ದೆಹಲಿಯಲ್ಲಿ ಕೋವಿಡ್ ನಿಯಂತ್ರಣ ಒಂದು ಹಂತಕ್ಕೆ ಬರುತ್ತಿದೆ. ಆದರೆ ಕೋವಿಡ್‌ನಿಂದ ಗುಣಮುಖರಾದ ಹಲವರಲ್ಲಿ ಬೇರೆ ಬಗೆಯ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ವೈದ್ಯರ ಪ್ರಕಾರ, ದೆಹಲಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ (ಒಪಿಡಿ) ಕೋವಿಡ್‌ನಿಂದ ಗುಣಮುಖರಾಗಿ ಈಗ ಹಲವು ತೊಡಕುಗಳನ್ನು ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಒಪಿಡಿಗಳಲ್ಲಿ ಕೋವಿಡ್ ನಂತರದ ತೊಡಕುಗಳನ್ನು ಹೊಂದಿರುವ 25-30 ರೋಗಿಗಳಿಗೆ ವೈದ್ಯರು ಪ್ರತಿದಿನ ಈಗ ಚಿಕಿತ್ಸೆ ನೀಡುತ್ತಿದ್ದಾರೆ. ಮೊದಲ ಅಲೆಯಲ್ಲಿ ವರದಿಯಾದ ರೋಗಲಕ್ಷಣಗಳಿಗಿಂತ ಈಗಿನ ರೋಗಲಕ್ಷಣಗಳು ಹೆಚ್ಚು ಗಂಭೀರವಾಗಿವೆ. ಸೋಂಕಿನಿಂದ ಚೇತರಿಸಿಕೊಂಡ ನಂತರ ಹಲವಾರು ವಾರಗಳವರೆಗೆ ರೋಗಿಗಳಿಗೆ ಆಮ್ಲಜನಕದ ಬೆಂಬಲ ಬೇಕಾಗುತ್ತಿದೆ. ಕಳೆದ ವರ್ಷ, ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಆಯಾಸ ಸಾಮಾನ್ಯ ಲಕ್ಷಣವಾಗಿತ್ತು.
ಮ್ಯಾಕ್ಸ್ ಆಸ್ಪತ್ರೆಯ ಉಸಿರಾಟ ವಿಭಾಗದ ಮುಖ್ಯಸ್ಥ ಡಾ.ವಿವೇಕ್ ನಂಗಿಯಾ, ‘ನಮ್ಮ ಒಪಿಡಿಗಳು 70-80% ರಷ್ಟು ಕೋವಿಡ್ ನಂತರದ ರೋಗಿಗಳಿಂದ ತುಂಬಿಹೋಗಿವೆ. ಸಾಮಾನ್ಯವಾಗಿ, 65 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಲ್ಲಿ ಶ್ವಾಸಕೋಶದ ಫೈಬ್ರೋಸಿಸ್ ಅನ್ನು ನಾವು ನೋಡುತ್ತೇವೆ. ಆದರೆ ಈ ಸಮಯದಲ್ಲಿ, ಮಧ್ಯ ವಯಸ್ಕ ಜನರು, ಕಿರಿಯ ರೋಗಿಗಳು ಮತ್ತು ಮಕ್ಕಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸಲಾಗಿದೆ. ಕೋವಿಡ್‌ನಿಂದ ಗುಣಮುಖರಾದ ನಂತರವೂ ಆಮ್ಲಜನಕದ ಬೆಂಬಲದಲ್ಲಿರುವ ರೋಗಿಗಳಿದ್ದಾರೆ ಎಂದಿದ್ದಾರೆ.
ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳು ನಂತರ ಹೆಚ್ಚಿನ ಪ್ರಮಾಣದ ಜ್ವರದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸುರಂಜಿತ್ ಚಟರ್ಜಿ, “3 ಮತ್ತು 4 ನೇ ವಾರದ ಚೇತರಿಕೆಯ ನಂತರ ಸಹ ನಾವು ತೀವ್ರ ಜ್ವರದಿಂದ ಬಳಲುತ್ತಿರುವ ಬಹಳಷ್ಟು ರೋಗಿಗಳನ್ನು ನೋಡುತ್ತಿದ್ದೇವೆ. ಮೊದಲ ಅಲೆಯಲ್ಲಿಯೂ ಜ್ವರ ಇತ್ತು. ಆದರೆ ಈ ಸಮಯದಲ್ಲಿ ಸ್ಟೀರಾಯ್ಡ್‌ಗಳನ್ನು ಸಹ ಬಳಸಲಾಗಿದೆ, ಆದ್ದರಿಂದ ಇದು ಕೇವಲ ಉರಿಯೂತವೋ ಅಥವಾ ದ್ವಿತೀಯ ಸೋಂಕಿನ ಕಾರಣವೋ ಎಂದು ನಾವು ಗೊಂದಲಕ್ಕೊಳಗಾಗಿದ್ದೇವೆ. ಕಪ್ಪು ಶಿಲೀಂದ್ರ ಅಥವಾ ಶ್ವಾಸಕೋಶದ ಇತರ ಸೋಂಕುಗಳೂ ಕಾಣಿಸಿಕೊಳ್ಳುತ್ತಿವೆ” ಎಂದಿದ್ದಾರೆ.
ಕೆಲವು ರೋಗಿಗಳಿಗೆ, ಕೋವಿಡ್ ನಂತರದ ಲಕ್ಷಣಗಳು ತೀವ್ರವಾಗಿದ್ದರಿಂದ ಅವರನ್ನು ಮತ್ತೆ ತೀವ್ರ ನಿಗಾ ಚಿಕಿತ್ಸೆಗೆ ಸೇರಿಸಲಾಗುತ್ತಿದೆ.
ಫೋರ್ಟಿಸ್ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್‌ನ ತೀವ್ರ ನಿಗಾ ಘಟಕದ ಹೆಚ್ಚುವರಿ ನಿರ್ದೇಶಕ ಡಾ.ರಜತ್ ಅಗರ್ವಾಲ್, ‘ಪ್ರತಿದಿನ 3-4 ರೋಗಿಗಳು ವಿವಿಧ ಸಮಸ್ಯೆಗಳೊಂದಿಗೆ ನಮ್ಮ ತೀವ್ರ ನಿಗಾ ಘಟಕಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಹುಪಾಲು ಜನರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಈಗ ದೈನಂದಿನ ಪ್ರಕರಣಗಳು ಸುಮಾರು 500ಕ್ಕೆ ಇಳಿದಿದೆ. ಆದರೆ ಕೋವಿಡ್‌ನಿಂದ ಗುಣಮುಖರಾದ ಹಲವರಲ್ಲಿ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಇದನ್ನೂ ಓದಿ; ರೋಗನಿರೋಧಕತೆ ಮತ್ತು ಲಸಿಕೆ; ಸಂಶೋಧನೆಯ ಇತಿಹಾಸ ಮತ್ತು ವಿಜ್ಞಾನ: ಭಾಗ-1


