Homeಮುಖಪುಟಪೆಟ್ರೋಲ್ - ಡೀಸೆಲ್ ಬೆಲೆ ಕಡಿಮೆ ಮಾಡಬೇಕಿರುವುದು ಮೋದಿ ಸರ್ಕಾರವೋ? ರಾಜ್ಯ ಸರ್ಕಾರಗಳೊ?: ಇಲ್ಲಿದೆ ಡೀಟೈಲ್ಸ್

ಪೆಟ್ರೋಲ್ – ಡೀಸೆಲ್ ಬೆಲೆ ಕಡಿಮೆ ಮಾಡಬೇಕಿರುವುದು ಮೋದಿ ಸರ್ಕಾರವೋ? ರಾಜ್ಯ ಸರ್ಕಾರಗಳೊ?: ಇಲ್ಲಿದೆ ಡೀಟೈಲ್ಸ್

ಪೆಟ್ರೋಲ್- ಡೀಸೆಲ್ ಅನ್ನು GST ವ್ಯಾಪ್ತಿಗೆ ತರಬೇಕೆ-ಬೇಡವೇ?

- Advertisement -
- Advertisement -

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಾಕ್ ಸಮರ ಆರಂಭವಾಗಿದೆ. ರಾಜ್ಯಗಳೊಂದಿಗೆ ಕೋವಿಡ್ ಸಂಬಂಧಿತ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು “ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ತೆರಿಗೆಯನ್ನು ಕಡಿಮೆ ಮಾಡಬೇಕು” ಎಂದು ಹೇಳಿಕೆ ನೀಡಿದ ನಂತರ ವಿವಾದ ತಾರಕಕ್ಕೇರಿದೆ.

“ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಕೇಂದ್ರವು ಕಳೆದ ನವೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ರಾಜ್ಯಗಳು ತಮ್ಮ ತೆರಿಗೆಯನ್ನು ಕಡಿಮೆ ಮಾಡಿ ಮತ್ತು ಅದರ ಲಾಭವನ್ನು ಜನರಿಗೆ ವರ್ಗಾಯಿಸಲು ವಿನಂತಿಸಿದ್ದೇವೆ. ಅದರೆ ”ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಲು ಒಪ್ಪಲಿಲ್ಲ. ಹೆಚ್ಚಿನ ಬೆಲೆಗಳ ಹೊರೆ ನಾಗರಿಕರ ಮೇಲೆ ಬಿದ್ದಿದೆ” ಎಂದು ಮೋದಿ ಸಭೆಯಲ್ಲಿ ಹೇಳಿದ್ದರು.

ಇದಕ್ಕೆ ತೀವ್ರವಾಗಿ ಟೀಕಿಸಿರುವ ಪ್ರತಿಪಕ್ಷಗಳು, ಅದರಲ್ಲಿಯೂ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ‘ಪ್ರಧಾನಿಗಳೆ ರಾಜ್ಯಗಳನ್ನು ದೂರುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ. “ರಾಜ್ಯಗಳನ್ನು ದುರ್ಬಲಗೊಳಿಸಲು ಆರ್ಥಿಕ ಸಂಷಕ್ಟ ಸೃಷ್ಟಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ ಯಾರು ಎಷ್ಟು ತೆರಿಗೆ ವಿಧಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿ” ಎಂದು ತೆಲಂಗಾಣ ಸಿಎಂ ಕೆಸಿಆರ್ ಸವಾಲು ಹಾಕಿದ್ದಾರೆ. “ನಾವೀಗ ಪ್ರತಿ ವರ್ಷ 1500 ಕೋಟಿ ರೂಗಳನ್ನು ಪೆಟ್ರೋಲ್ ಡೀಸೆಲ್ ಮೇಲಿನ ಸಬ್ಸಿಡಿ ನೀಡಲು ಬಳಸುತ್ತಿದ್ದೇವೆ. ಕೇಂದ್ರದಿಂದ ಬಂಗಾಳಕ್ಕೆ ಬರಬೇಕಿರುವ 97,000 ಕೋಟಿ ಬಾಕಿ ಹಣ ನೀಡಿ. ನಾವು ಪ್ರತಿವರ್ಷ 3000 ಕೋಟಿ ರೂ ಇಂಧನದ ಮೇಲಿನ ಸಬ್ಸಿಡಿಗೆ ಬಳಸುತ್ತೇವೆ” ಎಂದು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಯಾರು ಕಾರಣ ಎಂಬುದನ್ನು ಗಮನಿಸೋಣ.

1. ಜೇಮ್ಸ್ ವಿಲ್ಸನ್ ಎಂಬ ಡೇಟಾ ಸೈಂಟಿಸ್ಟ್ ಏಪ್ರಿಲ್ 16 ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ನಿಗಧಿಯಾಗುವುದರ ಕುರಿತು ಸಂಶೋಧನಾ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ. ಅದರಂತೆ ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ ಹೆಚ್ಚಿರುವುದು ಕಂಡುಬಂದಿದೆ. ಕೆಳಗಿನ ಚಾರ್ಟ್ ನೋಡಿ

ಒಂದು ಲೀಟರ್ ಪೆಟ್ರೋಲ್‌ನ ಮೂಲಬೆಲೆ : 56.52 ರೂ (ಸಾಕಾಣೆ ವೆಚ್ಚ ಸೇರಿ)

ಕೇಂದ್ರ ಸರ್ಕಾರದ ಅಬಕಾರಿ ಶುಂಕ         : 27.90 ರೂ

ಡೀಲರ್ ಕಮಿಷನ್                            : 03.86 ರೂ

ರಾಜ್ಯದ ವ್ಯಾಟ್/ಮಾರಾಟ ತೆರಿಗೆ            : 17.13 ರೂ

ಗ್ರಾಹಕರಿಗೆ ಮಾರಟವಾಗುವ ಬೆಲೆ            : 105.41 ರೂ

2. ಕೇಂದ್ರದ ಅಬಕಾರಿ ತೆರಿಗೆಯಲ್ಲಿ ಸತತ ಏರಿಕೆ:

ನರೇಂದ್ರ ಮೋದಿಯವರು ತಾವು ಅಧಿಕಾರಕ್ಕೆ ಬಂದರೆ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಡೀಸೆಲ್ ನೀಡುವುದಾಗಿ ಭರವಸೆ ನೀಡಿದ್ದರು. ಅವರು 2014 ರಲ್ಲಿ ಅಧಿಕಾರಕ್ಕೆ ಬಂದಾಗ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 9.48ರೂಗಳನ್ನು ಅಬಕಾರಿ ಶುಂಕ ವಿಧಿಸಲಾಗುತ್ತಿತ್ತು. ಆದರೆ ಮೋದಿ ಆಡಳಿತದಲ್ಲಿಅದು ಕ್ರಮೇಣ ಏರುತ್ತಲೇ ಸಾಗಿ 2021ರಲ್ಲಿ 32.98 ರೂಗೆ ಏರಿಕೆಯಾಗಿತ್ತು. ಆ ನಂತರ ಉತ್ತರ ಪ್ರದೇಶ ಸೇರಿ 5 ರಾಜ್ಯಗಳ ಚುನಾವಣೆ ಘೋಷಣೆಯಾದ ನಂತರ 2021ರ ನವೆಂಬರ್ 04ರಂದು ಮೋದಿಯವರು ಅಬಕಾರಿ ಶುಂಕವನ್ನು 27.90 ರೂಗೆ ಇಳಿಸಿದ್ದರು. ಆದರೆ ಇತ್ತೀಚೆಗೆ ಪೆಟ್ರೋಲ್ ಮೇಲಿನ ಮೂಲಬೆಲೆಯಲ್ಲಿ ಅಧಿಕವಾಗಿದ್ದು ಅದನ್ನು ನೇರವಾಗಿ ಗ್ರಾಮಕರ ಮೇಲೆ ವರ್ಗಾಯಿಸಲಾಗಿದೆ.

ಕೇಂದ್ರ ಅಬಕಾರಿ ಶುಂಕ ಏರಿಸಿದ್ದರ ಚಾರ್ಟ್ ನೋಡಿ

3. ಕೇಂದ್ರವು ಮೂಲ ಅಬಕಾರಿ ತೆರಿಗೆಯನ್ನು ಮಾತ್ರ ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ

2012ರಲ್ಲಿ ಮೂಲ ಅಬಕಾರಿ ತೆರಿಗೆ (Base Excise duty) ಶೇ.67 ರಷ್ಟಿತ್ತು. ಉಳಿದ ಶೇ.33 ರಷ್ಟು ಸೆಸ್ ತೆರಿಗೆ ಇತ್ತು. ಆಗಿನ ಕೇಂದ್ರ ಸರ್ಕಾರ ಮೂಲ ಅಬಕಾರಿ ತೆರಿಗೆಯಲ್ಲಿ ಶೇ.68 ರಷ್ಟನ್ನು ತಾನು ಇಟ್ಟುಕೊಂಡು ಶೇ.32 ಅನ್ನು ರಾಜ್ಯಗಳಿಗೆ ನೀಡುತ್ತಿತ್ತು. (2014 ರಲ್ಲಿ 1ಲೀ. ಪೆಟ್ರೋಲ್ ಮೇಲೆ 9.48 ರೂ ತೆರಿಗೆ ಸಂಗ್ರಹಿಸುತ್ತಿದ್ದ ಕೇಂದ್ರ ಸರ್ಕಾರ 6.45 ರೂ ಅನ್ನು ತಾನು ಇಟ್ಟುಕೊಂಡು, 3.03ರೂ ಅನ್ನು ರಾಜ್ಯಗಳಿಗೆ ನೀಡುತ್ತಿತ್ತು.)

ಆದರೆ ಈಗ 2022 ರಲ್ಲಿ ಮೂಲ ಅಬಕಾರಿ ತೆರಿಗೆ ಶೇ.5ಕ್ಕಿಂತ ಕಡಿಮೆಯಾಗಿದ್ದು ಸೆಸ್ ಒಂದೇ ಶೇ.95 ರಷ್ಟು ಆಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರ ಸರ್ಕಾರ ಮೂಲ ಅಬಕಾರಿ ತೆರಿಗೆಯನ್ನು ಮಾತ್ರ ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆಯೆ ಹೊರತು ಸೆಸ್ ಅನ್ನು ಅಲ್ಲ.

ಅಂದರೆ 2022 ರಲ್ಲಿ 1ಲೀ. ಪೆಟ್ರೋಲ್ ಮೇಲೆ 27.90 ರೂ ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ 27.31 ರೂ ಅನ್ನು ತಾನು ಇಟ್ಟುಕೊಂಡು, ಕೇವಲ 0.59 ರೂ ಅನ್ನು ರಾಜ್ಯಗಳಿಗೆ ನೀಡುತ್ತಿದೆ. ಕೇಂದ್ರ ರಾಜ್ಯದ ಅನುಪಾತ 98:02 ಆಗಿದೆ.. ಅಂದರೆ ನಿಧಾನವಾಗಿ ಅದು ರಾಜ್ಯಗಳೊಂದಿಗೆ ತಾನು ಹಂಚಿಕೊಳ್ಳುತ್ತಿದ್ದ ತೆರಿಗೆ ಪಾಲನ್ನು ನಿಲ್ಲಿಸಿಬಿಟ್ಟಿದೆ!

4. ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ ಮೊದಲೇ ನಿಗಧಿಯಾಗಿರುತ್ತದೆ. ಅಂದರೆ ಒಂದು ಲೀಟರ್ ಮೇಲೆ ಅದು ತೆರಿಗೆ ವಿಧಿಸುತ್ತದೆ. ಆದರೆ ರಾಜ್ಯಗಳು ಮೂಲ ಬೆಲೆಗೆ ಇಂತಿಷ್ಟು ಶೇ. ಎಂದು ವ್ಯಾಟ್ ಅಥವಾ ಮಾರಾಟ ತೆರಿಗೆ ವಿಧಿಸುತ್ತವೆ. ದೇಶಾದ್ಯಂತ ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಗಳು ಪೆಟ್ರೋಲ್ ಮತ್ತು ಆಲ್ಕೋಹಾಲ್ ಹೊರತುಪಡಿಸಿ ಉಳಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕಳೆದುಕೊಂಡಿವೆ.

5. ರಾಜ್ಯಗಳು ಪೆಟ್ರೋಲ್‌ನ ಮೂಲ ಬೆಲೆ ಮೇಲೆ ಮಾತ್ರ ವ್ಯಾಟ್ ವಿಧಿಸಬಹುದು. ಆದರೆ ಕೇಂದ್ರ ಸರ್ಕಾರವು ಸಾಕಾಣೆ ವೆಚ್ಚ ಮತ್ತು ಡೀಲರ್ ಕಮಿಷನ್ ಮೇಲೆಯೂ ಅಬಕಾರಿ ಶುಂಕ ವಿಧಿಸುತ್ತದೆ.

6. ಜಿ.ಎಸ್‌.ಟಿ ವ್ಯಾಪ್ತಿಗೆ ತರಲು ರಾಜ್ಯಗಳ ವಿರೋಧವೇಕೆ

ಕೇಂದ್ರಕ್ಕೆ ಹಲವಾರು ಮೂಲಗಳಿಂದ ಸಂಪತ್ತು ಹರಿದುಬರುತ್ತದೆ. ಕಸ್ಟಮ್ ಡ್ಯೂಟಿ, ಕಾರ್ಪೊರೇಟ್ ಟ್ಯಾಕ್ಸ್, ಜಿಎಸ್‌ಟಿ, ಸೆಸ್ ಇತ್ಯಾದಿಗಳ ಮೂಲಕ ಹಣ ಬರುತ್ತೆ.. ಆದರೆ ರಾಜ್ಯಗಳು ಪೆಟ್ರೋಲ್ – ಡೀಸೆಲ್ ಮತ್ತು ಲಿಕ್ಕರ್ ಮೇಲೆ ಮಾತ್ರ ತೆರಿಗೆ ಹಾಕಬಹುದು ಬಿಟ್ಟರೆ ಬೇರೆ ಮಾರ್ಗಗಳಿಲ್ಲ. ಕೇಂದ್ರ ಸರ್ಕಾರವು ರಾಜ್ಯಗಳ ಪಾಲಿನ ಜಿಎಸ್‌ಟಿಯನ್ನು ಸಕಾಲದಲ್ಲಿ ಸಮರ್ಪಕವಾಗಿ ನೀಡುತ್ತಿಲ್ಲ. ಈಗಾಗಲೇ ರಾಜ್ಯಗಳು ತಮ್ಮ ಬೊಕ್ಕಸ ಖಾಲಿ ಮಾಡಿಕೊಂಡು ಸಾಲ ಮಾಡುವ ಪರಿಸ್ಥಿತಿಗೆ ತಲುಪಿವೆ. ಕೇಂದ್ರ ಕೊಡಬೇಕಾದ ಹಣದತ್ತ ನೋಡುತ್ತಿವೆ.. ಹಾಗಾಗಿ ಪೆಟ್ರೋಲ್ ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಇರುವ ಆದಾಯದ ಮೂಲವು ಹೊರಟುಹೋಗುತ್ತದೆ. ಅದು ರಾಜ್ಯಗಳ ಪಾಲಿಗೆ ಮರಣ ಶಾಸನ ಬರೆದಂತೆ ಎನ್ನುವುದು ಅವರ ಅಭಿಪ್ರಾಯ.

7. ಕರ್ನಾಟಕದ ಕತೆ

2020-21 ನೇ ಸಾಲಿನಲ್ಲಿ 11,000 ಕೋಟಿ ಜಿಎಸ್‌ಟಿ ಬಾಕಿಯನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿಲ್ಲ. 15 ಆರ್ಥಿಕ ಕಮಿಷನ್ 5,365 ಕೋಟಿ ರೂ ಪರಿಹಾರ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿತ್ತು. ಆದರೆ ಕೇಂದ್ರ ಕೊಡಲಿಲ್ಲ.. ರಾಜ್ಯದ ಪಾಲಿನ ನೆರೆ ಪರಿಹಾರವಾಗಿ ರಾಜ್ಯ ಸರ್ಕಾರ ಕೇಳಿದ್ದು 35,000 ಕೋಟಿ.. ಆದರೆ ಕೇಂದ್ರ ಕೊಟ್ಟಿದ್ದು 1,800 ಕೋಟಿ ಮಾತ್ರ.. ಕೇಂದ್ರ ಸರ್ಕಾರ ಸೆಸ್ ರೂಪದಲ್ಲಿ ಸಂಗ್ರಹಿಸುವ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ.. ಇದು ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲಿ ಪೆಟ್ರೋಲ್ ಅನ್ನು ಜಿ.ಎಸ್‌.ಜಿ ವ್ಯಾಪ್ತಿಗೆ ತರಲು ಸಾಧ್ಯವೇ?

8. ಕೇಂದ್ರ ಸರ್ಕಾರ ಅಬಕಾರಿ ಶುಂಕ ಹೆಚ್ಚಿಸಲು ಆಯಿಲ್ ಬಾಂಡ್‌ಗಳು ಕಾರಣವೇ?

ಮನಮೋಹನ್‌ ಸಿಂಗ್‌ರವರು ಪ್ರಧಾನಿಯಾಗಿದ್ದ ಯುಪಿಎ 1 ರ ಕಾಲದಲ್ಲಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆದ ಬೆಲೆ ಅತಿ ದುಬಾರಿಯಾಗಿತ್ತು. ಅಂದರೆ ಒಂದು ಬ್ಯಾರೆಲ್‌ಗೆ 120 ಡಾಲ್‌ರ್‌ಗಿಂತ ಅಧಿಕವಾಗಿತ್ತು. ಹಾಗಾಗಿ ಅದರ ಹೊರೆ ಜನರಿಗೆ ಬೀಳದಂತೆ ತಡೆಯಲು ಸಬ್ಸಿಡಿ ದರದಲ್ಲಿ ಪೆಟ್ರೋಲ್ ಮಾರಬೇಕು ಮತ್ತು ಅದಕ್ಕೆ ಬದಲಾಗಿ ಸರ್ಕಾರ ಧೀರ್ಘಾವಧಿಯ ಆಯಿಲ್‌ ಬಾಂಡ್‌ಗಳನ್ನು ಪೆಟ್ರೋಲಿಯಂ ಕಂಪನಿಗಳಿಗೆ ನೀಡಿತ್ತು ಅದರ ಮೇಲಿನ ಬಡ್ಡಿ ಕಟ್ಟುವುದಾಗಿ ಒಪ್ಪಿಕೊಂಡಿತ್ತು. ಅದರ ಒಟ್ಟು ಮೊತ್ತ 1,44,186 ಕೋಟಿ ರೂಗಳಾಗಿದ್ದು, ಆ ಬಾಂಡ್‌ಗಳು mature ಆಗಲು ಇದ್ದ ಅವಧಿ 15 – 20 ವರ್ಷ ಆಗಿತ್ತು. ಹಾಗೆಯೇ ಅವುಗಳ ಮೇಲಿನ ಬಡ್ಡಿಯಾಗಿ ಯುಪಿಎ 2 ರ ಸಮಯದಲ್ಲಿ 53,163 ಕೋಟಿ ರೂಗಳನ್ನು ಮನಮೋಹನ್‌ ಸಿಂಗ್ ಸರ್ಕಾರ ಪಾವತಿಸಿತ್ತು.

ಅದೇ ರೀತಿ ಎನ್‌ಡಿಎ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ 7 ವರ್ಷಗಳಲ್ಲಿ ಆಯಿಲ್ ಬಾಂಡ್‌ಗಳ ಮೇಲಿನ ಬಡ್ಡಿಯಾಗಿ ಒಟ್ಟು 70,214 ಕೋಟಿ ರೂಗಳನ್ನು ಮತ್ತು  2014-15 ರಿಂದ 2018-19 ರ ಅವಧಿಗೆ mature ಆದ ಎರಡು ಆಯಿಲ್ ಬಾಂಡ್‌ಗಳ ಮೊತ್ತವಾದ 3,500 ರೂಗಳನ್ನು ಪಾವತಿಸಲಾಗಿದೆ. ಅಂದರೆ ಅದು ಒಟ್ಟು 73,714 ಕೋಟಿ ರೂ ಹೊರೆ ಹೊತ್ತುಕೊಂಡಿದೆ.

ಬಾಕಿ ಉಳಿದಿರುವ ಒಟ್ಟು 12 ಆಯಿಲ್ ಬಾಂಡ್‌ಗಳ ಒಟ್ಟು ಮೊತ್ತ 1,30,923 ಕೋಟಿ ರೂಗಳಾಗಿವೆ. ಅವುಗಳ ಮೇಲೆ ಕಟ್ಟಬೇಕಾದ ಬಡ್ಡಿ ಅಂದಾಜು 40,000 ಕೋಟಿ ರೂಗಳಾಗಿವೆ. ಅವರೆಡನ್ನೂ ಸೇರಿಸಿದರೆ ಆಯಿಲ್‌ ಬಾಂಡ್‌ಗಳಿಂದ ನರೇಂದ್ರ ಮೋದಿ ಸರ್ಕಾರಕ್ಕೆ ಒಟ್ಟು 1,70,923 ಹೊರೆಯಾಗಲಿದೆ. ಅದನ್ನು ತೀರಿಸಲು ಮೋದಿ ಸರ್ಕಾರಕ್ಕೆ ಇನ್ನು 5 ವರ್ಷಗಳ ಸಮಯವಿದೆ.

ಆದರೆ ನರೇಂದ್ರ ಮೋದಿ ಸರ್ಕಾರ 2014-2020ರ ಅವಧಿಯಲ್ಲಿ ಕೇವಲ 6 ವರ್ಷದ ಆಡಳಿತದಲ್ಲಿ ಸುಮಾರು 11 ಲಕ್ಷ ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹಿಸಿದೆ! 2020-21ರ ಒಂದೇ ವರ್ಷದಲ್ಲಿ ಅದು ಪೆಟ್ರೋಲ್ ಡೀಸೆಲ್ ಮೇಲೆ 2.94 ಲಕ್ಷ ಕೋಟಿ ಅಬಕಾರಿ ಸುಂಕ ವಿಧಿಸಿದೆ. 2021-22 ರಲ್ಲಿಯೂ 3 ಲಕ್ಷ ಕೋಟಿಗೂ ಅಧಿಕ ಅಬಕಾರಿ ಸುಂಕ ಸಂಗ್ರಹಿಸಿದೆ. ಅಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೆಸ್ ಮತ್ತು ಅಬಕಾರಿ ಸುಂಕ ಸೇರಿ ಸುಮಾರು 20 ಲಕ್ಷ ಕೋಟಿ ರೂ ಹಣ ಸಂಗ್ರಹಿಸಿದೆ. ಇದಕ್ಕೆ ಹೋಲಿಸಿದರೆ ಆಯಿಲ್ ಬಾಂಡ್‌ಗಳ ಮೇಲೆ ಈಗಾಗಲೇ ಪಾವತಿಸಿರುವ 73,714 ರೂ ಮತ್ತು ಪಾವತಿಸಬೇಕಿರುವ 1.7 ಲಕ್ಷ ಕೋಟಿ ದೊಡ್ಡ ಮೊತ್ತವೇ ಅಲ್ಲ.. ಹಾಗಾಗಿ ಅಬಕಾರಿ ಸುಂಕ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ ಎನ್ನವ ವಾದ ಒಪ್ಪತಕ್ಕದ್ದಲ್ಲ.

9. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆ ಕಾರಣವೇ?

ಹಿಂದಿನ ಯುಪಿಎ ಸರ್ಕಾರ ಇದ್ದಾಗ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 120 ಡಾಲರ್‌ ಮುಟ್ಟಿತ್ತು. ಆಗ ಮನಮೋಹನ್ ಸಿಂಗ್‌ರವರು ಕೇವಲ 9.48ರೂಗಳನ್ನು ಅಬಕಾರಿ ಶುಂಕವಾಗಿ ವಿಧಿಸಿದ್ದರು. ಮೋದಿಯವರು ಪ್ರಧಾನಿಯಾದ ನಂತರ ಕಚ್ಚಾತೈಲದ ಬೆಲೆ ನಿರಂತರವಾಗಿ ಇಳಿಕೆಯಾಗಿತ್ತು. 2015-16ರ ಅವಧಿಯಲ್ಲಿ ಅದು ಬ್ಯಾರೆಲ್‌ಗೆ 50-60 ಡಾಲರ್ ಗೆ ಇಳಿದಿತ್ತು. ಇತ್ತೀಚಿನವರೆಗೂ ಅದು 70-80 ಡಾಲರ್ ಆಸುಪಾಸಿನಲ್ಲಿಯೇ ಇತ್ತು. ಈಗ ಮಾತ್ರವೇ 100 ಡಾಲರ್‌ಗೆ ತಲುಪಿದೆ. ಹಿಂದೆ ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಮೋದಿ ಸರ್ಕಾರ ಅಬಕಾರಿ ಶುಂಕವನ್ನು ಕಡಿಮೆ ಮಾಡದೇ ಹೆಚ್ಚಿಸುತ್ತಲೇ ಹೋದರು. ಹಾಗಾಗಿ ಪ್ರಸ್ತುತ ಅಬಕಾರಿ ಶುಂಕ ಹೆಚ್ಚಳಕ್ಕೆ ಕಚ್ಚಾತೈಲ ಕಾರಣವಲ್ಲ ಬದಲಿಗೆ ನರೇಂದ್ರ ಮೋದಿ ಸರ್ಕಾರವೇ ಕಾರಣವಾಗಿದೆ.

10. ಬೆಲೆ ಇಳಿಕೆ ಸಾಧ್ಯವೇ?

ಒಂದೊ ಯಾವುದಾದರೂ ರಾಜ್ಯಗಳ ಚುನಾವಣೆ ಬಂದರೆ ಕೇಂದ್ರ ಸರ್ಕಾರ ಸ್ವಲ್ಪ ಪ್ರಮಾಣದಲ್ಲಿ ಅಬಕಾರಿ ಶುಂಕ ಕಡಿಮೆ ಮಾಡಿ ಒಂದಷ್ಟು ಬೆಲೆ ಇಳಿಸುತ್ತದೆ. ಇಲ್ಲದಿದ್ದರೆ ಜನ ದೊಡ್ಡ ಮಟ್ಟದಲ್ಲಿ ಹೋರಾಡದಿದ್ದರೆ ಬೆಲೆ ಇಳಿಕೆ ಸಾಧ್ಯವೇ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...