ವ್ಯಕ್ತಿಯೊಬ್ಬ 10 ವರ್ಷದ ಬಾಲಕಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದ ಪ್ರಕರಣದಲ್ಲಿ, ‘ಇದು ಆಕಸ್ಮಿಕ ಸ್ಪರ್ಶ’ ಎಂಬ ಆರೋಪಿಯ ವಾದವನ್ನು ತಳ್ಳಿ ಹಾಕಿರುವ ದೆಹಲಿ ಹೈಕೋರ್ಟ್, ಆ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಿದ್ದು, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಇದರೊಂದಿಗೆ ನ್ಯಾಯಾಲಯವು ಅಪರಾಧಿಯ ಶಿಕ್ಷೆಯನ್ನು ಆರು ವರ್ಷದಿಂದ ಐದು ವರ್ಷಕ್ಕೆ ಇಳಿಸಿದೆ.
ಶಾಲೆಯತ್ತ ನಡೆದು ಹೋಗುತ್ತಿದ್ದ ಬಾಲಕಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದ ಘಟನೆ 2017ರ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ದೆಹಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಸೆಪ್ಟೆಂಬರ್ 2019ರಲ್ಲಿ ತೀರ್ಪು ನೀಡಿತ್ತು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಸೆಕ್ಷನ್ 10 (ಉಲ್ಬಣಗೊಂಡ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಪ್ರಾಸಿಕ್ಯೂಷನ್, ಅನುಮಾನಗಳನ್ನು ಮೀರಿ ಸಾಕ್ಷಿಯನ್ನು ಸಾಬೀತುಪಡಿಸುತ್ತದೆ ಎಂದು ತಿಳಿಸಿದರು. ಆರೋಪಿ ಸ್ಥಳದಲ್ಲಿ ಇದ್ದಾನೆ ಎಂಬುದು ನಿರ್ವಿವಾದ ಎಂದಿರುವ ನ್ಯಾಯಾಲಯ, ಆತನ ಕೈ ಆಕಸ್ಮಿಕವಾಗಿ ಬಲಿಪಶುವಿಗೆ ತಾಗಿದೆಯೇ ಅಥವಾ ಸಂತ್ರಸ್ತೆ ಆರೋಪಿಸಿದಂತೆ ಘಟನೆ ನಡೆದಿದೆಯೇ ಎಂಬುದು ಮಾತ್ರ ಸಮಸ್ಯೆಯಾಗಿ ಉಳಿದಿದೆ ಎಂದು ಹೇಳಿದೆ.
ಈ ಘಟನೆ ನಡೆದಿದ್ದ ಸಂದರ್ಭದಲ್ಲಿ ಬಾಲಕಿಯ ತಂದೆ ಅವಳಿಂದ ಕೇವಲ 10-15 ಹೆಜ್ಜೆಗಳ ಹಿಂದೆ ಇದ್ದರು. ಶಾಲೆಗೆ ಹೋಗುವ ರಸ್ತೆಯ ತಿರುವಿನಲ್ಲಿ ಘಟನೆ ನಡೆದಿದ್ದು, ಬಾಲಕಿಯ ತಂದೆಯೇ ಪ್ರಾಥಮಿಕ ಸಾಕ್ಷಿ ಎಂದು ವಕೀಲರು ದೃಢೀಕರಿಸಿದ್ದರು. ಈ ಘಟನೆ ನಂತರ ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನಿಡಲಾಯಿತು. ಮರುದಿನವೇ ಸೆಕ್ಷನ್ 164 ರಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದರಿಂದ, ಸಾಕ್ಷ್ಯಾಧಾರಗಳನ್ನು ತಿದ್ದುವ ಅಥವಾ ತಿರುಚುವ ಸಾಧ್ಯತೆ ಕಡಿಮೆ ಎಂದು ನ್ಯಾಯಾಲಯ ಹೇಳಿದೆ.
ಇಂತಹ ಅಪರಾಧಗಳಿಗೆ ಸೂಚಿಸಲಾದ ಕನಿಷ್ಟ ಶಿಕ್ಷೆ ಐದು ವರ್ಷ ಮತ್ತು ಗರಿಷ್ಠ ಏಳು ವರ್ಷಗಳು ಎಂದಿರುವ ನ್ಯಾಯಾಲಯವು, ’ಅಪೀಲುದಾರರು ಈ ಹಿಂದೆ ಯಾವುದೇ ಪ್ರಕರಣಗಳನ್ನು ಒಳಗೊಂಡಿಲ್ಲ. ವಿಚಾರಣೆ ಸಮಯದಲ್ಲಿ ಮತ್ತು ಮೇಲ್ಮನವಿ ವಿಚಾರಣೆ ನಡೆಯುವಾಗಲು, ನಿರಂತರ ಸೆರೆವಾಸದಲ್ಲಿದ್ದರು’ ಎಂದಿರುವ ನ್ಯಾಯಮೂರ್ತಿ ಗುಪ್ತಾ ಅವರು ಶಿಕ್ಷೆಯನ್ನು ಒಂದು ವರ್ಷ ಕಡಿಮೆಗೊಳಿಸಿದರು.
ಪೊಲೀಸರ ಪ್ರಕಾರ, ಶಾಲೆಗೆ ಹೋಗುತ್ತಿದ್ದ 5ನೇ ತರಗತಿಯ ವಿದ್ಯಾರ್ಥಿನಿಯನ್ನು ಇದ್ದಕ್ಕಿದ್ದಂತೆ ಹಿಡಿದುಕೊಂಡು, ಅವಳ ಕೆನ್ನೆಗೆ ಬಲವಂತವಾಗಿ ಚುಂಬಿಸಿದ್ದನು. ಬಾಲಕಿಯು ಕಿರುಚಿಕೊಂಡಾಗ ಸ್ಥಳಕ್ಕೆ ಧಾವಿಸಿದ ಬಾಲಕಿಯ ತಂದೆ, ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ಥಳಿಸಿದ್ದಾರೆ’ ಎಂದು ವಕೀಲರು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದರು.
ಆರೋಪಿಯು ಶಿಕ್ಷೆಗೆ ಒಳಗಾಗುವ ಮೊದಲು, ‘ತಾನು ಶಾಲಾ ಮಾರ್ಗದ ಮೂಲಕ ಹಾದು ಹೋಗುತ್ತಿದ್ದಾಗ, ಬಾಲಕಿಯು ವಿರುದ್ಧ ದಿಕ್ಕಿನಿಂದ ಬರುತ್ತಿದ್ದಳು. ಆ ಸಮಯದಲ್ಲಿ ಆಕಸ್ಮಿಕವಾಗಿ ನನ್ನ ಕೈ ಬಾಲಕಿಗೆ ತಗುಲಿತ್ತು. ಅದಕ್ಕಾಗಿ ತಕ್ಷಣವೇ ಆಕೆಯ ತಂದೆಗೆ ಕ್ಷಮೆಯಾಚಿಸಿದೆ. ಆದರೆ ಬಾಲಕಿಯ ತಂದೆ ಕ್ಷಮಾಪಣೆ ಸ್ವೀಕರಿಸದೇ ಥಳಿಸಲು ಆರಂಭಿಸಿದರು’ ಎಂದು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದನು.
(ದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ಹಿಂಸಾಚಾರಗಳು ಹೆಚ್ಚುತ್ತಿವೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರ. ಮಹಿಳಾ ಮತ್ತು ಪ್ರಜ್ಞಾವಂತ ಸಂಘಟನೆಗಳ ಹೋರಾಟದಿಂದ ಹಲವಾರು ಕಾನೂನು ಬದಲಾವಣೆಗಳು ಬಂದಿವೆ. ಈ ಪ್ರಕರಣಗಳಲ್ಲಿ ಆರೋಪಿಗೆ ಗರಿಷ್ಟ ಶಿಕ್ಷೆಯ ಸಂಭವವಿದೆ. 18 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪೋಕ್ಸೊ ಅಡಿಯಲ್ಲಿ ಬರುತ್ತದೆ. ಆಗ ಅಪರಾಧ ನಡೆದಿಲ್ಲ ಎಂದು ಸಾಬೀತುಪಡಿಸುವ ಹೊಣೆ ಆರೋಪಿಯ ಮೇಲಿರುತ್ತದೆ. ಲೈಂಗಿಕ ಹಿಂಸೆ, ಅತ್ಯಾಚಾರದ ವಿರುದ್ಧ ದನಿಯೆತ್ತೋಣ. ಆರೋಗ್ಯಕರ ಸಮಾಜ ನಮ್ಮದಾಗಿಸಿಕೊಳ್ಳೋಣ)
ಇದನ್ನೂ ಓದಿ: ರಾಜಸ್ಥಾನ: ಮಗುವಿನ ಮೇಲೆ ಅತ್ಯಾಚಾರ, ಹತ್ಯೆ; ಅಪರಾಧಿಗೆ 24 ದಿನಗಳಲ್ಲಿ ಮರಣದಂಡನೆ!


