ದೆಹಲಿ ವಿಶ್ವವಿದ್ಯಾಲಯವು ಪದವಿ ಪೂರ್ವ ತರಗತಿಗಳಿಗೆ ನಿಗಧಿ ಮಾಡಿದ್ದ ಇಂಗ್ಲಿಷ್ ಪಠ್ಯದಲ್ಲಿ ಸ್ತ್ರೀವಾದಿ ಪಠ್ಯ ಸೇರಿದಂತೆ ಹಲವು ದಲಿತರ ಲೇಖಕರ ಪಠ್ಯ ಕೈಬಿಟ್ಟಿರುವುದು ತೀವ್ರ ಟೀಕೆಗೆ ಕಾರಣವಾಗಿವೆ.
ವಿವಿಯ ಮೇಲ್ವೀಚಾರಣ ಸಮಿತಿಯು ದಲಿತ ಲೇಖಕರಾದ ಬಾಮಾ ಫೌಸ್ಟಿನಾ ಸೂಸೈರಾಜ್, ಸುಕೀರ್ಥರಾಣಿ ಮತ್ತು ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಅವರ ಬರಹಗಳನ್ನು ಪಠ್ಯದಿಂದ ತೆಗೆದುಹಾಕಿದೆ ಎಂದು ವರದಿಯಾಗಿದೆ.
ವಿವಿಯ ಈ ಕ್ರಮವನ್ನು ಅಕಾಡೆಮಿಕ್ ಕೌನ್ಸಿಲ್‌ನ 15 ಸದಸ್ಯರ ಸಮಿತಿಯು ತೀವ್ರವಾಗಿ ವಿರೋಧಿಸಿ ತನ್ನ ಭಿನ್ನಮತವನ್ನು ದಾಖಲಿಸಿದೆ. ಇದು ಪಠ್ಯಕ್ರಮದಲ್ಲಿ ಅತಿ ದೊಡ್ಡ ಧ್ವಂಸ ಎಂದು ಅದು ಟೀಕಿಸಿದೆ.
ಮೇಲ್ವಿಚಾರಣಾ ಸಮಿತಿಯು ಮೊದಲು ಸೂಸೈರಾಜ್ ಮತ್ತು ಸುಕೀರ್ಥರಾಣಿ ಅವರ ಬರಹಗಳನ್ನು ತೆಗೆದು ಆ ಜಾಗದಲ್ಲಿ “ಮೇಲ್ಜಾತಿ ಬರಹಗಾರ್ತಿಯಾದ ರಮಾಬಾಯಿ”ಯವರ ಪಠ್ಯ ಸೇರಿಸಿದೆ. ನಂತರ ಆಂಗ್ಲ ವಿಭಾಗದಲ್ಲಿ ಮಹಾಶ್ವೇತಾ ದೇವಿಯವರ ಬುಡಕಟ್ಟು ಮಹಿಳೆಯ ಕುರಿತ ಕಥೆ ‘ದ್ರೌಪದಿ’ ಯಾವುದೇ ಶೈಕ್ಷಣಿಕ ತರ್ಕವನ್ನು ನೀಡದೆ ಅಳಿಸಿಹಾಕಿದೆ ಅಕಾಡೆಮಿಕ್ ಕೌನ್ಸಿಲ್ ಆಕ್ರೋಶ ವ್ಯಕ್ತಪಡಿಸಿದೆ.
ವಸಾಹತುಶಾಹಿ ಪೂರ್ವ ಭಾರತೀಯ ಸಾಹಿತ್ಯ ವಿಭಾಗದಲ್ಲಿ ಚಂದ್ರವತಿ ರಾಮಾಯಣವನ್ನು ತೆಗೆದು ಅಲ್ಲಿ ತುಳಸಿದಾಸರ ಪಠ್ಯ ಸೇರಿಸಿಲಾಗಿದೆ. ರಾಮಾಯಣ ಮಹಾಕಾವ್ಯದ “ಸ್ತ್ರೀವಾದಿ ಓದು” ಪಠ್ಯ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಮೇಲ್ವಿಚಾರಣಾ ಸಮಿತಿಯಲ್ಲಿ ದಲಿತರು ಮತ್ತು ಆದಿವಾಸಿ ಸಮುದಾಯದ ಸದಸ್ಯರಿಲ್ಲ. ಹಾಗಾಗಿ ಅದು ಸದಾ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ವಿರುದ್ಧ ಪೂರ್ವಾಗ್ರಹವನ್ನು ಹೊಂದಿದೆ. ಹಾಗಾಗಿ ಅಂತಹ ಎಲ್ಲಾ ಧ್ವನಿಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲು ಅದು ಸಂಘಟಿತ ಪ್ರಯತ್ನ ನಡೆಸುತ್ತಿದೆ ಎಂದು ಕೌನ್ಸಿಲ್ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಕೆ.ಪಂಡಿತ್, “ರದ್ದುಗೊಳಿಸಿರುವ ಪಠ್ಯಗಳ ಲೇಖಕರ ಜಾತಿಯ ಬಗ್ಗೆ ನನಗೆ ತಿಳಿದಿಲ್ಲ. ನಾನು ಜಾತೀಯತೆಯನ್ನು ನಂಬುವುದಿಲ್ಲ. ಭಾರತೀಯರು ವಿವಿಧ ಜಾತಿಗೆ ಸೇರಿದ್ದಾರೆ ಎಂದು ನಾನು ನೋಡುವುದಿಲ್ಲ” ಎಂದಿದ್ದಾರೆ.
ಒಂದು “ನಿರ್ದಿಷ್ಟ ಕಥೆ” ಯನ್ನು ಹಲವು ವರ್ಷಗಳಿಂದ ಕಲಿಸಿದ ನಂತರ ಕೋರ್ಸ್ ರಚನೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹಲವರು ಪಠ್ಯವನ್ನು ಬದಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು


