Homeಮುಖಪುಟಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ 'ಜೈ ಭೀಮ್'...

ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…

ಎಲ್ಲರಿಗೂ ಸಮಾನ ನ್ಯಾಯಕ್ಕೆ ನಿಲ್ಲಬೇಕಿದ್ದ ಪ್ರಭುತ್ವದ ಸಂಸ್ಥೆಗಳು ಶಿಥಿಲಗೊಂಡಾದ ಅದಕ್ಕೆ ಮುಖ್ಯವಾಗಿ ಕಾರಣವಾಗಿರುವ ಶೋಷಕ ಸಮುದಾಯದ ವ್ಯಕ್ತಿಗಳ ಹಾದಿ ಯಾವುದಾಗಿರಬೇಕು ಎಂದು ಎಚ್ಚರಿಸುವ ಸಿನಿಮಾ ಜೈ ಭೀಮ್

- Advertisement -
- Advertisement -

1871 ರಲ್ಲಿ ಬ್ರಿಟಿಷರು ಜಾರಿಗೆ ತಂದ ಕ್ರಿಮಿನಲ್ ಟ್ರೈಬ್ಸ್ ಆಕ್ಟ್‌‍ಗೆ (ಸಿಟಿಎ- ಅಪರಾಧಿ ಬುಡಕಟ್ಟು ಕಾಯ್ದೆಗೆ) 2021ಕ್ಕೆ 150 ವರ್ಷ ತುಂಬುತ್ತದೆ. ಮುಖ್ಯವಾಗಿ 1857ರ ದಂಗೆಯನ್ನು ಹತ್ತಿಕ್ಕಲು, ಯಾವುದೇ ಗಂಭೀರ ಅಧ್ಯಯನ ಇಲ್ಲದೆ, ಬ್ರಿಟಿಷ್ ಅಧಿಕಾರಿ ಜನರಲ್ ವಿಲಿಯಮ್ ಹೆನ್ರಿ ಸ್ಲೀಮನ್ ಸೇರಿದಂತೆ ಅಂದಿನ ಹಲವು ಅಧಿಕಾರಿಗಳು ನೂರಾರು ಅಲೆಮಾರಿ ಸಮುದಾಯಗಳನನ್ನು ಸಿಟಿಎ ಅಡಿ ತಂದು, ಅವರನ್ನು ಅಪರಾಧಿಗಳು ಎಂದು ಹಣೆಪಟ್ಟಿ ಕಟ್ಟಿ, ಅವರನ್ನು ಬಂಧಿಸುವುದರಿಂದ ಹಿಡಿದು, ‘ಸುಧಾರಣಾ’ ಶಿಬಿರಗಳಲ್ಲಿ ಕೂಡಿ ಹಾಕಿ ಕಿರುಕುಳ, ಹಿಂಸೆಗೆ ಗುರಿಯಾಗುವಂತೆ ಮಾಡಿದ್ದು ಇತಿಹಾಸವಷ್ಟೇ ಅಲ್ಲ! ಸ್ವತಂತ್ರಾ ನಂತರವು ಆ ಸಮುದಾಯಗಳ ಬಗ್ಗೆ ಅದೇ ಮನಸ್ಥಿತಿ ಬೇರೆಬೇರೆ ರೂಪಗಳಲ್ಲಿ ಉಳಿದುಕೊಳ್ಳುವುದಕ್ಕೆ ಕಾರಣವಾಯಿತು. 1952ರಲ್ಲಿ ಈ ಸಿಟಿಎಗೆ ಇತಿಶ್ರೀ ಹಾಡಲಾಯಿತಾದರೂ, ಅದರ ಬದಲು ಹ್ಯಾಬಿಚುವಲ್ ಆಫೆಂಡರ್ ಆಕ್ಟ್‍ಅನ್ನು (ರೂಢಿಗತ ಅಪರಾಧಿಗಳ ಕಾಯಿದೆ) ತಂದು, ಈ ಅಲೆಮಾರಿ ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿಸಲಾಯಿತು. ಇದು ಇಂದಿಗೂ ಕೂಡ ಮುಂದುವರೆದಿರುವುದು ದುರಂತವಷ್ಟೇ!

ಕೆಲವೇ ಕೆಲವು ವರ್ಷಗಳ ಹಿಂದೆ ಇಂತಹ “ರೂಡಿಗತ ಅಪರಾಧಿ”ಗಳನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ಬಗ್ಗೆ ಹಲವು ರಾಜ್ಯಗಳಲ್ಲಿ ಪೊಲೀಸ್ ತರಬೇತಿ ಇತ್ತು ಎನ್ನುವುದು ದಾಖಲಾಗಿದೆ. ಕಪೋಲಕಲ್ಪಿತ ಆಧಾರದಡಿಯಲ್ಲಿ ಅಲೆಮಾರಿ ಸಮುದಾಯದ ಲಕ್ಷಾಂತರ ಜನ ಕಳಂಕ ಹೊತ್ತು ಬದುಕುತ್ತಿರುವುದಲ್ಲದೆ, ತಾವು ಮಾಡಿರದ ಅಪರಾಧವನ್ನು ಹೊರಿಸಿಕೊಳ್ಳುವ ಹಿಂಸೆಗೆ ಭ್ರಷ್ಟ ಪೊಲೀಸ್ ವ್ಯವಸ್ಥೆಯಿಂದ ಗುರಿಯಾಗಿದ್ದಾರೆ. ಈ ಕಥೆಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಥವಾ ಕಥಾಜಗತ್ತಿನಲ್ಲಿ ಮೂಡಿಬಂದದ್ದು ಅಪರೂಪ. ಸೆಡಿಶನ್ ರೀತಿಯಲ್ಲಿಯೇ ಇಂಥಹ ದೌರ್ಜನ್ಯದ ವಸಾಹತುಶಾಹಿಯ ಪಳೆಯುಳಿಕೆ ಕಾನೂನುಗಳು ಭಾರತೀಯ ಸಮಾಜದಲ್ಲಿ ಒಪ್ಪಿಗೆ ಪಡೆದು ಮುಂದುವರೆದಿವೆ.

ಹೆಚ್ಚಾಗಿ ತಮಿಳುನಾಡಿನಲ್ಲಿ ಇರುವ (ಕರ್ನಾಟಕ, ಕೇರಳ, ಪುದುಚೆರಿಯಲ್ಲೂ ಇದ್ದಾರೆ) ಇರುಳರು ಕೂಡ ಒಂದು ಅಂತಹ ಅರೆ ಅಲೆಮಾರಿ ಸಮುದಾಯ. ರಾಜಾಕಣ್ಣು (ಕೆ ಮಣಿಗಂಡನ್) ಮತ್ತು ಸೆಂಗಿಣಿ (ಲಿಜೋಮೋಲ್ ಜೋಸ್) ತಾವು ಅಕ್ಷರಸ್ಥರಾಗಿಲ್ಲದೆ ಇದ್ದರೂ, ವಯಸ್ಕರ ಶಿಕ್ಷಣದಲ್ಲಿ ಕಲಿಯುತ್ತಿರುವ, ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವ, ಗುಡಿಸಲಿನ ಬದಲು ಇಟ್ಟಿಗೆ ಗೋಡೆಯ ಮನೆ ಕಟ್ಟಿಕೊಳ್ಳಲು ಕನಸು ಕಾಣುತ್ತಿರುವ ಪುಟ್ಟ ಕುಟುಂಬ. ಹೊಲ ಗದ್ದೆಗಳಲ್ಲಿ, ಮಿಲ್ ಗಳಲ್ಲಿ, ಇಟ್ಟಿಗೆ ಬೇಯಿಸುವಲ್ಲಿ ಕೂಲಿ ಕೆಲಸ ಮಾಡುವ, ಹಾವು ಹಿಡಿಯುವ, ಹಾವು ಕಚ್ಚಿದವರಿಗೆ ಪಾರಂಪರಿಕ ಚಿಕಿತ್ಸೆ ನೀಡುವ, ಗದ್ದೆಗಳ ಬದುಗಳಲ್ಲಿ ಇಲಿ ಹಿಡಿದು ತಿನ್ನುವ ಇರುಳ ಸಮುದಾಯ ಸಿಟಿಎ ಕಾಯ್ದೆ ತೊಲಗಿ ಅರ್ಧ ದಶಕ ಕಳೆದಿದ್ದರೂ, ವ್ಯವಸ್ಥಿತ ನೆಲೆ ಇಲ್ಲದೆ, ರೇಶನ್ ಕಾರ್ಡ್ ಸೇರಿದಂತೆ ಯಾವುದೇ ಗುರುತಿನ ಚೀಟಿ ಇಲ್ಲದೆ, ಪರಿಶಿಷ್ಟ ವರ್ಗದ ಪ್ರಮಾಣಪತ್ರ ಪಡೆಯಲು ಸೋತಿರುವ ಸಮುದಾಯ. ಈ ಸಮುದಾಯವನ್ನು ಶೋಷಿಸುವ ಕಥೆ ಆಯ್ದುಕೊಂಡಿರುವ ‘ಜೈಭೀಮ್’ ಸಿನಿಮಾದ ಆರಂಭಿಕ ದೃಶ್ಯವೇ ಪ್ರೇಕ್ಷಕನನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ.

ತಮ್ಮ ಜೈಲುವಾಸ ಮುಗಿಸಿ ಬಿಡುಗಡೆಯಾಗುತ್ತಿರುವ ವ್ಯಕ್ತಿಗಳ ಜಾತಿ ಕೇಳುತ್ತಾ ಹೋಗುವ ಪೊಲೀಸ್ ಅಧಿಕಾರಿ, ಮೇಲ್ಜಾತಿ ಜನರನ್ನೆಲ್ಲಾ ಕಳುಹಿಸಿ, ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ನಿಲ್ಲಿಸುತ್ತಾನೆ. ಅವರನ್ನೆಲ್ಲಾ ಇಲ್ಲಿಯವರೆಗೂ ಬಗೆಹರಿಯದ ಪ್ರಕರಣಗಳಲ್ಲಿ ಫಿಟ್ ಮಾಡಲು ಮತ್ತೆ ಎಳೆದುಕೊಂಡು ಹೋಗಲಾಗುತ್ತದೆ. ಅಪರಾಧೀಕರಣಗೊಂಡಿರುವ, ಕೊಳೆತು ನಾರುವ ವ್ಯವಸ್ಥೆಯ ಕಥೆಯನ್ನು ಹೇಳುವೆ ಎಂದು ನಿರ್ದೇಶಕ ಟಿ ಜ್ಞಾನವೇಲು ಬೋಲ್ಡ್ ಆಗಿ ಆರಂಭದಲ್ಲಿಯೇ ಘೋಷಿಸಿಕೊಳ್ಳುತ್ತಾರೆ.

ಇರುಳ ಸಮುದಾಯದ ಬದುಕನ್ನು, ಜೀವನ ದೃಷ್ಟಿಯನ್ನು ಕಟ್ಟಿಕೊಡುವ ದೃಶ್ಯಗಳಿಂದ ಸಿನಿಮಾ ಮುಂದುವರೆಯುತ್ತದೆ. ‘ಸಾವುಕಾರ’ನೊಬ್ಬನ ಮನೆಯಲ್ಲಿ ನಾಗರಹಾವನ್ನು ಹಿಡಿಯುವ ರಾಜಾಕಣ್ಣುವಿಗೆ ಅದನ್ನು ಸಾಯಿಸುವಂತೆ ಹೇಳಿದಾಗ, ಅದನ್ನು ನಿರಾಕರಿಸಿ ಅದನ್ನು ರಕ್ಷಿಸಿ ಕಾಡಿಗೆ ಬಿಡುತ್ತಾನೆ. ಮನುಷ್ಯರಿಂದ ದೂರವಿರುವಂತೆ ಹಾವಿಗೆ ತಿಳಿಹೇಳುತ್ತಾನೆ. ‘ಮುಖ್ಯವಾಹಿನಿ’ ಎಂದು ಹೇಳಿಕೊಳ್ಳುವ ಸಮುದಾಯ ಯಾವೆಲ್ಲಾ ಸ್ಥರಗಳಲ್ಲಿ ಭ್ರಷ್ಟಗೊಂಡಿದೆ, ಸ್ವಾರ್ಥಿಯಾಗಿದೆ ಎಂಬುದನ್ನು ಈ ಸಣ್ಣಪುಟ್ಟ ದೃಶ್ಯಗಳೇ ನಿರೂಪಿಸುತ್ತಾ ಮುಂದುವರೆಯುತ್ತವೆ. ಅಲೆಮಾರಿ ಸಮುದಾಯದ ಅಲೆಮಾರಿತನವನ್ನೇ ಅಪರಾಧೀಕರಣಗೊಳಿಸಲು ಪ್ರಭುತ್ವ ಪ್ರಯತ್ನಿಸಿದ್ದನ್ನು ಮೆಟ್ಟಿ ಈಗ ಆ ಸಮುದಾಯ ನೆಲೆ ನಿಲ್ಲಲು ಪ್ರಯತ್ನಿಸುವಾಗ ಅದಕ್ಕೆ ಅಡ್ಡಗಾಲು ಹಾಕುತ್ತಿರುವುದು ಕೂಡ ಅದೇ ಪ್ರಭುತ್ವವೇ. ಅದಕ್ಕೆ ಶ್ರೇಣೀಕೃತ ಸಮಾಜ ಕೂಡ ಕೈಜೋಡಿಸಿದೆ. ತಮ್ಮ ಹೊಲಗದ್ದೆಗಳಲ್ಲಿ ಮತ್ತು ಇತರ ವ್ಯವಹಾರಗಳಲ್ಲಿ ಕೂಲಿಗಾಗಿ ದುಡಿಯುವ ಈ ದುಡಿವ ವರ್ಗದ ಸ್ವಾವಲಂಬನೆಗೆ ಅಡ್ಡಗಾಲು ಹಾಕಲು ಆರ್ಥಿಕ ಕಾರಣವೂ ಅಲ್ಲಿ ಸೇರಿದೆ.

ಹೀಗೆ, ಸ್ವಾವಲಂಬನೆಗೆ ಹವಣಿಸುತ್ತಿರುವ ರಾಜಾಕಣ್ಣುನನ್ನು ಪೊಲೀಸರು ಕಳ್ಳತನದ ಕೇಸಿನಲ್ಲಿ ಸಿಕ್ಕಿಸುತ್ತಾರೆ. ನ್ಯಾಯಯುತವಾಗಿ ಬದುಕಗೊಡಬಿಡದ ಆಡಳಿತ ವ್ಯವಸ್ಥೆಯ ದೌರ್ಜನ್ಯದ ದೃಶ್ಯಗಳು, ಪೊಲೀಸರು ನೀಡುವ ಚಿತ್ರಹಿಂಸೆಯ ದೃಶ್ಯಗಳು ವೆಟ್ರಿಮಾರನ್ ನಿರ್ದೇಶನದ ‘ವಿಸಾರಣೈ’ ಸಿನಿಮಾವನ್ನು ನೆನಪಿಸುತ್ತವೆ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡುವ, ಎಲ್ಲರಿಗೂ ಸಮಾನ ನ್ಯಾಯದ ಹಕ್ಕನ್ನು ನೀಡುವ ಸಂವಿಧಾನದ ಆಶಯವನ್ನು ಮಣ್ಣುಗೂಡಿಸಿ ಹೆಮ್ಮರವಾಗಿ ಬೆಳೆದ ಆಡಳಿತ ವ್ಯವಸ್ಥೆಯ ಕ್ರೌರ್ಯವನ್ನು ಪ್ರೇಕ್ಷಕರಿಗೆ ದಾಟಿಸಲು ನಿರ್ದೇಶಕ ಪ್ರತ್ನಿಸಿದ್ದಾರೆ. ಎಸ್ ಐ ಗುರುಮೂರ್ತಿ ನೀಡುವ ಚಿತ್ರಹಿಂಸೆಯನ್ನು ತಾಳಲಾರದೆ, ರಾಜಾಕಣ್ಣುವಿನ ಜೊತೆಗೆ ಬಂಧಿತನಾಗಿರುವ ಸಂಬಂಧಿ, ನಾವು ತಪ್ಪು ಮಾಡದೆ ಇದ್ದರೂ ಒಪ್ಪಿಕೊಳ್ಳೋಣ ಎಂದಾಗ, “ಗಾಯಗಳು ವಾಸಿಯಾಗುತ್ತವೆ, ಆದರೆ ಕಳ್ಳ ಎಂಬ ಹಣೆಪಟ್ಟಿ ಉಳಿದುಕೊಂಡುಬಿಡುತ್ತದೆ” ಎಂದು ರಾಜಾಕಣ್ಣು ಹೇಳುವ ಮಾತುಗಳು ಪ್ರಭುತ್ವದ ಜೊತೆಗೆ ಬೆಸೆದುಹೋಗಿರುವ ಮುಖ್ಯವಾಹಿನಿ ಸಮಾಜದ ಮುಖಕ್ಕೆ ಬಾರಿಸಿದಂತೆ ಭಾಸವಾಗುತ್ತದೆ. ಆದರೆ ಪ್ರಭುತ್ವದ ಹಿಂಸೆಗೆ ತಡೆಯಿದೆಯೇ?

ಮುಂದಿನ ಘಟ್ಟದಲ್ಲಿ, ಚಂದ್ರು ಎಂಬ ವಕೀಲ ಸೆಂಗಿಣಿಯ ಮೂಲಕ ತನ್ನ ಗಂಡನನ್ನು ಹಾಜರುಪಡಿಸುವಂತೆ ಹಾಕುವ ಹೇಬಿಯಸ್ ಕಾರ್ಪಸ್ ಪ್ರಕರಣದ ವಿಚಾರಣೆಯಿಂದ ಸಿನಿಮಾ ಮುಂದುವರೆಯುತ್ತದೆ. ತಮಿಳುನಾಡಿನ ಖ್ಯಾತ ನಟ ಸೂರ್ಯ ತನ್ನ ಸೆಲೆಬ್ರಿಟಿ ಸ್ಟೇಟಸ್ ನಿಂದ ಹೊರಬಂದು ಇಂಥಹ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೆ ಚಂದ್ರು ಎಂಬ ನಿಜ ಜೀವನದ ಹೋರಾಟಗಾರ ವಕೀಲನ ಕಥೆಯೂ ಇದಾಗಿರುವುದರಿಂದ, ಈ ಪಾತ್ರ ಕಟ್ಟುವಲ್ಲಿ ಏಕತಾನತೆ ಎದ್ದು ಕಾಣುತ್ತದೆ. ಮೊದಲಿನಿಂದಲೂ ಶೋಷಿತರ ಪರವಾಗಿ ಕೆಲಸ ಮಾಡುವ ವಕೀಲನಾಗಿ ಕಟ್ಟಿರುವ ಪಾತ್ರದ ಒಟ್ಟಾರೆ ಹರವಿನಲ್ಲಿ ಸಿನಿಮಾದುದ್ದಕ್ಕೂ ಯಾವುದೇ ಬದಲಾವಣೆ ಮೂಡುವುದಿಲ್ಲ. ಆ ನಿಟ್ಟಿನಲ್ಲಿ ಭಾರತೀಯ ಸಿನಿಮಾಗಳ ಸಿದ್ಧಸೂತ್ರದ ಪಾತ್ರದಂತೆ ಇದು ಕೂಡ ಒಂದಾಗಿ ಉಳಿದುಕೊಳ್ಳುತ್ತದೆ. ಆದರೆ ಆ ಪಾತ್ರದ ಮೂಲಕ ಕಟ್ಟಿಕೊಡುವ ಆಶಯ ಪ್ರೇಕ್ಷಕನ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಪ್ರಜಾಪ್ರಭುತ್ವವನ್ನು ಎಲ್ಲರ ಒಳಿತಿಗಾಗಿ ಕಟ್ಟಿಕೊಂಡಿದ್ದರೂ, ಹಳೆಯ ಶೋಷಣೆಯ ವ್ಯವಸ್ಥೆ ಆಧುನಿಕ ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿಯೂ ಉಳಿದುಹೋಗಿರುವುದರಿಂದ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ತುಳಿಯಬೇಕಿರುವ ಹಾದಿಯಂತೆ ಚಂದ್ರು ಪಾತ್ರ ನಿಲ್ಲುತ್ತದೆ. ಅಂಬೇಡ್ಕರ್ ಅವರು ಸಮಾಜದಲ್ಲಿ ಪ್ರಜಾಪ್ರಭುತ್ವ ಸಾಧಿಸದೆ ಹೋದರೆ ರಾಜಕೀಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ಕೂಡ ಕಷ್ಟ ಎಂದು ಊಹಿಸಿದ್ದರು. ಇದಕ್ಕೆ ಅವರು ಭ್ರಾತೃತ್ವದ ಮಹತ್ವವನ್ನು ಒತ್ತಿ ಹೇಳಿದ್ದರು. ಈ ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಲು ಭಾರತೀಯ ಸಮಾಜ ಸೋತಿದ್ದೆಲ್ಲಿ? ಇದನ್ನು ಇನ್ನಾದರೂ ಸರಿಪಡಿಸಿಕೊಳ್ಳಬಹುದೇ? ನಿಜ ಜೀವನದ ಚಂದ್ರು ಮತ್ತು ಸಿನಿಮಾದ ಚಂದ್ರು ಪಾತ್ರ ಆ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆಯಂತೆ ಭಾಸವಾಗುತ್ತದೆ. ಪ್ರಭುತ್ವದ ಸಂಸ್ಥೆಗಳು ವಿಪರೀತವಾಗಿ ಬೆಳೆದಿರುವುದನ್ನು ಸರಿಪಡಿಸುವ ಕರ್ತವ್ಯ ಯಾರದ್ದು ಎಂಬುದನ್ನು ನೆನಪಿಸುತ್ತವೆ. ಅದೇ ಸಮಯದಲ್ಲಿ ತನ್ನ ಪ್ರಿವಿಲೆಜ್ ಅನ್ನು ಅರ್ಥ ಮಾಡಿಕೊಂಡು ಅದು ‘ದಾನ-ದಾಕ್ಷಿಣ್ಯ’ವಾಗದಂತೆ ಎಚ್ಚರಿಕೆ ವಹಿಸುವುದೂ ಮುಖ್ಯವಾಗುತ್ತದೆ. ‘ನಿನ್ನ ಫೀಸ್ ಕೊಡಲು ನನ್ನ ಬಳಿ ಹಣವಿಲ್ಲ’ ಎಂದು ಸೆಂಗಿಣಿ ವಕೀಲ ಚಂದ್ರುವಿಗೆ ಹೇಳಿದಾಗ, ‘ಹಾವು ಕಚ್ಚಿಸಿಕೊಂಡು ನಿನ್ನ ಬಳಿ ಚಿಕಿತ್ಸೆಗೆ ಬಂದಾಗ ಹೇಗೆ ನೀನು ಹಣ ಕೇಳುವುದಿಲ್ಲವೋ ಅದೇ ರೀತಿ ನನ್ನದು’ ಎಂದು ತನ್ನ ಹೆಚ್ಚುಗಾರಿಕೆಯೇನಿಲ್ಲ ಎಂಬುದನ್ನು ತನಗೇ ತಾನೇ ಧೃಢಪಡಿಸಿಕೊಳ್ಳುವ ದೃಶ್ಯ ಬಂದುಹೋಗುತ್ತದೆ. ಆಗ ಸೆಂಗಿಣಿ, ತನಗೆ ದೌರ್ಜನ್ಯ ಎಸಗಿದ ಪೊಲೀಸ್ ಗೆ ಹಾವು ಕಚ್ಚಿದರೂ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಹೇಳುವ ಮಾತುಗಳು ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ!

ಪೊಲೀಸ್ ಟಾರ್ಚರ್ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್ ಒಂದು ಸಮಿತಿ ಮಾಡಿದಾಗ ಅದನ್ನು ಮುನ್ನಡೆಸಲು ಬರುವ ಐಜಿ ಪೆರುಮಾಳ್ ಸ್ವಾಮಿ (ಪ್ರಕಾಶ್ ರೈ) ಪಾತ್ರದಲ್ಲಿ ಆಗುವ ಚಲನೆಯನ್ನು ತೋರಿಸುವ ಸಿನಿಮಾ ಆಶಯ ಸದುದ್ದೇಶದ್ದಾಗಿದ್ದರೂ, ಆ ದೃಶ್ಯಗಳು ಬಹಳ ಆತುರದಲ್ಲಿ ಮೂಡಿಹೋಗುವ ಪರಿಣಾಮ, ಅದು ಸರಿಯಾಗಿ ಪ್ರೇಕ್ಷಕನಲ್ಲಿ ದಾಖಲಾಗುತ್ತದೆಯೇ ಎಂಬ ಸಂದೇಹ ಉಳಿಯುತ್ತದೆ. ಯಾವುದೇ ಒಂದು ಪ್ರಕರಣದಲ್ಲಿ ಕಾನೂನಿನಾಚೆಗೆ ಆರೋಪಿಯೊಬ್ಬನ ಬೆರಳು ಮುರಿದ ಉದಾಹರಣೆ ಹೇಳಿ, ಪೊಲೀಸರು ಕೆಲವೊಮ್ಮೆ ‘ಸರ್ವಾಧಿಕಾರಿ’ಗಳಾಗಿದ್ದರೆ ಮಾತ್ರ ನ್ಯಾಯ ಸಾಧ್ಯ ಎಂಬ ನಂಬಿಕೆಯುಳ್ಳ ಪೊಲೀಸ್ ಅಧಿಕಾರಿ, ತನ್ನ ಮೇಲಧಿಕಾರಿಗಳ ಆಜ್ಞೆಯನ್ನೂ ಧಿಕ್ಕರಿಸಿ, ತನ್ನದೇ ಇಲಾಖೆಯ ದೌರ್ಜನ್ಯವನ್ನು ಕೋರ್ಟ್ ಮುಂದೆ ಬಯಲು ಮಾಡುತ್ತಾನೆ. ಈ ಬದಲಾವಣೆಯನ್ನು ಹಿಡಿದಿಡುವ ಈ ಭಾಗವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಅಗತ್ಯವಿತ್ತು ಎನ್ನಿಸದೆ ಇರದು.

ಎಲ್ಲರಿಗೂ ಸಮಾನ ನ್ಯಾಯಕ್ಕೆ ನಿಲ್ಲಬೇಕಿದ್ದ ಪ್ರಭುತ್ವದ ಸಂಸ್ಥೆಗಳು ಶಿಥಿಲಗೊಂಡಾದ ಅದಕ್ಕೆ ಮುಖ್ಯವಾಗಿ ಕಾರಣವಾಗಿರುವ ಶೋಷಕ ಸಮುದಾಯದ ವ್ಯಕ್ತಿಗಳ ಹಾದಿ ಯಾವುದಾಗಿರಬೇಕು ಎಂದು ಪ್ರಶ್ನಿಸಿಕೊಂಡು ಅದನ್ನು ಅನ್ವೇಷಿಸುವಂತೆ ಮುಂದುವರೆದಿರುವ ‘ಜೈ ಭೀಮ್’ ಸಿನಿಮಾ, ಡಾ. ಬಿ ಆರ್ ಅಂಬೇಡ್ಕರ್ ಅವರ ಕನಸನ್ನು ಸಾಕಾರಗೊಳಿಸಲು ನಿರಾಕರಿಸಿ ನಿರ್ಮಿಸಿಕೊಂಡಿರುವ ತೊಡರುಗಳನ್ನು ಹೆಚ್ಚು ನೆನಪಿಸುತ್ತದೆ. ಇಂತಹ ಕ್ರೂರ ಪ್ರಭುತ್ವದಿಂದ ವಿಮೋಚನೆಗೊಳ್ಳಲು ಪ್ರಿವೆಲೆಜ್ ಹೊಂದಿರುವ ವ್ಯಕ್ತಿಗಳ ಕರ್ತವ್ಯವನ್ನು ಕೂಡ ನೆನಪಿಸುತ್ತದೆ. ಈ ನಿಟ್ಟಿನಲ್ಲಿ ಈ ಕಾಲಕ್ಕೆ ಸ್ಪಂದಿಸಿರುವ ಪ್ರಮುಖ ಚಲನಚಿತ್ರವಾಗಿ ‘ಜೈ ಭೀಮ್’ ಕಾಣಿಸಿಕೊಳ್ಳುತ್ತದೆ.

  • ಗುರುಪ್ರಸಾದ್ ಡಿ ಎನ್

(ಸಂಪಾದಕರು, ನ್ಯಾಯಪಥ ವಾರಪತ್ರಿಕೆ)


ಇದನ್ನೂ ಓದಿ: ‘ಜೈ ಭೀಮ್‌’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸ್ವಾತಂತ್ರ್ಯ ಬಂದು 70 ವರ್ಷ ಕಳೆದು ಕೊಳೆತು ನಾರುತ್ತಿರುವ ಸಮಾಜ ಎಂದು ಹೆಡ್ಡಿಂಗ್ ನೀಡುತ್ತಾರೆ ಅಂದರೆ ಈ ಲೇಖಕ ಇಂಥ ಫ್ಯೂಡಲಿಜಮ್ ನಿಂದ ಸಾಗುತ್ತಿದ್ದಾನೆ ಎಂದು ತಿಳಿಯುತ್ತೆ…75 ವರ್ಷವಳಲ್ಲಿ ಲೂಟಿ ವಂಚನೆ ಗರಿಬಿ ಹಟವೋ 20 ಅಂಶ ಕಾರ್ಯಕ್ರಮ, ಪಂಚ್ ವಾರ್ಷಿಕ ಯೋಜನೆ ಎನ್ನುವ ಬಿಳಿ ಆನೆ ಇದರಲ್ಲೇ ಕಾಲ ಕಳೆದ ಆಪ್ಪರ್ ಕ್ಯಾಸ್ಟ್ ಬ್ರಾಹ್ಮಣ ಪಂಡಿತ್ ನೆಹರು ವಂಶ ದೇಶವನ್ನು ಅರಾಜಕತೆ ಕೋಮು ವೈಷಮ್ಯ ಇದೆ ಮಾಡಿದೆ..ಈಗ 2014 ರಿಂದ ಸ್ವಲ್ಪ ಬದಲಾವಣೆ ಗಾಳಿ ಆರಂಭ ಆಗಿದ್ದು ಇದು ಒಬ್ಬ ಹಿಂದುಳಿದ ಸಮಾಜದ ನಾಯಕ ನಿಂದ ಎನ್ನುವುದು ಸತ್ಯ…ಇದೆ ರೀತಿ ಬ್ರಾಹ್ಮಣ ಶಾಹಿ ಪಂಡಿತ್ ನೆಹರು ವಂಶ ಅಳಿದು ಮೂಲೆ ಸೇರಲಿ..

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...