Homeಮುಖಪುಟಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

ಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

- Advertisement -
- Advertisement -

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಬಂಧನದಲ್ಲಿರಿಸಿ ಸ್ಥಾಪಿತಗೊಂಡಿರುವ ಮಿಲಿಟರಿ ಆಡಳಿತ, ನಿನ್ನೆ ಶನಿವಾರ ದೇಶವ್ಯಾಪಿಯಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಿದೆ. ವಿಶ್ವದ ಹಲವಾರು ದೇಶಗಳು ಈ ಕ್ರಮಗಳನ್ನು ಖಂಡಿಸುತ್ತಿವೆ. ಇದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ?

ಇನ್ನೂ ಒಂದು ವಿಷಯ, ಕಳೆದ ವಾರ ಆ ದೇಶದಲ್ಲಿ ಮಿಲಿಟರಿ ದಂಗೆ ನಡೆದಾಗ ನಿಮ್ಮದೇ ಇಲಾಖೆ ಕಳವಳ ವ್ಯಕ್ತಪಡಿಸಿದ್ದು ಸೂಕ್ತವೇ ಆಗಿತ್ತು. ಓಕೆ, ಆದರೆ ಅದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ ಜೈ ಶಂಕರ್ ಸರ್? ಈಗ ಅಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡಿದ್ದರ ಕುರಿತು ನಿಮ್ಮ ಇಲಾಖೆ ಇನ್ನೂ ಆಕ್ಷೇಪ ವ್ಯಕ್ತ ಮಾಡಿಲ್ಲ. ಏಕೆಂದರೆ, ನಿಮ್ಮ ಇಲಾಖೆಯ ಮೂರ್ಖತನದ ಪ್ರಕಟಣೆ (ವಿದೇಶಿಯರ ಹಸ್ತಕ್ಷೇಪ ವಿರೋಧಿಸುವ ಪ್ರಕಟಣೆ). ಇಂದು ನೀವು ಮತ್ತು ನಿಮ್ಮ ಇಲಾಖೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವ ನೈತಿಕ ಅಧಿಕಾತವನ್ನೇ ಕಳೆದುಕೊಂಡು ಬಿಟ್ಟಿದ್ದೀರಿ, ಅಲ್ಲವೇ ಜೈ ಶಂಕರ್ ಜೀ?

ದೆಹಲಿ ಪೊಲೀಸರ ಹೆಜ್ಜೆಗಳಲ್ಲಿ ವಿದೇಶಾಂಗ ನೀತಿ!

ಸ್ವೀಡನ್‌ನ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್‌ಗೆ ಖಲಿಸ್ತಾನಿ ಲಿಂಕ್ ದೊರೆತಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡ ಎರಡು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ‘ಈ ಡಾಕ್ಯುಮೆಂಟ್ ಬಹಳಷ್ಟು ವಿಷಯ ಬಹಿರಂಗಪಡಿಸಿದೆ ಮತ್ತು ಅಂತರರಾಷ್ಟ್ರೀಯ ಹೇಳಿಕೆಗಳಿಗೆ (ರಿಹಾನ್ನ, ಥನ್‌ಬರ್ಗ್, ಮೀನಾ ಹ್ಯಾರಿಸ್ ಮುಂತಾದವರು ರೈತ ಪ್ರತಿಭಟನೆ ಪರ ನೀಡಿದ ಹೇಳಿಕೆಗಳು) ಅವರ ಸಚಿವಾಲಯ ಏಕೆ ಪ್ರತಿಕ್ರಿಯಿಸಿತು ಎಂಬುದನ್ನು ಸ್ಪಷ್ಟವಾಗಿ ನೋಡಬಹುದು’ ಎಂದಿದ್ದಾರೆ.

‘ಸಾಕಷ್ಟು ಬಹಿರಂಗಪಡಿಸಿದೆ’….. ಅದೇನು ಬಹಿರಂಗಪಡಿಸಿದೆಯೋ ಎಂಬುದು ಪಬ್ಲಿಕ್ ಡೊಮೇನ್‌ನಲ್ಲಿ ಈಗಲೂ ಇದೆ. ಆ ಟೂಲ್‌ಕಿಟ್ ಅನ್ನೆ ಗ್ರೇಟಾ ಹಂಚಿಕೊಂಡಿದ್ದಾರಷ್ಟೇ. ವಿದೇಶಾಂಗ ಸಚಿವ ಜೈಶಂಕರ್ ಅವರು, ಟೂಲ್‌ಕಿಟ್‌ನಿಂದ ‘ಬಹಳಷ್ಟು ವಿಷಯ’ ಬಹಿರಂಗವಾದ ಕುರಿತು ಮಾತಾಡುವುದು ಮತ್ತು ಟ್ವೀಟ್ ಮಾಡುವುದನ್ನು ನೋಡಿದರೆ, ಇವರು ಕೂಡ ದೆಹಲಿ ಪೊಲಿಸರ ಪಥ ಸಂಚಲನದಲ್ಲಿ ಕೋರಸ್ ಹೇಳುತ್ತಿದ್ದಾರೆ ಅನಿಸುತ್ತದೆ. ಹಾಗೆಯೇ, ಸರ್ಕಾರದ ಪರ ಬ್ಯಾಟಿಂಗ್ ಕಂ ಆ್ಯಕ್ಟಿಂಗ್ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರುತ್ತಿದ್ದಾರೆ ಅನಿಸುತ್ತದೆ.

ಅದರ ಜೊತೆಗೆ, ಗಣರಾಜ್ಯ ದಿನದಂದು ಕೆಲವು ಪುಂಡರಿಂದ ಕೆಂಪುಕೋಟೆ ಆವರಣದೊಳಗೆ ನಡೆದ ಹಿಂಸಾಚಾರವನ್ನು ನಿಯಂತ್ರಿಸಲಾಗದ ‘ದಿ ಗ್ರೇಟ್’ ದೆಹಲಿ ಪೊಲೀಸರ ಊಹೆಗಳನ್ನೇ ಜೈ ಶಂಕರ್ ಈಗ ಪ್ರತಿಪಾದಿಸುತ್ತಿದ್ದಾರೆ. ಅಂದರೆ ಅವರೀಗ ದೆಹಲಿ ಪೊಲೀಸರ ‘ಪಥ ಸಂಚಲನದಲ್ಲಿ’ ಹೆಜ್ಜೆ ಹಾಕುತ್ತಿದ್ದಾರಷ್ಟೇ.

“ಇದು ಬಹಳಷ್ಟನ್ನು ಬಹಿರಂಗಪಡಿಸಿದೆ. ಇನ್ನೂ ಏನೇನು ಹೊರಬರುತ್ತದೆ ಎಂಬುದನ್ನು ನಾವು ಕಾಯಬೇಕು. ನೀವು ನೋಡಿದಂತೆ, ಕೆಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲು ಒಂದು ಕಾರಣವಿತ್ತು” ಎಂದು ಜೈಶಂಕರ್ ಎಎನ್‌ಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

‘ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ’- ಏನಿದರರ್ಥ? ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಗೆ ಇಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅರಿವಿಲ್ಲದೆ ಟ್ವೀಟ್ ಮಾಡಿಬಿಟ್ಟರೆ? ಕೃಷಿ ಕಾಯ್ದೆಗಳನ್ನು ಅವರು ಸಂಪೂರ್ಣವಾಗಿ ಓದಿರಲಿಕ್ಕಿಲ್ಲ, ಓದುವ ಅಗತ್ಯವೂ ಇಲ್ಲ. ಆದರೆ, ಅವರು ಎತ್ತಿದ್ದು ಮಾನವ ಹಕ್ಕುಗಳ ವಿಷಯ ಎಂಬುದನ್ನು ವಿದೇಶಾಂಗ ಇಲಾಖೆ ನೆನಪಿಟ್ಟುಕೊಳ್ಳಲಿ. ಹಾಗೆ ನೋಡಿದರೆ, ಹೆಚ್ಚು ತಿಳಿಯದೇನೇ, ಅವರ ಇಲಾಖೆ ಕೊಟ್ಟ ಪ್ರಕಟಣೆಯೇ ಆತ್ಮವಂಚನೆಯಿಂದ ಕೂಡಿತ್ತಲ್ಲವೆ? ‘ಸಂಸತ್ತಿನಲ್ಲಿ ದೀರ್ಘ ಚರ್ಚೆಯ ನಂತರವಷ್ಟೆ ಈ ಕೃಷಿ ಕಾಯ್ದೆಗಳನ್ನು ಅಂಗೀಕಾರ ಮಾಡಲಾಗಿದೆ’ ಎಂಬ ಅವರ ಇಲಾಖೆಯ ಹೇಳಿಕಯೇ ಅರ್ಧಸತ್ಯದಿಂದ ಕೂಡಿದೆ.

ಕೆಳಮನೆಯಲ್ಲಿ ಸಿಕ್ಕಿರುವ ‘ಭಯಂಕರ’ ಬಹುಮತ ಇದಕ್ಕೆ ನೆರವಾಗಿತ್ತು. ಆದರೆ ಮೇಲ್ಮನೆಯಲ್ಲಿ ಬಹುಮತ ಇಲ್ಲದಿದ್ದಾಗಲೂ, ಈ ಕಾನೂನುಗಳ ಪರ ವಿಸ್ತೃತ ಚರ್ಚೆಯೇ ಇಲ್ಲದೆ, ಮತ ಸಂಖ್ಯೆಯನ್ನು ಎಣಿಕೆ ಮಾಡದೆಯೇ ಅಂಗೀಕಾರ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೇ ಏಕಾಏಕಿ ಈ ಕಾಯ್ದೆಗಳನ್ನು ಹೇರಿದ್ದು ಒಕ್ಕೂಟ ವ್ಯವಸ್ಥೆಯನ್ನೇ ಅವಮಾನಿಸಿದೆ.
ಹೀಗಿರುವಾಗ ವಿದೇಶಾಂಗ ಸಚಿವ ಜೈಶಂಕರ್ ಯಾವ ಆಧಾರದಲ್ಲಿ ತಮ್ಮ ಇಲಾಖೆಯ ಪ್ರಕಟಣೆಗೆ ಅನುಮತಿ ನೀಡಿದರು? ‘ಸಂಸತ್ತಿನ ಸಂಪೂರ್ಣ ಒಪ್ಪಿಗೆ’ ನಿಜಕ್ಕೂ ಸಿಗದೇ ಇದ್ದಾಗ ಅದು ಸಿಕ್ಕಿದೆ ಎನ್ನುವುದು ಆತ್ಮವಂಚನೆಯಲ್ಲವೆ?

ಟೂಲ್‌ಕಿಟ್ ಅಂದರೆ ಅದರಲ್ಲೇನೂ ಸ್ಕೂಡ್ರೈವರ್, ಗರಗಸ ಅಥವಾ ಪಿಸ್ತೂಲ್ ಇರುವುದಿಲ್ಲ. ಟೂಲ್‌ಕಿಟ್ ಎಂಬುದು ಹಾರ್ಡ್ವೇರ್ ಕೂಡ ಅಲ್ಲ, ಅದು ಒಂದು ಚಳುವಳಿಯ ಕಾರ್ಯಕ್ರಮವನ್ನು, ಅದರ ಮುಂದಿನ ಯೋಜನೆ ಹೇಗಿರಲಿದೆ ಎಂಬುದನ್ನು ವಿವರಿಸುವ ಒಂದು ಸರಳ ಪಠ್ಯವಷ್ಟೇ. ಈಗ ದೊರೆತ ಟೂಲ್‌ಕಿಟ್ ಸಾರ್ವಜನಿಕವಾಗಿ ಲಭ್ಯವಿದೆ. ಅದರಲ್ಲೇನೂ ಈ ದೇಶದ ಬುಡ ಅಲ್ಲಾಡಿಸುವ ಯಾವ ಸಾಲೂ ಇಲ್ಲ. ಅದರಿಂದ ‘ಬಹಳಷ್ಟು ಬಹಿರಂಗ’ ಏನಾಯಿತೊ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡುವ ಬದಲು, ಬೆದರಿಕೆಯ ತಂತ್ರ ಅನುಸರಿಸುವ ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯೇ ಆಗಿದೆ.

-ಪಿ.ಕೆ. ಮಲ್ಲನಗೌಡರ್

(ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ’ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...