‘ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಅದರ ಕಾರ್ಯವನ್ನು ಅತಿಯಾಗಿ ನಿಯಂತ್ರಿಸುವುದು ಅಸಾಧ್ಯ’ ಎಂದು ದ್ವೇಷ ಭಾಷಣಗಳಿಗಾಗಿ ಪ್ರಧಾನಿ ಮೋದಿ ವಿರುದ್ಧ ಎಫ್‌ಐಆರ್‌ಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಹೇಳಿದೆ.
ದ್ವೇಷ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ನ್ಯಾ.ಸಚಿನ್ ದತ್ತಾ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎನ್ನುವುದನ್ನು ಯಾರು ನಿರ್ಧರಿಸಬೇಕು? ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ, ನಾವು ಅದನ್ನು ಅತಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಕೀಲರು ಈ ವೇಳೆ, ಚುನಾವಣಾ ಆಯೋಗದ ಕ್ರಮಗಳು ದ್ವೇಷ ಭಾಷಣದಲ್ಲಿ ತೊಡಗಿರುವ ವ್ಯಕ್ತಿಯನ್ನು ಅವಲಂಬಿಸಿ ಬದಲಾಗುವಂತಿಲ್ಲ. ಆಯೋಗದ ಕ್ರಮಗಳು ಎಲ್ಲರಿಗೂ ಏಕರೂಪವಾಗಿರಬೇಕು ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗದ ಪರ ನ್ಯಾಯವಾದಿ ಸುರುಚಿ ಸೂರಿ ಪ್ರತಿಕ್ರಿಯಿಸಿದ್ದು, ಪ್ರಧಾನಿಯವರ ಹೇಳಿಕೆಗಳ ವಿರುದ್ಧ ದೂರುಗಳನ್ನು ಸ್ವೀಕರಿಸಿದ ಬಳಿಕ ಆಯೋಗವು ಬಿಜೆಪಿಗೆ ನೋಟಿಸ್ ಹೊರಡಿಸಿದ್ದು, ಮೇ 15ರೊಳಗೆ ಉತ್ತರವನ್ನು ನಿರೀಕ್ಷಿಸಲಾಗಿದೆ ಮತ್ತು ನಂತರ ಕಾನೂನಿಗೆ ಅನುಗುಣವಾಗಿ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ವೇಳೆ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ.13ಕ್ಕೆ ಮುಂದೂಡಿದೆ.
ಮೋದಿಯ ದ್ವೇಷಭಾಷಣಗಳ ವಿರುದ್ಧ ಹಲವಾರು ನಾಗರಿಕರು ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರೂ ಕ್ರಮವನ್ನು ತೆಗೆದುಕೊಳ್ಳದೆ ಚುನಾವಣಾ ಆಯೋಗವು ಮೌನವಾಗಿದೆ. ಮೋದಿಯವರ ಹೇಳಿಕೆಗಳನ್ನು ಇತರ ಬಿಜೆಪಿ ನಾಯಕರು ನಿಯಮಿತವಾಗಿ ಪುನರಾವರ್ತಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಮೋದಿಯ ದ್ವೇಷ ಭಾಷಣಕ್ಕೆ ಸಂಬಂಧಿಸಿ ಮೋದಿಗೆ ನೊಟೀಸ್ ನೀಡುವ ಬದಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾಗೆ ವಿವರಣೆ ಕೇಳಿ ಬಿಜೆಪಿ ನೊಟೀಸ್ ನೀಡಿತ್ತು. ಇದಕ್ಕೆ ಪ್ರತಿಪಕ್ಷಗಳು ಚುನಾವಣಾ ಆಯೋಗವನ್ನು ಟೀಕಿಸಿದ್ದವು.
ರಾಜಸ್ಥಾನದ ಬನ್ಸ್ವಾರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ನರೇಂದ್ರ ಮೋದಿ, ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್‌ನ ಗ್ಯಾರಂಟಿ ಎಂದು ಹೇಳಿದ್ದು, ಮುಸ್ಲಿಂ ಅಲ್ಪಸಂಖ್ಯಾತರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ದೇಶದ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದೆ. ಈ ‘ನಗರ ನಕ್ಸಲ್’ ಮನಸ್ಥಿತಿಯಿಂದ ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ‘ಮಂಗಲಸೂತ್ರ’ವನ್ನು ಸಹ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಹೋಗಬಹುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅವರು ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕುತ್ತಾರೆ, ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುತ್ತಾರೆ. ಅವರು ಅದನ್ನು ಯಾರಿಗೆ ಹಂಚುತ್ತಾರೆ? ಮನಮೋಹನ್ ಸಿಂಗ್ ಅವರ ಸರ್ಕಾರವು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿತ್ತು. ಇದನ್ನು ನುಸುಳುಕೋರರಿಗೆ ವಿತರಿಸಲಾಗುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಅನುಮೋದಿಸುತ್ತೀರಾ? ಇದು ನಿಮಗೆ ಸ್ವೀಕಾರಾರ್ಹವೇ? ನೀವು ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಸರ್ಕಾರಗಳಿಗೆ ಇದೆಯೇ? ತಾಯಂದಿರ ಮಂಗಳಸೂತ್ರದ ಮೌಲ್ಯವು ಚಿನ್ನ ಅಥವಾ ಅದರ ಬೆಲೆಯಲ್ಲಿಲ್ಲ, ಆದರೆ ಜೀವನದಲ್ಲಿ ಅವಳ ಕನಸುಗಳಿಗೆ ಸಂಬಂಧಿಸಿದೆ ಮತ್ತು ನೀವು ಅದನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದರು. ಮೋದಿಯ ಈ ದ್ವೇಷದ ಭಾಷಣದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
"We can't micromanage ECI": Delhi High Court on plea for FIR against PM Modi for "hate speeches"
Read story here: https://t.co/YYjDpRxQz1 pic.twitter.com/vUFjPLCkQV
— Bar and Bench (@barandbench) May 10, 2024
ಇದನ್ನು ಓದಿ: ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ: ನಿರ್ಣಯದ ಪರ ಭಾರತ ಮತದಾನ


