ದೆಹಲಿ ಚುನಾವಣೆಯಲ್ಲಿ ಎಎಪಿಗೆ ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಮುಖ್ಯಸ್ಥ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 4,089 ಮತಗಳಿಂದ ಸೋಲು ಕಂಡಿದ್ದಾರೆ. ದೆಹಲಿ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಮಗ ಪರ್ವೇಶ್ ವರ್ಮಾ ಅವರ ವಿರುದ್ಧ ಕೇಜ್ರಿವಾಲ್ ಸೋಲುಂಡಿದ್ದಾರೆ. ಈ ಮೂಲಕ ಬಿಜೆಪಿಯು ಸುಮಾರು 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳಲು ಸಜ್ಜಾಗಿದೆ. ದೆಹಲಿ ಚುನಾವಣೆ
2013 ರಲ್ಲಿ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಕೇಜ್ರಿವಾಲ್ ಅವರು ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿ ಈ ಸ್ಥಾನವನ್ನು ಗೆದ್ದಿದ್ದರು. 2015 ಮತ್ತು 2020 ರ ಚುನಾವಣೆಯಲ್ಲಿ ಕೂಡಾ ಅವರು ಭಾರಿ ಅಂತರದಿಂದ ಈ ಕ್ಷೇತ್ರವನ್ನು ಅವರು ಗೆದ್ದಿದ್ದರು. ದೆಹಲಿ ಚುನಾವಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಚುನಾವಣಾ ಆಯೋಗದ ವೆಬ್‌ಸೈಟ್ ನೀಡಿದ ಮಾಹಿತಿಯಂತೆ ಕ್ಷೇತ್ರದ ಒಟ್ಟು 14 ಸುತ್ತಿನ ಎಣಿಕೆಯಲ್ಲಿ 13ನೇ ಸುತ್ತಿನಲ್ಲಿ ಕೇಜ್ರಿವಾಲ್ ಅವರಿಗೆ 25,999 ಮತಗಳು ಲಭಿಸಿದ್ದು, ಬಿಜೆಪಿಯ ಪರ್ವೇಶ್ ವರ್ಮಾ ಅವರಿಗೆ 30,088 ಮತಗಳು ಲಭ್ಯವಾಗಿದೆ. ಈ ನಡುವೆ ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಅವರಿಗೆ 4,568 ಮತಗಳು ಲಭ್ಯವಾಗಿದೆ.
ನವದೆಹಲಿಯಂತಹ ಪ್ರಮುಖ ಕ್ಷೇತ್ರದಲ್ಲಿ ಕೇಜ್ರಿವಾಲ್ ವಿರುದ್ಧದ ಗೆಲುವು ಕಂಡ ಪರ್ವೇಶ್ ವರ್ಮಾ ಅವರು ಎರಡು ಬಾರಿ ಪಶ್ಚಿಮ ದೆಹಲಿ ಸಂಸದರಾಗಿ ಆಯ್ಕೆಯಾಗಿದ್ದರು. ‘ಶಾಖ ಪ್ರಮುಖ್’ ಆಗಿ ಆರ್‌ಎಸ್‌ಎಸ್‌ನೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿರುವ ಪರ್ವೇಶ್ ಅವರು, ನಂತರ ಬಿಜೆಪಿಯಲ್ಲಿ ನೆಲೆ ಕಂಡಿದ್ದರು.

ಪ್ರಚಾರದ ಸಮಯದಲ್ಲಿ ಕೇಜ್ರಿವಾಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಅವರು, ಕ್ಷೇತ್ರದ ನಾಗರಿಕ ಸಮಸ್ಯೆಗಳನ್ನು ಮಾಜಿ ಮುಖ್ಯಮಂತ್ರಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದರು. ನದಿಯ ಮಾಲಿನ್ಯ ಮತ್ತು ಅದನ್ನು ಸ್ವಚ್ಛಗೊಳಿಸುವಲ್ಲಿ ಕೇಜ್ರಿವಾಲ್ ಅವರ ವೈಫಲ್ಯವನ್ನು ಎತ್ತಿ ತೋರಿಸಲು ಅವರು ಯಮುನಾದಲ್ಲಿ ಕೇಜ್ರಿವಾಲ್ ಅವರ ಪ್ರತಿಮೆಯನ್ನು ಮುಳುಗಿಸಿದ್ದರು.
ಈ ನಡುವೆ, ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಆರಂಭಿಕ ಎಣಿಕೆಯಿಂದಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತರೂಢ ಎಎಪಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಕಾಂಗ್ರೆಸ್ ಕಳೆದ ಬಾರಿಯಂತೆ ಶೂನ್ಯ ಸಾಧನೆಯಲ್ಲೆ ಇದೆ.
ಮಧ್ಯಾಹ್ನ 1.30ರ ಸಮಯದಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಮಾಹಿತಿಯಂತೆ 70 ಕ್ಷೇತ್ರಗಳಿರುವ ದೆಹಲಿ ಚುನಾವಣೆಯಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತರೂಢ ಎಎಪಿ ಕೇವಲ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂಓದಿ: ಪೊಲೀಸ್ ಚಿತ್ರಹಿಂಸೆ ಆರೋಪಿಸಿ ಯುವಕ ಆತ್ಮಹತ್ಯೆ ಪ್ರಕರಣ : ತನಿಖೆಗೆ ಆದೇಶ
ಪೊಲೀಸ್ ಚಿತ್ರಹಿಂಸೆ ಆರೋಪಿಸಿ ಯುವಕ ಆತ್ಮಹತ್ಯೆ ಪ್ರಕರಣ : ತನಿಖೆಗೆ ಆದೇಶ


