2012ರ ದೆಹಲಿ ಅತ್ಯಾಚಾರ ಪ್ರಕರಣ ನಡೆದು 12 ವರ್ಷಗಳು ಕಳೆದರೂ ದೇಶದ ಪರಿಸ್ಥಿತಿ ಬದಲಾಗಿಲ್ಲ ಎಂದು ಸಂತ್ರಸ್ತೆ ನಿರ್ಭಯಾ ಅವರ ತಾಯಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”ನಾನು ಬಹಳ ನೋವಿನಿಂದ ಹೇಳುತ್ತಿದ್ದೇನೆ, ದೇಶದ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ” ಎಂದು ಅವರು ಹೇಳಿದ್ದಾರೆ. ದೇಶವನ್ನೇ ಬೆಚ್ಚಿಬೀಳಿಸಿದ ಭೀಕರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನಡೆದು ಡಿಸೆಂಬರ್ 16ಕ್ಕೆ 12 ವರ್ಷಗಳಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂತ್ರಸ್ತೆ ನಿರ್ಭಯಾ ಅವರ ತಾಯಿ ಆಶಾದೇವಿ ಅವರು ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ರಾಷ್ಟ್ರೀಯ ಸಮಾವೇಶ’ದಲ್ಲಿ ಭಾಗಿಯಾಗಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. “12 ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ ಎಂದು ನಾನು ಬಹಳ ನೋವಿನಿಂದ ಹೇಳುತ್ತೇನೆ. ದೇಶದ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ನನ್ನ ಮಗಳ ನ್ಯಾಯಕ್ಕಾಗಿ ನಾನು ಹೋರಾಡುವಾಗ ನನ್ನ ಮಗಳು ಇನ್ನೆಂದಿಗೂ ಹಿಂದಿರುಗುವುದಿಲ್ಲ ಎಂದು ನನಗೆ ತಿಳಿದಿತ್ತು” ಎಂದು ಅವರು ಹೇಳಿದ್ದಾರೆ. ದೆಹಲಿ ಅತ್ಯಾಚಾರ
“ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂಬುದೊಂದೆ ನನ್ನ ಮನಸ್ಸಲ್ಲಿತ್ತು. ಅದಕ್ಕಾಗಿ ಹಲವು ಕಾರ್ಯಕ್ರಮದಲ್ಲಿ ಭಾಗಿಯಾದೆ. ಆದರೆ ಎಲ್ಲವೂ ನಿಷ್ಪ್ರಯೋಜಕ. ಇಂದಿಗೂ ಹಲವು ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರದು. ಅಪರಾಧಿಗಳು ಯಾರೆಂದು ಗುರುತಿಸುವುದೇ ಒಂದು ವರ್ಷ ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲೇ ಕೋಲ್ಕತ್ತಾದಲ್ಲಿ ನಡೆದ ಆರ್‌ಜಿ ಕರ್ ಘಟನೆಯನ್ನು ಉಲ್ಲೇಖಿಸಿದ ಆಶಾದೇವಿ ಅವರು, ನಿಜವಾಗಿ ಏನಾಯಿತು ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
2012ರ ಡಿಸೆಂಬರ್ 16ರಂದು 23 ವರ್ಷದ ಯುವತಿಯ ಮೇಲೆ (ನಿರ್ಭಯಾ) ದಕ್ಷಿಣ ದೆಹಲಿಯಲ್ಲಿ ಚಲಿಸುವ ಬಸ್‌ನೊಳಗೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ತೀವ್ರ ಗಾಯಗೊಂಡಿದ್ದ ಯುವತಿಯನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಡಿಸೆಂಬರ್ 29ರಂದು ನಿಧನರಾದರು.
ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಎಂಬ ನಾಲ್ವರು ಆರೋಪಿಗಳನ್ನು ವಿಚಾರಣೆ ನಂತರ ಅಪರಾಧಿಗಳು ಎಂದು ಪರಿಗಣಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ಈ ವೇಳೆ ರಾಮ್ ಸಿಂಗ್ ಎಂಬ ಆರೋಪಿ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನೋರ್ವ ಆರೋಪಿ ಬಾಲಪರಾಧಿಯಾಗಿದ್ದು ಮೂರು ವರ್ಷ ಜೈಲು ಶಿಕ್ಷೆಯ ಬಳಿಕ 2015ರಲ್ಲಿ ಬಿಡುಗಡೆಗೊಂಡಿದ್ದಾನೆ.
ಇದನ್ನೂ ಓದಿ: ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ : ಸಚಿವ ದಿನೇಶ್ ಗುಂಡೂರಾವ್
ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ : ಸಚಿವ ದಿನೇಶ್ ಗುಂಡೂರಾವ್


