ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ “ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ”ಯ ಪ್ರಸಾರ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ಪುಸ್ತಕದ ವಿಷಯಗಳನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ಆಡಳಿತರೂಢ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿಗೆ ಈ ಪುಸ್ತಕದ ಕುರಿತು ಮಾತನಾಡಲು ಸ್ಪೀಕರ್ ಅವಕಾಶ ನೀಡುತಿಲ್ಲ. ಸ್ಪೀಕರ್ ನಡೆ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಕಳೆದ 10 ದಿನಗಳಿಂದ ಲೋಕಸಭೆಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಈ ಸಂಬಂಧ 8 ಮಂದಿ ಪ್ರತಿಪಕ್ಷ ಸಂಸದರನ್ನು ಸ್ಪೀಕರ್ ಈಗಾಗಲೇ ಅಮಾನತುಗೊಳಿಸಿದ್ದಾರೆ. ಸ್ಪೀಕರ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಕೂಡ ಮಂಡಿಸಿವೆ.
ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ಸುದ್ದಿ ವೇದಿಕೆಗಳಲ್ಲಿ ನರವಾಣೆ ಅವರ ಪುಸ್ತಕದ ವಿಷಯಗಳು ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ. ದೆಹಲಿ ಪೊಲೀಸರ ವಿಶೇಷ ಘಟಕವು ಪ್ರಕರಣದ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ನರವಾಣೆ ಅವರ ಪುಸ್ತಕದ ಮುದ್ರಣ ಪೂರ್ವ ಪ್ರತಿ ಸಾರ್ವಜನಿಕವಾಗಿ ಹರಿದಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ಸುದ್ದಿ ವೇದಿಕೆಗಳಲ್ಲಿ ಈ ಪುಸ್ತಕದ ವಿಷಯಗಳು ಪ್ರಸಾರವಾಗುತ್ತಿರುವುದನ್ನು ಪತ್ತೆಹಚ್ಚಿದ ಪೊಲೀಸರು, ಈ ಮಾಹಿತಿಯನ್ನು ಅಧಿಕೃತವಾಗಿ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಪುಸ್ತಕದ ಪ್ರಕಟಣೆಗೆ ಅಗತ್ಯವಾದ ಅನುಮತಿಯನ್ನು ಸಂಬಂಧಿತ ಅಧಿಕಾರಿಗಳಿಂದ ಇನ್ನೂ ಪಡೆಯಬೇಕಾಗಿದೆ ಎಂದು ವರದಿ ಹೇಳಿದೆ.
ಪೊಲೀಸರ ಪರಿಶೀಲನೆಯ ಸಮಯದಲ್ಲಿ, ಅದೇ ಶೀರ್ಷಿಕೆಯನ್ನು ಹೊಂದಿರುವ ಪುಸ್ತಕದ ಪಿಡಿಎಫ್ ಪ್ರತಿ ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವುದು ಕಂಡುಬಂದಿದೆ. ಈ ಪ್ರತಿಯನ್ನು ಮೇಲ್ನೋಟಕ್ಕೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಾಶನ ಸಂಸ್ಥೆಯು ಸಿದ್ಧಪಡಿಸಿದಂತೆ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ, ಕೆಲವು ಆನ್‌ಲೈನ್ ಮಾರುಕಟ್ಟೆ ವೇದಿಕೆಗಳು ಈ ಪುಸ್ತಕದ ಅಂತಿಮ ಮುಖಪುಟವನ್ನು ಪ್ರದರ್ಶಿಸುತ್ತಿದ್ದು, ಆ ಪುಸ್ತಕವು ಈಗಾಗಲೇ ಖರೀದಿಗೆ ಲಭ್ಯವಿದೆ ಎನ್ನುವಂತೆ ಬಿಂಬಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇನ್ನೂ ಅನುಮೋದನೆಗೊಳ್ಳದ ಈ ಪುಸ್ತಕದ ಸೋರಿಕೆ ಅಥವಾ ನಿಯಮಗಳ ಉಲ್ಲಂಘನೆಯ ಕುರಿತು ಸಮಗ್ರ ತನಿಖೆ ನಡೆಸಲು ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪ್ರಕಟಣೆಗೂ ಮುನ್ನವೇ ಪುಸ್ತಕದ ಪ್ರತಿಗಳು ಹೇಗೆ ಹೊರಬಂದವು ಎಂಬ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಂಸತ್ತಿನ ಆವರಣದಲ್ಲಿ ಇನ್ನೂ ಪ್ರಕಟವಾಗದ ಈ ಪುಸ್ತಕದ ಭೌತಿಕ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ಬೆನ್ನಲ್ಲೇ ಈ ಎಫ್‌ಐಆರ್ ದಾಖಲಾಗಿದೆ.
ಫೆಬ್ರವರಿ 2ರಿಂದಲೂ ರಾಹುಲ್ ಗಾಂಧಿಯವರು ನರವಾಣೆ ಅವರ ಪುಸ್ತಕದ ಆಯ್ದ ಭಾಗಗಳನ್ನು ಲೋಕಸಭೆಯಲ್ಲಿ ಉಲ್ಲೇಖಿಸಲು ಪ್ರಯತ್ನಿಸುತ್ತಿದ್ದಾರೆ. 2020ರಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂಬ ತಮ್ಮ ವಾದವನ್ನು ಪುಷ್ಟೀಕರಿಸಲು ಅವರು ಈ ಪುಸ್ತಕವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ತಾವು ಕೇವಲ ಈ ಪುಸ್ತಕದ ಆಯ್ದ ಭಾಗಗಳನ್ನು ಪ್ರಕಟಿಸಿದ್ದ ನಿಯತಕಾಲಿಕೆಯ ಲೇಖನವನ್ನಷ್ಟೇ ಉಲ್ಲೇಖಿಸಲು ಉದ್ದೇಶಿಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಅಪ್ರಕಟಿತ ದಾಖಲೆಗಳನ್ನು ಸಂಸತ್ತಿನಲ್ಲಿ ಉಲ್ಲೇಖಿಸುವುದನ್ನು ತಡೆಯುವ ಸಂಸದೀಯ ನಿಯಮಗಳನ್ನು ಮುಂದಿಟ್ಟು, ಸ್ಪೀಕರ್ ಮತ್ತು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನಿರಾಕರಿಸುತ್ತಿದ್ದಾರೆ.
ಸತತ ಮೂರನೇ ದಿನವೂ ಮಾತನಾಡಲು ಅವಕಾಶ ನಿರಾಕರಿಸಿದ ಬಳಿಕ, ಕಳೆದ ಬುಧವಾರ ರಕ್ಷಣಾ ಸಚಿವಾಲಯದ ಅನುಮೋದನೆಗೆ ಬಾಕಿ ಇರುವ ಪುಸ್ತಕದ ಮುದ್ರಿತ ಪ್ರತಿಯನ್ನು ಸಂಸತ್ತಿನ ಆವರಣಕ್ಕೆ ತಂದು ಮಾಧ್ಯಮಗಳ ಕ್ಯಾಮರಾಗಳ ಮುಂದೆ ರಾಹುಲ್ ಗಾಂಧಿ ಪ್ರದರ್ಶಿಸಿದ್ದರು.
ಈ ಬೆಳವಣಿಗೆಯ ನಂತರ ಲೋಕಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, “ಈ ಪುಸ್ತಕ ಇದುವರೆಗೆ ಪ್ರಕಟವೇ ಆಗಿಲ್ಲ ಎಂಬ ಬಗ್ಗೆ ನನಗೆ ವಿಶ್ವಾಸವಿದೆ” ಎಂದು ಹೇಳುವ ಮೂಲಕ ರಾಹುಲ್ ಗಾಂಧಿಯವರ ನಡೆಯನ್ನು ವಿರೋಧಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, “ನೋಡಿ, ಸರ್ಕಾರ ಇಲ್ಲ ಎಂದು ಹೇಳುತ್ತಿರುವ ಪುಸ್ತಕ ಇಲ್ಲಿದೆ” ಎಂದಿದ್ದರು. ಅಲ್ಲದೆ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಹಾಜರಾದರೆ ತಾವು ಖುದ್ದಾಗಿ ಈ ಪುಸ್ತಕವನ್ನು ಅವರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದರು.
ಚೀನಾದೊಂದಿಗಿನ ಸಂಘರ್ಷದ ವೇಳೆ “ಸರ್ಕಾರ ನಮ್ಮನ್ನು ಕೈಬಿಟ್ಟಿತ್ತು, ಏಕಾಂಗಿಯಾಗಿ ಮಾಡಿತ್ತು” ಎಂದು ನರವಾಣೆ ಅವರು ಪುಸ್ತಕದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದೇ ಆ ಸತ್ಯ, ಪುಸ್ತಕವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸದಂತೆ ನಮ್ಮನ್ನು ತಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆದರೆ, ಸರ್ಕಾರ ರಾಹುಲ್ ಗಾಂಧಿಯವರ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಬಿಜೆಪಿ ನಾಯಕರು, ಅಪ್ರಕಟಿತ ಪುಸ್ತಕದ ವಿಷಯಗಳನ್ನು ಉಲ್ಲೇಖಿಸುವುದು ಸಂಸತ್ತಿನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ. ಅಲ್ಲದೆ, ಇಂತಹ ಕ್ರಮವು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡಬಹುದು ಎಂದಿದ್ದಾರೆ.
ಒಂದು ವೇಳೆ ಪುಸ್ತಕದಲ್ಲಿ ಉಲ್ಲೇಖಿಸಲಾದ ಅಂಶಗಳು ನಿಜವಾಗಿದ್ದರೆ, ಲೇಖಕರು (ಜನರಲ್ ನರವಾಣೆ) ಈವರೆಗೆ ನ್ಯಾಯಾಲಯದ ಮೊರೆ ಏಕೆ ಹೋಗಿಲ್ಲ? ಎಂದು ರಕ್ಷಣಾ ಸಚಿವರು ಪ್ರಶ್ನಿಸಿದ್ದಾರೆ.
ಸ್ಥಳೀಯವಾಗಿ ರಾಹುಲ್ ಗಾಂಧಿಯವರು ಪುಸ್ತಕದ ಮುದ್ರಿತ ಪ್ರತಿಯನ್ನು ಪ್ರದರ್ಶಿಸಿದ್ದರೂ ಸಹ, ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಈವರೆಗೆ ಸಾರ್ವಜನಿಕವಾಗಿ ಖರೀದಿಗೆ ಲಭ್ಯವಾಗಿಲ್ಲ. ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್ ರಾಂಡಮ್ ಹೌಸ್ ಈ ಪುಸ್ತಕವನ್ನು ಏಪ್ರಿಲ್ 2024ರಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು ಮತ್ತು 2023ರ ಅಂತ್ಯದ ವೇಳೆಗೆ ಮುಂಗಡ ಕಾಯ್ದಿರಿಸುವಿಕೆಯನ್ನು ಆರಂಭಿಸಿತ್ತು. ಆದರೆ ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಜಾಲತಾಣಗಳಲ್ಲಿ ಕೂಡ ಈ ಪುಸ್ತಕ ‘ಲಭ್ಯವಿಲ್ಲ’ ಎಂದು ತೋರಿಸುತ್ತಿದೆ.


