ಆಪಾದಿತ ಮದ್ಯ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.
ಕೇಜ್ರಿವಾಲ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು, ಏಪ್ರಿಲ್ 3 ರಂದು ತೀರ್ಪನ್ನು ಕಾಯ್ದಿರಿಸಿದರು.
ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಆದೇಶ ಸೇರಿದಂತೆ ವಿಚಾರಣಾ ನ್ಯಾಯಾಲಯದ ನಂತರದ ರಿಮಾಂಡ್ ಆದೇಶಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಬಿಜೆಪಿಯ ನಿಯಂತ್ರಣದಲ್ಲಿರುವ ಕೇಂದ್ರ ಸರ್ಕಾರವು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕೇಜ್ರಿವಾಲ್ ಅವರ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಧೀಶರು ನಿರಾಕರಿಸಿದ್ದಾರೆ.
“ನ್ಯಾಯಾಧೀಶರು ಕಾನೂನಿಗೆ ಬದ್ಧರಾಗಿರುತ್ತಾರೆಯೇ ವಿನಃ, ರಾಜಕೀಯಕ್ಕಲ್ಲ. ಕಾನೂನು ತತ್ವಗಳ ಮೇಲೆ ತೀರ್ಪುಗಳನ್ನು ನೀಡಲಾಗುತ್ತದೆಯೇ ಹೊರತು, ರಾಜಕೀಯ ಪರಿಗಣನೆಗಳಿಗೆ ಅಲ್ಲ. ರಾಜಕೀಯ ಪರಿಗಣನೆಗಳು ಸಂಬಂಧವಿಲ್ಲದ ಕಾರಣ ನ್ಯಾಯಾಲಯದ ಮುಂದೆ ತರಲು ಸಾಧ್ಯವಿಲ್ಲ,” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇಡಿಯನ್ನು ಬಿಜೆಪಿಯ ಸಂಸ್ಥೆಯಾಗಿ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.
“ಪ್ರಸ್ತುತ ಪ್ರಕರಣವು ಕೇಂದ್ರ ಸರ್ಕಾರ ಮತ್ತು ಕೇಜ್ರಿವಾಲ್ ನಡುವಿನ ಪ್ರಕರಣವಲ್ಲ. ಕೇಜ್ರಿವಾಲ್ ಮತ್ತು ಇಡಿ ನಡುವಿನ ಪ್ರಕರಣವಾಗಿದೆ. ಯಾವುದೇ ಬಾಹ್ಯ ಅಂಶಗಳಿಂದ ಪ್ರಭಾವಿತವಾಗದಂತೆ ನ್ಯಾಯಾಲಯವು ಜಾಗರೂಕವಾಗಿರಬೇಕು” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅನುಮೋದಕರಾದ ರಾಘವ್ ಮಾಗುಂಟಾ ಮತ್ತು ಶರತ್ ರೆಡ್ಡಿ ಅವರ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಅವು ವಿಶ್ವಾಸಾರ್ಹವಲ್ಲ ಎಂಬ ಕೇಜ್ರಿವಾಲ್ ಅವರ ವಾದವನ್ನು ತಳ್ಳಿ ಹಾಕಿದೆ.
ಹೇಳಿಕೆಗಳು ವಿಶ್ವಾಸಾರ್ಹವಾಗಿವೆಯೇ? ಮೇಲಿನ ವ್ಯಕ್ತಿಗಳು ತಮ್ಮ ನಿಲುವನ್ನು ಏಕೆ ಬದಲಾಯಿಸುತ್ತಿದ್ದಾರೆ? ಎಂಬುದು ಈ ಹಂತದಲ್ಲಿ ಹೈಕೋರ್ಟ್‌ನಲ್ಲಿ ಪರಿಶೀಲಿಸಬಹುದಾದ ವಿಷಯವಲ್ಲ. ಇದನ್ನು ವಿಚಾರಣಾ ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು ಸಾಮಾನ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಕಾನೂನು ಮತ್ತು ಉನ್ನತ ವ್ಯಕ್ತಿಗಳಿಗೆ ಮತ್ತೊಂದು ಕಾನೂನುಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದಿದೆ.
ಹೈಕೋರ್ಟ್ ಆದೇಶದ ವಿರುದ್ದ ಆಮ್ ಆದ್ಮಿ ಪಕ್ಷ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎಂದು ತಿಳಿದು ಬಂದಿದೆ.
2021-22ರ ದೆಹಲಿ ಅಬಕಾರಿ ನೀತಿ ಒಳಗೊಂದ 600 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು.
ಇದನ್ನೂ ಓದಿ : ರಾಜೀವ್ ಚಂದ್ರಶೇಖರ್ ಅಫಿಡವಿಟ್ ಪರಿಶೀಲಿಸುವಂತೆ ತೆರಿಗೆ ಮಂಡಳಿಗೆ ಸೂಚಿಸಿದ ಚು. ಆಯೋಗ


