Homeಮುಖಪುಟರೋಗನಿರೋಧಕತೆ ಮತ್ತು ಲಸಿಕೆ; ಸಂಶೋಧನೆಯ ಇತಿಹಾಸ ಮತ್ತು ವಿಜ್ಞಾನ: ಭಾಗ-1

ರೋಗನಿರೋಧಕತೆ ಮತ್ತು ಲಸಿಕೆ; ಸಂಶೋಧನೆಯ ಇತಿಹಾಸ ಮತ್ತು ವಿಜ್ಞಾನ: ಭಾಗ-1

- Advertisement -
- Advertisement -

ವೈರಸ್‌ಗಳು ಮಾನವರ ಅತ್ಯಂತ ಸಶಕ್ತ ವೈರಿಗಳು (ಸ್ವತಃ ಮಾನವನನ್ನೇ ಹೊರತುಪಡಿಸಿ). ದೇಹದ ಕೋಶಗಳೊಂದಿಗೆ ಇರುವ ನಿಕಟ ಒಡನಾಟದಿಂದಾಗಿ ವೈರಸ್‌ಗಳು ಔಷಧಿಗಳು ಅಥವಾ ಇತರ ಕೃತಕ ಆಯುಧಗಳಿಂದ ಸಾಯುವುದಿಲ್ಲ. ಆದಾಗ್ಯೂ, ಮಾನವ ಅವುಗಳ ವಿರುದ್ಧ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಯಶಸ್ವಿಯಾಗಿ ಹೋರಾಟ ಮಾಡುತ್ತಲಿದ್ದಾನೆ. ಮಾನವ ಜೀವಿಯು ರೋಗಗಳ ವಿರುದ್ಧ ಅತ್ಯಂತ ಪ್ರಭಾವಶಾಲಿಯಾದ ನೈಸರ್ಗಿಕವಾದ ರಕ್ಷಣೆಯನ್ನೂ ಹೊಂದಿದೆ.

14ನೇ ಶತಮಾನದ ಕಪ್ಪು ಸಾವು (ಬ್ಲ್ಯಾಕ್ ಡೆತ್) ಅಥವಾ ಭೀಕರ ಪ್ಲೇಗ್‌ಅನ್ನೇ ನೋಡಿ. ಅತ್ಯಂತ ಹೊಲಸಾದ, ಸ್ವಚ್ಛತೆ ಮತ್ತು ನೈರ್ಮಲ್ಯದ ಯಾವುದೇ ಆಧುನಿಕ ಪರಿಕಲ್ಪನೆಗಳನ್ನು ಕಾಣದ, ಪ್ಲಂಬಿಂಗ್ ಹೊಂದಿರದ, ಯಾವುದೇ ರೀತಿಯ ಸರಿಯಾದ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿರದ, ಅತ್ಯಂತ ಹೆಚ್ಚಿನ ಜನಸಂದಣಿ ಹೊಂದಿದ ಅಸಹಾಯಕ ಯುರೋಪ್‌ಅನ್ನು ಈ ಪ್ಲೇಗ್ ಎಂಬ ರೋಗ ದಾಳಿ ಮಾಡಿತು. ಹೌದು ಖಂಡಿತವಾಗಿಯೂ ಜನರು ತಮ್ಮ ಹಳ್ಳಿಗಳಿಂದ ತಪ್ಪಿಸಿಕೊಂಡು ಬೇರೆಡೆ ಓಡಿಹೋದರು. ಆದರೆ, ಇವರುಗಳು ಆ ಸಾಂಕ್ರಾಮಿಕವನ್ನು ಬೇಗನೇ ಎಲ್ಲೆಡೆ ಹರಡುವಂತೆ ಮಾತ್ರ ಮಾಡಿದರು. ಇದೆಲ್ಲಾ ಆದಾಗ್ಯೂ, ಮುಕ್ಕಾಲು ಭಾಗ ಜನರು ಈ ಸೋಂಕನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಇಂತಹ ಸಂದರ್ಭದಲ್ಲಿ ಕಾಲು ಭಾಗ ಜನರು ಹೇಗೆ ಸತ್ತರು ಎಂಬುದು ಅಚ್ಚರಿಯಲ್ಲ; ಅಚ್ಚರಿ ನಾಲ್ವರಲ್ಲಿ ಮೂರು ಜನರು ಉಳಿದುಕೊಂಡಿದ್ದು.

ಯಾವುದೇ ಒಂದು ರೋಗಕ್ಕೆ ನೈಸರ್ಗಿಕ ಪ್ರತಿರೋಧ ಎಂಬುದು ಇರುವುದು ತುಂಬಾ ಸ್ಪಷ್ಟ. ಒಂದು ಗಂಭೀರ ಸಾಂಕ್ರಾಮಿಕ ರೋಗಕ್ಕೆ ಒಡ್ಡಿಕೊಂಡವರಲ್ಲಿ ಕೆಲವರದ್ದು ಸೌಮ್ಯವಾದ ತೀವ್ರವಲ್ಲದ ಪ್ರಕರಣಗಳಾದರೆ, ಕೆಲವರದ್ದು ತುಂಬಾ ತೀವ್ರವಾಗಿರುತ್ತವೆ ಹಾಗೂ ಕೆಲವರು ಸತ್ತುಹೋಗುತ್ತಾರೆ. ಇದರೊಂದಿಗೆ ಇನ್ನೊಂದು ಸಂಗತಿಯಿದೆ; ಅದು ಸಂಪೂರ್ಣ ರಕ್ಷಣೆ ಅಥವಾ ಇಮ್ಯುನಿಟಿ. ಇದು ಕೆಲವು ಸಲ ಜನ್ಮಜಾತವಾಗಿದ್ದರೆ ಕೆಲವು ಸಲ ಬೆಳೆಯುತ್ತ ಪಡೆದಕೊಂಡಿದ್ದಾಗಿರುತ್ತದೆ. ಉದಾಹರಣೆಗೆ ದಡಾರ, ಮಂಪ್ಸ್ ಅಥವಾ ಚಿಕನ್‌ಪಾಕ್ಸ್‌ಗಳು ಒಂದು ಸಲ ಒಬ್ಬ ವ್ಯಕ್ತಿಗೆ ಬಂದು ಹೋದರೆ, ಆ ವ್ಯಕ್ತಿ ಸಾಮಾನ್ಯವಾಗಿ ತನ್ನ ಜೀವದುದ್ದಕ್ಕೂ ಆ ನಿರ್ದಿಷ್ಟ ರೋಗಕ್ಕೆ ಪ್ರತಿರೋಧ ಹೊಂದಿರುತ್ತಾಳೆ/ನೆ.

ಅಂದಹಾಗೇ ಈ ಮೂರು ರೋಗಗಳು ಬರುವುದು ವೈರಸ್‌ನಿಂದಾಗಿ. ಆದರೂ ತುಲನಾತ್ಮಕವಾಗಿ ಅವುಗಳು ಗಂಭೀರವಲ್ಲದ ಸೋಂಕುಗಳಾಗಿವೆ, ತುಂಬಾ ವಿರಳವಾಗಿ ಈ ರೋಗಗಳಿಂದ ಯಾರಾದರೂ ಸಾಯುತ್ತಾರೆ. ದಡಾರ/ಮೀಸಲ್ಸ್ ಎಂಬ ರೋಗದಲ್ಲಿ ತುಂಬಾ ಸೌಮ್ಯವಾದ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಮಕ್ಕಳಲ್ಲಂತೂ ಗಂಭೀರ ಲಕ್ಷಣಗಳು ಕಾಣಿಸಕೊಳ್ಳುವುದಿಲ್ಲ. ಹೇಗೆ ನಮ್ಮ ದೇಹವು ಈ ವೈರಸ್‌ಗಳೊಂದಿಗೆ ಸೆಣೆಸುತ್ತದೆ ಹಾಗೂ ಮುಂದೆಂದೂ ಅದು ತೊಂದರೆ ಕೊಡದೇ ಹಾಗೆ ತನ್ನನ್ನು ತಾನು ಗಟ್ಟಿಗೊಳಿಸುತ್ತದೆ? ಇದಕ್ಕೆ ಉತ್ತರ ಆಧುನಿಕ ವೈದ್ಯಕೀಯ ವಿಜ್ಞಾನದ ಒಂದು ಅತ್ಯಂತ ಕುತೂಹಲಕಾರಿಯಾದ ಅಧ್ಯಾಯದಲ್ಲಿದೆ. ಹಾಗೂ ಈ ರೋಚಕ ಕಥೆಯ ಆರಂಭಕ್ಕೆ ಹೋಗಬೇಕಾದರೆ ನಾವು ಮೊದಲು ಸ್ಮಾಲ್‌ಪಾಕ್ಸ್ ಅಂದರೆ ಸಿಡುಬು ರೋಗವನ್ನು ಹೇಗೆ ಜಯಿಸಲಾಯಿತು ಎಂಬುದನ್ನು ನೋಡಬೇಕು.

ಹದಿನೆಂಟನೆಯ ಶತಮಾನದ ಅಂತ್ಯದ ತನಕ ಸ್ಮಾಲ್‌ಪಾಕ್ಸ್/ಸಿಡುಬು ಎಂಬುದು ಅತ್ಯಂತ ಭಯಾನಕವಾದ ರೋಗವಾಗಿತ್ತು. ಅದರಿಂದ ಜನರು ಸಾಯುತ್ತಾರೆ ಎಂಬ ಕಾರಣಕ್ಕಷ್ಟೇ ಅಲ್ಲದೇ, ಅದರಿಂದ ಚೇತರಿಸಿಕೊಂಡವರು ಖಾಯಂ ಆಗಿ ವಿರೂಪಗೊಳ್ಳುತ್ತಿದ್ದರು ಎಂಬ ಕಾರಣಕ್ಕಾಗಿಯೂ. ಒಂದು ಗಂಭೀರವಲ್ಲದ ಪ್ರಕರಣದಲ್ಲಿ ಚರ್ಮದ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳಬಹುದಿತ್ತು, ಒಂದು ಗಂಭೀರ ಪ್ರಕರಣದಲ್ಲಿ ಸೌಂದರ್ಯ ಎಂಬುದೆಲ್ಲವೂ ಸಂಪೂರ್ಣವಾಗಿ ನಾಶವಾಗಿ, ಮನುಷ್ಯತ್ವವೂ ಕಾಣೆಯಾಗಬಹುದಾದಷ್ಟು ಗಂಭೀರವಾಗಿರುತ್ತಿದ್ದವು. ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣ ಜನರು ಮುಖದ ಮೇಲೆ ಸಿಡುಬಿನ ಗುರುತುಗಳನ್ನು ಹೊಂದಿರುತ್ತಿದ್ದರು. ಹಾಗೂ ಯಾರಿಗೆ ತಗಲಿಲ್ಲವೋ ಅವರು ಆ ಸೋಂಕನ್ನು ತಗುಲಿಸಿಕೊಳ್ಳುವ ಭಯದಲ್ಲಿ ಸದಾಕಾಲ ಇರುವಂತಿತ್ತು.

PC : Medical News Today

ಹದಿನೇಳನೇ ಶತಮಾನದಲ್ಲಿ ಟರ್ಕಿಯ ಜನರು ಸಿಡುಬಿನ ಗಂಭೀರವಲ್ಲದ ಸೋಂಕನ್ನು ಉದ್ದೇಶಪೂರ್ವಕವಾಗಿ ತಗುಲಿಸಿಕೊಳ್ಳಲಾರಂಭಿಸಿದರು. ಹಾಗೆ ಮಾಡುವುದರಿಂದ ಗಂಭೀರ ಸ್ವರೂಪದ ಸಿಡುಬು ರೋಗದಿಂದ ಬಚಾವಾಗಬಹುದು ಎಂಬುದು ಅವರ ಎಣಿಕೆಯಾಗಿತ್ತು. ಒಂದು ಗಂಭೀರವಲ್ಲದ ಸಿಡುಬು ರೋಗ ಹೊಂದಿದ ವ್ಯಕ್ತಿಯ ಬೊಕ್ಕೆಯಿಂದ ಸೀರಮ್ ತೆಗೆದುಕೊಂಡು ಅದರಿಂದ ತಮ್ಮ ದೇಹವನ್ನು ಕರೆದುಕೊಳ್ಳುತ್ತಿದ್ದರು. ಅದರ ಪರಿಣಾಮವಾಗಿ ಕೆಲವು ಸಲ ಗಂಭೀರವಲ್ಲದ ಸೌಮ್ಯ ಅನಾರೋಗ್ಯ ಅನುಭವಿಸುತ್ತಿದ್ದರು, ಕೆಲವು ಸಲ ಗಂಭೀರವಾಗಿ ವಿರೂಪಗೊಳ್ಳುತ್ತಿದ್ದರು ಹಾಗೂ ಕೆಲವು ಸಲ ಯಾವುದರಿಂದ ರಕ್ಷಿಸಿಕೊಳ್ಳಲು ಇದನ್ನೆಲ್ಲ ಮಾಡಿದ್ದರೋ ಅದರಿಂದಲೇ ಸಾಯುತ್ತಿದ್ದರು. ಅದೊಂದು ರಿಸ್ಕಿ ಕೆಲಸವಾಗಿತ್ತು. ಆದರೆ ಆ ರೋಗದ ಆತಂಕ ಎಷ್ಟಿತ್ತೆಂದರೆ, ಅದರಿಂದ ಬಚಾವಾಲು ಜನರು ಆ ರೋಗವನ್ನು ಪಡೆಯುವ ರಿಸ್ಕ್ ಕೂಡ ತೆಗೆದುಕೊಳ್ಳಲು ತಯ್ಯಾರಿದ್ದರು.

ಈ ಪ್ರಯೋಗಗಳ ಬಗ್ಗೆ 1718ರಲ್ಲಿ ಸುಪ್ರಸಿದ್ಧ ಸುಂದರಿ ಲೇಡಿ ಮೇರಿ ವೊರ್ಟ್ಲಿ ಮೊಂಟಾಗೋಗೆ ತಿಳಿಯಿತು ಹಾಗೂ ಅವಳು ತನ್ನ ಗಂಡನೊಂದಿಗೆ ಟರ್ಕಿ ಪ್ರಯಾಣ ಮಾಡುತ್ತಾಳೆ. ಆಗ ಅವಳ ಗಂಡ ಅಲ್ಲಿಯ ರಾಯಭಾರಿಯಾಗಿರುತ್ತಾನೆ. ಅಲ್ಲಿ ಹೋಗಿ ತನ್ನ ಮಕ್ಕಳಿಗೆ ಆ ಪ್ರಯೋಗಕ್ಕೆ ಒಳಗಾಗುವಂತೆ ಮಾಡುತ್ತಾಳೆ. ಅವರು ಯಾವುದೇ ಅಪಾಯವಿಲ್ಲದದೇ ಪಾರಾಗುತ್ತಾರೆ. ಆದರೆ ಇಂಗ್ಲೆಂಡಿನಲ್ಲಿ ಇದರ ಬಗ್ಗೆ ಹೆಚ್ಚಿನ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿಲ್ಲ, ಬಹುಶಃ ಅದಕ್ಕೆ ಕಾರಣ ಲೇಡಿ ಮೊಂಟಾಗೋ ಅನ್ನು ಜನರು ತಿಕ್ಕಲು ಮಹಿಳೆ ಎಂದು ಪರಿಗಣಿಸಿದ್ದರು, ಅದಕ್ಕಾಗಿ ಇರಬಹುದು. ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ, ಝ್ಯಾಬ್‌ಡಿಯಲ್ ಬಾಯ್ಲ್‌ಸ್ಟನ್ ಎಂಬ ಅಮೆರಿಕನ್ ವೈದ್ಯನು ಬೋಸ್ಟನ್‌ನಲ್ಲಿ ಬಂದ ಸಿಡುಬು ಸಾಂಕ್ರಾಮಿಕದ ಸಂದರ್ಭದಲ್ಲಿ 241 ಜನರಿಗೆ ಇನಾಕ್ಯುಲೇಟ್ ಮಾಡಿದ, ಅದರಲ್ಲಿ 6 ಜನ ಸತ್ತರು. ಅದಕ್ಕಾಗಿ ಆ ವೈದ್ಯನ್ನು ಕಟುವಾಗಿ ಟೀಕಿಸಲಾಯಿತು.

ಗ್ಲಾಸ್ಟರ್‌ಶೈರ್‌ನ ಹಳ್ಳಿಗಾಡಿನ ಜನರು ಸಿಡುಬನ್ನು ತಪ್ಪಿಸಲು ತಮ್ಮದೇ ಆದ ಐಡಿಯಾ ಹೊಂದಿದ್ದರು. ಅವರ ನಂಬಿಕೆಯ ಪ್ರಕಾರ ದನಗಳಿಗೆ ಬರುವ, ಕೆಲವೊಮ್ಮೆ ಮನುಷ್ಯರಿಗೂ ಬರುವ ಕೌಪಾಕ್ಸ್ ಅಂದರೆ ದನದ ಸಿಡುಬು ಸೋಂಕಿನಿಂದ ಜನರಿಗೆ ಕೌಪಾಕ್ಸ್ ಮತ್ತು ಸ್ಮಾಲ್‌ಪಾಕ್ಸ್ ಎರಡರಿಂದಲೂ ಪ್ರತಿರೋಧ ಸೃಷ್ಟಿಸಬಲ್ಲದು ಎಂದು. ಇದು ನಿಜವಾಗಿದ್ದರೆ ನಿಜಕ್ಕೂ ಅದ್ಭುತವಾಗಿತ್ತು ಏಕೆಂದರೆ ಕೌಪಾಕ್ಸ್‌ನಿಂದ ಒಂದಿಷ್ಟೇ ಬೊಕ್ಕೆಗಳು ಮೂಡುತ್ತಿದ್ದವು ಹಾಗೂ ಹೆಚ್ಚಿನ ಕಲೆಗಳೂ ಉಳಿಯುತ್ತಿದ್ದಿಲ್ಲ. ಗ್ಲಾಸ್ಟರ್‌ಶೈರ್‌ನ ಒಬ್ಬ ವೈದ್ಯ ಎಡ್ವರ್ಡ್ ಜೆನರ್ ಈ ನಂಬಿಕೆಯಲ್ಲಿ ಏನೋ ತಥ್ಯ ಇರಬಹುದು ಎಂದು ನಿರ್ಧರಿಸಿದ. ಅವನು ಗಮನಿಸಿದ್ದೇನೆಂದರೆ, ಮಿಲ್ಕ್ ಮೇಡ್ ಎಂದು ಕರೆಯಲಾಗುವ ಗೌಳಿಗಿತ್ತಿಯರಿಗೆ ಕೌಪಾಕ್ಸ್ ಸೋಂಕು ತಗುಲುವುದು ಸಾಮಾನ್ಯವಾಗಿತ್ತು ಹಾಗೂ ಅವರಿಗೆ ಸ್ಮಾಲ್‌ಪಾಕ್ಸ್‌ನಿಂದ ಕಲೆಗಳು ಉಂಟಾಗುತ್ತಿದ್ದಿಲ್ಲ ಎಂಬುದು. (ಈ ಕಾರಣಕ್ಕೆ 18ನೇ ಶತಮನಾನದ ಸಾಹಿತ್ಯದಲ್ಲಿ ಗೌಳಿಗಿತ್ತಿಯರ ಸೌಂದರ್ಯದ ಬಗ್ಗೆ ಬರೆಯಲಾಗಿದೆ; ಎಲ್ಲರೂ ಸಿಡುಬಿನ ಕಲೆ ಹೊತ್ತಿರುವ ಸಮಯದಲ್ಲಿ ಈ ಗೌಳಿಗಿತ್ತಿಯರು ಮುಖದಲ್ಲಿ ಕಲೆಗಳಿಲ್ಲದೇ ಸಪೂರವಾಗಿರುತ್ತಿತ್ತು ಎಂಬ ಕಲ್ಪನೆಯಿಂದ). ಅಂದರೆ ಕೌಪಾಕ್ಸ್ ಮತ್ತು ಸ್ಮಾಲ್‌ಪಾಕ್ಸ್ ಎರಡೂ ಒಂದೇ ತೆರನಾದ ಸೋಂಕುಗಳಾಗಿದ್ದವು. ಕೌಪಾಕ್ಸ್ ವಿರುದ್ಧ ಸೃಷ್ಟಿಯಾದ ರಕ್ಷಣಾ ವ್ಯವಸ್ಥೆಯು ಸ್ಮಾಲ್‌ಪಾಕ್ಸ್ ವಿರುದ್ಧವೂ ಸಶಕ್ತವಾಗಿರುವಬಹುದೇ? ಅತ್ಯಂತ ಎಚ್ಚರಿಕೆ ವಹಿಸಿ, ಡಾ. ಜೆನರ್ ಈ ನಂಬಿಕೆಯನ್ನು ಪರೀಕ್ಷಿಸಲು ಶುರುಮಾಡಿದರು. (ಬಹುಶಃ ತನ್ನ ಕುಟುಂಬದವರ ಮೇಲೆಯೇ ಮೊದಲ ಪರೀಕ್ಷೆಗಳನ್ನು ಮಾಡಿರಬಹುದು.) 1796ರಲ್ಲಿ ಅವರು ಸರ್ವೋಚ್ಚ ಪರೀಕ್ಷೆ ಮಾಡಲು ನಿರ್ಧರಿಸಿದರು. ಒಬ್ಬ ಗೌಳಿಗಿತ್ತಿಯ ಕೈ ಮೇಲಿನ ಬೊಕ್ಕೆಯಿಂದ ದ್ರವವನ್ನು ಬಳಸಿ, ಜೇಮ್ಸ್ ಫಿಪ್ಸ್ ಎಂಬ ಎಂಟು ವರ್ಷದ ಬಾಲಕನಿಗೆ ಕೌಪಾಕ್ಸ್ ಇನಾಕ್ಯುಲೇಟ್ ಮಾಡಿದರು. ಎರಡು ತಿಂಗಳ ನಂತರ ಈ ಪರೀಕ್ಷೆಯ ಅತ್ಯಂತ ನಿರ್ಣಾಯಕವಾದ ಭಾಗಕ್ಕೆ ತಲುಪಿದರು ಹಾಗೂ ಆ ಬಾಲಕ ಜೇಮ್ಸ್‌ಗೆ ಡಾ. ಜನರ್ ಸ್ಮಾಲ್‌ಪಾಕ್ಸ್‌ನಿಂದಲೇ ಇನಾಕ್ಯುಲೇಟ್ ಮಾಡಿದರು.

ಆ ಬಾಲಕನಿಗೆ ರೋಗ ತಗುಲಲಿಲ್ಲ. ಅವನು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದ. ಈ ಪ್ರಕ್ರಿಯೆಯನ್ನು ಜೆನರ್ ಅವರು ವ್ಯಾಕ್ಸಿನೇಷನ್ ಎಂದು ಕರೆದರು; ಕೌಪಾಕ್ಸ್‌ಗೆ ಲ್ಯಾಟಿನ್ ಹೆಸರು ವ್ಯಾಕ್ಸಿನಿಯಾ ಎಂತಾಗಿತ್ತು ಹಾಗಾಗಿ. ಈ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಯುರೋಪಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು. ಇದು ವೈದ್ಯಕೀಯ ಇತಿಹಾಸದಲ್ಲಿ ಆದ ಕ್ರಾಂತಿಗಳಲ್ಲೇ ಅತ್ಯಂತ ವಿಶಿಷ್ಟ ಮತ್ತು ಅತ್ಯಂತ ವಿರಳವಾದದ್ದು ಏಕೆಂದರೆ ಈ ಅವಿಷ್ಕಾರವನ್ನು ತುಂಬ ಸುಲಭವಾಗಿ ಅಳವಡಿಸಿಕೊಳ್ಳಲಾಯಿತು ಹಾಗೂ ಇದರಿಂದ ಬಚಾವಾಗಬಹುದು ಎಂದು ಏನನ್ನು ಹೇಳಿದರೂ ಒಪ್ಪಿಕೊಳ್ಳುತ್ತಿದ್ದರು ಎಂದರೆ ಸಿಡುಬು ರೋಗಕ್ಕೆ ಆಗ ಇದ್ದ ಭಯದ ಅಂದಾಜು ಮಾಡಬಹುದು. ವೈದ್ಯಕೀಯ ಉದ್ಯಮದ ನಾಯಕರು ಸಾಧ್ಯವಾದಲ್ಲೆಲ್ಲ ಒಂದಿಷ್ಟು ಅಡೆತಡೆಗಳನ್ನು ಒಡ್ಡಿದ್ದರೂ, ಈ ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ವೈದ್ಯಕೀಯ ಉದ್ಯಮದಿಂದ ತುಂಬ ದುರ್ಬಲವಾದ ಪ್ರತಿರೋಧ ಬಂತು. 1813ರಲ್ಲಿ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್‌ಗೆ ಜೆನರ್ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಅವರು ಹಿಪ್ಪೋಕ್ರಾಟೆಸ್ ಮತ್ತು ಗ್ಯಾಲೆನ ಅವರಿಗೆ ಸಮವಲ್ಲ ಎಂಬ ನೆಲಯಲ್ಲಿ ಅದನ್ನು ನಿರಾಕರಿಸಲಾಯಿತು.

PC : Sporcle, (ಲೂಯಿ ಪಾಶ್ಚರ್)

ಇಂದು ಸ್ಮಾಲ್‌ಪಾಕ್ಸ್ ಅಥವಾ ಸಿಡುಬು ನಾಗರಿಕ ದೇಶಗಳಲ್ಲಿ ಎಲ್ಲಿಯೂ ಇಲ್ಲ, ಆದರೂ ಅದರ ಭಯ ಇನ್ನೂ ಗಟ್ಟಿಯಾಗಿಯೇ ಇದೆ. ಒಂದೇ ಒಂದು ಪ್ರಕರಣ ಎಲ್ಲಿಯಾದರೂ ಕಾಣಿಸಿಕೊಂಡ ವರದಿ ಬಂತೆಂದರೆ ಇಡೀ ಜನರೆಲ್ಲರೂ ಹೊಸ ಲಸಿಕೆಗೋಸ್ಕರ ವೈದ್ಯರ ಬಾಗಿಲು ತಟ್ಟುತ್ತಾರೆ.

ಇತರ ಗಂಭೀರ ರೋಗಗಳಿಗೆ ಇಂತಹದ್ದೇ ಲಸಿಕಾರಣದ ಅವಿಷ್ಕಾರಕ್ಕೆ ಸುಮಾರು ನೂರೈವತ್ತು ವರ್ಷಗಳೇ ಹಿಡಿದವು. ಅದರ ನಂತರದ ದೊಡ್ಡ ಹೆಜ್ಜೆ ಇಟ್ಟಿದ್ದು ಲೂಯಿ ಪಾಸ್ಚರ್. ಅವರು ಹೆಚ್ಚು ಕಡಿಮೆ ಆಕಸ್ಮಿಕವಾಗಿಯೇ ಒಂದು ಗಂಭೀರ ರೋಗವನ್ನು ಸೃಷ್ಟಿಸುವ ಜೀವಾಣುವನ್ನು ದುರ್ಬಲಗೊಳಿಸುವುದರಿಂದ ಆಯಾ ಗಂಭೀರ ರೋಗವನ್ನು ಗಂಭೀರವಲ್ಲದ ಸೌಮ್ಯ ರೋಗವನ್ನಾಗಿ ಪರಿವರ್ತಿಸಬಹುದು ಎಂದು ಕಂಡುಹಿಡಿದರು.

ಪಾಸ್ಚರ್ ಅವರು ಕೋಳಿಗಳಲ್ಲಿ ಕಾಲರಾ ತರುವ ಬ್ಯಾಕ್ಟೀರಿಯಾಗಳ ಮೇಲೆ ಕೆಲಸ ಮಾಡುತ್ತಿದ್ದರು. ಅವರು ಕೋಳಿಗಳ ಚರ್ಮಕ್ಕೆ ಚುಚ್ಚಿದರೆ ಒಂದು ದಿನದ ಒಳಗಾಗಿ ಕೊಲ್ಲುವಷ್ಟು ಮಾರಕವಾದ ವೈರುಲೆಂಟ್ ಒಂದು ಪದಾರ್ಥವನ್ನು ತಯಾರಿಸುತ್ತಿದ್ದರು. ಒಂದು ಸಲ ಒಂದು ವಾರದ ತನಕ ಬಳಸದೇ ಇರುವ ಆ ಪದಾರ್ಥವನ್ನು ಆ ಕೋಳಿಗಳಿಗೆ ಬಳಸಿದರು. ಆಗ ಆ ಕೋಳಿಗಳು ಒಂದಿಷ್ಟು ಅನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಂಡವು. ಆಗ ಪಾಸ್ಟರ್ ಆ ಪದಾರ್ಥ ಕೆಟ್ಟಿರಬಹುದು ಎಂದುಕೊಂಡು, ಹೊಸದಾಗಿ ಮಾರಕವಾದ ಪದಾರ್ಥವನ್ನು ರಚಿಸಿದರು. ಆದರೆ, ಆಗ ಆ ಕೆಟ್ಟುಹೋದ ಪದಾರ್ಥವನ್ನು ಪಡೆದು ಚೇತರಿಸಿಕೊಂಡಿದ್ದ ಕೋಳಿಗಳಿಗೆ ಹೊಸ ಪದಾರ್ಥದಿಂದ ಏನೂ ಆಗಲಿಲ್ಲ. ಅದರಿಂದ ಸ್ಪಷ್ಟವಾಗಿದ್ದೇನೆಂದರೆ, ದುರ್ಬಲವಾದ ಬ್ಯಾಕ್ಟೀರಿಯಾಗಳಿಂದ ಕೋಳಿಗಳು ಅತ್ಯಂತ ಮಾರಕವಾದ ಬ್ಯಾಕ್ಟೀರಿಯಾಗಳ ವಿರುದ್ಧವೂ ಹೋರಾಡುವ ಶಕ್ತಿಯನ್ನು ಪಡೆದುಕೊಂಡಿದ್ದವು.

ಒಂದರ್ಥದಲ್ಲಿ ಪಾಶ್ಚರ್ ಈ ನಿರ್ದಿಷ್ಟ ‘ಸ್ಮಾಲ್‌ಪಾಕ್ಸ್‌’ಗೆ ಕೃತಕವಾದ ‘ಕೌಪಾಕ್ಸ್’ಅನ್ನು ಸೃಷ್ಟಿಸಿದ್ದರು. ಅವರು ಜೆನರ್ ಅವರಿಗೆ ಸಲ್ಲಬೇಕಾಗಿದ್ದ ಗೌರವವನ್ನು ಗುರುತಿಸಿ, ತನ್ನ ಪ್ರಕ್ರಿಯೆಗೆ ವ್ಯಾಕ್ಸಿನೇಷನ್ ಎಂದು ಕರೆದರು, ಮೂಲ ವ್ಯಾಕ್ಸಿನಿಯಾಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ. ಆಗಿನಿಂದ ಯಾವುದೇ ರೋಗದ ವಿರುದ್ಧದ ಇನ್ಯಾಕ್ಯುಲೇಷನ್‌ಗೆ ಈ ಪದವನ್ನೇ ಬಳಸಲಾಗುತ್ತಿದೆ ಹಾಗೂ ಈ ಉದ್ದೇಶಕ್ಕಾಗಿ ಬಳಸಲಾಗುವ ಪದಾರ್ಥವನ್ನು ವ್ಯಾಕ್ಸಿನ್ (ಲಸಿಕೆ) ಎಂದು ಕರೆಯಲಾಗುತ್ತದೆ.

ಪಾಸ್ಚರ್ ಅವರು ರೋಗ ಹರಡುವ ಏಜೆಂಟ್‌ಗಳನ್ನು ದುರ್ಬಲಗೊಳಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸಿದರು. ಉದಾಹರಣೆಗೆ ಅಂಥ್ರ್ಯಾಕ್ಸ್ ಬ್ಯಾಕ್ಟಿರಿಯವನ್ನು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಣಗೊಳಿಸುವುದರಿಂದ ಅದರ ದುರ್ಬಲಗೊಂಡ ಕೊಂಡಿ ನಿರ್ಮಾಣವಾಗುತ್ತೆ ಹಾಗೂ ಅದರಿಂದ ಪ್ರಾಣಿಗಳಿಗೆ ಆ ರೋಗದ ವಿರುದ್ಧ ರೋಗನಿರೋಧಕ ಶಕ್ತಿ ಬರುವಂತೆ ಮಾಡಬಹುದು. ಅಲ್ಲಿಯವರೆಗೆ, ಅಂಥ್ರ್ಯಾಕ್ಸ್ ಎಂಬುದು ಅತ್ಯಂತ ಮಾರಕವಾದ ಹಾಗೂ ಬಹುಬೇಗ ಸೋಂಕು ಹರಡುವ ರೋಗವಾಗಿತ್ತು, ಯಾವುದೇ ಒಂದು ಪ್ರಾಣಿ ಸೋಂಕಿಗೆ ತುತ್ತಾದ ಕೂಡಲೇ ಆ ಪ್ರಾಣಿಯ ಸಂಪೂರ್ಣ ಹಿಂಡನ್ನೇ ಕೊಂದು ಸುಡಲಾಗುತ್ತಿತ್ತು.

ಪಾಸ್ಚರ್ ಅವರಿಗೆ ಅತ್ಯಂತ ಸುಪ್ರಸಿದ್ಧ ಜಯ ಬಂದಿದ್ದು, ಹೈಡ್ರೋಫೋಬಿಯಾ (ನೀರಿನ ಭಯ) ಅಥವಾ ರೇಬೀಸ್ ಎಂಬ ವೈರಸ್‌ನಿಂದ. (ರೇಬೀಸ್ ಎಂಬ ಪದ ಲ್ಯಾಟಿನ್ ರೇವ್ ಎಂಬ ಪದದಿಂದ ಬಂದಿದೆ, ಏಕೆಂದರೆ, ಈ ರೋಗದಲ್ಲಿ ನರಮಂಡಲದ ಮೇಲೆ ಪ್ರಭಾವ ಬೀರಿ, ಹುಚ್ಚುತನ ಎನ್ನಬಹುದಾಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.) ಒಂದು ರೇಬೀಸ್ ನಾಯಿಯಿಂದ ಕಚ್ಚಿಸಿಕೊಂಡ ವ್ಯಕ್ತಿಯು ಒಂದು ಅಥವಾ ಎರಡು ತಿಂಗಳ ಇನ್‌ಕ್ಯುಬೇಷನ್ ಅವಧಿಯ ನಂತರ ಅತ್ಯಂತ ಹಿಂಸಾತ್ಮಕ ಲಕ್ಷಣಗಳು ಕಾಣಿಸಿಕೊಂಡು, ತುಂಬಾ ನೋವಿನಲ್ಲಿ ಸಾಯುತ್ತಾಳೆ/ನೆ.

ಪಾಸ್ಚರ್‌ಗೆ ಗೋಚರವಾಗುವಂತ ಆ ರೋಗದ ಜೀವಾಣುಗಳನ್ನು ಪತ್ತೆಹಚ್ಚಲಾಗಲಿಲ್ಲ. (ಆಗ ವೈರಸ್ ಎಂಬುದರ ಬಗ್ಗೆ ಇನ್ನೂ ಯಾರಿಗೂ ತಿಳಿದಿರಲಿಲ್ಲ.) ಹಾಗಾಗಿ ಆ ಜೀವಾಣುಗಳನ್ನು ಬೆಳೆಸಲು ಜೀವಂತ ಪ್ರಾಣಿಗಳನ್ನು ಬಳಸಬೇಕಾಗಿತ್ತು. ಪಾಸ್ಚರ್ ಒಂದು ಮೊಲದ ಮಿದುಳಿಗೆ ಸೋಂಕನ್ನು ಹೊಂದಿದ ದ್ರವವನ್ನು ಚುಚ್ಚಿ, ಇನ್‌ಕ್ಯುಬೇಷನ್‌ನ ಅವಧಿ ಮುಗಿಸಲು ಕಾಯ್ದು, ನಂತರ ಆ ಮೊಲದ ಸ್ಪೈನಲ್ ಕಾರ್ಡ್‌ನ್ನು ಚಚ್ಚಿ, ಅದರಿಂದ ದ್ರವವನ್ನು ತೆಗೆದು ಇನ್ನೊಂದು ಮೊಲದ ಮಿದುಳಿಗೆ ಚುಚ್ಚುವುದು, ಹಾಗೂ ಇದೇ ಪ್ರಕ್ರಿಯೆಯನ್ನು ಅನೇಕ ಬಾರಿ ಮಾಡಿದರು. ಪಾಸ್ಚರ್ ಆ ಪದಾರ್ಥಗಳನ್ನು ದುರ್ಬಲವಾಗಲು, ಬಹಳಷ್ಟು ಸಮಯ ಕಾಯ್ದು ಕಾಯ್ದು, ನಿರಂತರವಾಗಿ ಮೊಲಗಳ ಮೇಲೆ ಪರೀಕ್ಷಿಸುತ್ತ, ಮೊಲಗಳಿಗೆ ಆ ರೋಗ ಬರದೇ ಇರುವ ತನಕ ಈ ಪ್ರಕ್ರಿಯೆಯನ್ನು ಮಾಡಿದರು. ಆಗ ಆ ದುರ್ಬಲಗೊಂಡ ವೈರಸ್‌ಅನ್ನು ಒಂದು ನಾಯಿಗೆ ಚುಚ್ಚುಮದ್ದಿನ ಮೂಲಕ ನೀಡಿದರು, ಆ ನಾಯಿ ಉಳಿದುಕೊಂಡಿತು. ಕೆಲ ದಿನಗಳ ನಂತರ ಆ ನಾಯಿಗೆ ಹೈಡ್ರೊಫೋಬಿಯಾಅನ್ನು, ಅದರ ಸಂಪೂರ್ಣ ಬಲವನ್ನು ಹೊಂದಿದ ಸೋಂಕನ್ನು ನೀಡುತ್ತಾರೆ ಹಾಗೂ ಆ ನಾಯಿ ರೋಗನಿರೋಧಕವಾಗಿದ್ದನ್ನು ಕಂಡುಕೊಳ್ಳುತ್ತಾರೆ.

1885ರಲ್ಲಿ ಮಾನವರ ಮೇಲೆ ತನ್ನ ಚಿಕಿತ್ಸೆಯನ್ನು ಪ್ರಯೋಗ ಮಾಡುವ ಅವಕಾಶ ಬಂದೊದಗುತ್ತದೆ. ರೇಬೀಸ್ ನಾಯಿಯಿಂದ ಕಚ್ಚಿಸಿಕೊಂಡ 9 ವರ್ಷದ ಬಾಲಕ ಜೋಸೆಫ್ ಮೈಸ್ಟರ್‌ನನ್ನು ಪಾಸ್ಚರ್ ಬಳಿ ತರಲಾಗುತ್ತದೆ. ಸ್ವಾಭಾವಿಕವಾದ ಹಿಂಜರಿಕೆ ಮತ್ತು ಆತಂಕದ ಜೊತೆಗೇ ಪಾಸ್ಚರ್ ಆ ಬಾಲಕನಿಗೆ ಹಲವಾರು ಬಾರಿ ಅತ್ಯಂತ ದುರ್ಬಲಗೊಳಿಸಿದ ವೈರಸ್‌ನಿಂದ ಇನಾಕ್ಯುಲೇಷನ್ ಮಾಡುತ್ತಾರೆ, ಆ ರೋಗದ ಇನ್‌ಕ್ಯುಬೇಷನ್ ಅವಧಿ ಮುಗಿಯುವ ಮುನ್ನ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದು ಎಂಬ ಭರವಸೆಯಲ್ಲಿ. ಆ ಪ್ರಯೋಗ ಯಶಸ್ವಿಯಾಗುತ್ತದೆ, ಆ ಬಾಲಕ ಉಳಿದುಕೊಳ್ಳುತ್ತಾನೆ. (ಮುಂದೆ ಮೈಸ್ಟರ್ ದೊಡ್ಡವನಾಗಿ ಪಾಸ್ಚರ್ ಇನ್‌ಸ್ಟಿಟ್ಯೂಟ್‌ನ ಗೇಟ್‌ಕೀಪರ್ ಆಗಿ ಕೆಲಸ ಮಾಡುತ್ತಾರೆ ಹಾಗೂ 1940 ರಲ್ಲಿ ನಾಜಿ ಸೈನ್ಯವು ಪಾಸ್ಚರ್‌ನ ಕ್ರಿಪ್ಟ್‌ಅನ್ನು (ರಹಸ್ಯ ಕೋಡ್) ತೆಗೆಯಲು ಹೇಳಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.)

PC : Boldsky Kannada

1890ರಲ್ಲಿ ಎಮಿಲ್ ವಾನ್ ವೀರಿಂಗ್ ಎಂಬ ಸೈನ್ಯದ ವೈದ್ಯನಿಗೆ ಕೋಚ್ ಪ್ರಯೋಗಶಾಲೆಯಲ್ಲಿ ಕೆಲಸ ಮಾಡುವಾಗ ಒಂದು ಐಡಿಯಾ ಹೊಳೆಯುತ್ತದೆ. ಒಬ್ಬ ಮನುಷ್ಯನಿಗೆ ಆಯಾ ರೋಗದ ಜೀವಾಣು(ಮೈಕ್ರೋಬ್)ಅನ್ನು, ಅದು ದುರ್ಬಲಗೊಂಡ ಸ್ವರೂಪದಲ್ಲಿದ್ದರೂ, ಅದನ್ನೇಕೆ ನೀಡುವ ರಿಸ್ಕ್ ತೆಗೆದುಕೊಳ್ಳಬೇಕು? ಹೇಗೂ ಆ ರೋಗದ ಏಜೆಂಟ್ ದೇಹದಲ್ಲಿ ಒಂದು ರೋಗನಿರೋಧಕ ಪದಾರ್ಥವನ್ನು ಸೃಷ್ಟಿಸಲು ಕಾರಣವಾಗಿದೆ, ಒಂದು ಪ್ರಾಣಿಗೆ ಆ ಏಜೆಂಟ್‌ನ ಸೋಂಕು ತಗಲಿಸುವುದಕ್ಕಿಂತ, ಅದರಿಂದ ಸೃಷ್ಟಿಯಾದ ಪದಾರ್ಥವನ್ನು ತೆಗೆದು, ಅದನ್ನು ಮನುಷ್ಯರೋಗಿಗೆ ಚುಚ್ಚುಮದ್ದಿನ ಮೂಲಕ ನೀಡಿದರೆ?

ಈ ಯೋಜನೆ ನಿಜವಾಗಿಯೂ ಕೆಲಸ ಮಾಡುತ್ತೆ ಎಂಬುದನ್ನು ವೀರಿಂಗ್ ಕಂಡುಕೊಂಡರು. ಆ ರಕ್ಷಣಾತ್ಮಕ ಪದಾರ್ಥವು ರಕ್ತದ ಸೀರಂನೊಂದಿಗೆ ಸೇರಿಕೊಂಡಿತು ಹಾಗೂ ವೀರಿಂಗ್ ಅದಕ್ಕೆ ಆಂಟಿಟಾಕ್ಸಿನ್ ಎಂದು ಕರೆದರು. ಪ್ರಾಣಿಗಳು ಟೆಟನಸ್ ಮತ್ತು ಡಿಪ್ತೀರಿಯಾದ ವಿರುದ್ಧ ಆಂಟಿಟಾಕ್ಸಿನ್ ಸೃಷ್ಟಿಸುವಂತೆ ಮಾಡಿದರು. ಒಂದು ಮಗುವಿನ ಮೇಲೆ ಪ್ರಯೋಗ ಮಾಡಿದ ಡಿಪ್ತೀರಿಯಾ ಆಂಟಿಟಾಕ್ಸಿನ್ ಬಳಕೆ ಎಷ್ಟು ಯಶಸ್ವಿಯಾಗಿತ್ತೆಂದರೆ, ಆ ಚಿಕಿತ್ಸೆಯನ್ನು ಕೂಡಲೇ ಎಲ್ಲೆಡೆ ಅಳವಡಿಸಿಕೊಳ್ಳಲಾಯಿತು ಹಾಗೂ ಡಿಪ್ತೀರಿಯಾದಿಂದ ಆಗುವ ಸಾವಿನ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಯಿತು.

ಪಾಲ್ ಇರ್ಲಿಕ್ (ಇವರು ಮುಂದೆ ಸಿಫಿಲಿಸ್‌ಗಾಗಿ ಮ್ಯಾಜಿಕ್ ಬುಲೆಟ್‌ನ್ನು ಕಂಡುಹಿಡಿದವರು) ವಾನ್ ವೀರಿಂಗ್ ಜೊತೆಗೆ ಕೆಲಸ ಮಾಡುತ್ತಿದ್ದರು, ಬಹುಶಃ ಇವರೇ ಆಂಟಿಟಾಕ್ಸಿನ್ ಸರಿಯಾದ ಡೋಸೇಜ್‌ಗಳನ್ನು ಲೆಕ್ಕಹಾಕುತ್ತಿದ್ದರು. ಅವರು ನಂತರ ವಾನ್ ವೀರಿಂಗ್ ಜೊತೆಗೆ ಸಂಬಂಧ ಕಡಿದುಕೊಂಡು (ಇರ್ಲಿಕ್ ಅತ್ಯಂತ ಸಿಡುಕಿನ ಸ್ವಭಾವದವರಾಗಿದ್ದರಿಂದ ಯಾರ ಜೊತೆಗೂ ಕೆಲಸ ಮಾಡುವುದು ಸುಲಭವಾಗಿರಲಿಲ್ಲ) ಈ ಸೀರಂ ಥೆರಪಿಯ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಲು ಹೋದರು. 1901ರಲ್ಲಿ ವಾನ್ ವೀರಿಂಗ್‌ಗೆ ಔಷಧಶಾಸ್ತ್ರ ಮತ್ತು ಶರೀರವಿಜ್ಞಾನದ ನೊಬೆಲ್ ಪ್ರಶಸ್ತಿ ಬಂದಿತು. (ಆ ವರ್ಷದಿಂದಲೇ ನೊಬೆಲ್ ಪ್ರಶಸ್ತಿ ಕೊಡಲು ಆರಂಭಿಸಲಾಗಿತ್ತು.) ಇರ್ಲಿಕ್‌ಗೂ 1908ರಲ್ಲಿ ಒಬ್ಬ ರಷಿಯಾದ ಜೀವಶಾಸ್ತ್ರಜ್ಞರ ಜೊತಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ರಕ್ತದಲ್ಲಿ ಆಯಾ ಆಂಟಿಟಾಕ್ಸಿನ್ ಇರುವ ತನಕ ಮಾತ್ರ ಅದರಿಂದ ಸೃಷ್ಟಿಯಾದ ರೋಗ ನಿರೋಧಕ ಶಕ್ತಿ ಇರುತ್ತದೆ. ಆದರೆ ಫ್ರಾನ್ಸಿನ ಗ್ಯಾಸ್ಟನ್ ರಮೊನ್ ಎಂಬ ಬ್ಯಾಕ್ಟಿರಿಯಾ ತಜ್ಞ ಕಂಡುಕೊಂಡಿದ್ದೇನೆಂದರೆ, ಡಿಪ್ತೀರಿಯ ಅಥವಾ ಟೆಟನಸ್‌ನ ಟಾಕ್ಸಿನ್‌ಅನ್ನು ಫಾರ್ಮಾಲ್ಡಿಹೈಡ್ ಅಥವಾ ಶಾಖದಿಂದ ಸಂಸ್ಕರಿಸುವುದರಿಂದ ಅದರ ರಚನೆ ಬದಲಾಗುತ್ತದೆ ಹಾಗೂ ಆ ಬದಲಾದ ರಚನೆಯಿಂದ ನಿರ್ಮಿತವಾದ ಹೊಸ ಪದಾರ್ಥವನ್ನು (ಅದನ್ನು ಟಾಕ್ಸಾಯ್ಡ್ ಎಂದು ಕರೆಯಲಾಗುತ್ತದೆ.) ಸುರಕ್ಷಿತವಾಗಿ ಮಾನವ ದೇಹಕ್ಕೆ ಚುಚ್ಚುಮದ್ದಿನ ಮೂಲಕ ನೀಡಬಹುದು. ಸ್ವತಃ ರೋಗಿಯ ದೇಹದಿಂದ ನಿರ್ಮಿಸಲಾದ ಆಂಟಿಟಾಕ್ಸಿನ್ ಪ್ರಾಣಿಗಳಿಂದ ಮಾಡಿದ್ದಕ್ಕಿಂತ ಹೆಚ್ಚು ಕಾಲ ಬಾಳುವುದು ಹಾಗೂ ಅದಕ್ಕಿಂತ ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನು ಬೆಳೆಸಲು ಅಗತ್ಯ ಬಿದ್ದಾಗ ಟಾಕ್ಸಾಯ್ಡ್‌ಗಳ ಹೊಸ ಡೋಸ್‌ಗಳನ್ನು ನೀಡಬಹುದು. 1925ರಲ್ಲಿ ಟಾಕ್ಸಾಯ್ಡ್ ಪರಚಿಯಿಸಿದ ನಂತರ ಡಿಪ್ತೀರಿಯಾ ರೋಗದ ಬಗ್ಗೆ ಇದ್ದ ಭೀತಿ ಸಂಪೂರ್ಣವಾಗಿ ಕಾಣೆಯಾಯಿತು.

ಒಂದು ರೋಗದ ಇರುವಿಕೆಯನ್ನು ಪತ್ತೆಹಚ್ಚಲು ಸೀರಂನ ರಿಯಾಕ್ಷನ್‌ಗಳನ್ನು ಬಳಸಲಾಗುತ್ತಿತ್ತು. ಇದರ ಉತ್ತಮ ಉದಾಹರಣೆಯೆಂದರೆ, ಸಿಫಿಲಿಸ್ ಪತ್ತೆಹಚ್ಚಲು 1906ರಲ್ಲಿ ಆಗಸ್ಟ್ ವೊನ್ ವಾಸರ್ ಮಾನ್ ಎಂಬ ಜರ್ಮನಿಯ ಬ್ಯಾಕ್ಟಿರಿಯಾ ತಜ್ಞರು ವಾಸರ್‌ಮಾನ್ ಟೆಸ್ಟ್ ಅನ್ನು ಪರಿಚಯಿಸಿದರು. ಇದರ ಆಧಾರವಾಗಿದ್ದು ಜೂಲ್ಸ್ ಬೊರ್ಡೆ ಎಂಬ ಬೆಲ್ಜಿಯನ್ ಬ್ಯಾಕ್ಟಿರಿಯಾ ತಜ್ಞರ ಅವಿಷ್ಕಾರ, ಅವರು ಕಾಂಪ್ಲಿಮೆಂಟ್ ಎಂದು ಮುಂದೆ ಕರೆಯಲಾದ ಸೀರಂ ಫ್ರ್ಯಾಕ್ಷನ್ ಬಗ್ಗೆ ಕೆಲಸ ಮಾಡಿದ್ದರು. 1919ರಲ್ಲಿ ಬೊರ್ಡೆ ಅವರಿಗೆ ಔಷಧಶಾಸ್ತ್ರ ಮತ್ತು ಶರೀರಶಾಸ್ತ್ರದ ನೊಬೆಲ್ ನೀಡಲಾಯಿತು.

ರೇಬೀಸ್‌ನ ವೈರಸ್‌ನೊಂದಿಗೆ ಪಾಸ್ಚರ್ ಅವರು ಮಾಡಿದ ದೀರ್ಘ ಪ್ರಯಾಸಗಳು ತೋರಿಸಿದ್ದೇನೆಂದರೆ, ವೈರಸ್‌ಗಳೊಂದಿಗೆ ಕೆಲಸ ಮಾಡುವುದು ಅತ್ಯಂತ ಕಷ್ಟ ಎಂದು. ಬ್ಯಾಕ್ಟಿರಿಯಾಗಳನ್ನು ಟೆಸ್ಟ್ ಟ್ಯೂಬ್‌ನಲ್ಲಿ ಕೃತಕ ಮಾಧ್ಯಮಗಳಲ್ಲಿ ಸಂಸ್ಕರಣೆ ಮಾಡುವುದು, ದುರ್ಬಲ ಮಾಡುವುದು, ಅವುಗಳನ್ನು ಬದಲಾಯಿಸುವುದು ಸಾಧ್ಯವಿತ್ತು ಆದರೆ ವೈರಸ್‌ಗಳನ್ನು ಹಾಗೆ ಮಾಡಲು ಆಗುತ್ತಿದ್ದಿಲ್ಲ.

ವೈರಸ್‌ಗಳನ್ನು ಕೇವಲ ಜೀವಂತ ಕೋಶಗಳಲ್ಲಿ ಮಾತ್ರ ಬೆಳೆಸಬಹುದು. ಸಿಡುಬು/ಸ್ಮಾಲ್‌ಪಾಕ್ಸ್‌ನ ಪ್ರಕರಣದಲ್ಲಿ ಆ ಪ್ರಾಯೋಗಿಕ ಪದಾರ್ಥ(ಕೌಪಾಕ್ಸ್ ವೈರಸ್)ದ ಜೀವಂತ ಅತಿಥೇಯರಾಗಿದ್ದದ್ದು ದನಗಳು ಮತ್ತು ಗೌಳಿಗಿತ್ತಿಯರು. ರೇಬೀಸ್‌ಗಾಗಿ ಪಾಸ್ಚರ್ ಮೊಲಗಳನ್ನು ಬಳಸಿದರು. ಆದರೆ. ಜೀವಂತ ಪ್ರಾಣಿಗಳು ಅಷ್ಟು ಸೂಕ್ತವಲ್ಲ, ಅವುಗಳು ಸೂಕ್ಷ್ಮಾಣುಜೀವಿಗಳನ್ನು ಸಂಸ್ಕರಣೆ ಮಾಡಲು ಅತ್ಯಂತ ದುಬಾರಿಯಾದ, ಹಾಗೂ ತುಂಬಾ ಸಮಯ ಹಿಡಿಯುವ ಮಾಧ್ಯಮಗಳಾಗಿರುತ್ತವೆ.

20ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಲೆಕ್ಸಿಸ್ ಕಾರೆಲ್ ಎಂಬ ಫ್ರೆಂಚ್ ಜೀವವಿಜ್ಞಾನಿಯು ಒಂದು ಅವಿಷ್ಕಾರ ಮಾಡಿ ಸುಪ್ರಸಿದ್ಧರಾದರು; ಅವರು ಒಂದು ಟೆಸ್ಟ್ ಟ್ಯೂಬ್‌ನಲ್ಲಿ ಜೀವಕೋಶಗಳ ಭಾಗಗಳನ್ನು ಜೀವಂತವಾಗಿ ಇಡಬಹುದು ಎಂಬುದನ್ನು ತೋರಿಸಿಕೊಟ್ಟರು, ಅದು ವೈದ್ಯಕೀಯ ಸಂಶೋಧನೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿ ಪರಣಮಿಸಿತು. ಕಾರೆಲ್ ಅವರು ಒಬ್ಬ ಸರ್ಜನ್ ಆಗಿ ಕೆಲಸ ಮಾಡುವಾಗ ಇದರ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ಪ್ರಾಣಿಗಳ ರಕ್ತನಾಳಗಳು ಮತ್ತು ಅಂಗಗಳನ್ನು ಟ್ರಾನ್ಸ್‌ಪ್ಲಾಂಟ್ ಮಾಡುವ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದರು. ಅದಕ್ಕಾಗಿ ಅವರಿಗೆ 1912ರಲ್ಲಿ ಔಷಧಶಾಸ್ತ್ರ ಮತ್ತು ಶರೀರಶಾಸ್ತ್ರದ ನೊಬೆಲ್ ಬಂತು. ಸ್ವಾಭಾವಿಕವಾಗಿಯೇ, ಪ್ರಾಣಿಗಳ ದೇಹದಿಂದ ತೆಗೆದ ಅಂಗಗಳನ್ನು ಬೇರೆ ಪ್ರಾಣಿಗೆ ಕಸಿ ಮಾಡುವ ತನಕ ಜೀವಂತವಾಗಿ ಇಡಬೇಕಾಗಿತ್ತು. ಅವುಗಳನ್ನು ಪೋಷಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದರು, ಅದರಲ್ಲಿ ಆ ಕೋಶಗಳಿಗೆ ರಕ್ತ ಹರಿಸುವುದು ಹಾಗೂ ಹಲವಾರು ಸಾರಗಳು ಮತ್ತು ಐಯಾನ್‌ಗಳನ್ನು ಪೂರೈಸುವುದು ಆ ವಿಧಾನದ ಭಾಗವಾಗಿದ್ದವು. ಪ್ರಾಸಂಗಿಕ ಕೊಡುಗೆ ಎಂಬಂತೆ, ಆ ಕೋಶಗಳಿಗೆ ರಕ್ತವನ್ನು ಪಂಪ್ ಮಾಡಲು ಒಂದು ಯಾಂತ್ರಿಕ ಹೃದಯವನ್ನು ಅಭಿವೃದ್ಧಿಪಡಿಸಿದ್ದರು, ಇದರಲ್ಲಿ ಚಾರ್ಲ್ಸ್ ಆಗಸ್ಟಸ್ ಲಿಂಡ್‌ಬರ್ಗ್ ಎಂಬುವವರು ಸಹಾಯ ಮಾಡಿದ್ದರು.

PC : Global News, (ಅಲೆಕ್ಸಿಸ್ ಕಾರೆಲ್)

ಕ್ಯಾರಲ್ ಅವರ ಯಂತ್ರಗಳು ಎಷ್ಟು ಉತ್ತಮವಾಗಿದ್ದವೆಂದರೆ, ಅವುಗಳು ಒಂದು ಕೋಳಿಯ ಭ್ರೂಣದ ಹೃದಯವನ್ನು ಒಂದು ಕೋಳಿಯ ಜೀವಿತಾವಧಿಗಿಂತ 34 ವರ್ಷ ಹೆಚ್ಚುಕಾಲ ಈ ಯಂತ್ರಗಳು ಜೀವಂತವಾಗಿಡಬಲ್ಲವಾಗಿದ್ದವು. ಕ್ಯಾರಲ್ ಅವರು ವೈರಸ್‌ಗಳನ್ನು ಬೆಳೆಸಲು ಟಿಷ್ಯೂ ಕಲ್ಚರ್‌ಗಳನ್ನು ಬಳಸುವ ಪ್ರಯತ್ನವನ್ನೂ ಮಾಡಿ, ಅದರಲ್ಲೂ ಯಶಸ್ವಿಯಾದರು. ಒಂದೇ ಸಮಸ್ಯೆಯೆಂದರೆ, ಈ ವೈರಸ್‌ಗಳೊಂದಿಗೆ ಬ್ಯಾಕ್ಟಿರಿಯಾಗಳೂ ಬೆಳೆಯುತ್ತಿದ್ದವು ಹಾಗಾಗಿ ವೈರಸ್‌ಗಳನ್ನು ಶುದ್ಧವಾಗಿರಿಸಲು ಅತ್ಯಂತ ಆಯಾಸಕರವಾದ ಅಸೆಪ್ಟಿಕ್ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾಗಿತ್ತು, ಇವನ್ನೆಲ್ಲ ಹೋಲಿಸಿದರೆ ಪ್ರಾಣಿಗಳನ್ನು ಈ ಕೆಲಸಕ್ಕೆ ಬಳಸುವುದು ಸುಲಭವಾಗಿ ತೋರುತ್ತಿತ್ತು.

ಈ ಕೋಳಿ-ಭ್ರೂಣದ ಪರಿಕಲ್ಪನೆ ಸರಿಯಾದ ದಾರಿಯಲ್ಲಿತ್ತು ಎನ್ನಬಹುದು. ಕೋಶದ ಒಂದು ತುಣುಕಿಗಿಂತ ಕೋಳಿಯ ಪೂರ್ಣ ಭ್ರೂಣ ಪ್ರಯೋಗಗಳಿಗೆ ಉತ್ತಮವಾಗಿತ್ತು. ಕೋಳಿಯ ಭ್ರೂಣವು ಒಂದು ಸ್ವತಃ ಪರ್ಯಾಪ್ತವಾಗಿದ್ದು, ಮೊಟ್ಟೆಯ ಚಿಪ್ಪಿನಿಂದ ರಕ್ಷಣೆ ಹೊಂದಿದ, ಬ್ಯಾಕ್ಟಿರಿಯಾ ವಿರುದ್ಧ ತನ್ನದೇ ಆದ ರಕ್ಷಣೆ ಹೊಂದಿದ ಹಾಗೂ ಅಗ್ಗವಾಗಿ, ಬೇಕಾದಷ್ಟು ಪ್ರಮಾಣದಲ್ಲಿ ಸಿಗುವಂತಹದ್ದಾಗಿತ್ತು. 1931 ರಲ್ಲಿ ಅರ್ನೆಸ್ಟ್ ವಿಲಿಯಮ್ ಗುಡ್‌ಪ್ಯಾಸ್ಟರ್ ಎಂಬ ಪ್ಯಾಥಾಲಜಿಸ್ಟ್ ಮತ್ತು ಅವರ ಸಹಾಯಕರು ಕೋಳಿಯ ಒಂದು ಭ್ರೂಣಕ್ಕೆ ಒಂದು ವೈರಸ್‌ಅನ್ನು ಕಸಿ ಮಾಡುವಲ್ಲಿ ಯಶಸ್ವಿಯಾದರು. ಮೊತ್ತಮೊದಲ ಬಾರಿಗೆ ಬ್ಯಾಕ್ಟಿರಿಯಾಗಳಂತೆ ಶುದ್ಧ ವೈರಸ್‌ಗಳ ಸಂಸ್ಕರಣೆಯನ್ನು ಮಾಡುವಂತಾಯಿತು.

(ಮುಂದುವರೆಯಲಿದೆ)

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಡಾ. ಐಸಾಕ್ ಅಸಿಮೋವ್

ಡಾ. ಐಸಾಕ್ ಅಸಿಮೋವ್
ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಪ್ರೊಫೆಸರ್ ಆಗಿದ್ದ ದಿವಂಗತ ಐಸಾಕ್ ಅಸಿಮೋವ್, ಸೈನ್ಸ್ ಫಿಕ್ಷನ್ ಬರಹಗಳಿಗೆ ಪ್ರಖ್ಯಾತ. ಅವರ ಐ, ರೊಬೋಟ್, ಫೌಂಡೇಶನ್ ತ್ರಿವಳಿ ಕಾದಂಬರಿಗಳು ಜಗತ್ತಿನೆಲ್ಲಡೆ ಜನಪ್ರಿಯ. ವಿಜ್ಞಾನವನ್ನು ಜನಪ್ರಿಯಗೊಳಿಸಲು ಸಾವಿರಾರು ಲೇಖನಗಳನ್ನು ಅಸಿಮೋವ್ ಬರೆದಿದ್ದಾರೆ.


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...