Homeಕರ್ನಾಟಕದೇವದಾಸಿ ಮಹಿಳೆಯರ ಸಮಗ್ರ ಪುನರ್ವಸತಿಗೆ ಒತ್ತಾಯ

ದೇವದಾಸಿ ಮಹಿಳೆಯರ ಸಮಗ್ರ ಪುನರ್ವಸತಿಗೆ ಒತ್ತಾಯ

- Advertisement -
- Advertisement -

ಬೆಂಗಳೂರು: ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಂಡ ಮಹಿಳೆಯರು ಮತ್ತು ಅವರ ಮಕ್ಕಳ ಸಮಗ್ರ ಪುನರ್ವಸತಿಗಾಗಿ ಶ್ರಮಿಸುತ್ತಿರುವ ‘ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ-ಕರ್ನಾಟಕ’ವು, 2018ರ ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯನ್ನು ತಕ್ಷಣ ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್. ಅಂಜನೇಯ ಅವರು, ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳ ಘನತೆಯ ಬದುಕಿಗೆ ಈ ಕಾಯ್ದೆ ಅನಿವಾರ್ಯ ಎಂದು ಪ್ರತಿಪಾದಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಒಗ್ಗೂಡಿರುವ ದೇವದಾಸಿ ತಾಯಂದಿರು ಮತ್ತು ಮಕ್ಕಳು ತಮ್ಮದೇ ಆದ ವೇದಿಕೆಯನ್ನು ರೂಪಿಸಿಕೊಂಡಿದ್ದು, ದೇವದಾಸಿ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಗಂಭೀರವಾಗಿ ಚರ್ಚಿಸಿದ್ದಾರೆ. ಈ ಸಮುದಾಯದ ಮುಖಂಡರು ಹಾಗೂ ಅವರೊಂದಿಗೆ ಕೆಲಸ ಮಾಡುತ್ತಿರುವ ಸಂಘಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ಮನವಿಗಳನ್ನು ಸಲ್ಲಿಸುತ್ತಾ ಬಂದಿವೆ. ಇದರ ಪರಿಣಾಮವಾಗಿ, ದೇವದಾಸಿ ತಾಯಂದಿರ ಕುಟುಂಬಗಳಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ವಾಸಕ್ಕೆ ಮನೆ, ಭೂಮಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಿ, ಅವರ ಸಮಗ್ರ ಅಭಿವೃದ್ಧಿಗೆ 2018ರ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂತಿಮಗೊಳಿಸುತ್ತಿರುವುದಕ್ಕೆ ವೇದಿಕೆಯು ಅಭಿನಂದನೆ ಸಲ್ಲಿಸಿದೆ. ಸಿದ್ಧಪಡಿಸಿರುವ ಈ ಕಾಯ್ದೆಯು ದೇವದಾಸಿ ತಾಯಂದಿರು ಮತ್ತು ಮಕ್ಕಳ ಘನತೆಯ ಬದುಕಿಗೆ ದಾರಿ ಮಾಡಿಕೊಡಲಿದ್ದು, ಇದನ್ನು ತಕ್ಷಣ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಷ್ಠಾನಗೊಳಿಸಬೇಕು ಎಂದು ವೇದಿಕೆಯು ಮನವಿ ಮಾಡಿದೆ.

ಮರು ಸಮೀಕ್ಷೆಗೆ ಸಮಗ್ರ ಮಾನದಂಡಗಳ ಆಗ್ರಹ

ದೇವದಾಸಿ ತಾಯಂದಿರ ಮರು ಸಮೀಕ್ಷೆಯನ್ನು ಕೈಗೊಳ್ಳಲು ಸಮಗ್ರವಾದ ಮಾನದಂಡಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ತಕ್ಷಣವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ವೇದಿಕೆಯು ಒತ್ತಾಯಿಸಿದೆ. ಈ ಹಿಂದೆ ನಡೆದ ಸಮೀಕ್ಷೆಗಳಲ್ಲಿ ಗುರುತಿಸಲ್ಪಟ್ಟ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿದ್ದು, ಕೆಲವು ಕಾರಣಗಳಿಂದ ಅನೇಕ ದೇವದಾಸಿ ತಾಯಂದಿರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಕರ್ನಾಟಕ ಸರ್ಕಾರವು ಮರು ಸಮೀಕ್ಷೆಯನ್ನು ಕೈಗೊಳ್ಳಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ರಾಜ್ಯ ಮಾನವ ಹಕ್ಕುಗಳ ಆಯೋಗವೂ ಸಹ ಮುಖ್ಯ ಕಾರ್ಯದರ್ಶಿಗಳಿಗೆ ಸಮೀಕ್ಷೆಯ ಮೂಲಕ ಎಲ್ಲಾ ದೇವದಾಸಿ ತಾಯಂದಿರನ್ನು ಗುರುತಿಸಿ ವರದಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವೇದಿಕೆ ತಿಳಿಸಿದೆ.

ಆದರೆ, ಸಮೀಕ್ಷೆಗೆ 45 ವರ್ಷ ವಯೋಮಿತಿಯನ್ನು ನಿಗದಿಪಡಿಸುವ ಪ್ರಸ್ತಾಪಕ್ಕೆ ವೇದಿಕೆಯು ವಿರೋಧ ವ್ಯಕ್ತಪಡಿಸಿದೆ. ಹಿಂದಿನ ಸಮೀಕ್ಷೆಗಳಲ್ಲೂ ಇದೇ ಮಾನದಂಡವನ್ನು ಬಳಸಿದ್ದರಿಂದ ಅನೇಕ ಮಹಿಳೆಯರು ಸಮೀಕ್ಷಾ ಪಟ್ಟಿಯಿಂದ ಹೊರಗುಳಿದು, ಕೆಲವು ಪ್ರದೇಶಗಳಲ್ಲಿ ದೇವದಾಸಿ ಪದ್ಧತಿ ಮುಂದುವರೆಯಲು ಕಾರಣವಾಗಿದೆ. ಈಗ ಕೈಗೊಳ್ಳುವ ಸಮೀಕ್ಷೆಯಲ್ಲಿ ಯಾವುದೇ ವಯೋಮಿತಿಯನ್ನು ನಿಗದಿಪಡಿಸದೆ, ದೇವದಾಸಿ ಪದ್ಧತಿಗೆ ಒಳಗಾಗಿರುವ ಎಲ್ಲಾ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ವೇದಿಕೆ ಆಗ್ರಹಿಸಿದೆ. ಯಾವುದೇ ಅರ್ಹ ಮಹಿಳೆ ಸಮೀಕ್ಷೆಯಿಂದ ಹೊರಗುಳಿಯಬಾರದು ಮತ್ತು ಅನರ್ಹರು ಸೇರ್ಪಡೆಯಾಗಬಾರದು ಎಂದು ಸ್ಪಷ್ಟಪಡಿಸಿದೆ. ಇದಕ್ಕಾಗಿ, ಜಿಲ್ಲಾ ಮಟ್ಟಗಳಲ್ಲಿ ದೇವದಾಸಿ ತಾಯಂದಿರು, ಸಂಬಂಧಿತ ಅಧಿಕಾರಿಗಳು ಹಾಗೂ ಈ ಸಮುದಾಯದೊಂದಿಗೆ ಕೆಲಸ ಮಾಡುವ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಅದರ ಮೂಲಕ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದೆ. ರಾಜ್ಯಮಟ್ಟದಲ್ಲಿಯೂ ದೇವದಾಸಿ ಮಹಿಳೆಯರು ಮತ್ತು ವಿಷಯ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಮಾನದಂಡಗಳನ್ನು ರೂಪಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.

ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆಯು ರಾಜ್ಯ ಸರ್ಕಾರಕ್ಕೆ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:

ತಕ್ಷಣ ಕೈಗೊಳ್ಳಬೇಕಾದ ಕೆಲಸಗಳಲ್ಲಿ, ರಾಜ್ಯ ಸರ್ಕಾರವು ಅನುಮೋದಿಸಿರುವ ದೇವದಾಸಿ ತಾಯಂದಿರ ಕುಟುಂಬಗಳ ಸಮಗ್ರ ಮರು ಸಮೀಕ್ಷೆಯನ್ನು ತಕ್ಷಣವೇ ಪ್ರಾರಂಭಿಸಿ, ಅವರ ಸ್ಥಿತಿಗತಿಗಳನ್ನು ಅರಿತು ಸಮಗ್ರ ಕುಟುಂಬ ಪುನರ್ವಸತಿ ಯೋಜನೆಗಳನ್ನು ರೂಪಿಸಬೇಕು. ವಯೋವೃದ್ಧ ದೇವದಾಸಿ ತಾಯಂದಿರು ಮತ್ತು ಪೋಷಕರಿಲ್ಲದ ಅನಾಥ ಮಕ್ಕಳ ಆರೈಕೆಗಾಗಿ ಕೇಂದ್ರಗಳನ್ನು ಸ್ಥಾಪಿಸಿ, ಅನಾಥ ಮಕ್ಕಳಿಗೆ ವಸತಿಸಹಿತ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಮಾಸಾಶನ ಕೇವಲ ರೂ. 2,000 ಆಗಿದ್ದು, ಇದು ವಯೋವೃದ್ಧ ಮತ್ತು ಅನಾರೋಗ್ಯ ಪೀಡಿತ ದೇವದಾಸಿ ತಾಯಂದಿರಿಗೆ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ಹೆಚ್ಚಿನ ದೇವದಾಸಿ ತಾಯಂದಿರು ಬಳಲುತ್ತಿದ್ದು, ಮಕ್ಕಳ ಅರ್ಧದಲ್ಲೇ ಶಾಲೆ/ಕಾಲೇಜುಗಳನ್ನು ಬಿಟ್ಟು ದುಡಿಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ, ಮಾಸಾಶನವನ್ನು ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿಯ ಅರ್ಧದಷ್ಟಾದರೂ ಅಥವಾ ಮಾಸಿಕ ರೂ. 5,000ಕ್ಕೆ ಹೆಚ್ಚಿಸಬೇಕು. ದೇವದಾಸಿ ತಾಯಂದಿರ ಮಕ್ಕಳ ವಿವಾಹಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಪ್ರೋತ್ಸಾಹಧನ ನೀಡಿಲ್ಲ. ಅನುದಾನದ ಕೊರತೆಯ ಕಾರಣ ನೀಡಲಾಗುತ್ತಿದ್ದು, ತಕ್ಷಣವೇ ಕ್ರಮ ಕೈಗೊಂಡು ಅರ್ಜಿ ಸಲ್ಲಿಸಿರುವ ಎಲ್ಲ ಮಕ್ಕಳಿಗೆ ಪ್ರೋತ್ಸಾಹಧನ ನೀಡಬೇಕು.

ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಆನ್‌ಲೈನ್ ಅರ್ಜಿಗಳಲ್ಲಿ ತಂದೆಯ ಹೆಸರು ಕಡ್ಡಾಯವಾಗಿರುವುದರಿಂದ ದೇವದಾಸಿ ತಾಯಂದಿರ ಮಕ್ಕಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ. ಶಿಕ್ಷಣ, ಉದ್ಯೋಗ, ಪಾಸ್‌ಪೋರ್ಟ್ ಮತ್ತು ಇತರೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಾಗ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ, ತಂದೆಯ ಹೆಸರನ್ನು ಕಡ್ಡಾಯಗೊಳಿಸದೆ, ಪರ್ಯಾಯ ಆಯ್ಕೆಯನ್ನು ನೀಡುವಂತೆ ಮನವಿ ಮಾಡಿದೆ. ದೇವದಾಸಿ ತಾಯಂದಿರು ಮತ್ತು ಮಕ್ಕಳು ವಿವಿಧ ಇಲಾಖೆಗಳು, ಪಂಚಾಯತ್ ಮತ್ತು ಪುನರ್ವಸತಿ ಯೋಜನೆಗಳಲ್ಲಿ ಇತರರೊಂದಿಗೆ ಸ್ಪರ್ಧಿಸಿ ಮನೆ, ಭೂಮಿ, ಸ್ವಯಂ ಉದ್ಯೋಗ, ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಇರುವ ಪುನರ್ವಸತಿ ಯೋಜನೆಗಳಲ್ಲಿ ಹಣಕಾಸಿನ ಸಮಸ್ಯೆ ಇರುವುದರಿಂದ, ದೇವದಾಸಿ ತಾಯಂದಿರು ಮತ್ತು ಮಕ್ಕಳಿಗೆ ಪ್ರತ್ಯೇಕವಾದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಅಗತ್ಯ ಅನುದಾನವನ್ನು ನಿಗದಿಪಡಿಸಿ ಎಲ್ಲಾ ಕುಟುಂಬಗಳಿಗೂ ಪುನರ್ವಸತಿ ಕಲ್ಪಿಸಬೇಕು.

ದೇವದಾಸಿ ಪದ್ಧತಿ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಈ ಪದ್ಧತಿ ಕುರಿತು ತರಬೇತಿ ನೀಡಬೇಕು. ದೇವದಾಸಿ ತಾಯಂದಿರು ಮತ್ತು ಮಕ್ಕಳಿಗೆ ವಿವಿಧ ಪ್ರಮಾಣಪತ್ರಗಳನ್ನು ನೀಡುವಾಗ ಅಧಿಕಾರಿಗಳಿಂದ ಸಮಸ್ಯೆಗಳು ಎದುರಾಗುತ್ತಿದ್ದು, ಈ ಸಮಸ್ಯೆಗಳನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮನೆಯಿಲ್ಲದ ದೇವದಾಸಿ ತಾಯಂದಿರಿಗೆ ತಕ್ಷಣ ಮನೆ ನೀಡಬೇಕು. ನಿವೇಶನ ಇಲ್ಲದವರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು. ಈಗಾಗಲೇ ಪಟ್ಟಿಯಲ್ಲಿರುವ ಎಲ್ಲಾ ದೇವದಾಸಿ ತಾಯಂದಿರಿಗೆ ಏಕಕಾಲದಲ್ಲಿ ದೃಢೀಕರಣ ಪತ್ರ ನೀಡಬೇಕು ಮತ್ತು ತಾಯಿ ನಿಧನರಾಗಿರುವ ಮಕ್ಕಳಿಗೆ ದೃಢೀಕರಣ ಪತ್ರ ನೀಡಲು ಆದೇಶ ಹೊರಡಿಸಬೇಕು. ಹಳೆಯ ಯೋಜನೆಗಳಲ್ಲಿ ರೂ. 40,000ಕ್ಕೆ ಮನೆ ನಿರ್ಮಿಸಿಕೊಂಡಿರುವ ದೇವದಾಸಿ ತಾಯಂದಿರ ಮನೆಗಳು ಈಗ ಶಿಥಿಲಾವಸ್ಥೆಯಲ್ಲಿದ್ದು, ಅವರಿಗೆ ಮತ್ತೊಮ್ಮೆ ಮನೆ ನಿರ್ಮಿಸಲು ಯೋಜನೆಯನ್ನು ರೂಪಿಸಬೇಕು.

ಶಿಕ್ಷಣ ಪಡೆಯುತ್ತಿರುವ ಎಲ್ಲಾ ದೇವದಾಸಿ ತಾಯಂದಿರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನವನ್ನು ನಿಗದಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು. ಉನ್ನತ ಶಿಕ್ಷಣದಲ್ಲಿ ದೇವದಾಸಿ ತಾಯಂದಿರ ಮಕ್ಕಳಿಗೆ ಮೀಸಲಾತಿ ನೀಡಬೇಕು ಮತ್ತು ಅವರ ಎಲ್ಲಾ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ದೇವದಾಸಿ ಪದ್ಧತಿಗೆ ಒಳಗಾಗಿರುವವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದು, ಕೆಲವು ಹಿಂದುಳಿದ ಸಮುದಾಯಗಳ ಮಹಿಳೆಯರಿಗೂ ಸೇರಿದವರಿದ್ದಾರೆ. ಇವರಲ್ಲಿ ಕೆಲವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಯೋಜನೆಗಳು ಜಾರಿಯಲ್ಲಿದ್ದರೂ, ದೇವರಾಜ್ ಅರಸು ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಜಾತಿಗಳಿಗೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕೋರಲಾಗಿದೆ.

ಶೇಕಡಾ ಎಂಬತ್ತೈದರಷ್ಟು ದೇವದಾಸಿ ತಾಯಂದಿರು ಅನಕ್ಷರಸ್ಥರಾಗಿದ್ದು, ಅವರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅವರಿಗೆ ಸಮರ್ಪಕ ಮಾಹಿತಿ ನೀಡಬೇಕು ಮತ್ತು ಸ್ವಯಂ ಉದ್ಯೋಗ ಯೋಜನೆಗಳ ಮೊತ್ತವನ್ನು ರೂ. 10 ಲಕ್ಷದವರೆಗೆ ಹೆಚ್ಚಿಸಬೇಕು. ದೇವದಾಸಿ ಕುಟುಂಬಗಳಲ್ಲಿ ಅವಿದ್ಯಾವಂತರು ಅಥವಾ ಅರ್ಧದಲ್ಲೇ ಶಾಲೆ/ಕಾಲೇಜುಗಳನ್ನು ತ್ಯಜಿಸಿದವರು ಇರುವುದು ಅಧ್ಯಯನದಿಂದ ಕಂಡುಬಂದಿದೆ. ಆದ್ದರಿಂದ, ವಿದ್ಯಾವಂತ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ, ಉದ್ಯೋಗ ಪ್ರಾರಂಭಿಸಲು ಸರ್ಕಾರದಿಂದ ಧನಸಹಾಯ ನೀಡಬೇಕು. ದೇವದಾಸಿ ತಾಯಂದಿರ ಮಕ್ಕಳು ತಂದೆಯ ಹೆಸರು ಇಲ್ಲದೆ ಇರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ನೀಡುವಾಗ ಈ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಂಡು ಪ್ರಮಾಣಪತ್ರಗಳನ್ನು ನೀಡಲು ಆದೇಶಿಸಬೇಕು.

ದೇವದಾಸಿ ತಾಯಂದಿರಿಗೆ ಮನೆ, ಭೂಮಿ, ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳು ಹಣ ಪಡೆಯುತ್ತಿರುವುದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬಂದಿದೆ. ಆದ್ದರಿಂದ, ದೇವದಾಸಿ ತಾಯಂದಿರ ಕುಟುಂಬಗಳ ಸಮಗ್ರ ಸಮೀಕ್ಷೆ ಕೈಗೊಂಡು, ಅಗತ್ಯವಿರುವ ದೇವದಾಸಿ ತಾಯಂದಿರಿಗೆ ನೇರವಾಗಿ ಪುನರ್ವಸತಿ ಅಧಿಕಾರಿಗಳ ಮೂಲಕ ಯೋಜನೆಗಳನ್ನು ತಲುಪಿಸಬೇಕು. ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳು ಒಟ್ಟಾಗಿ ದೇವದಾಸಿ ಪದ್ಧತಿಯ ಸಂಪೂರ್ಣ ನಿಷೇಧ ಮತ್ತು ಪುನರ್ವಸತಿಗಾಗಿ ಕೆಲಸ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ದೇವದಾಸಿ ತಾಯಂದಿರಿಗೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯ ಹಣವನ್ನು ಮೀಸಲಿಟ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರದ ನೆರವಿನೊಂದಿಗೆ ದೇವದಾಸಿ ತಾಯಂದಿರು ಮತ್ತು ಮಕ್ಕಳಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲು ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೇಂದ್ರಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದನ್ನು ಪೂರ್ಣಗೊಳಿಸಬೇಕು.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ದೇವದಾಸಿ ತಾಯಂದಿರು ಮತ್ತು ಮಕ್ಕಳಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ದೇವದಾಸಿ ತಾಯಂದಿರ ಕುಟುಂಬದ ಎಲ್ಲಾ ಸದಸ್ಯರಿಗೂ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಸೋಪ್ ಮುಂತಾದ ಪ್ರಾಥಮಿಕ ಆರೋಗ್ಯ ಸಲಕರಣೆಗಳನ್ನು ನೀಡಬೇಕು. ಭಾಗ್ಯಲಕ್ಷ್ಮಿ ಬಾಂಡ್ ಪಡೆಯಲು ಗಂಡ-ಹೆಂಡತಿಯ ಜಂಟಿ ಖಾತೆ ಮತ್ತು ಗಂಡ-ಹೆಂಡತಿಯ ಫೋಟೋ ಕಡ್ಡಾಯವಾಗಿರುವುದರಿಂದ ದೇವದಾಸಿ ತಾಯಂದಿರ ಮಕ್ಕಳಿಗೆ ಈ ಸೌಲಭ್ಯಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ. ಇದಕ್ಕೆ ಇರುವ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದು, ವಿಶೇಷ ಗುಂಪಾಗಿ ಪರಿಗಣಿಸಿ ವಿನಾಯಿತಿ ನೀಡಬೇಕು. ದೇವದಾಸಿ ತಾಯಂದಿರು ನಿಧನರಾದರೆ ಮಕ್ಕಳು ಅನಾಥರಾಗುತ್ತಾರೆ. ಕೇಂದ್ರ ಸರ್ಕಾರದಿಂದ ಜಾರಿಯಲ್ಲಿರುವ ಒಂಟಿ ಪೋಷಕರು ನಿಧನರಾದರೆ ರಾಷ್ಟ್ರೀಯ ಭದ್ರತಾ ಯೋಜನೆಯಡಿ ಮಕ್ಕಳಿಗೆ ಹಣ ನೀಡುವಂತೆಯೇ, ದೇವದಾಸಿ ತಾಯಂದಿರು ನಿಧನರಾದರೆ ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಪ್ರತಿ ಮಗುವಿಗೆ ರೂ. 1 ಲಕ್ಷ ಹಣ ನೀಡಬೇಕು.

ದೀರ್ಘಕಾಲಿಕ ಬೇಡಿಕೆಗಳು

ದೀರ್ಘಕಾಲಿಕ ಬೇಡಿಕೆಗಳಲ್ಲಿ, ದೇವದಾಸಿ ತಾಯಂದಿರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಅವರನ್ನು ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ, ಪ್ರೋತ್ಸಾಹಧನ ನೀಡುವುದರ ಮೂಲಕ ಉದ್ಯೋಗವನ್ನು ಪ್ರಾರಂಭಿಸಲು ಕ್ರಮ ವಹಿಸಬೇಕು. ಹಿಂದಿನ ಸಮೀಕ್ಷೆಗಳಿಂದ ಬಿಟ್ಟುಹೋಗಿರುವ ಎಲ್ಲಾ ಅರ್ಹ ದೇವದಾಸಿ ತಾಯಂದಿರನ್ನು ಮತ್ತೊಮ್ಮೆ ಸಮೀಕ್ಷೆ ನಡೆಸಿ ಪಟ್ಟಿಗೆ ಸೇರಿಸಿಕೊಳ್ಳಬೇಕು. ಈ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ವಹಿಸಿ, ಗುರುತಿಸಲ್ಪಡುವ ದೇವದಾಸಿಯರಿಗೆ ಸಮಗ್ರ ಪುನರ್ವಸತಿ ಯೋಜನೆಯನ್ನು ರೂಪಿಸಿ ಅವರನ್ನು ಮುಖ್ಯವಾಹಿನಿ ಅಭಿವೃದ್ಧಿಯೊಂದಿಗೆ ಜೋಡಿಸಬೇಕು.

ದೇವದಾಸಿ ತಾಯಂದಿರ ಕುಟುಂಬಗಳಿಗೆ ಆದ್ಯತೆಯ ಮೇಲೆ ಭೂಮಿಯನ್ನು ನೀಡುವ ಯೋಜನೆಯನ್ನು ಶೀಘ್ರಗತಿಯಲ್ಲಿ ಜಾರಿಗೊಳಿಸಬೇಕು. ಭೂಮಿ ಹೊಂದಿರುವ ಎಲ್ಲಾ ದೇವದಾಸಿ ತಾಯಂದಿರಿಗೆ ‘ಗಂಗಾ ಕಲ್ಯಾಣ’ ಯೋಜನೆಯಡಿಯಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಿ ಅದಕ್ಕೆ ಪೂರಕವಾದ ಯಂತ್ರೋಪಕರಣಗಳನ್ನು ಅಳವಡಿಸಬೇಕು. ದೇವದಾಸಿ ತಾಯಂದಿರ ಎಲ್ಲಾ ಕುಟುಂಬಗಳಿಗೆ ಸಮಗ್ರ ಆರೋಗ್ಯ ಯೋಜನೆಯನ್ನು ರೂಪಿಸಿ, ವಿಶೇಷ ಆರೋಗ್ಯ ಚೀಟಿ ನೀಡಿ, ಉಚಿತ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು. ಸಾಮೂಹಿಕ ಕೃಷಿ ಮಾಡಲು ಭೂಮಿ ಮತ್ತು ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಟ್ಟು, ದೇವದಾಸಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಸಾಮೂಹಿಕ ಕೃಷಿಯ ತರಬೇತಿಯನ್ನು ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ತಕ್ಷಣವೇ ಪರಿಗಣಿಸಿ ದೇವದಾಸಿ ಸಮುದಾಯದ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ-ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಅಂಗೀಕರಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...