ಮಹಾರಾಷ್ಟ್ರದ ರತ್ನಗಿರಿ ಸಮೀಪ ಇಂದು ಮುಂಜಾನೆ ರೈಲು ಅಪಘಾತವೊಂದು ನಡೆದಿದೆ. ದೆಹಲಿ-ಗೋವಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಸಮೀಪ ರೈಲು ಸುರಂಗದೊಳಗೆ ಹಳಿತಪ್ಪಿದೆ. ದೆಹಲಿಯ ಹಜರತ್ ನಿಜಾಮುದ್ದಿನ್ ನಿಲ್ಧಾಣದಿಂದ ಗೋವಾದ ಮಡಗಾಂವ್‌ಗೆ ಹೊರಟಿದ್ದ ದೆಹಲಿ ಗೋವಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮುಂಜಾನೆ 4:15 ನಿಮಿಷದ ಹೊತ್ತಿಗೆ ಮುಂಬೈನಿಂದ 325 ಕಿಲೋ ಮೀಟರ್ ದೂರದಲ್ಲಿರುವ ಕರಬುಡೆ ಸುರಂಗದಲ್ಲಿ ಹಳಿ ತಪ್ಪಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೊಂಕಣ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯ ಕಾರಣದಿಂದ ಗುಡ್ಡವೊಂದು ಹಳಿಯ ಮೇಲೆ ಕುಸಿದ ಕಾರಣದಿಂದ ರೈಲು ಹಳಿ ಬಿಟ್ಟು ಚಲಿಸಿರುವುದು ರೈಲು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರೈಲಿನ ಮುಂದಗಡೆ ಚಕ್ರಗಳು ಹಳಿ ಬಿಟ್ಟು ಚಲಿಸಿದ್ದು ಅದೃಷ್ಟವಶಾತ್ ಹೆಚ್ಚಿನ ಅಪಾಯಗಳಿಲ್ಲದೇ ಪ್ರಯಾಣಿಕರು ಪಾರಾಗಿದ್ದಾರೆ
ಘಟನೆಯ ವಿಷಯ ತಿಳಿಯುತ್ತಿದ್ದಂತೆ ರೈಲ್ ಮೇಂಟೆನೆನ್ಸ್ ವೆಹಿಕಲ್ ಮತ್ತು ರೈಲ್ ಆಂಬುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿದ್ದು ತೆರವು ಕಾರ್ಯಾಚರಣೆಯಲ್ಲಿ ತೊಡಗಿವೆ. ಮುಂಬೈ ಸಮೀಪದ ರೋಹಾದಿಂದ ಮಂಗಳೂರಿನ ತೋಕುರ್ ವರೆಗಿನ 756 ಕಿಲೋ ಮೀಟರ್ ಮಾರ್ಗವನ್ನು ಕೊಂಕಣ್ ರೈಲ್ವೆ ನಿರ್ವಹಿಸುತ್ತಿದ್ದು ದೇಶದ ಅತ್ಯಂತ ದುರ್ಗಮ ಮಾರ್ಗಗಳಲ್ಲಿ ಕೊಂಕಣ್ ರೈಲ್ವೆ ಕೂಡ ಒಂದಾಗಿದೆ.
ಇದನ್ನೂ ಓದಿ : ‘ಯುದ್ಧವಿಲ್ಲದೆ ವಿಜಯವಿಲ್ಲ!’ – 8 ನೇ ತಿಂಗಳಿಗೆ ಕಾಲಿಟ್ಟ ರೈತ ಹೋರಾಟ


