ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮುಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರ ಜಾಮೀನು ಅರ್ಜಿಗಳನ್ನು ವಿರೋಧಿಸಿ ದೆಹಲಿ ಪೊಲೀಸರು ಗುರುವಾರ (ನವೆಂಬರ್ 20) ತಮ್ಮ ವಾದ ಮಂಡನೆ ಮುಂದುವರೆಸಿದರು.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ವಾದ ಆಲಿಸಿತು.
ವಿಚಾರಣೆ ವೇಳೆ ದೆಹಲಿ ಪೊಲೀಸರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಶಾರ್ಜೀಲ್ ಇಮಾಮ್ ಮಾಡಿದ ಪ್ರಚೋದನಕಾರಿ ಎನ್ನಲಾದ ಭಾಷಣಗಳ ಕೆಲವು ವಿಡಿಯೋ ತುಣುಕುಗಳನ್ನು ನ್ಯಾಯಾಲಯದಲ್ಲಿ ತೋರಿಸಿದರು ಎಂದು ಲೈವ್ ಲಾ ವರದಿ ಮಾಡಿದೆ.
ವಿಡಿಯೋದಲ್ಲಿ, "ಭಾರತದ ಎಲ್ಲಾ ನಗರಗಳಲ್ಲಿ ಚಕ್ಕಾ-ಜಾಮ್ (ರಸ್ತೆ ತಡೆ) ಮಾಡಬೇಕು. ಮುಸ್ಲಿಮರು ಒಗ್ಗೂಡಿ, ಅಸ್ಸಾಂ ಮತ್ತು ಉತ್ತರ-ಈಶಾನ್ಯ ಭಾರತವನ್ನು ಮುಖ್ಯ ಭೂಭಾಗದಿಂದ ಬೇರ್ಪಡಿಸುವ 'ಚಿಕನ್ ನೆಕ್' (ಸಿಲಿಗುರಿ ಕಾರಿಡಾರ್) ಪ್ರದೇಶವನ್ನು ಬೇರ್ಪಡಿಸಬೇಕು. ದೆಹಲಿಗೆ ಅಗತ್ಯ ವಸ್ತುಗಳ ಸರಬರಾಜನ್ನು ತಡೆಯಬೇಕು. ಸರ್ಕಾರವನ್ನು ಸಂಪೂರ್ಣವಾಗಿ ಪ್ಯಾರಲೈಸ್ (ಕೆಲಸ ಮಾಡಲು ಬಿಡದಂತೆ) ಮಾಡಬೇಕು" ಈ ರೀತಿಯ ಹೇಳಿಕೆಗಳನ್ನು ಶಾರ್ಜೀಲ್ ಇಮಾಮ್ ನೀಡಿರುವುದು ವಿಡಿಯೋದಲ್ಲಿ ಇದೆ ಎಂದು ವರದಿ ಹೇಳಿದೆ.
ಭಾಷಣಗಳು ಸಾಕ್ಷ್ಯದ ಭಾಗವಾಗಿದೆಯೇ ಎಂದು ಪೀಠ ಕೇಳಿದಾಗ, ಹೆಚ್ಚುವರಿ ಸಾಲಿಸಿಟರ್ ಜನರಲ್ ಸಕಾರಾತ್ಮಕವಾಗಿ ಉತ್ತರಿಸಿದರು ಎಂದು ವರದಿ ತಿಳಿಸಿದೆ.
ಇಮಾಮ್ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ, ಈ ವಿಡಿಯೋಗಳಲ್ಲಿ ಭಾಷಣದ ಪೂರ್ಣ ಸಂದರ್ಭವನ್ನು ತೋರಿಸದೆ, ಕೇವಲ ಆಯ್ದ ಭಾಗಗಳನ್ನು ಮಾತ್ರ ತೋರಿಸಲಾಗಿದೆ (ಅಂದರೆ ಸಂಪೂರ್ಣ ಭಾಷಣವನ್ನು ತಿರುಚಿ ಅಥವಾ ತಪ್ಪು ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ) ಎಂದು ಹೇಳಿದ್ದಾರೆ.
ದೆಹಲಿ ಪ್ರೊಟೆಸ್ಟ್ ಸಪೋರ್ಟ್ ಗ್ರೂಪ್ (ಡಿಪಿಎಸ್‌ಜಿ), ಜಾಮಿಯಾ ಅವರ್ನೆಸ್ ಕ್ಯಾಂಪೇನ್ ಟೀಂ ಮುಂತಾದ ವಾಟ್ಸಾಪ್ ಗ್ರೂಪ್‌ಗಳಲ್ಲಿದ್ದ ಹಲವು ಸಂದೇಶಗಳನ್ನು ಉಲ್ಲೇಖಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, “ಆರೋಪಿಗಳ ಉದ್ದೇಶವು ಸರ್ಕಾರವನ್ನು ಉರುಳಿಸುವುದು ಮತ್ತು ಹಿಂಸಾತ್ಮಕ ಗಲಭೆಗಳ ಮೂಲಕ ಆಡಳಿತ ಬದಲಾವಣೆ (ರೆಜೀಮ್ ಚೇಂಜ್) ತರುವುದಾಗಿತ್ತು. ಈ ಗಲಭೆಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸದೊಂದಿಗೆ ತಾದಾತ್ಮ್ಯವಾಗಿ (ಒಟ್ಟಿಗೆ ಸಂಭವಿಸುವಂತೆ) ಯೋಜಿಸಲಾಗಿತ್ತು” ಎಂದು ವಾದಿಸಿದ್ದಾರೆ.
“ಆರೋಪಿಗಳನ್ನು ಬುದ್ಧಿಜೀವಿಗಳು ಮತ್ತು ಹೋರಾಟಗಾರರ ವೇಷ ಧರಿಸಿರುವ ರಾಷ್ಟ್ರವಿರೋಧಿಗಳು ಮತ್ತು ಸಮಾಜದ ಸ್ವಾಸ್ಥ್ಯ ಕದಡುವವರು” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದ್ದಾರೆ.
“ಜಾಮೀನು ವಿಷಯ ಬಂದಾಗಲೆಲ್ಲಾ, ನ್ಯೂಯಾರ್ಕ್ ಟೈಮ್ಸ್ ಏನನ್ನಾದರೂ ಪ್ರಕಟಿಸುತ್ತದೆ. ಬುದ್ಧಿಜೀವಿಗಳು ಎಂಬ ಸೋಗಿನಲ್ಲಿ ಅವರು ದೇಶ ವಿರೋಧಿಗಳು ಎಂದು ಅರಿತುಕೊಳ್ಳದೆ ಸಾಮಾಜಿಕ ಮಾಧ್ಯಮಗಳು ಸಕ್ರಿಯವಾಗುತ್ತವೆ” ಹೆಚ್ಚುವರಿ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆ ವೇಳೆ ಕೆಲವು ಸಂರಕ್ಷಿತ ಸಾಕ್ಷಿಗಳ ಹೇಳಿಕೆಗಳನ್ನು ಕೂಡ ಹೆಚ್ಚುವರಿ ಸಾಲಿಸಿಟರ್ ಜನರಲ್ ಉಲ್ಲೇಖಿಸಿದ್ದಾರೆ, ಈ ವೇಳೆ ನ್ಯಾಯಾಧೀಶ ಕುಮಾರ್ ಅವರು ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು ಸಾಕ್ಷ್ಯವನ್ನು ಮೌಲ್ಯಮಾಪನ ಮಾಡಬಹುದೇ ಎಂದು ಕೇಳಿದ್ದಾರೆ. ಆಗ, ಸಾಕ್ಷ್ಯಗಳ ನಿಖರತೆಯನ್ನು ನ್ಯಾಯಾಲಯ ಪರಿಶೀಲಿಸುವ ಅಗತ್ಯವಿಲ್ಲ ಎಂದ ಹೆಚ್ಚುವರಿ ಸಾಲಿಸಿಟರ್ ಜನರಲ್, ಪ್ರಕರಣಕ್ಕೆ ಪ್ರಾಥಮಿಕ ಪುರಾವೆಗಳಿವೆ ಎಂದು ತೋರಿಸುವುದು ಮಾತ್ರ ನನ್ನ ಪ್ರಯತ್ನವಾಗಿದೆ ಎಂದಿದ್ದಾರೆ.
ವಿಚಾರಣೆ ನಾಳೆ (ನವೆಂಬರ್ 21) ಮುಂದುವರಿಯಲಿದೆ ಎಂದು ಲೈವ್ ಲಾ ವರದಿ ತಿಳಿಸಿದೆ.
ಉಮರ್ ಖಾಲಿದ್ ಅವರನ್ನು ಸಹ ಆರೋಪಿಗಳಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಾರಣ, ಯುಎಪಿಎ ಕಾಯ್ದೆಯ ತಪ್ಪಾದ ವ್ಯಾಖ್ಯಾನದ ಮೇಲೆ 2021ರಲ್ಲಿ ದೆಹಲಿ ಹೈಕೋರ್ಟ್ ಆ ಮೂವರಿಗೆ ಜಾಮೀನು ನೀಡಿದೆ ಎಂದು ದೆಹಲಿ ಪೊಲೀಸರು ಸೋಮವಾರ (ನವೆಂಬರ್ 17) ವಾದಿಸಿದ್ದರು.
ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಿಂದ ಮೊದಲು, ಸ್ವಲ್ಪ ಹೊತ್ತು ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಗಳು ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳು ದೇಶದ ಸಾರ್ವಭೌಮತ್ವದ ಮೇಲೆ ದಾಳಿ ಮಾಡುವಂತಹ ಪೂರ್ವ ಯೋಜಿತ ಪಿತೂರಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ ಎಂದು ವಾದಿಸಿದ್ದರು.


