Homeಅಂತರಾಷ್ಟ್ರೀಯಅಕ್ರಮ ವಲಸಿಗರೆಂದು ಭಾರತೀಯರ ಗಡಿಪಾರು?..ಅಸ್ಸಾಂನಲ್ಲಿ ಆಗುತ್ತಿರುವುದೇನು?

ಅಕ್ರಮ ವಲಸಿಗರೆಂದು ಭಾರತೀಯರ ಗಡಿಪಾರು?..ಅಸ್ಸಾಂನಲ್ಲಿ ಆಗುತ್ತಿರುವುದೇನು?

- Advertisement -
- Advertisement -

ನೂರಾರು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಅವರ ತಾಯ್ನಾಡಿಗೆ ಗಡಿಪಾರು ಮಾಡುವ ಬದಲು, ಅನಿರ್ದಿಷ್ಟಾವಧಿಗೆ ಭಾರತದ ಬಂಧನ ಶಿಬಿರಗಳಲ್ಲಿ ಇರಿಸುವ ಉದ್ದೇಶವೇನು? ಎಂದು ಕಳೆದ ಫೆಬ್ರವರಿ 3ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

ಆ ಬಳಿಕ ಅಸ್ಸಾಂ ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಗುರುತಿಸಿ ಜನರನ್ನು ಗಡಿಪಾರು ಮಾಡುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಈ ನಡುವೆ ಭಾರತೀಯರನ್ನೇ ಅಕ್ರಮ ವಲಸಿಗರು ಎಂದು ಗಡಿಪಾರು ಮಾಡುತ್ತಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಭಾರತೀಯ ಮಹಿಳೆಯೊಬ್ಬರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿ, ಬಳಿಕ ವಾಪಸ್ ಕರೆದುಕೊಂಡು ಬಂದಿರುವ ಬಗ್ಗೆ ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ರಹೀಮಾ ಬೇಗಂ ಎಂಬ 50 ವರ್ಷದ ಮಹಿಳೆಯನ್ನು ಅಧಿಕಾರಿಗಳು ಬಾಂಗ್ಲಾ ಗಡಿಗೆ ಕರೆದೊಯ್ದು, ಬಲವಂತವಾಗಿ ಗಡಿ ದಾಟಿಸಿದ್ದರು. ಗಡಿದಾಟಿ ರಹೀಮಾ ಬೇಗಂ ಅಲ್ಲಿ ನರಕಯಾತನೆ ಅನುಭವಿಸಿದ್ದರು. ಬಳಿಕ ನಾವು ತಪ್ಪಾಗಿ ರಹೀಮಾ ಬೇಗಂ ಅವರನ್ನು ಗಡಿಪಾರು ಮಾಡಿದ್ದೇವೆ ಎಂದು ಕಂಡುಕೊಂಡ ಅಧಿಕಾರಿಗಳು, ಅವರನ್ನು ವಾಪಸ್ ಕರೆ ತಂದಿದ್ದರು.

ಮೇ 27ರ ಮಂಗಳವಾರ ರಾತ್ರಿ ರಹೀಮಾ ಬೇಗಂ ಅವರನ್ನು ಗಡಿಪಾರು ಮಾಡಲಾಗಿತ್ತು. ಮೇ 30ರ ಶುಕ್ರವಾರ ಸಂಜೆ ಗೋಲಾಘಾಟ್‌ನ ತನ್ನ ಗ್ರಾಮದಲ್ಲಿರುವ ಮನೆಗೆ ಬೇಗಂ ಮರಳಿದ್ದಾರೆ ಎಂದು ವರದಿಯಾಗಿದೆ.

ರಹೀಮಾ ಬೇಗಂ ಒಬ್ಬರನ್ನು ಮಾತ್ರ ತಪ್ಪಾಗಿ ಗಡಿಪಾರು ಮಾಡಿ, ಬಳಿಕ ವಾಪಸ್ ಕರೆದುಕೊಂಡು ಬಂದ ಬಗ್ಗೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಜನರು ನಮ್ಮ ಕುಟುಂಬ ಸದಸ್ಯರನ್ನು ಹಠಾತ್ ಬಂಧಿಸಿ, ಗಡಿ ಪ್ರದೇಶಗಳಿಗೆ ಕರೆದೊಯ್ದು ಗಡಿಯಾಚೆಗೆ ತಳ್ಳಲಾಗಿದೆ ಎಂದು ಆರೋಪಿಸಿದ ಕನಿಷ್ಠ ಆರು ಪ್ರಕರಣಗಳನ್ನು ಕಂಡು ಹಿಡಿಯಲಾಗಿದೆ ಎಂದು ಸುದ್ದಿ ಸಂಸ್ಥೆ ಬಿಬಿಸಿಯ ವರದಿ ಹೇಳಿದೆ.

“ಮೇ 25, 2025ರಂದು ನನ್ನನ್ನು ಮತ್ತು ನನ್ನ ಜೊತೆಗಿದ್ದ ಇತರ 13 ಜನರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿಂದ ಬಾಂಗ್ಲಾದೇಶದ ಗಡಿಗೆ ಕರೆದೊಯ್ದರು. ಗಡಿ ದಾಟುವಂತೆ ನಮ್ಮನ್ನು ಬಲವಂತ ಮಾಡಿದರು. ಬಂದೂಕು ತೋರಿಸಿ ಬೆದರಿಸಿ ನಮ್ಮನ್ನು ಬಾಂಗ್ಲಾದೇಶಕ್ಕೆ ತಳ್ಳಿದರು. ನಾವು ಮೊಣಕಾಲುದ್ದ ನೀರಿನಲ್ಲಿ ಆಹಾರ, ಕುಡಿಯುವ ನೀರಿಲ್ಲದೆ ಎರಡು ದಿನಗಳನ್ನು ಕಳೆದೆವು ಎರಡು ದಿನಗಳ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ನಿರ್ಜನ ಪ್ರದೇಶದಲ್ಲಿ ಬಾಂಗ್ಲಾದೇಶದ ಕಡೆಯ ಹಳೆಯ ಜೈಲಿನಂತೆ ಕಾಣುವ ಸ್ಥಳಕ್ಕೆ ನಮ್ಮನ್ನು ಕರೆದೊಯ್ಯಲಾಯಿತು. ಅಲ್ಲಿ ಎರಡು ದಿನಗಳನ್ನು ಕಳೆದ ನಂತರ, ನನ್ನನ್ನು ಮತ್ತು ಇತರ ಕೆಲವರನ್ನು (ಅವರೆಲ್ಲರೂ ತನ್ನ ಜೊತೆಗಿದ್ದವರೇ ಎಂಬುವುದು ಆಕೆಗೆ ಖಚಿತವಿಲ್ಲ) ಬಾಂಗ್ಲಾದೇಶದ ಅಧಿಕಾರಿಗಳು ಗಡಿಗೆ ಕರೆದುಕೊಂಡು ಬಂದರು. ಅಲ್ಲಿ ಭಾರತೀಯ ಅಧಿಕಾರಿಗಳು ನಮ್ಮನ್ನು ಭೇಟಿಯಾಗಿ ಮನೆಗೆ ಕರೆದುಕೊಂಡು ಬಂದರು ಎಂದು ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ನಿವಾಸಿಯಾಗಿರುವ 58 ವರ್ಷದ ಶೋನಾ ಬಾನು ಎಂಬವರು ಹೇಳಿರುವುದಾಗಿ ಬಿಬಿಸಿ ವಿವರಿಸಿದೆ.

“ನಮ್ಮನ್ನು ಏಕೆ ಬಾಂಗ್ಲಾ ದೇಶದೊಳಗೆ ತಳ್ಳಲಾಯಿತು ಎಂದು ನಮಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ಮಾತ್ರ ನಾನು ಭಯಬೀತಳಾಗಿದ್ದೆ. ನಾನು ಹುಟ್ಟಿನಿಂದಲೂ ಅಸ್ಸಾಂನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಕೆಲ ವರ್ಷಗಳಿಂದ ನಾನು ಭಾರತೀಯ ಪ್ರಜೆ, ಬಾಂಗ್ಲಾದೇಶದಿಂದ ಬಂದ ‘ಅಕ್ರಮ ವಲಸಿಗಳು’ ಅಲ್ಲ ಎಂದು ಸಾಭೀತುಪಡಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಶೋನಾ ಬಾನು ಹೇಳಿರುವುದಾಗಿ ಬಿಬಿಸಿ ಹೇಳಿದೆ.

ಶೋನಾ ಬಾನು ಅವರನ್ನು ಹಠಾತ್ತನೆ ಬಾಂಗ್ಲಾದೇಶಕ್ಕೆ ಕಳುಹಿಸಿ, ನಂತರ ಏಕೆ ವಾಪಸ್ ಕರೆತರಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅವರ ಪ್ರಕರಣವು ಇತ್ತೀಚಿನ ದಿನಗಳಲ್ಲಿ ಅಸ್ಸಾಂನಲ್ಲಿ ಅಧಿಕಾರಿಗಳು ‘ಬಾಂಗ್ಲಾದೇಶದ ಅಕ್ರಮ ವಲಸಿಗರು’ ಎಂಬ ಅನುಮಾನದ ಮೇಲೆ ನ್ಯಾಯಮಂಡಳಿಗಳಿಂದ ವಿದೇಶಿಯರೆಂದು ಘೋಷಿಸಲ್ಪಟ್ಟ ಜನರನ್ನು ಗಡಿಯಾಚೆಗೆ ತಳ್ಳುತ್ತಿರುವ ಹಲವಾರು ಪ್ರಕರಣಗಳಲ್ಲಿ ಒಂದಾಗಿದೆ.

ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಸ್ಸಾಂ ಪೊಲೀಸರು ಮತ್ತು ಅಸ್ಸಾಂ ರಾಜ್ಯ ಸರ್ಕಾರದ ಅಧಿಕಾರಿಗಳು ಈ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಬಿಬಿಸಿ ತಿಳಿಸಿದೆ.

ಭಾರತ ಮತ್ತು ಬಾಂಗ್ಲಾ 4,096 ಕಿ.ಮೀ (2,545 ಮೈಲುಗಳು) ಉದ್ದದ ಗಡಿಯಿಂದ ವಿಭಜಿಸಲ್ಪಟ್ಟಿವೆ. ಈ ಗಡಿಯ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಇದ್ದರೂ, ಕೆಲವೊಂದು ಪ್ರದೇಶಗಳಲ್ಲಿ ಗಡಿ ದಾಟುವುದು ಸಾಹಸವೇನಲ್ಲ. ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಎನ್ನಲಾದವರ ವಿರುದ್ಧ ಕಠಿಣ ಕ್ರಮಗಳು ಭಾರತದಲ್ಲಿ ಹೊಸದೇನಲ್ಲ.

ಆದರೆ, ಜನರನ್ನು ಅವರ ಮನೆಗಳಿಂದ ಹಠಾತ್ತನೆ ಕರೆದುಕೊಂಡು ಹೋಗಿ, ಯಾವುದೇ ಪ್ರಕ್ರಿಯೆ ಇಲ್ಲದೆ ಬೇರೆ ದೇಶಕ್ಕೆ ಬಲವಂತವಾಗಿ ತಳ್ಳುವುದು ಅಪರೂಪ. ಕಳೆದ ಕೆಲವು ವಾರಗಳಿಂದ ಈ ಪ್ರಯತ್ನಗಳು ತೀವ್ರಗೊಂಡಿವೆ ಎಂದು ತೋರುತ್ತದೆ ಎಂದು ಈ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿರುವ ವಕೀಲರು ಹೇಳಿರುವುದಾಗಿ ಬಿಬಿಸಿ ತಿಳಿಸಿದೆ.

ಇತ್ತೀಚಿನ ಕಾರ್ಯಾಚರಣೆಯಲ್ಲಿ ಎಷ್ಟು ಜನರನ್ನು ಗಡಿಯಾಚೆಗೆ ತಳ್ಳಲಾಗಿದೆ ಎಂದು ಭಾರತ ಸರ್ಕಾರ ಅಧಿಕೃತವಾಗಿ ಹೇಳಿಲ್ಲ. ಆದರೆ, ಬಾಂಗ್ಲಾದೇಶ ಆಡಳಿತದ ಉನ್ನತ ಮೂಲಗಳು ಹೇಳುವಂತೆ ಭಾರತವು ಮೇ ತಿಂಗಳೊಂದರಲ್ಲೇ 1,200ಕ್ಕೂ ಹೆಚ್ಚು ಜನರನ್ನು ಬಾಂಗ್ಲಾದೇಶಕ್ಕೆ “ಅಕ್ರಮವಾಗಿ ಒಳನುಗ್ಗಿಸಿದೆ”, ಅಸ್ಸಾಂನಿಂದ ಮಾತ್ರವಲ್ಲದೆ ಇತರ ರಾಜ್ಯಗಳ ಜನರೂ ಇದರಲ್ಲಿ ಸೇರಿದ್ದಾರೆ. ಈ ಪೈಕಿ ಹೆಸರು ಬಹಿರಂಗಪಡಿಸದೆ 100 ಜನರನ್ನು ಭಾರತೀಯ ನಾಗರಿಕರೆಂದು ಗುರುತಿಸಿ ಬಾಂಗ್ಲಾದೇಶವು ವಾಪಸ್ ಕಳುಹಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಪ್ರಯತ್ನಗಳನ್ನು ತಡೆಯಲು ಗಡಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ಬಾಂಗ್ಲಾದೇಶ ಗಡಿ ಕಾವಲು ಪಡೆ ಹೇಳಿಕೆಯಲ್ಲಿ ತಿಳಿಸಿದೆ. ಈ ಆರೋಪಗಳ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿನ ದಮನ ಕಾರ್ಯಾಚರಣೆಯಲ್ಲಿ ಇತರ ರಾಜ್ಯಗಳಲ್ಲಿ ವಾಸಿಸುವ ರೋಹಿಂಗ್ಯಾ ಮುಸ್ಲಿಮರೂ ಸೇರಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಪೌರತ್ವ ಮತ್ತು ಜನಾಂಗೀಯ ಗುರುತಿನ ವಿಷಯಗಳು ದೀರ್ಘಕಾಲದಿಂದ ರಾಜಕೀಯ ವಿಷಯವಾಗಿರುವ ಅಸ್ಸಾಂನಲ್ಲಿ ಪರಿಸ್ಥಿತಿ ವಿಶೇಷವಾಗಿ ಉದ್ವಿಗ್ನ ಮತ್ತು ಸಂಕೀರ್ಣವಾಗಿದೆ.

ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದೊಂದಿಗೆ ಸುಮಾರು 300 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿರುವ ಈ ರಾಜ್ಯದಲ್ಲಿ ಜನರು ಅವಕಾಶಗಳನ್ನು ಹುಡುಕಿಕೊಂಡು ಸ್ಥಳಾಂತರಗೊಂಡಿರುವುದು ಮತ್ತು ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡಿದ್ದರಿಂದ ಬಾಂಗ್ಲಾದ ಅಕ್ರಮ ವಲಸೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದು ಅಸ್ಸಾಮಿ ಜನರಲ್ಲಿ ಆತಂಕವನ್ನು ಹುಟ್ಟುಹಾಕಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಜನಸಂಖ್ಯಾ ಬದಲಾವಣೆ ತರುತ್ತದೆ, ಸ್ಥಳೀಯರಿಂದ ಸಂಪನ್ಮೂಲಗಳನ್ನು ಕಸಿದುಕೊಳ್ಳುವ ಆತಂಕವಿದೆ ಎನ್ನುತ್ತಾರೆ.

ಅಸ್ಸಾಂ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಕ್ರಮ ವಲಸೆ ಸಮಸ್ಯೆಯನ್ನು ಕೊನೆಗೊಳಿಸುವುದಾಗಿ ಆಗಾಗ ಭರವಸೆ ನೀಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ಆದ್ಯತೆಯ ವಿಷಯವನ್ನಾಗಿ ಮಾಡಿದೆ.

ನೆರೆಯ ಬಾಂಗ್ಲಾದೇಶ ಪಾಕಿಸ್ತಾನದಿಂದ ಸ್ವಾತಂತ್ರ್ಯ ಹೊಂದಿ ಹಿಂದಿನ ದಿನ, ಅಂದರೆ ಮಾರ್ಚ್ 24, 1971 ರೊಳಗೆ ಅಸ್ಸಾಂಗೆ ಬಂದಿರುವುದನ್ನು ಸಾಬೀತುಪಡಿಸುವ ಪ್ರಕ್ರಿಯೇ ಈ ಎನ್‌ಆರ್‌ಸಿ.

ಪರ-ವಿರೋಧ, ಹಲವು ಗೊಂದಲಗಳ ನಡುವೆ 2019ರಲ್ಲಿ ಎನ್‌ಆರ್‌ಸಿಯ ಕರಡು ಅಂಕಿ-ಅಂಶಗಳನ್ನು ಪ್ರಕಟಿಸಲಾಗಿದೆ. ಅದರಲ್ಲಿ 20 ಲಕ್ಷಕ್ಕೂ ಅಧಿಕ ಜನರನ್ನು ಹೊರಗಿಡಲಾಗಿದೆ. ವಿದೇಶಿಯರ ನ್ಯಾಯಮಂಡಳಿಗಳು , ಅರೆ-ನ್ಯಾಯಾಂಗ ವೇದಿಕೆಗಳು ಕಾನೂನುಬಾಹಿರವೆಂದು ಘೋಷಿಸಿದ ನಂತರ, ಅವರಲ್ಲಿ ಹಲವರು ಬಂಧನ ಶಿಬಿರಗಳಲ್ಲಿ ಸಮಯ ಕಳೆದಿದ್ದಾರೆ, ಈಗಲೂ ಕಳೆಯುತ್ತಿದ್ದಾರೆ. ಅಂತಿಮ ಕರಡಿನಿಂದ ಹೊರಗಿಡಲಾದ ಜನರು ಗೆಜೆಟ್ ಅಧಿಸೂಚನೆ ಅಥವಾ ಅಧಿಕೃತ ಕಾನೂನು ಸರ್ಕಾರಿ ದಾಖಲೆ ಬಂದ ನಂತರ ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂದು ವಕೀಲರು ಹೇಳುತ್ತಾರೆ. ಅದನ್ನು ಇನ್ನೂ ಹೊರಡಿಸಲಾಗಿಲ್ಲ ಎಂದು ಬಿಬಿಸಿ ವರದಿ ಹೇಳುತ್ತದೆ.

ವಿದೇಶಿಯರ ನ್ಯಾಯಮಂಡಳಿಯ ಆದೇಶದ ವಿರುದ್ಧದ ತನ್ನ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಆದರೆ, ಅಧಿಕಾರಿಗಳು ನಮ್ಮನ್ನು ದೇಶ ಬಿಟ್ಟು ಹೋಗುವಂತೆ ಒತ್ತಾಯಿಸಿದ್ದಾರೆ ಎಂದು ಶೋನಾ ಬಾನು ಆರೋಪಿಸಿದ್ದಾರೆ.

ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಮತ್ತು ತಲೆಮಾರುಗಳಿಂದ ಭಾರತದಲ್ಲಿ ವಾಸಿಸುತ್ತಿದ್ದರೂ, ಶೋನಾ ಬಾನುವಿನಂತೆ ಅಸ್ಸಾಂನ ಕನಿಷ್ಠ ಆರು ಮಂದಿ ಮುಸ್ಲಿಮರಿಂದ ಇದೇ ರೀತಿಯ ಕಥೆಗಳನ್ನು ಕೇಳಿರುವುದಾಗಿ ಬಿಬಿಸಿ ಹೇಳಿದೆ. ಅವರೆಲ್ಲರೂ ತಮ್ಮನ್ನು ಶೋನಾ ಬಾನು ಅವರಂತೆಯೇ ಬಾಂಗ್ಲಾದೇಶಕ್ಕೆ ತಳ್ಳಲಾಯಿತು ಎಂದು ಹೇಳುತ್ತಾರೆ. ಕನಿಷ್ಠ ನಾಲ್ವರು ಈಗ ಮನೆಗೆ ಮರಳಿದ್ದಾರೆ, ಅವರನ್ನು ಏಕೆ ಬಂಧಿಸಿ ಬಾಂಗ್ಲಾಕ್ಕೆ ತಳ್ಳಲಾಯಿತು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದಿದೆ.

ಅಸ್ಸಾಂನ 32 ಮಿಲಿಯನ್ ನಿವಾಸಿಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮುಸ್ಲಿಮರು ಮತ್ತು ಅವರಲ್ಲಿ ಹಲವರು ಬ್ರಿಟಿಷ್ ಆಳ್ವಿಕೆಯಲ್ಲಿ ಅಲ್ಲಿ ನೆಲೆಸಿದ ವಲಸಿಗರ ವಂಶಸ್ಥರು.

ಗಡಿಯಾಚೆಗೆ ತಳ್ಳಲ್ಪಟ್ಟ ಅಸ್ಸಾಂನ ಬಾರ್ಪೇಟಾದ 67 ವರ್ಷದ ಮಲೇಕಾ ಖಾತುನ್, ಇನ್ನೂ ಬಾಂಗ್ಲಾದೇಶದಲ್ಲಿದ್ದಾರೆ. ಅವರಿಗೆ ಸ್ಥಳೀಯ ಕುಟುಂಬವೊಂದು ತಾತ್ಕಾಲಿಕವಾಗಿ ಆಶ್ರಯ ನೀಡಿದೆ ಎಂದು ಬಿಬಿಸಿ ಹೇಳಿದೆ.

“ನನಗೆ ಇಲ್ಲಿ ಯಾರೂ ಇಲ್ಲ” ಎಂದು ಅವರು ಕಣ್ಣೀರು ಹಾಕುತ್ತಿದ್ದಾರೆ. ಕುಟುಂಬಸ್ಥರು ಅವರೊಂದಿಗೆ ಮಾತನಾಡುವಲ್ಲಿ ಯಶಸ್ವಿಯಾಗಿದೆ. ಆದರೆ, ಆಕೆ ಯಾವಾಗ ಹಿಂತಿರುಗಬಹುದು ಎಂದು ತಿಳಿದಿಲ್ಲ. ಮಲೇಕಾ ಖಾತುನ್ ವಿದೇಶಿಯರ ನ್ಯಾಯಮಂಡಳಿ ಮತ್ತು ರಾಜ್ಯದ ಹೈಕೋರ್ಟ್‌ನಲ್ಲಿ ತನ್ನ ಪ್ರಕರಣದಲ್ಲಿ ಸೋತಿದ್ದರು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರಲಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಉಲ್ಲೇಖಿಸಿ, ವಿದೇಶಿಯರು ಎಂದು ಘೋಷಿಸಲ್ಪಟ್ಟ ಮತ್ತು ಇನ್ನೂ ಬಂಧನ ಕೇಂದ್ರಗಳಲ್ಲಿ ಇರಿಸಲಾಗಿರುವ ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ.

“ವಿದೇಶಿಯರು ಎಂದು ಘೋಷಿಸಲ್ಪಟ್ಟ ಮತ್ತು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸದ ಜನರನ್ನು ನಾವು ವಾಪಸ್ ಕಳುಹಿಸುತ್ತಿದ್ದೇವೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ. ನ್ಯಾಯಾಲಯದಲ್ಲಿ ಮೇಲ್ಮನವಿಗಳು ಬಾಕಿ ಇರುವ ಜನರಿಗೆ ಯಾವುದೇ ತೊಂದರೆ ಇಲ್ಲ” ಎಂದಿದ್ದಾರೆ.

ಅಸ್ಸಾಂನಲ್ಲಿ ಅನೇಕ ಪೌರತ್ವ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿರುವ ವಕೀಲ ಅಬ್ದುರ್ ರಝಾಕ್ ಭುಯಾನ್, ಇತ್ತೀಚಿನ ಹಲವು ಸಂದರ್ಭಗಳಲ್ಲಿ, ಭಾರತ ಮತ್ತು ಬಾಂಗ್ಲಾದೇಶವು ಗಡಿಪಾರಿಗೆ ಅಗತ್ಯವಿರುವ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.

“ಈಗ ನಡೆಯುತ್ತಿರುವುದು ನ್ಯಾಯಾಲಯದ ಆದೇಶದ ಉದ್ದೇಶಪೂರ್ವಕ ತಪ್ಪು ವ್ಯಾಖ್ಯಾನವಾಗಿದೆ” ಎಂದು ಅವರು ಹೇಳಿದ್ದಾರೆ.

ಬಲವಂತದ ಮತ್ತು ಕಾನೂನುಬಾಹಿರವಾಗಿ ಗಡಿಯಾಚೆಗೆ ತಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸುವಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶಿಸಲು ಕೋರಿ ವಿದ್ಯಾರ್ಥಿ ಸಂಘಟನೆಯೊಂದರ ಪರವಾಗಿ ವಕೀಲ ಭುಯಾನ್ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವಿಷಯವನ್ನು ಹೈಕೋರ್ಟ್ ಮುಂದೆ ಇಡಲಾಗಿತ್ತು.

ಬಾರ್ಪೇಟಾದಿಂದ ಸುಮಾರು 167 ಕಿ.ಮೀ ದೂರದಲ್ಲಿರುವ ಮೋರಿಗಾಂವ್‌ನ ರೀತಾ ಖಾನಮ್ ಎಂಬ ಮಹಿಳೆಯ ಪತಿ ಖೈರುಲ್ ಇಸ್ಲಾಂ ಅವರೂ ಕೂಡ ಗಡಿಪಾರಾಗಿ ವಾಪಸ್ ಬಂದವರು ಎಂದು ವರದಿ ಹೇಳಿದೆ.

51 ವರ್ಷದ ಶಾಲಾ ಶಿಕ್ಷಕ ಖೈರುಲ್ ಇಸ್ಲಾಂ, ಶೋನಾ ಬಾನು ಅವರ ಗುಂಪಿನಲ್ಲೇ ಇದ್ದರು. 2016ರಲ್ಲಿ ನ್ಯಾಯಮಂಡಳಿಯು ಅವರನ್ನು ವಿದೇಶಿಯರೆಂದು ಘೋಷಿಸಿತ್ತು. ನಂತರ ಅವರು ಎರಡು ವರ್ಷಗಳ ಕಾಲ ಬಂಧನ ಕೇಂದ್ರದಲ್ಲಿ ಇದ್ದು ಬಿಡುಗಡೆಯಾಗಿದ್ದರು. ಬಾನು ಅವರಂತೆಯೇ, ಇವರ ಪ್ರಕರಣವೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

“ನನ್ನ ಪತಿ ಭಾರತೀಯ ಪ್ರಜೆ ಎಂಬುದಕ್ಕೆ ಪ್ರತಿಯೊಂದು ದಾಖಲೆಯೂ ಇದೆ” ಎಂದು ಖೈರುಲ್ ಇಸ್ಲಾಂ ಅವರ ಪತ್ನಿ ಖಾನಮ್ ಹೇಳುತ್ತಾರೆ. ಅವರು ಇಸ್ಲಾಂ ಅವರ ಪ್ರೌಢಶಾಲಾ ಪದವಿ ಪ್ರಮಾಣಪತ್ರ ಮತ್ತು ಕೆಲವು ಭೂ ದಾಖಲೆಗಳನ್ನು ತೋರಿಸಿದ್ದಾರೆ. ಈ ದಾಖಲೆಗಳು ಅವರ ರಾಷ್ಟ್ರೀಯತೆಯನ್ನು ಸಾಬೀತುಪಡಿಸಲು ಸಾಕಾಗಿಲ್ಲ” ಎಂದು ಹೇಳಿರುವುದಾಗಿ ಬಿಬಿಸಿ ವಿವರಿಸಿದೆ.

“ನನ್ನ ಪತಿ, ಅವರ ತಂದೆ ಮತ್ತು ಅಜ್ಜ ಎಲ್ಲರೂ ಭಾರತದಲ್ಲಿ ಜನಿಸಿದವರು. ಆದರೆ, ಮೇ 23ರಂದು, ಪೊಲೀಸರು ನಮ್ಮ ಮನೆಗೆ ಬಂದು ಯಾವುದೇ ವಿವರಣೆ ನೀಡದೆ ಇಸ್ಲಾಂ ಅವರನ್ನು ಕರೆದುಕೊಂಡು ಹೋದರು” ಎಂದು ಖಾನಮ್ ಹೇಳುತ್ತಾರೆ.

ಪೊಲೀಸರು ಬಂಧಿಸಿ ಕರೆದೊಯ್ದ ಕೆಲ ದಿನಗಳ ನಂತರ, ಯಾರೂ ಇಲ್ಲದ ಭೂಮಿಯಲ್ಲಿ ಇಸ್ಲಾಂ ಅವರನ್ನು ಬಾಂಗ್ಲಾದೇಶದ ಪತ್ರಕರ್ತ ಸಂದರ್ಶನ ಮಾಡಿ ವಿಡಿಯೋ ವೈರಲ್ ಆಗಿತ್ತು. ಆಗ ಅವರು ಎಲ್ಲಿದ್ದಾರೆಂದು ಕುಟುಂಬಕ್ಕೆ ತಿಳಿಯಿತು ಎಂದು ಬಿಬಿಸಿ ಹೇಳಿದೆ.

ಶೋನಾ ಬಾನು ಅವರಂತೆಯೇ ಇಸ್ಲಾಂ ಅವರನ್ನೂ ಭಾರತಕ್ಕೆ ವಾಪಸ್ ಕರೆತರಲಾಗಿದೆ. ಅವರ ಕುಟುಂಬ ಅವರು ವಾಪಸ್ ಬಂದಿರುವುದನ್ನು ದೃಢಪಡಿಸಿದರೂ, ಪೊಲೀಸರು ಅವರ ಆಗಮನದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿರುವುದಾಗಿ ಬಿಬಿಸಿ ತಿಳಿಸಿದೆ.

ತಪ್ಪಾದ ಗುರುತಿನ ಪ್ರಕರಣದಿಂದಾಗಿ ತನ್ನ ತಂದೆಯನ್ನು ವಿದೇಶಿಯರೆಂದು ಘೋಷಿಸಲಾಗಿದೆ ಎಂದು ಸಂಜಿಮಾ ಬೇಗಂ ಎಂಬವರು ಹೇಳಿದ್ದಾರೆ. ಇಸ್ಲಾಂ ಅವರನ್ನು ಬಂಧಿಸಿದ ಅದೇ ರಾತ್ರಿ ಇವರ ತಂದೆಯನ್ನೂ ಬಂಧಿಸಲಾಗಿದೆ.

“ನನ್ನ ತಂದೆಯ ಹೆಸರು ಅಬ್ದುಲ್ ಲತೀಫ್, ನನ್ನ ಅಜ್ಜ ಅಬ್ದುಲ್ ಸುಭಾನ್. [ವರ್ಷಗಳ ಹಿಂದೆ, ವಿದೇಶಿಯರ ನ್ಯಾಯಮಂಡಳಿಯಿಂದ] ಬಂದ ನೋಟಿಸ್‌ನಲ್ಲಿ ಶುಕುರ್ ಅಲಿಯವರ ಮಗ ಅಬ್ದುಲ್ ಲತೀಫ್ ಹೇಳಿದ್ದಾರೆ. ಅದು ನನ್ನ ಅಜ್ಜ ಅಲ್ಲ, ನನಗೆ ಅವರ ಪರಿಚಯವೂ ಇಲ್ಲ” ಎಂದು ಸಂಜಿಮಾ ಬೇಗಂ ಹೇಳಿದ್ದಾರೆ. ತಮ್ಮ ತಂದೆಯ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತಾವು ಹೊಂದಿರುವುದಾಗಿ ಬಿಬಿಸಿ ತಿಳಿಸಿದೆ.

ಲತೀಫ್ ಅಸ್ಸಾಂಗೆ ಮರಳಿದ್ದಾರೆ ಎಂದು ಕುಟುಂಬಕ್ಕೆ ಈಗ ಮಾಹಿತಿ ಬಂದಿದೆ. ಆದರೆ ಅವರು ಇನ್ನೂ ಮನೆಗೆ ತಲುಪಿಲ್ಲ. ಗಡಿಪಾರಾಗಿದ್ದ ಜನರಲ್ಲಿ ಕೆಲವರು ಈಗ ಮನೆಗೆ ಮರಳಿದ್ದರೂ, ಅವರನ್ನು ಮತ್ತೆ ಹಠಾತ್ತನೆ ಬಂಧಿಸಬಹುದೆಂಬ ಭಯ ಇದೆ. “ನಾವು ಆಟದ ವಸ್ತುಗಳಲ್ಲ, ನಾವು ಮನುಷ್ಯರು. ನಿಮಗೆ ಇಚ್ಛೆ ಬಂದಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲ” ಎಂಬುವುದಾಗಿ ಸಂಜಿಮಾ ಬೇಗಂ ಹೇಳುತ್ತಾರೆ ಎಂದು ಬಿಬಿಸಿ ವರದಿ ತಿಳಿಸಿದೆ.

Courtesy : bbc.com and Others

ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಅಸ್ಸಾಂ ಬಿಜೆಪಿ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...