ಯೂರಿಫೈಯರ್ ಸಾಧನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವಂತೆ ಜಿಎಸ್‌ಟಿ ಮಂಡಳಿಗೆ ಆದೇಶಿಸಿದರೆ ಅದು ಅಂತಹ ಇನ್ನಷ್ಟು ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗುತ್ತದೆ (Pandora Box)ಎಂದು ಕೇಂದ್ರ ಸರ್ಕಾರ ಶುಕ್ರವಾರ (ಡಿ.26) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ವಿಪರೀತ ವಾಯುಮಾಲಿನ್ಯ ಹಿನ್ನೆಲೆ, ಗಾಳಿ ಶುದ್ಧೀಕರಿಸುವ ಏರ್ ಏರ್ ಪ್ಯೂರಿಫೈಯರ್ ಯಂತ್ರಗಳನ್ನು ‘ವೈದ್ಯಕೀಯ ಸಾಧನ’ ಎಂದು ಘೋಷಿಸಿ, ಅದಕ್ಕೆ ಶೇಕಡ 18ರ ಬದಲು 5ರಷ್ಟು ಜಿಎಸ್‌ಟಿ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕಾಸ್ ಮಹಾಜನ್ ಮತ್ತು ವಿನೋದ್ ಕುಮಾರ್ ಅವರಿದ್ದ ಪೀಠಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಈ ವಿಚಾರವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ ಕೇಂದ್ರ ಸರ್ಕಾರ, ಸೂಕ್ತ ಉತ್ತರ ನೀಡುವುದಕ್ಕೆ ಇನ್ನಷ್ಟು ಸಮಯಾವಕಾಶ ಬೇಕು ಎಂದು ಕೋರಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅವರು, ಪ್ರಕರಣದಲ್ಲಿ ಜಿಎಸ್‌ಟಿ ಮಂಡಳಿ ಹೊಂದಿರುವ ವ್ಯವಸ್ಥೆಗೆ ಹೊರತಾಗಿ ನಡೆದುಕೊಂಡರೆ, ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ಹೋದರೆ ಆಗ ಜಿಎಸ್‌ಟಿ ವಿನಾಯಿತಿ ಕೋರುವ ಪ್ರಕರಣಗಳ ಸಂಖ್ಯೆ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಆದರೆ, ಅರ್ಜಿದಾರರಾದ ವಕೀಲ ಕಪಿಲ್ ಮದನ್, ಏರ್ ಪ್ಯೂರಿಫೈಯರ್‌ಗಳನ್ನು ಕಡಿಮೆ ಜಿಎಸ್‌ಟಿ ದರದೊಂದಿಗೆ ವೈದ್ಯಕೀಯ ಸಾಧನವೆಂದು ವರ್ಗೀಕರಿಸಬೇಕೆಂದು ಪಟ್ಟುಹಿಡಿದರು. ಆಗ ನ್ಯಾಯಾಲಯ, ಜಿಎಸ್‌ಟಿ ಮಂಡಳಿ ಸಭೆ ಸೇರುವವರೆಗೆ ಕಾಯಬೇಕಾಗಬಹುದು ಎಂದಿತು.
ಇದಕ್ಕೆ ಒಪ್ಪದ ಕಪಿಲ್ ಮದನ್ ಅವರು, ಸರ್ಕಾರ ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಇಡೀ ನಗರ ತೊಂದರೆ ಅನುಭವಿಸುತ್ತದೆ ಎಂದರು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ ಒಂದು ಏರ್ ಪ್ಯೂರಿಫೈಯರ್ ಬೆಲೆ 10-15 ಸಾವಿರ. ಜಿಎಸ್‌ಟಿಯನ್ನು ಸಮಂಜಸ ಮಟ್ಟಕ್ಕೆ ಏಕೆ ಇಳಿಸಬಾರದು ಎಂದು ಪ್ರಶ್ನಿಸಿತು. ಸರ್ಕಾರ ಪ್ರತಿ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಹತ್ತು ದಿನಗಳ ಕಾಲಾವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಜನವರಿ 9, 2026ರಂದು ನಡೆಯಲಿದೆ.


