Homeನ್ಯಾಯ ಪಥಪೌರತ್ವ ಕಾಯ್ದೆ ಹೋರಾಟ: ಜಾಮಿಯಾದಲ್ಲಿ ವಿಕೃತಿ ಮೆರೆದ ದೆಹಲಿ ಪೊಲೀಸರು..

ಪೌರತ್ವ ಕಾಯ್ದೆ ಹೋರಾಟ: ಜಾಮಿಯಾದಲ್ಲಿ ವಿಕೃತಿ ಮೆರೆದ ದೆಹಲಿ ಪೊಲೀಸರು..

ರಾಂಚಿಯ ಅನುಗ್ಯಾ ಎಂಬ ಮಗಳ ಮಾತುಗಳು ದೇಶವನ್ನು ಆಳುವವರು ಮತ್ತು ಅವರೊಂದಿಗೆ ಶರೀಕಾಗಿರುವವರ ಆತ್ಮಸಾಕ್ಷಿಗಳನ್ನು ಇರಿಯಬೇಕಿದೆ... ಆದರೆ ಆತ್ಮಸಾಕ್ಷಿಗಳು ಜೀವಂತವಾಗಿವೆಯೇ?

- Advertisement -
- Advertisement -

ಪೌರತ್ವದಲ್ಲಿ ಭೇದಭಾವ ಎಣಿಸುವ ದುರುದ್ದೇಶದ ಹೊಸ ಕಾಯಿದೆಯನ್ನು ಪ್ರತಿಭಟಿಸಿ ದೇಶದ ಉದ್ದಗಲಕ್ಕೂ ವಿದ್ಯಾರ್ಥಿ ಶಕ್ತಿ ಸಿಡಿದೆದ್ದಿದೆ. ದೆಹಲಿ ಪೊಲೀಸರು ಮೊನ್ನೆ ಭಾನುವಾರ ಕೇಂದ್ರೀಯ ವಿಶ್ವವಿದ್ಯಾಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಆವರಣಕ್ಕೆ ನುಗ್ಗಿ ನಡೆಸಿರುವ ಬರ್ಬರ ದೌರ್ಜನ್ಯ ಈ ಕಿಚ್ಚನ್ನು ಮತ್ತಷ್ಟು ಕೆರಳಿಸಿದೆ. ದಶಕಗಳಿಂದ ಮಲಗಿದ್ದ ದೇಶದ ವಿದ್ಯಾರ್ಥಿಶಕ್ತಿಯನ್ನು ಕೇಂದ್ರ ಸರ್ಕಾರ ಕೆಣಕಿರುವುದು ವಿವೇಕದ ನಡೆ ಅಲ್ಲ.

ಭಿನ್ನಮತ ಮತ್ತು ಪ್ರತಿಭಟನೆ ಜನತಂತ್ರದ ಜೀವಾಳ. ಇಂತಹ ದನಿಗಳೊಂದಿಗೆ ಸಜ್ಜನಿಕೆಯ ಸಂವಾದಕ್ಕೆ ಇಳಿಯುವ ಭಾಷೆಯನ್ನು ಕೇಂದ್ರ ಸರ್ಕಾರ ಕಲಿಯುವ ಸೂಚನೆಗಳಿಲ್ಲ. ತಾವು ಹಿಡಿದಿರುವ ಹಾದಿ ತಪ್ಪೆಂದು ತಿಳಿಯುವವರು ಮಾತ್ರವೇ ಅದನ್ನು ತಿದ್ದಿಕೊಳ್ಳಬಲ್ಲರು. ಸರಿಯೆಂದು ಸಮರ್ಥಿಸಿಕೊಳ್ಳುವವರಿಂದ ತಿದ್ದಿಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಸಾಧ್ಯವಿಲ್ಲ.

ಜಾಮಿಯಾದಲ್ಲಿ ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಸಿಡಿಸಿ, ಮನಸೋ ಇಚ್ಛೆ ಥಳಿಸಲಾಗಿದೆ. ಲೈಬ್ರರಿಯಲ್ಲಿ ಓದಿಕೊಳ್ಳುತ್ತಿದ್ದ ಮತ್ತು ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರನ್ನೂ ಬಿಟ್ಟಿಲ್ಲ. ಈ ಅತಿರೇಕ ನಡೆಯಬಾರದಿತ್ತು ಅಥವಾ ಪೊಲೀಸರು ಸಂಯಮದಿಂದ ವರ್ತಿಸಬೇಕಿತ್ತು ಎಂಬ ಒಂದು ಮಾತು ಕೂಡ ಸರ್ಕಾರದ ಕಡೆಯಿಂದ ಬಂದಿಲ್ಲ. ಬದಲಿಗೆ ಪ್ರಧಾನಿಯವರೇ ಮುಂದೆ ನಿಂತು ಅಲ್ಪಸಂಖ್ಯಾತರ ವಿರುದ್ಧ ಇಷಾರೆ ಮಾಡಿದ್ದಾರೆ. ಬೆಂಕಿ ಹಚ್ಚುತ್ತಿರುವವರು ಯಾರೆಂದು ಅವರ ಉಡುಪುಗಳಿಂದ ಗುರುತು ಹಿಡಿಯಬಹುದು ಎಂಬುದಾಗಿ ಝಾರ್ಖಂಡದ ಬಹಿರಂಗ ಭಾಷಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಭಿನ್ನಾಭಿಪ್ರಾಯ ಹೊಂದಿರುವವರು ಮತ್ತು ಪ್ರತಿಭಟಿಸುವವರನ್ನು ಮುಸಲ್ಮಾನರು ಇಲ್ಲವೇ ಪಾಕಿಸ್ತಾನಿ ಸಮರ್ಥಕರು ಎಂದು ಹೆಸರಿಟ್ಟು ದೇಶದ್ರೋಹಿಗಳೆಂದು ಕರೆಯುವ ಹುನ್ನಾರ ನಿರಂತರ ಮುಂದುವರೆದಿದೆ. ಈ ಧೋರಣೆ ಸರ್ವಾಧಿಕಾರಿ ದೇಶಗಳಿಗೆ ಹೊಂದಬಹುದು. ಆದರೆ ಭಾರತದಂತಹ ಜನತಾಂತ್ರಿಕ ವ್ಯವಸ್ಥೆಯಲ್ಲಿ ಶೋಭಿಸುವುದಿಲ್ಲ. ಅತ್ಯಂತ ದುರದೃಷ್ಟಕರ ವಿದ್ಯಮಾನವಿದು. ಒಂದು ಕೋಮನ್ನು ಧರ್ಮದ ಕಾರಣಕ್ಕಾಗಿಯೇ ಕಟಕಟೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆಯುವಂತೆ ನೀಡುವ ಸತತ ಪ್ರಚೋದನೆ.

ಜಾಮಿಯಾದಲ್ಲಿ ಕೇವಲ ಮುಸಲ್ಮಾನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿಲ್ಲ. 1920ರಲ್ಲಿ ಸ್ಥಾಪಿತವಾದ ಜಾಮಿಯಾ 1988ರಲ್ಲಿ ಅಲ್ಪಸಂಖ್ಯಾತ ಕೇಂದ್ರೀಯ ವಿಶ್ವವಿದ್ಯಾಲಯ ಎನಿಸಿಕೊಂಡಿತು. 2011ರಲ್ಲಿ ಜಾರಿಗೆ ತರಲಾದ ಮೀಸಲು ವ್ಯವಸ್ಥೆಯ ಪ್ರಕಾರ ಶೇ.50ರಷ್ಟು ಸೀಟುಗಳು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಲ್ಲುತ್ತವೆ. ಈ ಪೈಕಿ ಶೇ.30ರಷ್ಟು ಸೀಟುಗಳನ್ನು ಸಾಮಾನ್ಯ ಮುಸ್ಲಿಮರಿಗೆ, ಶೇ.10ರಷ್ಟು ಸೀಟುಗಳನ್ನು ಮುಸ್ಲಿಂ ಮಹಿಳೆಯರಿಗೆ, ಶೇ.10ರಷ್ಟು ಸೀಟುಗಳನ್ನು ಮುಸ್ಲಿಮರಲ್ಲಿನ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಉಳಿದ ಶೇ.50ರಷ್ಟು ಸೀಟುಗಳು ಮುಸ್ಲಿಮೇತರರಿಗೆ ಸಲ್ಲುತ್ತವೆ. ಮುಸ್ಲಿಂ ಸೀಟುಗಳು ಖಾಲಿ ಉಳಿದರೆ ಅವುಗಳನ್ನು ಸಾಮಾನ್ಯ ವರ್ಗಗಳ ಕೋಟಾಕ್ಕೆ ವರ್ಗಾಯಿಸಲಾಗುತ್ತದೆ. ಮುಸಲ್ಮಾನ ಜನಸಂಖ್ಯೆಯೇ ದಟ್ಟವಾಗಿರುವ ಕಿರಿದಾದ ಓಣಿಗಳ ಇಕ್ಕಟ್ಟಿನ ಜನವಸತಿಯ ನಟ್ಟನಡುವೆ ಇದೆ ಜಾಮಿಯಾ. ಭಯೋತ್ಪಾದಕರಿದ್ದಾರೆಂಬ ಆರೋಪ ಹೊತ್ತ ‘ಬಟ್ಲಾ ಹೌಸ್’ ಎನ್ಕೌಂಟರ್ ನಡೆದದ್ದು ಇದೇ ಪ್ರದೇಶದಲ್ಲಿ. ಮುಸ್ಲಿಮರ ವಿರುದ್ಧ ಪೂರ್ವಗ್ರಹಕ್ಕೆ ಇಷ್ಟು ಸಾಲದೇ? ಇದಕ್ಕೆ ಕಲಶವಿಟ್ಟಂತೆ ಪ್ರಧಾನಿಯವರ ಹೇಳಿಕೆ ಹೊರಬೀಳುತ್ತದೆ. ಪೊಲೀಸರು ಇದೇ ಸಮಾಜದಿಂದ ಬಂದವರು. ಸಮಾಜದಲ್ಲಿ ಬಿತ್ತಿ ಬೆಳೆಯಲಾಗುವ ಕೋಮುವಾದೀ ಸೋಂಕು ಅವರನ್ನು ತಟ್ಟದೆ ಬಿಟ್ಟೀತೇ?

ಪ್ರಧಾನಿಯವರು ಮತ್ತು ಗೃಹಮಂತ್ರಿಗಳು ನಿಮಗೇನು ಅನ್ಯಾಯ ಮಾಡಿದ್ದಾರೆ… ಅವರನ್ನು ಯಾಕೆ ವಿರೋಧಿಸುತ್ತೀರಿ ಎಂದು ಹೆಸರು ಹೇಳಿ ವಿದ್ಯಾರ್ಥಿಗಳ ಬುರುಡೆ ಬಿಚ್ಚಿದ್ದಾರೆ. ದೆಹಲಿ ಪೊಲೀಸ್ ಬಲದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ದೇಶದಲ್ಲೇ ತೀರಾ ಕನಿಷ್ಠ. 75 ಸಾವಿರದಷ್ಟು ದೆಹಲಿ ಪೊಲೀಸ್ ಬಲದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕೇವಲ ಶೇ.2. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಎಂಟು ವರ್ಷಗಳ ಹಿಂದೆ ಹೊರಹಾಕಿದ್ದ ಅಂಕಿಅಂಶವಿದು.

ಜಾಮಿಯಾ ಆಡಳಿತದ ಅನುಮತಿಯಿಲ್ಲದೆ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ನುಗ್ಗಿರುವ ಪೊಲೀಸರು ಪುಂಡರಂತೆ ವರ್ತಿಸಿದ್ದಾರೆ. ವಿದ್ಯಾರ್ಥಿಗಳ ಮೂಳೆ ಮುರಿದಿದ್ದಾರೆ. ಅವರ ಮೋಟರ್ ಸೈಕಲ್ಲುಗಳನ್ನು ನುಗ್ಗಾಗಿಸಿದ್ದಾರೆ, ಲೈಟುಗಳು, ಕನ್ನಡಿಗಳು, ಸಿಸಿಟೀವಿ ಕ್ಯಾಮೆರಾಗಳನ್ನು ಒಡೆದು ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಕೆಟ್ಟ ಹೆಸರು ತರಲು ದೆಹಲಿ ಪೊಲೀಸರೇ ಬಸ್ಸುಗಳೊಳಗೆ ಪೆಟ್ರೋಲ್ ಸುರಿಯುತ್ತಿರುವ ವಿಡಿಯೋಗಳು ಮೇಲೆ ತೇಲಿವೆ. (ಬೆಂಕಿ ಆರಿಸುವ ವಿಡಿಯೋಗಳೂ ಇವೆ). ಹೈದರಾಬಾದಿನ ‘ಎನ್ಕೌಂಟರ್ ನ್ಯಾಯದಾನ’ದ ನಂತರ ಕಂಡುಬಂದಿರುವ ಅತ್ಯಂತ ಕಳವಳಕಾರಿ ಪ್ರವೃತ್ತಿಯಿದು.

ವಕೀಲರು ಮತ್ತು ಪೊಲೀಸರ ನಡುವೆ ಇತ್ತೀಚೆಗೆ ಮಹಾ ಘರ್ಷಣೆಗೆ ಸಾಕ್ಷಿಯಾಗಿತ್ತು ದೆಹಲಿ. ವಕೀಲರಿಂದ ಎಗ್ಗಾಮುಗ್ಗಾ ಬಡಿಸಿಕೊಂಡು ಅಸಹಾಯಕರಾಗಿ ಕಂಡುಬಂದಿದ್ದ ಪೊಲೀಸರು ಸಾರ್ವಜನಿಕ ಸಹಾನುಭೂತಿ ಗಳಿಸಿದ್ದರು. ಹಿರಿಯ ಐ.ಪಿ.ಎಸ್. ಅಧಿಕಾರಿಯೊಬ್ಬರನ್ನು ಘೇರಾವೋ ಮಾಡಿ ಎಳೆದಾಡಲಾಗಿತ್ತು. ಆದರೂ ಪೊಲೀಸರು ಸುಮ್ಮನಿದ್ದರು.  ಪೊಲೀಸರ ಹೆಂಡತಿ ಮಕ್ಕಳು, ತಂದೆ ತಾಯಿಯರು ದೆಹಲಿ ಪೊಲೀಸ್ ಮುಖ್ಯಾಲಯದ ಮುಂದೆ ರಕ್ಷಣೆ ಕೋರಿ ಪ್ರತಿಭಟನೆ ನಡೆಸಿದ್ದರು. ಇಂತಹ ಪೊಲೀಸರು ಅಸಹಾಯಕ ವಿದ್ಯಾರ್ಥಿಗಳ ಮೇಲೆ ಹರಿಯಬಿಟ್ಟ ಹಿಂಸಾಚಾರ, ತೋರಿದ ವಿಕೃತ ಕ್ರೌರ್ಯ ಖಂಡನೀಯ.

ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿಲ್ಲ ಎಂದು  ಪೊಲೀಸರು ಹೇಳಿದ್ದಾರೆ. ಆದರೆ ಗುಂಡೇಟುಗಳಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ. ಪೊಲೀಸರ ಜೊತೆಗೆ ನೀಲಿ ಜೀನ್ಸ್ ಮತ್ತು ರಂಗುರಂಗಿನ ಟೀ ಶರ್ಟ್ ತೊಟ್ಟು, ಹೆಲ್ಮೆಟ್ ಧರಿಸಿ, ಎದೆ ಮತ್ತು ಬೆನ್ನಿಗೆ ಕವಚ ಧರಿಸಿ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುತ್ತಿರುವ ವ್ಯಕ್ತಿಗಳು ವಿಡಿಯೋಗಳಲ್ಲಿ ಕಾಣಬಂದಿದ್ದಾರೆ. ಅವರು ಯಾರು, ಮಫ್ತಿಯಲ್ಲಿರುವ ಪೊಲೀಸರೇ, ಇಲ್ಲದೆ ಹೋದರೆ ಖಾಸಗಿಯವರೇ, ಖಾಸಗಿಯವರಾದರೆ ಅವರ ಕೈಗೆ ಪೊಲೀಸರ ಲಾಠಿಗಳು ಮತ್ತು ಹೆಲ್ಮೆಟ್‍ಗಳು, ಎದೆಕವಚಗಳು ಬಂದದ್ದು ಹೇಗೆ, ಪೊಲೀಸರು ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡದ್ದು ಯಾಕೆ ಎಂಬ ಪ್ರಶ್ನೆಗಳು ಏಳುತ್ತವೆ. ಈ ಗಂಭೀರ ವಿದ್ಯಮಾನ ಕುರಿತು ದೆಹಲಿ ಪೊಲೀಸರು ಸಮಜಾಯಿಷಿ ನೀಡಬೇಕಿದೆ.

ಈ ಪ್ರತಿಭಟನೆಯ ವಿಡಿಯೋಗಳನ್ನು ತಿದ್ದಿ ತೀಡಿ ಹಿಂದುತ್ವದ ವಿರುದ್ಧ ಕೂಗಿರುವ ಘೋಷಣೆಗಳನ್ನು ಹಿಂದೂಗಳ ವಿರುದ್ಧ ಕೂಗಿದ ಘೋಷಣೆಗಳು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಜೆ.ಎನ್.ಯು. ವಿದ್ಯಾರ್ಥಿಗಳ ವಿರುದ್ಧ ಬಳಸಲಾಗಿದ್ದ ಹಳೆಯ ತಂತ್ರವಿದು. ವಿಡಿಯೋಗಳನ್ನು ಪರೀಕ್ಷಿಸಿರುವ ವಿಧಿವಿಜ್ಞಾನ ಪ್ರಯೋಗಶಾಲೆಯು ಕತ್ತರಿಸಿ ಅಂಟಿಸಿದ ವಿಡಿಯೋ ಎಂದು ವರದಿ ನೀಡಿದೆ. ಅಂದಹಾಗೆ ಜಾಮಿಯಾ ಪ್ರತಿಭಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಜಾತ್ಯತೀತ ತತ್ವಗಳ ಚೌಕಟ್ಟನ್ನು ಧಿಕ್ಕರಿಸಿ ಕಟ್ಟರ್ ಧಾರ್ಮಿಕ ಘೋಷಣೆಗಳನ್ನು ಕೂಗಿರುವುದು ವರದಿಯಾಗಿದೆ. ಇದು ಸಲ್ಲದ ನಡೆ. ಹಿನ್ನಡೆಯೇ ವಿನಾ ಮುನ್ನಡೆ ಅಲ್ಲ.

ಪೊಲೀಸ್ ಅತಿರೇಕಗಳಲ್ಲಿ ನರಳಿರುವ ಜಾಮಿಯಾ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲಿ ಬೀದಿ ಪಾಲಾಗಿದ್ದಾರೆ. ದೆಹಲಿಯ ಸಜ್ಜನ ಸಮಾಜ ಅವರ ನೆರವಿಗೆ ಮುಂದೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಅನೇಕರು ತಮ್ಮ ಮನೆಯ ಬಾಗಿಲುಗಳನ್ನು ಈ ವಿದ್ಯಾರ್ಥಿಗಳಿಗೆ ತೆರೆದಿರುವುದಾಗಿ ಸಾರಿದ್ದಾರೆ. ದೆಹಲಿಯ ಗುರುದ್ವಾರಗಳು ವಿದ್ಯಾರ್ಥಿಗಳನ್ನು ತೆರೆದ ತೋಳುಗಳಿಂದ ಬರಮಾಡಿಕೊಂಡು ಆಶ್ರಯ ನೀಡಿವೆ. ಪೊಲೀಸ್ ದೌರ್ಜನ್ಯ ಮತ್ತು ಪೌರತ್ವ ಕಾಯಿದೆ ತಿದ್ದುಪಡಿಯಲ್ಲಿ ಮುಸ್ಲಿಮರನ್ನು ಅನ್ಯರನ್ನಾಗಿ ಕಾಣುತ್ತಿರುವ ಕಾರಸ್ಥಾನ ಕುರಿತು ಜಾಮಿಯಾದಲ್ಲಿ ಓದುತ್ತಿರುವ ರಾಂಚಿಯ ಅನುಗ್ಯಾ ಎಂಬ ವಿದ್ಯಾರ್ಥಿನಿ ರೋದಿಸುತ್ತಾ ಎತ್ತಿರುವ ಪ್ರಶ್ನೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆ ಮಗಳ ಮಾತುಗಳು ಈ ದೇಶವನ್ನು ಆಳುವವರು ಮತ್ತು ಅವರೊಂದಿಗೆ ಶರೀಕಾಗಿರುವವರ ಆತ್ಮಸಾಕ್ಷಿಗಳನ್ನು ಇರಿಯುತ್ತವೆ.
ಆದರೆ ಆತ್ಮಸಾಕ್ಷಿಗಳು ಜೀವಂತ ಉಳಿದಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...