Homeಕರ್ನಾಟಕಪುನರ್ ಪರಿಷ್ಕರಣೆ; ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ದೋಷಗಳದ್ದೇ ಕಾರುಬಾರು

ಪುನರ್ ಪರಿಷ್ಕರಣೆ; ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ದೋಷಗಳದ್ದೇ ಕಾರುಬಾರು

- Advertisement -
- Advertisement -

ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಕುರಿತು 2014-15ರ ಬಜೆಟ್ ಭಾಷಣದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರು ಅಧಿಕೃತವಾಗಿ ಪ್ರಸ್ತಾಪಿಸಿದರು. ನಂತರ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಈ ಬಗ್ಗೆ ಕ್ರಮವಹಿಸಿದ್ದರು. ಪರಿಷ್ಕರಣ ಸಮಿತಿಗೆ ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ಸರ್ವಾಧ್ಯಕ್ಷರನ್ನಾಗಿ ನೇಮಿಸಿದರು. ಅವರ ನೇತೃತ್ವದಲ್ಲಿ 27 ವಿಷಯವಾರು ಸಮಿತಿಗಳು ರಚನೆಗೊಂಡವು. ಅವುಗಳಲ್ಲಿ ಒಟ್ಟು 172 ಮಂದಿ ವಿಷಯ ತಜ್ಞರು, ಅಧ್ಯಾಪಕರು ಇದ್ದರು. ಬರಗೂರು ರಾಮಚಂದ್ರಪ್ಪನವರು ಈ ಸಮಿತಿಗಳ ತೀರ್ಮಾನಗಳಷ್ಟೇ ಅಂತಿಮವೆಂದು ಪರಿಗಣಿಸದೆ, ಹೊರಗಿನ ವಿಷಯ ತಜ್ಞರು ಮತ್ತು ಸಂಘಸಂಸ್ಥೆಗಳ ಜೊತೆಗೂ ಸುಮಾರು 30ಕ್ಕೂ ಹೆಚ್ಚು ಸಮಾಲೋಚನಾ ಸಭೆಗಳನ್ನು ನಡೆಸಿದರು. ಆನಂತರ ಎಲ್ಲ ಸಲಹೆಗಳನ್ನು ಕ್ರೋಢೀಕರಿಸಿ ಪರಿಷ್ಕರಣ ಕಾರ್ಯಾಗಾರ ನಡೆಸಿದರು. ಇದು ಬರಗೂರರ ಅವಧಿಯಲ್ಲಿ ನಡೆದ ಪಠ್ಯಪರಿಷ್ಕರಣೆಯ ವೈಖರಿಯಾಗಿದ್ದು, ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸುಮಾರು ಒಂದೂವರೆ ವರ್ಷಗಳಿಗೂ ದೀರ್ಘಕಾಲ ಪರಿಷ್ಕರಣೆ ಕೆಲಸ ನಡೆಯಿತು.

ಬರಗೂರು ರಾಮಚಂದ್ರಪ್ಪ

ಆದರೆ, 1ರಿಂದ 10ನೇ ತರಗತಿಯ ಭಾಷಾ ವಿಷಯಗಳು, ಪರಿಸರ ಅಧ್ಯಯನ, 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳಲ್ಲಿ ಇರಬಹುದಾದ ಸೂಕ್ಷ್ಮ/ಸಂಕೀರ್ಣ ವಿಷಯಗಳನ್ನು ಕುರಿತು ಪರಿಶೀಲಿಸಿ ವರದಿ ನೀಡಲು ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ಎಂಟತ್ತು ಜನರ ಏಕೈಕ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಕೇವಲ ಒಂದೆರಡು ತಿಂಗಳ ಅವಧಿಯಲ್ಲಿ ಪರಿಶೀಲನೆ ಅಷ್ಟೇ ಅಲ್ಲ; ಪುನರ್ ಪರಿಷ್ಕರಣಾ ಕಾರ್ಯವನ್ನೂ ಮಾಡಿ ಮುಗಿಸಿತು! ಈ ಆತುರಆತುರದ ಕೆಲಸದಿಂದಾಗಿ ಶಿಕ್ಷಣ ವಲಯದಿಂದ ಮಾತ್ರವಲ್ಲ ಎಲ್ಲಾ ವಲಯದಿಂದಲೂ ಪತ್ರಿಕೆಗಳಲ್ಲಿ ವ್ಯಾಪಕವಾದ ಅಸಮಾಧಾನ, ಅತೃಪ್ತಿ, ಆಕ್ರೋಶ ವ್ಯಕ್ತವಾಗುತ್ತಿವೆ.

ಚಕ್ರತೀರ್ಥ ಸಮಿತಿಯು ಒಂದೇ ಸಮುದಾಯದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿದೆ ಎಂಬ ಕಾರಣಕ್ಕಾಗಿ ಆರಂಭದಲ್ಲಿಯೇ ವಿವಾದಕ್ಕೆ ಗುರಿಯಾಗಿತ್ತು. ಪುನರ್ ಪರಿಷ್ಕೃತ ಪಠ್ಯಪುಸ್ತಕಗಳು ಮೂಡಿದ್ದ ಸಂಶಯವನ್ನು ನಿಜವಾಗಿಸಿವೆ.

ಪರಿಷ್ಕರಣೆ ಕುರಿತು ಬರಗೂರರು ಬರೆಯುತ್ತಾ “ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆದಿವೆ. ಹೀಗೆ ಪರಿಷ್ಕರಿಸುವಾಗ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟುಗಳನ್ನು ಮೀರಿಲ್ಲವೆಂದು ತಿಳಿಸಬಯಸುತ್ತೇವೆ, ಜೊತೆಗೆ ನಮ್ಮ ಸಂವಿಧಾನದ ಆಶಯಗಳನ್ನು ಅನುಸರಿಸಲಾಗಿದೆ” ಎಂದು ತಿಳಿಸಿದ್ದಾರೆ. ಅದು ಪಠ್ಯ ಪುಸ್ತಕಗಳಲ್ಲಿ ಕೂಡ ವ್ಯಕ್ತವಾಗಿದೆ. ಆದರೆ ರೋಹಿತ್ ಚಕ್ರತೀರ್ಥ ಅವರು ಪುನರ್ ಪರಿಷ್ಕರಣೆಯ ಕುರಿತು ಬರೆಯುತ್ತಾ, “ಭಾಷಾಪಠ್ಯವಿರುವುದು ಅತ್ಯುತ್ತಮವಾದ ಪ್ರಾತಿನಿಧಿಕ ಪಠ್ಯವನ್ನು ಕೊಡುವುದಕ್ಕಾಗಿಯೇ ಹೊರತು ಸಾಮಾಜಿಕ ನ್ಯಾಯ, ಲಿಂಗಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ. ಹಾಗಾಗಿ ಭಾಷೆಯ ವೈವಿಧ್ಯ ಹಾಗೂ ವಿಶೇಷಗಳನ್ನು ಹೆಚ್ಚು ಕಾಣಿಸುವ ಗದ್ಯ/ಪದ್ಯ ಭಾಗಗಳನ್ನು ಆರಿಸಿಕೊಳ್ಳಬೇಕು. ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು. ಗ್ರಾಂಥಿಕ ಭಾಷೆಯಲ್ಲದೆ ಮೌಖಿಕ ಪರಂಪರೆಯ ಹಾಗೂ ಹಲವು ಪ್ರಕಾರದ ಸಾಹಿತ್ಯಗಳಿಗೆ ಅವಕಾಶ ಕೊಡಬೇಕು. ಬಳಸಿದ ಭಾಷೆ, ಭಾಷಾಸೊಗಡು, ಪ್ರತಿಪಾದಿಸಿರುವ ವಿಚಾರ, ಹೊಸ ಚಿಂತನೆಗಳನ್ನು ಹುಟ್ಟಿಸುವ ಸಾಧ್ಯತೆ, ಸಾಹಿತ್ಯ ಪ್ರಕಾರದ ವೈಶಿಷ್ಟ್ಯ ಇತ್ಯಾದಿ ಎಲ್ಲ ಬಗೆಯಲ್ಲೂ ಪಾಠಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕು” ಮುಂತಾದುದಾಗಿ ಹೇಳಿದ್ದಾರೆ.

ಭಾಷಾ ಪಠ್ಯಪುಸ್ತಕಗಳಲ್ಲಿ ಸಾಮಾಜಿಕ ನ್ಯಾಯ, ಲಿಂಗಸಮಾನತೆಯ ಅಂಶಗಳ ಅಗತ್ಯವಿಲ್ಲ ಎಂಬುದೇ ಅಚ್ಚರಿಯುಂಟುಮಾಡುತ್ತದೆ. ಭಾರತೀಯ ಸಮಾಜವು ವೈವಿಧ್ಯತೆಯಿಂದ ಕೂಡಿದೆ. ಒಂದೊಂದು ಪ್ರದೇಶದ, ಸಮುದಾಯದ, ಗಂಡು-ಹೆಣ್ಣಿನ ನಡುವೆ ಪ್ರಾದೇಶಿಕ ಭಾಷಾ ಸೊಗಡು, ಸಾಂಸ್ಕೃತಿಕ ವೈಶಿಷ್ಟ್ಯ, ಲೋಕಾನುಭವಗಳು ಭಿನ್ನಭಿನ್ನವಾಗಿರುತ್ತವೆ. ಆದ್ದರಿಂದ ಭಾಷಾ ಪಠ್ಯಗಳಲ್ಲಿಯೂ ಸಾಮಾಜಿಕನ್ಯಾಯ, ಲಿಂಗಸಮಾನತೆ ಮುಂತಾದ ಸಮಾನತೆಯ ಆಶಯಗಳು ಅತ್ಯಗತ್ಯ. ಪಠ್ಯಪುಸ್ತಕಗಳಲ್ಲಿ ರಚಿಸುವ ಚಿತ್ರಗಳಿಂದ ಹಿಡಿದು ವಿಷಯಗಳಲ್ಲಿ ಬರುವ ಪಾತ್ರಗಳವರೆಗೆ ಮಕ್ಕಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಇವುಗಳು ಗಂಡು ಹೆಣ್ಣಿನ ನಡುವಿನ ತಾರತಮ್ಯವನ್ನು ಮೂಡಿಸುವಂತಿರಬಾರದೆಂಬ ಎಚ್ಚರಿಕೆಯು ಪಠ್ಯಪುಸ್ತಕ ರಚನಾಕಾರರಿಗೆ ಅತ್ಯಗತ್ಯ.

*****

ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಪುನರ್ ಪರಿಷ್ಕರಣೆ ಕುರಿತು ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಪಠ್ಯಪುಸ್ತಕದ ಆಶಯದ ಬಗೆಗೆ ಆದರ್ಶಪೂರ್ಣ ಮಾತುಗಳನ್ನೆ ಬರೆದಿದ್ದಾರೆ: “ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು. ಸ್ವಹಿತಾಸಕ್ತಿಯ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು. ಅರ್ಧಸತ್ಯ, ಅಸತ್ಯ, ಉತ್ಪ್ರೇಕ್ಷೆ, ನಿರ್ಣಯ ಮುಂತಾದವನ್ನು ಕೈಬಿಟ್ಟು ಅಧಿಕೃತ ಆಧಾರಗಳಿರುವ ಸಂಗತಿಗಳನ್ನಷ್ಟೆ ಮುಂದಿಡಬೇಕು. ಎಲ್ಲ ವಿಷಯಗಳಿಗೆ ತಕ್ಕ ಪ್ರಾತಿನಿಧ್ಯ ಕೊಡಬೇಕು…” ಎಂಬುದಾಗಿ ಬರೆದಿದ್ದಾರೆ. ಆದರೆ, ಈ ಆಶಯಗಳು ಪಠ್ಯಪುಸ್ತಕಗಳಲ್ಲಿ ಹೇಗೆ ಅಭಿವ್ಯಕ್ತಿಗೊಂಡಿವೆ ಎಂಬುದನ್ನು ಪರಿಶೀಲಿಸಲು ಪ್ರಯತ್ನಿಸಲಾಗಿದೆ.

ಮೊದಲಿಗೆ, 6ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕಗಳನ್ನು ಅವಲೋಕಿಸೋಣ. 6ನೇ ತರಗತಿ, ಸಮಾಜ ವಿಜ್ಞಾನ ಭಾಗ-1ರ ಪುಟ: 14ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿತ್ರವಿದೆ. ಪುಟ 22ರ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಕಾಲದ ಸಮಿತಿಯು ಅಳವಡಿಸಿದ್ದ ಟಿಪ್ಪುಸುಲ್ತಾನನ ಚಿತ್ರವನ್ನು ತೆಗೆದು ವಿಶ್ವೇಶ್ವರಯ್ಯನವರ ಚಿತ್ರವನ್ನು ಮತ್ತೆ ಅಳವಡಿಸಿದ್ದಾರೆ. ಜೊತೆಗೆ ಟಿಪ್ಪು ಕುರಿತು ಬರೆದಿದ್ದ ವಾಕ್ಯಗಳನ್ನೂ ಕತ್ತರಿಸಿದ್ದಾರೆ. “ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚರ ಜೊತೆಯಲ್ಲಿ ಸಹಾಯಕ್ಕೆ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಟಿಪ್ಪುಸುಲ್ತಾನ್ ಪ್ರಯತ್ನಿಸಿದ. ಟಿಪ್ಪು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು” ಎಂಬ ಸಾಲುಗಳನ್ನು ತೆಗೆಯಲಾಗಿದ್ದು, ಅದರ ಬದಲಿಗೆ “ಅರಸರು ದುರ್ಬಲರಾಗಿದ್ದರು ಆ ಸಮಯದಲ್ಲಿ ಸೇನಾಪತಿಯಾಗಿದ್ದ ಹೈದರಾಲಿಯು ಆಳ್ವಿಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡ. ಅವನು ಮತ್ತು ಅವನ ಮಗ ಟಿಪ್ಪೂಸುಲ್ತಾನ್ 1761-1799ರವರೆಗೆ ಆಡಳಿತ ನಡೆಸಿದರು” (ಪುಟ 22) ಎಂದು ಬರೆಯಲಾಗಿದೆ. ಹೈದರ್ ಅಧಿಕಾರ ವಶಪಡಿಸಿಕೊಂಡಿರುವುದು ಅಕ್ರಮ ಎನ್ನುವುದೇ ಆದರೆ, ರಾಜ ಒಡೆಯರ್ ವಿಜಯನಗರದ ಪ್ರತಿನಿಧಿ ಶ್ರೀರಂಗರಾಯನಿಂದ ಶ್ರೀರಂಗಪಟ್ಟಣವನ್ನು ಕಸಿದುಕೊಂಡಿದ್ದನ್ನು ಸಕ್ರಮ ಎನ್ನಲು ಸಾಧ್ಯವೇ? ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಕಂಡುಬರುತ್ತವೆ. ಆದರೆ ಹೈದರನ ಕಾರ್ಯವನ್ನಷ್ಟೆ ಅಕ್ರಮ ಎಂದು ಹೇಳುವುದು ಪೂರ್ವಾಗ್ರಹವಾಗುವುದಿಲ್ಲವೇ? ಜೊತೆಗೆ ಟಿಪ್ಪು ಕುರಿತು ಮೊದಲಿನ ಬರಹದಲ್ಲಿದ್ದ ಅರ್ಧಸತ್ಯವಾದರೂ ಏನು? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಬರಗೂರರ ಅವಧಿಯಲ್ಲಿ ’ವಚನ ಚಳವಳಿ’ ಶೀರ್ಷಿಕೆ ಅಡಿಯಲ್ಲಿ ಇದ್ದ ವಾಕ್ಯಗಳು: “ಈ ಚಳವಳಿಯಲ್ಲಿ ಎಲ್ಲ ಬಗೆಯ ಅಸಮಾನತೆಗಳನ್ನು ತಿರಸ್ಕರಿಸಲಾಯಿತು. ಅಸ್ಪೃಶ್ಯತೆಯ ವಿರುದ್ಧ ವಚನ ಚಳವಳಿಯು ಯುದ್ಧವನ್ನು ಸಾರಿತು. ಈ ಚಳವಳಿಯ ಭಾಗವಾಗಿ ದಮನಿತ ಸಾಮಾಜಿಕ ವಲಯದ ಅನೇಕ ಪುರುಷರು ಮತ್ತು ಮಹಿಳೆಯರು ವಚನಗಳನ್ನು ಬರೆದರು”. ಇದೇ ಪಠ್ಯವನ್ನು ಚಕ್ರತೀರ್ಥ ಸಮಿತಿಯು “ಈ ಚಳವಳಿಯ ಭಾಗವಾಗಿ ಸಮಾಜದ ಎಲ್ಲ ಸ್ತರದ ಪುರುಷರು ಮತ್ತು ಮಹಿಳೆಯರು ವಚನಗಳನ್ನು ಬರೆದರು” (ಪುಟ 37) ಎಂದು ಉದ್ದೇಶವನ್ನೆ ಗೌಣಗೊಳಿಸಲಾಗಿದೆ. ಇದರಿಂದ ವಚನ ಚಳವಳಿಯ ಮೂಲ ಆಶಯವೇ ಮಕ್ಕಳ ಅರಿವಿಗೆ ದಕ್ಕದಂತೆ ಮಾಡಿದ್ದಾರೆ.

ಪುಟ 37ರಲ್ಲಿ ’ದಾಸ ಸಾಹಿತ್ಯ’ ಉಪಶೀರ್ಷಿಕೆ ಅಡಿಯಲ್ಲಿ ಬರಗೂರರ ಅವಧಿಯಲ್ಲಿ ಬರೆದಿದ್ದ “ಶ್ರೀ ವ್ಯಾಸರಾಯರ ನೇತೃತ್ವದಲ್ಲಿ ದಾಸಕೂಟವನ್ನು ರೂಪಿಸಲಾಯಿತು. ಮಡಿ-ಮೈಲಿಗೆ ಕುರಿತು ತಾರತಮ್ಯದ ಆಚರಣೆಗಳನ್ನು ಇದು ತಿರಸ್ಕರಿಸಿತು… ಜಾತಿ ತಾರತಮ್ಯಗಳನ್ನು ತಮ್ಮ ಕೀರ್ತನೆಗಳಲ್ಲಿ ಟೀಕಿಸಿದರು” ಎಂಬ ವಾಕ್ಯಗಳನ್ನೇ ಈಗ ಕೈಬಿಟ್ಟಿದ್ದಾರೆ. ಇವು ಅಸತ್ಯವೇ? ಉತ್ಪ್ರೇಕ್ಷೆಯ ಮಾತುಗಳೇ?

6ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ಮೈಸೂರು ವಿಭಾಗದ ’ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟಕ, ನೃತ್ಯ ಉಪಶೀರ್ಷಿಕೆ ಅಡಿಯಲ್ಲಿ ನೀಡಲಾಗಿದ್ದ 8 ಮಂದಿ ವಿವಿಧ ಕ್ಷೇತ್ರಗಳ ದಿಗ್ಗಜರ ಚಿತ್ರಗಳ ಸಾಲಿನಿಂದ ದಲಿತ ಸಾಹಿತಿ-ಚಿಂತಕ ದೇವನೂರ ಮಹಾದೇವ ಅವರ ಚಿತ್ರವನ್ನು ತೆಗೆದು ವಿಜ್ಞಾನಿ ರಾಜಾರಾಮಣ್ಣ ಅವರ ಚಿತ್ರವನ್ನು ಅಳವಡಿಸಿದ್ದಾರೆ. ಸಾಮಾಜಿಕ ನ್ಯಾಯದಡಿ ಪ್ರಾತಿನಿಧಿಕವಾಗಿ ಇರಿಸಲಾಗಿದ್ದ ದೇವನೂರರ ಚಿತ್ರ ಬದಲಿಸಿರುವುದು ಎಷ್ಟು ಸರಿ? ಜೊತೆಗೆ, ರಾಜಾರಾಮಣ್ಣ ತುಮಕೂರು ಜಿಲ್ಲೆಗೆ ಸೇರಿದವರಾಗಿದ್ದು, ಅವರ ಚಿತ್ರವನ್ನು ಮೈಸೂರು ವಿಭಾಗದ ಬದಲಿಗೆ ಬೆಂಗಳೂರು ವಿಭಾಗದಲ್ಲಿ ಅಳವಡಿಸಬೇಕಾಗಿತ್ತು. ಹೀಗೆ ತಪ್ಪುಗಳ ಮೇಲೆ ತಪ್ಪುಗಳು ಅಗಿವೆ.

ವೈದಿಕ ಧರ್ಮವನ್ನು ವಿರೋಧಿಸಿ, ಹೊಸ ಪಂಥಗಳನ್ನು ಹುಟ್ಟು ಹಾಕಿದ ಗೌತಮಬುದ್ಧ ಮತ್ತು ಮಹಾವೀರರ ಪಾಠಗಳನ್ನು 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಈ ಹಿಂದೆ ಸೇರಿಸಲಾಗಿತ್ತು. ಆದರೆ, ಆ ಪಾಠವನ್ನು ಕೈಬಿಡುವುದರ ಮೂಲಕ ’ಎಲ್ಲ ವಿಷಯಗಳಿಗೆ ತಕ್ಕ ಪ್ರಾತಿನಿಧ್ಯ ಕೊಡಬೇಕು’ ಎಂಬ ತಮ್ಮ ಆಶಯವನ್ನೆ ಚಕ್ರತೀರ್ಥ ಸಮಿತಿ ಮರೆತಿರುವುದು ದುರದೃಷ್ಟಕರ.

6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ’ಗಂಗರ’ ಮನೆತನಕ್ಕೆ ಸಂಬಂಧಿಸಿದ ಪಾಠದಲ್ಲಿ ಈ ಹಿಂದೆ ಗಂಗ ಮನೆತನದ ಸ್ಥಾಪಕ, ರಾಜಧಾನಿ, ಲಾಂಛನಗಳ ಪರಿಚಯದ ಜೊತೆಗೆ ಪ್ರಮುಖ ದೊರೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿತ್ತು. ಜೊತೆಗೆ ಗಂಗರ ಸಾಂಸ್ಕೃತಿಕ ಕೊಡುಗೆಗಳನ್ನು ಸ್ಮರಿಸಲಾಗಿತ್ತು. ಆದರೆ ಪ್ರಸ್ತುತ ಸಮಿತಿಯು ಅವೆಲ್ಲವನ್ನು ತೆಗೆದು, ಗೊಮ್ಮಟೇಶ್ವರ ಮತ್ತು ಗುಳುಕಾಯಿ ಅಜ್ಜಿ ಕಥೆಗೆ ಪ್ರಾಧಾನ್ಯತೆ ನೀಡಿದ್ದಾರೆ. ಅಂದರೆ ಇಲ್ಲಿ ಇತಿಹಾಸಕ್ಕೆ ಬದಲಾಗಿ ಪುರಾಣ, ಐತಿಹ್ಯಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ವಿಷಯಗಳನ್ನು ಕ್ರಮಬದ್ಧವಾಗಿ, ಕಾಲಪಟ್ಟಿಗನುಗುಣವಾಗಿ ಕೊಡಬೇಕು, ಅನಗತ್ಯ ವಿಷಯಗಳು ತುಂಬಿತುಳುಕಾಡುವ ಮಾಹಿತಿಕೋಶವಾಗಿಸದೆ ಜ್ಞಾನಕೋಶಗಳಾಗಿ ಮಾಡಬೇಕು ಎಂಬ ಪಠ್ಯದ ಆಶಯಕ್ಕೆ ವಿರುದ್ಧವಾಗಿದೆ.

ಬರಗೂರರ ಸಮಿತಿಯ 7ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಯಲಹಂಕ ನಾಡಪ್ರಭುಗಳ ಬಗೆಗೆ ಸುಮಾರು ಎರಡು ಪುಟಗಳ ಪರಿಚಯವನ್ನು ಮಾಡಿಕೊಡಲಾಗಿತ್ತು. ಯಲಹಂಕ ನಾಡಪ್ರಭುಗಳ ಆಳ್ವಿಕೆಯು ಬೆಂಗಳೂರು, ರಾಮನಗರ, ತುಮಕೂರು ಮತ್ತು ಅವಿಭಜಿತ ಕೋಲಾರ ಜಿಲ್ಲೆಯ ಕೆಲವು ಪ್ರದೇಶಗಳನ್ನು ಒಳಗೊಂಡಿತ್ತು ಎಂದು ಬರೆಯಲಾಗಿತ್ತು. ಆದರೆ, ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕದಲ್ಲಿ ಎರಡು ಪುಟಗಳ ಪಾಠವನ್ನು ಒಂದು ಪುಟಕ್ಕೆ ಕಡಿತಗೊಳಿಸಿದ್ದಾರೆ. ಅಲ್ಲದೆ, ಯಲಹಂಕ ನಾಡಪ್ರಭುಗಳ ಆಳ್ವಿಕೆಯನ್ನು ಬೆಂಗಳೂರು ಜಿಲ್ಲೆಗೆ ಸೀಮಿತಗೊಳಿಸುವ ಮೂಲಕ ಇತಿಹಾಸವನ್ನು ತಿರುಚಲಾಗಿದೆ.

6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿಯೇ ಕಾಶ್ಮೀರದ ಕಾರ್ಕೋಟ ಸಾಮ್ರಾಜ್ಯದ ಪಠ್ಯದ ಕೊನೆಯ ಭಾಗದಲ್ಲಿ ಹೆಸರಾಂತ ಕವಿಯಾದ ಕಲ್ಹಣನು ಲಲಿತಾಧಿತ್ಯನ ಆಸ್ಥಾನದಲ್ಲಿದ್ದನು ಎಂದು ಬರೆಯಲಾಗಿದೆ. ಲಲಿತಾಧಿತ್ಯನ ಕಾಲ ಸಾ.ಶ. 8ನೇ ಶತಮಾನ. ಕಲ್ಹಣನ ಕಾಲ ಸಾ.ಶ. 12ನೇ ಶತಮಾನ. ಈಗಿರುವಾಗ ಕಲ್ಹಣ ಹೇಗೆ ಲಲಿತಾಧಿತ್ಯನ ಆಸ್ಥಾನದಲ್ಲಿರಲು ಸಾಧ್ಯ? ಅದೇ ರೀತಿ ಔರಂಗಜೇಬನನ್ನು ಕೊನೆಯ ಮೊಘಲ ಸಾಮ್ರಾಟ ಎಂದು ಬರೆಯಲಾಗಿದೆ. ವಾಸ್ತವವಾಗಿ, ಕೊನೆಯ ಮೊಘಲ್ ದೊರೆ ’2ನೇ ಬಹದ್ದೂರ್ ಷಾ ಜಫರ್. ಈತನನ್ನು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರು ರಂಗೂನಿಗೆ ಗಡಿಪಾರು ಮಾಡುತ್ತಾರೆ. ಅಲ್ಲಿಯೇ ಕೊನೆ ಉಸಿರೆಳೆಯುತ್ತಾನೆ. ಇದು ಎಲ್ಲ ಬಗೆಯ ತಪ್ಪುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಗ್ಗಿಸಬೇಕು – ಎಂಬ ಆಶಯವನ್ನೇ ಲೇವಡಿ ಮಾಡಿದಂತಾಗಿದೆ.

6ನೇ ತರಗತಿಯ ಸಮಾಜ ವಿಜ್ಞಾನ (ಭಾಗ-2) ಪಠ್ಯಪುಸ್ತಕದಲ್ಲಿ ಔರಂಗಜೇಬನ ರಾಜಾಜ್ಞೆಯಂತೆ ಅನೇಕ ಮಂದಿರಗಳು ನಾಶವಾದವು. ಅವುಗಳಲ್ಲಿ ಖ್ಯಾತ ಸೋಮನಾಥ ಮಂದಿರ, ಕಾಶಿಯ ಶಿವಮಂದಿರ ಮತ್ತು ಮಥುರೆಯ ಕೃಷ್ಣಮಂದಿರ ಒಳಗೊಂಡಿದ್ದವು ಎಂಬುದಾಗಿ ಬರೆಯಲಾಗಿದೆ. ಪಠ್ಯಪುಸ್ತಕಗಳು “ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು” ಎಂಬ ತಮ್ಮ ಆಶಯದ ಮಾತುಗಳನ್ನೆ ಪರಿಷ್ಕರಣಾಕಾರರು ಮರೆತು ಕೋಮುದ್ವೇಷ ಭಾವನೆಯನ್ನು ಬಿತ್ತುವ ಅಂಶವನ್ನು ತಂದಿದ್ದಾರೆ. ಇದು ಪಠ್ಯಪುಸ್ತಕದ ಶೈಕ್ಷಣಿಕ ಚೌಕಟ್ಟಿನ ಮೂಲ ಆಶಯಕ್ಕೆ ತದ್ವಿರುದ್ಧವಾದುದು. ಇದೇ ವಿಷಯವಾಗಿ ಇತಿಹಾಸಕಾರ ಬಿ.ಎನ್.ಪಾಂಡೆ ಅವರು ತಮ್ಮ ’ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು’ ಎಂಬ ಸಂಶೋಧನಾ ಪ್ರಬಂಧದಲ್ಲಿ ಔರಂಗಜೇಬನು ಅನೇಕ ಹಿಂದೂ ದೇವಾಲಯಗಳಿಗೆ ನೀಡಿದ ಭೂದಾನದ ಆದೇಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಶ್ರದ್ಧಾವಂತ ಮುಸಲ್ಮಾನನಾದ ಔರಂಗಜೇಬನ ಆಳ್ವಿಕೆಯಲ್ಲಾದ ಗೋಲ್ಕೊಂಡದ ಜಾಮಿಯ ಮಸೀದಿಯ ಧ್ವಂಸಕ್ಕೂ, ಕಾಶಿಯ ವಿಶ್ವನಾಥ ದೇವಾಲಯದ ನಾಶಕ್ಕೂ ಕಾರಣಗಳನ್ನು ಅವರು ನೀಡಿದ್ದಾರೆ.

ಬರಗೂರು ರಾಮಚಂದ್ರಪ್ಪನವರ ಕಾಲದಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದ್ದ ಮಹಿಳಾ ಸಮಾಜ ಸುಧಾರಕಿಯರು ಮತ್ತು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪಾಠಗಳನ್ನೆ ಕೈಬಿಡಲಾಗಿದೆ. ಪರಿಷ್ಕರಣೆ ಸಮಿತಿ ಅಧ್ಯಕ್ಷರು ಕನ್ನಡ ಭಾಷಾ ಪಠ್ಯಪುಸ್ತಕಕ್ಕೆ ಬರೆದಿರುವ ಮಾತುಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗಸಮಾನತೆ ಭಾಷಾ ಪಠ್ಯಪುಸ್ತಕಗಳಲ್ಲಿ ಅಗತ್ಯವಿಲ್ಲ ಎಂಬುದನ್ನು ಇಲ್ಲಿಗೂ ಅಳವಡಿಸಿದ್ದಾರೆ. ಜೊತೆಗೆ ಉತ್ತರ ಭಾರತದ ಸಮಾಜಸುಧಾರಕರಿಗೆ ಆದ್ಯತೆ ನೀಡಿರುವ ಚಕ್ರತೀರ್ಥ ಸಮಿತಿಯು ಕನ್ನಡ ನಾಡಿನ ಸಾಂಸ್ಕೃತಿಕ ಚೇತನಗಳಾದ ಅಕ್ಕಮಹಾದೇವಿ, ಕನಕದಾಸರು,ಪುರಂದರದಾಸರು, ಶಿಶುನಾಳ ಶರೀಫರು ಅವರ ಪಠ್ಯಗಳನ್ನು ಕೈಬಿಟ್ಟಿರುವುದರ ಉದ್ದೇಶವೇನೆಂದು ತಿಳಿಯುವುದಿಲ್ಲ. ಹೀಗೆ ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಗೆ ಇಲ್ಲದಷ್ಟು ಸ್ಥಳಾವಕಾಶವನ್ನು ದೂರದ ಅಸ್ಸಾಮಿನಲ್ಲಿ ಆಳಿದ ಅಹೋಮ್ ರಾಜವಂಶಕ್ಕೆ ಕಲ್ಪಿಸಿಕೊಡಲಾಗಿದೆಯೇಕೆ ಎಂದು ಕನ್ನಡಿಗರು ಪ್ರಶ್ನಿಸಲೇಬೇಕು.

ಒಟ್ಟಾರೆ, 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನ ಪುನರ್ ಪರಿಷ್ಟೃತ ಪಠ್ಯ ಪುಸ್ತಕಗಳು ಕಲಿಕೆಯ ಆಶಯಗಳನ್ನೇ ಅಪಹಾಸ್ಯಕ್ಕೀಡು ಮಾಡಿವೆ. “ಸ್ವಹಿತಾಸಕ್ತಿಯ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು” ಎಂಬುದನ್ನು ಹೇಳುತ್ತಲೇ ಅದೇ ಕೆಲಸವನ್ನು ಮಾಡಿಮುಗಿಸಿರುವುದು ದ್ವಂದ್ವ, ವೈರುಧ್ಯಗಳಿಂದ ಕೂಡಿದ್ದು, ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಲಿಂಗಸಮಾನತೆಗಳನ್ನು ಗಾಳಿಗೆ ತೂರಲಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಒಂದು ವರ್ಗದ ಚರಿತ್ರೆಗಷ್ಟೇ ಮನ್ನಣೆ ನೀಡಿ, ಬಹುಸಂಖ್ಯಾತರ ಚರಿತ್ರೆಯನ್ನು ಗೌಣಗೊಳಿಸಿರುವುದವರ ಹುನ್ನಾರ ಯಾರಿಗಾದರೂ ಅರ್ಥವಾಗದೇ ಇರದು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳು ಪಠ್ಯಪುಸ್ತಕಗಳಲ್ಲಿ ದೋಷಗಳಾಗಿರುವುದನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಮರುಪರಿಷ್ಕರಣೆ ಮಾಡುವ ಮಾತುಗಳನ್ನೂ ಆಡಿದ್ದಾರೆ. ಪುನರ್ ಪರಿಷ್ಕರಣೆಗೊಂಡಿರುವ ಪುಸ್ತಕಗಳನ್ನು ಶಾಲೆಗಳು ಆರಂಭವಾಗಿರುವ ಹಂತದಲ್ಲಿ ಪುನಃ ಪರಿಷ್ಕರಣೆಗೆ ಒಳಪಡಿಸುವುದು ಸಾಧ್ಯವಾಗದ ಮಾತು. ಮುಂದಿನ ಪರಿಷ್ಕರಣೆ ಆಗುವವರೆಗೂ ಹಿಂದಿನ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಸೂಕ್ತವಾದ ಮಾರ್ಗವಾಗಿರುತ್ತದೆ.

ಹಂ.ಗು.ರಾಜೇಶ್

ಹಂ.ಗು.ರಾಜೇಶ್
ಇತಿಹಾಸ ದರ್ಪಣ ಪತ್ರಿಕೆಯ ಸಂಪಾದಕರು


ಇದನ್ನೂ ಓದಿ: ಒಕ್ಕೂಟ ಸರ್ಕಾರದ ಯೋಜನೆ: ‘ಹಿಂದಿ’ ಮಾತನಾಡುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...