ದಲಿತ ಕುಟುಂಬಗಳು ತಮಗಾಗಿ ನಿರ್ಮಿಸಿದ ರಸ್ತೆಯಲ್ಲಿ ಓಡಾಡಲು ಸವರ್ಣಿಯ ಕುಟುಂಬದವರು ಅಡ್ಡಿಪಡಿಸುತ್ತಿರುವ, ಅದನ್ನು ಬಗೆಹರಿಸುವಂತೆ ತಾಲ್ಲೂಕು ಆಡಳಿತಕ್ಕೆ ಹಲವು ಮನವಿ ಮಾಡಿದರೂ ಸ್ಪಂದಿಸದಿರುವ ಅಮಾನವೀಯ ಪ್ರಕರಣ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನಲ್ಲಿ ಜರುಗಿದೆ.
ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಪುಟ್ಟ ಗ್ರಾಮದ ಹೆಸರು ಅರೇನಹಳ್ಳಿ ಕಾಲೋನಿ. ಇಲ್ಲಿ 20 ಕ್ಕೂ ಹೆಚ್ಚು ದಲಿತ ಕುಟುಂಬಗಳು ಸುಮಾರು 150 ವರ್ಷದ ಹಿಂದಿನಿಂದಲೂ ವಾಸಿಸುತ್ತಾ ಬಂದಿವೆ. ಅವರ ಬಹುದಿನದ ಬೇಡಿಕೆಯಿಂದ 2018-19ರಲ್ಲಿ ಸರ್ಕಾರದ ವತಿಯಿಂದ ಕಾಂಕ್ರೀಟ್ ರಸ್ತೆಯೇನೊ ನಿರ್ಮಾಣವಾಗಿದೆ. ಆದರೆ ಆ ರಸ್ತೆಯಲ್ಲಿ ದಲಿತರು ಓಡಾಡುವಂತಿಲ್ಲ. ಏಕೆಂದರೆ ಅಲ್ಲಿಯೇ ಪಕ್ಕದಲ್ಲಿ ಮನೆ ಕಟ್ಟಿಕೊಂಡಿರುವ ತಮ್ಮೆಗೌಡ ಎಂಬ ಒಕ್ಕಲಿಗ ಸಮುದಾಯದ ಕುಟುಂಬದವರು ರಸ್ತೆಯ ಎರಡೂ ಬದಿಗೂ ತೆಂಗಿನ ಗರಿಗಳನ್ನು ಸುರಿದು ರಸ್ತೆಯನ್ನು ಮುಚ್ಚಿಬಿಟ್ಟಿದ್ದಾರೆ. ಇದರಿಂದ ಕಷ್ಟ ಅನುಭವಿಸುತ್ತಿರುವ ದಲಿತ ಕುಟುಂಬಗಳು ಬೀರುವಳ್ಳಿ ಗ್ರಾಮ ಪಂಚಾಯ್ತಿಗೆ, ತಹಶೀಲ್ದಾರ್‌ರವರಿಗೆ ಹಲವಾರು ಮನವಿ ಮಾಡಿದರೂ ಪ್ರಯೋಜನವಾಗದೆ ದಿಕ್ಕುಕಾಣದಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಗ್ರಾಮದ ಯುವಕ ಶಂಕರ್, “ಮೂರು ವರ್ಷದ ಹಿಂದೆ ಎಸ್‌ಸಿಪಿ ಯೋಜನೆಯಡಿ ನಮ್ಮ ಕಾಲೋನಿಗೆ ಸರ್ವೆ ನಂಬರ್ 25 ರಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಮಾಡಲಾಯಿತು. ಆದರೆ ರಸ್ತೆ ಮಾಡಲು ತಮ್ಮ ಜಮೀನಿನ ಕೆಲ ಭಾಗ ಬಿಟ್ಟುಕೊಟ್ಟಿರುವ ತಮ್ಮೆಗೌಡ ಎಂಬುವವರ ಕುಟುಂಬ ತಮಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂದು ರಸ್ತೆಯ ಎರಡೂ ಬದಿಗೆ ತೆಂಗಿನ ಮೊಟ್ಟೆಗಳನ್ನು ಸುರಿದು ರಸ್ತೆ ಮುಚ್ಚಿದ್ದಾರೆ. ಈ ಕುರಿತು ಗ್ರಾಮ ಪಂಚಾಯ್ತಿಯ ಪಿಡಿಓರವರನ್ನು ಕೇಳಿದರೆ ತಮ್ಮೆಗೌಡರು ಮನೆ ಕಟ್ಟಿಕೊಳ್ಳಲು ಎಸ್‌ಸಿಪಿ ಯೋಜನೆಯಡಿ 5 ಲಕ್ಷ ರೂ ಅನುದಾನ ನೀಡಿದ್ದೇವೆ. ಹಾಗಾಗಿ ಅವರಿಗೆ ಪರಿಹಾರ ಕೊಟ್ಟಾಂತಾಗಿದೆ ಎನ್ನುತ್ತಾರೆ. ತಹಶೀಲ್ದಾರರಿಗೆ ಎರಡು ಬಾರಿ ಮನವಿ ಮಾಡಿದರೂ ಅವರು ಇಲ್ಲಿಗೆ ಬಂದು ಸಮಸ್ಯೆ ಪರಿಹರಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಡಿಯೋ ನೋಡಿ
ಇದನ್ನೂ ಓದಿ: ದಲಿತ ಇತಿಹಾಸ ತಿಂಗಳು: ಗತದ ನೆನಪುಗಳು ಮತ್ತು ವರ್ತಮಾನದ ಅವಮಾನ, ಹಲ್ಲೆ- ಕೊಲೆಗಳು
ಈ ನಮ್ಮ ಪುಟ್ಟ ಗ್ರಾಮದಲ್ಲಿ ಕೆಲವೇ ದಲಿತ ಕುಟುಂಬಗಳಿವೆ. ಅವರ್ಯಾರು ಸಮರ್ಣಿಯರ ವಿರುದ್ಧ ಮಾತನಾಡುವ ಧೈರ್ಯ ಹೊಂದಿಲ್ಲ. ಗ್ರಾಮ ಪಂಚಾಯ್ತಿಗೆ ದೂರು ಕೊಟ್ಟಿದ್ದೇವೆ. ಗ್ರಾಮ ಪಂಚಾಯ್ತಿಯು ಜನರಿಗೆ ತೊಂದರೆಯಾಗುತ್ತಿದೆ ಹಾಗಾಗಿ ರಸ್ತೆ ತೆರವು ಮಾಡಿಕೊಡಬೇಕೆಂದು ತಹಶೀಲ್ದಾರ್‌ರವರಿಗೆ ಒಂದೂವರೆ ತಿಂಗಳ ಹಿಂದೆಯೆ ಪತ್ರ ಬರೆದಿದೆ. ಆದರೆ ಸಮಸ್ಯೆ ಮಾತ್ರ ಇದುವರೆಗೂ ಬಗೆಹರಿದಿಲ್ಲ. ನಮ್ಮನ್ನು ಈ ರೀತಿಯ ಮೂಲಭೂತ ಸೌಲಭ್ಯಗಳಿಂದ ವಂಚಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಶಂಕರ್.
ನಮಗೆ ಪರ್ಯಾಯ ರಸ್ತೆ ಸಹ ಇಲ್ಲದ ಕಾರಣ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ವಾಹನಗಳನ್ನು ಮನೆಯಲ್ಲಿಯೇ ನಿಲ್ಲಿಸಿ ಹೊಲಗಳ ಮೇಲೆ ಬಹುದೂರಕ್ಕೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬಗೆಹರಿಸಬೇಕು ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ಈ ಕುರಿತು ತಹಶೀಲ್ದಾರ್‌ರವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಸಿಕ್ಕ ನಂತರ ಅಪ್‌ಡೇಟ್ ಮಾಡಲಾಗುವುದು.



Tahsildar mele D. C. ge innu yaake dooru kottilla…?