Homeಮುಖಪುಟಬಿಎಸ್‌ವೈ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವರೇ ಡಾ. ಅಶ್ವತ್ಥ್ ನಾರಾಯಣ್?

ಬಿಎಸ್‌ವೈ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವರೇ ಡಾ. ಅಶ್ವತ್ಥ್ ನಾರಾಯಣ್?

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟ ನೀಡುವ ನಿರ್ಧಾರವನ್ನು ಬಿಎಸ್‌ವೈ ಪ್ರಕಟಿಸಿದ ನಂತರ  ಕ್ಯಾಬಿನೆಟ್ ಚರ್ಚೆಯ ವೇಳೆ ಅಶ್ವತ್ಥ್‌ ನಾರಾಯಣ್ ತಗಾದೆ ಎತ್ತಿದ್ದರು.

- Advertisement -

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಮಾರ್ಚ್ 25ರಿಂದ ಲಾಕ್ಡೌನ್ ಘೋಷಣೆ ಮಾಡಿತ್ತು. ಆದರೆ, ಇದಕ್ಕೂ ಮುಂಚೆಯೇ ರಾಜ್ಯದ 9 ಜಿಲ್ಲೆಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಈ ವೇಳೆ ನಿಜಕ್ಕೂ ಬಿ.ಎಸ್.ಯಡಿಯೂರಪ್ಪ ಬಡ ಜನರ ಪರವಾದ ಕೆಲವು ಘೋಷಣೆಗಳ ಮುನ್ಸೂಚನೆ ಕೊಟ್ಟಿದ್ದರು. ಮಾರ್ಚ್ 23ರಂದೇ ಪತ್ರಿಕಾಗೋಷ್ಠಿ ನಡೆಸಿದ್ದ ಬಿಎಸ್‌ವೈ “ಲಾಕ್‌ಡೌನ್‌ನಿಂದಾಗಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟಕ್ಕೆ ತೊಂದರೆಯಾಗದಂತೆ ಇಂದಿರಾ ಕ್ಯಾಂಟೀನ್‌ಲ್ಲಿ ಉಚಿತ ಊಟ ನೀಡುವ” ನಿರ್ಧಾರವನ್ನು ಘೋಷಿಸಿದ್ದರು.

ಇಂದಿರಾ ಕ್ಯಾಂಟೀನ್‌ ಅನ್ನು ಪ್ರತಿನಿತ್ಯ 1.7 ಲಕ್ಷ ಜನ ಬಡವರು ಊಟಕ್ಕೆಂದು ಆಶ್ರಯಿಸಿದ್ದಾರೆ. ಆದರೆ, ಈ ಘೋಷಣೆಯಾದ ಮರುದಿನವೇ ಅಂದರೆ ಮಾರ್ಚ್ 24ರಂದೇ ಇಂದಿರಾ ಕ್ಯಾಂಟೀನ್‌ನಲ್ಲಿ ನೂಕುನುಗ್ಗಲು ಉಂಟಾಗುತ್ತದೆ ಎಂಬ ಕಾರಣ ನೀಡಿ ನಿಲ್ಲಿಸಿದ್ದರಾದರೂ, ದೇಶವ್ಯಾಪಿ ಲಾಕ್‌ಡೌನ್‌ನ ಪರಿಣಾಮಗಳು ಗೊತ್ತಾಗುತ್ತಿದ್ದಂತೆ ಉಚಿತ ಊಟವನ್ನು ಮುಂದುವರೆಸಿದ್ದರು.

ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ಅವರ ತವರು ಜಿಲ್ಲೆಗಳಿಗೆ ಕಳುಹಿಸುವಂತೆ ಕೇಂದ್ರ ಸೂಚನೆ ನೀಡಿದ ಬೆನ್ನಿಗೆ ಬಿ.ಎಸ್.ಯಡಿಯೂರಪ್ಪ ವಿಶೇಷ ಶ್ರಮಿಕ್ ರೈಲುಗಳನ್ನು ಸಿದ್ದಪಡಿಸುವಂತೆ ಅಧಿಕಾರಗಳಿಗೆ ಸೂಚನೆ ನೀಡಿದ್ದರು. ಆದರೆ, ಹೀಗೊಂದು ಸೂಚನೆ ಬಂದ ಕೆಲವೇ ಗಂಟೆಗಳಲ್ಲಿ ರೈಲು ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.

ಉತ್ತರ ಕರ್ನಾಟಕದ ವಲಸೆ ಕಾರ್ಮಿಕರನ್ನು ಬಸ್ಸಿನ ಮೂಲಕ ಮನೆಗೆ ಕಳುಹಿಸಲಾಗಿತ್ತು. ಆದರೆ, ಈ ಕಾರ್ಮಿಕರ ಬಳಿ ಹಣ ವಸೂಲಿ ಮಾಡುವುದು ಬಿಎಸ್‌ವೈ ಅವರಿಗೆ ಸುತಾರಾಂ ಇಷ್ಟವಿರಲಿಲ್ಲವೆನ್ನಲಾಗಿದೆ. ಆದರೆ, ಈ ಎಲ್ಲಾ ಕಾರ್ಮಿಕರಿಂದ ಮೊದಲ ಎರಡು ದಿನ ಎರಡು-ಮೂರು ಪಟ್ಟು ಹಣ ವಸೂಲಿ ಮಾಡಲಾಗಿತ್ತು. ಅದಕ್ಕೆ ವಿರೋಧ ಬಂದ ನಂತರ ಮೊದಲಿಗೆ 3 ದಿನ, ನಂತರ ಇನ್ನೆರಡು ದಿನಗಳು ಉಚಿತ ಪ್ರಯಾಣವೆಂದು ಘೋಷಿಸಿದ್ದರು.

ಸಿಎಂ ಬಿಎಸ್‌ವೈ ಅವರಿಗೆ ಲಾಕ್ಡೌನ್ ಸಂದರ್ಭದಲ್ಲಿ ನಿಜಕ್ಕೂ ಬಡವರಿಗೆ ಸಹಕಾರಿಯಾಗುವ ಇರಾದೆ ಇದ್ದಂತೆ ಕಂಡರೂ ‘ಕಾಣದ ಕೈಗಳ ಒತ್ತಡ’ದ ಕಾರಣದಿಂದ ಅವರು ಘೋಷಿಸುವ ಯಾವ ಯೋಜನೆಗಳೂ ಜಾರಿಯಾಗುತ್ತಿಲ್ಲ ಅಥವಾ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗುತ್ತಿದೆ.

ಆಡಳಿತ ಯಂತ್ರ ಹೀಗೆ ಗೊಂದಲಮಯವಾಗಲು ಕಾರಣ ಏನಿರಬಹುದು? ಎಂಬ ಒಂದು ಎಳೆಯನ್ನು ಹಿಡಿದು ಮೂಲವನ್ನು ಕೆದಕುತ್ತಾ ಹೊರಟರೆ ಬಿಎಸ್‌ವೈ ಅವರು ಜನಪ್ರಿಯರಾಗದಂತೆ, ಬೇರೊಂದು ನೀತಿಯನ್ನು ಪಕ್ಷದ ಒಳಗೇ ಯಾರೋ ಪುಷ್ ಮಾಡುತ್ತಿದ್ದಾರೆ ಎಂಬ ಅಂಶಗಳು ಬಿಜೆಪಿ ಮೂಲದಿಂದ ಗೊತ್ತಾಗುತ್ತಿವೆ.

ಬಿಎಸ್‌ವೈಗೆ ಮೂಗುದಾರ ಹಾಕುತ್ತಿರುವ ಆ ನಾಯಕ ಯಾರು? ಬಿಜೆಪಿ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಅಸಲಿಗೆ ನಡೆಯುತ್ತಿರುವ ಚರ್ಚೆಯಾದರೂ ಏನು? ಅಸಲಿಗೆ ಬಿಎಸ್‌ವೈ ಆಡಳಿತಕ್ಕೆ ಕೆಟ್ಟ ಹೆಸರು ತರಲು ಪಕ್ಷದ ಒಳಗೆ ಶ್ರಮಿಸುತ್ತಿರುವ ಆ ಗುಂಪಿನ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೇಡದ ಕೂಸು ಮತ್ತು ಬಣ ರಾಜಕೀಯ

ಅಸಲಿಗೆ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಪಾಲಿಗೆ ಬೇಡದ ಕೂಸು ಮತ್ತು ಹೈಕಮಾಂಡ್‌ಗೆ ಇಷ್ಟ ಇಲ್ಲದಿದ್ದರೂ ಬೇರೆ ಆಯ್ಕೆ ಇಲ್ಲದ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಅಲ್ಲದೆ, ಅವರಿಗೆ ಕಡಿವಾಣ ಹಾಕಬೇಕು ಎಂದೇ ಮೂರು ಜನ ಡಿಸಿಎಂ ಆಯ್ಕೆ ಮಾಡಿದ್ದರು ಎಂಬ ವಿಚಾರ ಇಂದು ಗುಟ್ಟಾಗೇನು ಉಳಿದಿಲ್ಲ.

ಗೋವಿಂದ ಕಾರಜೋಳ ಹಿರಿಯ ರಾಜಕಾರಣಿ ಮತ್ತು ಅನುಭವಿ. ಹೀಗಾಗಿ ಅವರಿಗೆ ಡಿಸಿಎಂ ಹುದ್ದೆ ನೀಡಿದ್ದರಲ್ಲಿ ಯಾವುದೇ ಅಚ್ಚರಿ ಇರಲಿಲ್ಲ. ಇನ್ನು ಬಿಎಸ್‌ವೈಗೆ ಪರ್ಯಾಯವಾಗಿ ಓರ್ವ ಲಿಂಗಾಯತ ನಾಯಕನನ್ನು ಬೆಳೆಸಬೇಕು ಎಂಬ ಉದ್ದೇಶದಿಂದಲೇ ಲಕ್ಷ್ಮಣ ಸವದಿಯನ್ನು ಡಿಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಇದೂ ಸಹ ಅಚ್ಚರಿಯ ಆಯ್ಕೆಯಾಗಿದ್ದರೂ, ಏನೋ ಒಂದು ಲಾಜಿಕ್ ಇದೆ ಎನಿಸಬಹುದಾಗಿತ್ತು. ಆದರೆ, ಅಚ್ಚರಿ ಎನಿಸಿದ್ದು ಡಾ.ಅಶ್ವತ್ಥ್ ನಾರಾಯಣ್ ಆಯ್ಕೆ.

 

ಏಕೆಂದರೆ ಬೆಂಗಳೂರಿನ ಶಾಸಕರಿಗೆ ಆದ್ಯತೆ ನೀಡಬೇಕು ಅಥವಾ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಬೇಕು ಎಂದರೆ ಬಿಜೆಪಿ ಎದುರಿದ್ದ ಏಕೈಕ ಆಯ್ಕೆ ಆರ್.ಅಶೋಕ್. ಆದರೆ, ಆರ್.ಅಶೋಕ್ ಅವರನ್ನೇ ಬದಿಗೊತ್ತಿ ಈ ಹಿಂದೆ ಸಚಿವರಾಗಿಯೂ ಅನುಭವ ಇಲ್ಲದ ಚಿಕ್ಕ ವಯಸ್ಸಿನ ಅಶ್ವತ್ಥ್ ನಾರಾಯಣ್ ಅವರನ್ನು ನೇರವಾಗಿ ಡಿಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಮತ್ತು ಈ ಆಯ್ಕೆ ಇಡೀ ರಾಜ್ಯ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾದದ್ದು ಸುಳ್ಳಲ್ಲ.

ಹೀಗೆ ಅಚ್ಚರಿಯ ಬೆಳವಣಿಗೆಯಲ್ಲಿ ಡಿಸಿಎಂ ಹುದ್ದೆಗೆ ಆಯ್ಕೆಯಾದ ಅಶ್ವತ್ಥ್ ನಾರಾಯಣ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಡಿಸಿಎಂಗಳ ಪೈಕಿ ಹೆಚ್ಚು ಸದ್ದು ಮಾಡುತ್ತಿರುವವರೇ ಅಶ್ವತ್ಥ್ ನಾರಾಯಣ್. ಡಾ| ಅಶ್ವತ್ಥ್ ಬಿಎಸ್‌ವೈಗೆ ಪರ್ಯಾಯವಾಗಿ ಬಿಜೆಪಿಯಲ್ಲಿ ಮತ್ತೊಂದು ಬಣವನ್ನು ಪ್ರತಿನಿಧಿಸುತ್ತಿದ್ದಾರೆ. ಆ ಮೂಲಕ ಸರ್ಕಾರವನ್ನು ಹೆಜ್ಜೆ ಹೆಜ್ಜೆಗೂ ನಿಯಂತ್ರಿಸುತ್ತಿದ್ದಾರೆ ಎನ್ನುತ್ತಿದೆ ಸ್ವತಃ ಬಿಜೆಪಿ ಮೂಲಗಳು.

ಕ್ಯಾಬಿನೆಟ್ ಚರ್ಚೆಯಲ್ಲೂ ಅಲ್ಟಿಮೇಟ್ ಆದ ಅಶ್ವತ್ಥ್

ಸರ್ಕಾರ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸುವುದು ಸಾಮಾನ್ಯ. ಈ ವೇಳೆ ಸರ್ಕಾರದ ಎಲ್ಲಾ ಮಹತ್ವದ ನಿರ್ಧಾರಕ್ಕೂ ಕೊಕ್ಕೆ ಹಾಕುತ್ತಿರುವುದೇ ಅಶ್ವತ್ಥ್‌ ನಾರಾಯಣ್ ಎನ್ನಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟ ನೀಡುವ ನಿರ್ಧಾರವನ್ನು ಬಿಎಸ್‌ವೈ ಪ್ರಕಟಿಸಿದ ನಂತರ  ಕ್ಯಾಬಿನೆಟ್ ಚರ್ಚೆಯ ವೇಳೆ ಅಶ್ವತ್ಥ್‌ ನಾರಾಯಣ್ ತಗಾದೆ ಎತ್ತಿದ್ದರು. “ಜನ ಊಟಕ್ಕೆ ಗುಂಪಾಗಿ ನಿಂತು ನೂಕುನುಗ್ಗಲು ಹೆಚ್ಚಾದರೆ ಕೊರೋನಾ ಸಂಖ್ಯೆಯೂ ಹೆಚ್ಚಾಗುತ್ತದೆ. ಆಗ ನೀವೆ ಉತ್ತರ ನೀಡಬೇಕಾಗುತ್ತದೆ” ಎಂದು ಪ್ರಶ್ನೆ ಎತ್ತುವ ಮೂಲಕ ಬಡ ಜನರ ಹಸಿವು ನೀಗಿಸಬೇಕಾದ ಇಂದಿರಾ ಕ್ಯಾಂಟೀನ್ ಬಾಗಿಲು ಎಳೆಸಿದ್ದು ಇದೇ ಅಶ್ವತ್ಥ್ ನಾರಾಯಣ್.

ಉತ್ತರ ಭಾರತದ ಕಾರ್ಮಿಕರು ಗುಂಪು ಗುಂಪಾಗಿ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಮುಂದಾದಾಗ ವಿಶೇಷ ಶ್ರಮಿಕ್ ರೈಲನ್ನು ರದ್ದುಗೊಳಿಸಿದ್ದು; ಕಾರ್ಮಿಕರು ಇಲ್ಲೇ ಇರುವಂತೆ ನೋಡಿಕೊಳ್ಳಲು ಕೈಗಾರಿಕೋದ್ಯಮಿಗಳ ಪರ ಲಾಬಿ ನಡೆಸಿದ್ದು; ಸುಮಾರು 3 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಮಾದಾವರದ ಬೆಂಗಳೂರು ಪ್ರದರ್ಶನ ಕೇಂದ್ರದಲ್ಲಿ ಕೂಡಿ ಹಾಕಲು ಮುಂದಾದ್ದು ಸೇರಿದಂತೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾರಣವಾದ ಅನೇಕ ನಿರ್ಧಾರಕ್ಕೆ ಇದೇ ಅಶ್ವತ್ಥ್‌ ನಾರಾಯಣ್ ಕಾರಣ ಎಂಬುದು ಕ್ಯಾಬಿನೆಟ್ ಸಭೆಯೊಳಗಿಂದ ಹೊರಬಿದ್ದಿರುವ ಸುದ್ದಿಯಾಗಿದೆ.

ಅಶ್ವತ್ಥ್‌ ನಾರಾಯಣ್ ಹಿಂದಿನ ಕಾಣದ ಕೈ ಯಾವುದು ಗೊತ್ತಾ?

ಬಿ.ಎಸ್.ಯಡಿಯೂರಪ್ಪ ಮತ್ತು ಆರೆಸ್ಸೆಸ್ ನಡುವಿನ ನಂಟು ಹಳಸಿ ತುಂಬಾ ದಿನವಾಗಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿಎಸ್‌ವೈ ನಡುವಿನ ಸಂಬಂಧದ ಸಮಸ್ಯೆ ಜಗಜ್ಜಾಹೀರು.. ಇದೇ ಕಾರಣಕ್ಕೆ ಬಿಎಸ್‌ವೈ ವಿರುದ್ಧ ಪಕ್ಷದಲ್ಲಿ ಮತ್ತೊಂದು ಬಣ ನಿರ್ಮಿಸಿ ಆ ಮೂಲಕ ಸರ್ಕಾರದ-ಆಡಳಿತದ ಮೇಲೆ ಹಿಡಿತ ಸಾಧಿಸಬೇಕು, ಬಿಎಸ್‌ವೈ ಅನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಹವಣಿಸುತ್ತಿದ್ದ ಬಿ.ಎಲ್.ಸಂತೋಷ್ ಕೈಗೆ ಸಿಕ್ಕ ಪ್ರಮುಖ ಆಯುಧವೇ ಡಾ. ಅಶ್ವತ್ಥ್ ನಾರಾಯಣ್.

ಇತ್ತೀಚೆಗಿನ ದಿನಗಳಲ್ಲಿ ಗೋವಿಂದ ಕಾರಜೋಳ ಅಥವಾ ಲಕ್ಷ್ಮಣ ಸವದಿ ಕುರಿತ ಸುದ್ದಿಗಳೇ ಇಲ್ಲದಂತಾಗಿದೆ. ಆದರೆ ಡಾ. ಅಶ್ವತ್ಥ್ ನಾರಾಯಣ್ ಮಾತ್ರ ದಿನನಿತ್ಯ ಸುದ್ದಿಯಾಗುತ್ತಿದ್ದಾರೆ, ಸಿಎಂ ರೇಂಜಿಗೆ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾರೆ ಎಂದರೆ ಬಿಜೆಪಿ ಪಕ್ಷದ ಒಳಗೆ ಆಂತರಿಕವಾಗಿ ಅಶ್ವತ್ಥ್ ನಾರಾಯಣ್ ಅಂಡ್ ಟೀಮ್ ಹೇಗೆ ಕೆಲಸ ಮಾಡುತ್ತಿದೆ ಎಂದು ಊಹಿಸಬಹುದು.

ಶ್ರೀಮಂತರ ಪರ ಲಾಬಿ ಮಾಡುತ್ತಿದ್ದಾರಾ ಅಶ್ವತ್ಥ್?

ಈ ನಡುವೆ ಡಿಸಿಎಂ ಅಶ್ವತ್ಥ್ ನಾರಾಯಣ್ ಉಳ್ಳವರು, ಶ್ರೀಮಂತರು ಮತ್ತು ಕೈಗಾರಿಕೋದ್ಯಮಿಗಳ ಪರ ಲಾಬಿ ಮಾಡುತ್ತಿದ್ದಾರ? ಎಂಬ ಸಂಶಯವೂ ಮೂಡುತ್ತಿದೆ.

ರಾಜ್ಯದ ಆರ್ಥಿಕತೆಗೆ ತನ್ನದೇಯಾದ ಇತಿಹಾಸ ಇದೆ. ಜನಸಾಮಾನ್ಯರ ಪರ ಉದಾರವಾದಿ ಧೋರಣೆ ಎಂಬುದು ರಾಜ್ಯದ 7 ದಶಕದ ಆರ್ಥಿಕತೆಯ ಹಾದಿ. ಆದರೆ, ಇತ್ತೀಚೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಕಾನೂನುಗಳು ಮತ್ತು ಕಾಯ್ದೆಗಳನ್ನು ಉಳ್ಳವರ ಮತ್ತು ಶ್ರೀಮಂತರ ಪರ ತಿದ್ದುಪಡಿ ಮಾಡಲಾಗುತ್ತಿದೆ.

ಕಾರ್ಮಿಕ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದು ಸಾಧ್ಯವಾದರೆ, ರೈತರು ಮತ್ತು ಕಾರ್ಮಿಕರ ಹೆಣದ ಮೇಲೆ ಬಹುತೇಕ ಸಮಾಧಿ ಮಾಡಿದಂತೆಯೇ ಸರಿ. ಆದರೆ, ತೆರೆಯ ಮರೆಯಲ್ಲಿ ಸಿರಿವಂತರ ಪರ ನಿಂತು ಈ ಕಾಯ್ದೆಗಳ ತಿದ್ದುಪಡಿಗಾಗಿ ಲಾಬಿ ಮಾಡುತ್ತಿರುವುದು ಅಶ್ವತ್ಥ್ನಾರಾಯಣ್ ಅವರೇ ಎಂಬ ಗಂಭೀರ ಆರೋಪಗಳೂ ಈ ನಡುವೆ ಕೇಳಿ ಬರುತ್ತಿದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನೇ ಉಳ್ಳವರ ಪರವಾದ ಆರ್ಥಿಕತೆಯನ್ನಾಗಿ ಬದಲಿಸುವ ಹುನ್ನಾರ ನಡೆಯುತ್ತಿದೆ. ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ಎತ್ತಂಗಡಿ ಮಾಡಿದ ವಿಚಾರದಲ್ಲೂ ಡಿಸಿಎಂ ಅಶ್ವತ್ಥ್ ಪಾತ್ರ ಇದೆ ಎನ್ನಲಾಗುತ್ತಿದೆ.

ಕೊರೋನಾದಂತಹ ಸಂಕಷ್ಟದ ಕಾಲದಲ್ಲಿ ಜನಪರ ನಿಲ್ಲಬೇಕಾದ ಪ್ರತಿನಿಧಿಗಳು ಉದ್ಯಮಿಗಳ ಪರ ಲಾಬಿ ನಡೆಸುತ್ತಾ, ಲಾಕ್ಡೌನ್‌ನಿಂದಾಗಿ ಈಗಾಗಲೇ ಹಣ್ಣುಗಾಯಿ ನೀರುಗಾಯಿ ಆಗಿರುವ ಬಡವರನ್ನು ರಾಜಕೀಯದ ಹೆಸರಲ್ಲಿ ಮತ್ತೂ ಹಣಿಯುತ್ತಿರುವುದು. ತಮ್ಮದೇ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿರುವುದು ವಿಪರ್ಯಾಸವೇ ಸರಿ.


ಇದನ್ನೂ ಓದಿ: ಮೊದಲ ಬಾರಿಗೆ ರಾಜಧರ್ಮ ಪಾಲಿಸಿದ ಯಡಿಯೂರಪ್ಪ, ಸ್ವಪಕ್ಷೀಯರಿಂದಲೇ ಮುಖೇಡಿ ಆಂದೋಲನ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial