ಭಾರತೀಯ ಸಾಮಾಜಿಕ ಜಾಲತಾಣವೆಂದೂ ‘ರಾಷ್ಟ್ರೀಯವಾದಿ ಟ್ವಿಟರ್’ ಎಂದೇ ಬ್ರಾಂಡ್ ಆಗಿರುವ ‘ಕೂ’ ತನ್ನ ಬಲಪಂಥೀಯ ಮುಖವನ್ನು ಕಳಚಿಕೊಳ್ಳಲು ಯತ್ನಿಸುತ್ತಿದೆ. ತಾನು ಎಲ್ಲರ ವೇದಿಕೆ ಎಂದು ಅರ್ಥಮಾಡಿಸಲು ಸಂಸ್ಥೆಯು ಯತ್ನಿಸುತ್ತಿದೆ.
“ಇದು ಎಲ್ಲರನ್ನೂ ಒಳಗೊಳ್ಳುವ ವೇದಿಕೆ. ಆ ನಿಟ್ಟಿನಲ್ಲಿ ಸಂಸ್ಥೆಯನ್ನು ಕಟ್ಟಲು ಮುಂದಾಗಿದ್ದೇವೆ” ಎಂದು ಕೂ ಸಂಸ್ಥೆಯ ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳಿರುವುದಾಗಿ ಇತ್ತೀಚೆಗೆ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಕೂನಲ್ಲಿನ ಕಮ್ಯುನಿಟಿ ತಂಡಗಳು ಎಲ್ಲಾ ರಾಜಕೀಯ ವರ್ಗವನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ವರದಿ ಬೆಳಕು ಚೆಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ವಿಟರ್ ನಡುವಿನ ವಿವಾದ ಬಳಿಕ ದೇಸಿ ಟ್ವಿಟರ್ ಎಂಬ ಚರ್ಚೆ ಮುನ್ನೆಲೆಗೆ ಬಂದಿತು. ಫೆಬ್ರವರಿ 2021ರಲ್ಲಿ ಟ್ವಿಟರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಡುವೆ ವಿವಾದ ಉಂಟಾಯಿತು. ತಪ್ಪು ಮಾಹಿತಿಗಳಿಗೆ ಟ್ವಿಟ್ಟರ್ ಅನುಮತಿಸಿದೆ ಎಂದು ಆರೋಪಿಸಲಾಯಿತು. ನಂತರ ಕೂ ಬಲಪಂಥೀಯ ರಾಜಕಾರಣಿಗಳನ್ನು ದೊಡ್ಡಮಟ್ಟದಲ್ಲಿ ಆಕರ್ಷಿಸಿತು. ಪ್ರತಿಭಟನಾ ನಿರತ ರೈತ ನಾಯಕರನ್ನು ನಿರ್ಬಂಧಿಸುವ ಬೇಡಿಕೆಯನ್ನು ಟ್ವಿಟರ್ ನಿರಾಕರಿಸಿತ್ತು.
ದ್ವೇಷ ಭಾಷಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಟಿ ಕಂಗನಾ ರನೌತ್ ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ಪರ ಖಾತೆಗಳನ್ನು ಟ್ವಿಟರ್ ನಿಷೇಧಿಸಿತು. ಟ್ವಿಟ್ಟರ್ ಬಲಪಂಥೀಯ ರಾಷ್ಟ್ರೀಯವಾದಿ ಧ್ವನಿಗಳನ್ನು ನಿಗ್ರಹಿಸುತ್ತಿದೆ ಎಂದು ಆರೋಪಿಸಿ, ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಕೂ ವೇದಿಕೆಗೆ ವಲಸೆ ಹೋದರು.
ಮಿಚಿಗನ್ ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರು ಇದನ್ನು “ರಾಷ್ಟ್ರೀಯವಾದಿ ಟ್ವಿಟರ್ ರೂಪಿಸುವ ಪ್ರಯತ್ನ” ಎಂದು ಕರೆದಿದ್ದರು. “ಟ್ವಿಟ್ಟರ್‌ನಿಂದ ದೊಡ್ಡ ಮಟ್ಟದ ಭಾರತೀಯ ವಲಸೆ ಇಲ್ಲವಾಗಿದ್ದರೆ ನಮ್ಮಲ್ಲಿ ಹೆಚ್ಚಿನವರು ಕೂ ಬಗ್ಗೆ ಕೇಳುತ್ತಲೇ ಇರಲಿಲ್ಲ” ಎಂದು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ನಡೆಸುತ್ತಿರುವ ಸೆಂಟರ್ ಫಾರ್ ಸೆಕ್ಯುರಿಟಿ, ಸ್ಟ್ರಾಟಜಿ ಮತ್ತು ಟೆಕ್ನಾಲಜಿಯ ಉಪ ನಿರ್ದೇಶಕಿ ತ್ರಿಶಾ ರೇ ಹೇಳಿದ್ದರು.
“ಭಾರತದ ಸೆನ್ಸಾರ್‌ಶಿಪ್ ಕಾನೂನುಗಳನ್ನು ಅಧಿಕಾರದಲ್ಲಿರುವ ಪಕ್ಷಗಳು ದುರುಪಯೋಗಪಡಿಸಿಕೊಳ್ಳುತ್ತಿವೆ” ಮತ್ತು ಪ್ರತಿಸ್ಪರ್ಧಿ ಅಮೆರಿಕನ್ ಟೆಕ್ ದೈತ್ಯರು ದಿಕ್ಸೂಚಿ ಹಾಕಲು ಹೆಣಗಾಡುತ್ತಿದ್ದಾರೆ ಎಂಬ ಟೀಕೆಗಳ ನಡುವೆ “ಜನರು ಈ ನೆಲದ ಕಾನೂನಿಗೆ ಬದ್ಧವಾಗಿ ತಮಗೆ ಬೇಕಾದುದನ್ನು ಇಲ್ಲಿ ಪೋಸ್ಟ್ ಮಾಡಬಹುದು” ಎಂದು ಕೂ ಸಂಸ್ಥೆಯ ರಾಧಾಕೃಷ್ಣ ಹೇಳಿದ್ದಾರೆ.
ಸಾರ್ವಜನಿಕ ನಡವಳಿಕೆಯನ್ನು ನಿಯಂತ್ರಿಸುವ ಅಘೋಷಿತ ನಿಯಮಗಳನ್ನು ಆನ್‌ಲೈನ್‌ನಲ್ಲಿ ಅಭ್ಯಾಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯವಾದಿ ಟ್ಯಾಗ್‌ನಿಂದ ಹೊರಗಿದ್ದು ಎಲ್ಲರನ್ನೂ ಆಕರ್ಷಿಸುವ ಮಾತುಗಳನ್ನು ಅವರು ಆಡುತ್ತಿರುವುದನ್ನು ಫೈನಾನ್ಷಿಯಲ್ ಟೈಮ್ಸ್ ವರದಿ ಬಿಚ್ಚಿಟ್ಟಿದೆ.
ಇದನ್ನೂ ಓದಿರಿ: ಒಂದೇ ಖಾತೆಗೆ ಐದು ಪ್ರೊಫೈಲ್: ಫೇಸ್‌ಬುಕ್‌ನಿಂದ ಹೊಸ ಪ್ರಯೋಗ
“ಅವರು ಕೂ ಎಂದರು, ಇವರು ಟೂ ಎಂದರು” ಎಂಬ ಶೀರ್ಷಿಕೆಯಲ್ಲಿ ಫೈನಾನ್ಷಿಯಲ್ ಟೈಮ್ಸ್‌ನ ವರದಿಯನ್ನು ಹಂಚಿಕೊಂಡಿರುವ ಕನ್ನಡದ ಚಿಂತಕ ರಾಜಾರಾಮ್ ತಲ್ಲೂರು ಅವರು, “ಒಂದೂವರೆ ವರ್ಷದ ಹಿಂದೆ ನಟಿ ಕಂಗನಾ ರಾಣಾವತ್ ಅವರ ಟ್ವಿಟ್ಟರ್ ಖಾತೆ ಅಮಾನತಾದ ಬೆನ್ನಿಗೇ ಅವರ ಬೆಂಬಲಿಗರು, ಅವರ ಯೋಚನೆಗಳ ಬೆಂಬಲಿಗರೆಲ್ಲ ನಮಗೆ ವಿದೇಶೀ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂಗಳೇ ಬೇಡ ‘ದೇಸೀ ಟ್ವಿಟ್ಟರ್’ ನಾವೇ ಹುಟ್ಟಿಸಿ, ಬೆಳೆಸಿಕೊಳ್ತೇವೆ ಎಂದು ದೇಶಭಕ್ತಿ ಮೆರೆದದ್ದು ನೆನಪಿದೆಯೇ? ಈಗ ಈ ಶೋಕಿ ಭಕ್ತಗಢಣದ ಹಿಂದೆ ಹೋಗಿ, ವ್ಯಾವಹಾರಿಕವಾಗಿ ಸೊರಗಿಹೋಗಿರುವ ಕೂ ಸಂಸ್ಥೆ, ಈಗ ತಮ್ಮ “ನ್ಯಾಷನಲಿಸ್ಟ್ ಟ್ವಿಟ್ಟರ್” ಹಣೆಪಟ್ಟಿ ಕಳಚಿಕೊಳ್ಳಲು ಮುಂದಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಎರಡು ರೂಪಾಯಿಯ ಚೀಪ್ ವಿಷ ಕಾರುವ ಜನ ಅತ್ತ ಸಾಯಲೂ ಬಿಡದೇ ಇತ್ತ ಬದುಕಲೂ ಬಿಡದೇ ಇರುವುದು ಅರ್ಥ ಆಗಿರುವ ಹಿನ್ನೆಲೆಯಲ್ಲಿ, ಜಾಹೀರಾತು ಮತ್ತಿತರ ಆದಾಯ ಮೂಲಗಳನ್ನು ಹುಡುಕಿಕೊಳ್ಳಲು ಕಾನೂನು ಬದ್ಧವಾಗಿರುವ ಮತ್ತು ಎಲ್ಲರನ್ನು ಒಳಗೊಳ್ಳುವ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂ ಆಗಿ ತಮ್ಮನ್ನು ಮರುಸ್ಥಾಪಿಸಿಕೊಳ್ಳಲು ಕೂ ಮುಂದಾಗಿದೆ. ಇಂತಹ ಬ್ರ್ಯಾಂಡಿನ ಲಾಭದ ರಾಜಕೀಯದ ಹಿಂದೆ ಹೋದರೆ ಕಡೆಗೆ ಇದೇ ಗತಿ. “ಹೊಳೆ ದಾಟಿದ ಮೇಲೆ….” ಎಂಬ ಗಾದೆ ಅವರಿಗೆ ಬೇಗ ಅರ್ಥವಾಗಿದೆ. ಉಳಿದವರಿಗೂ, ಹಾಗೆ ಅರ್ಥವಾದರೆ ಮಾತ್ರ ಈ ದೇಶಕ್ಕೆ ಒಳಿತಾಗುತ್ತದೆ. ವಿಷ, ದ್ವೇಷ ಮತ್ತು ಅಸಹನೆಗಳ ಬುತ್ತಿ ಶಾಶ್ವತ ಅಲ್ಲ” ಎಂದು ಎಚ್ಚರಿಸಿದ್ದಾರೆ.


