Homeಮುಖಪುಟರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ

ರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ

ದೆಹಲಿಗೆ ಮೆರವಣಿಗೆ ನಡೆಸಲು ರೈತರು ಆಸಕ್ತಿ ಹೊಂದಿಲ್ಲ. ಸರ್ಕಾರ ನಿಜವಾದ ಆಸಕ್ತಿಯನ್ನು ತೋರಿಸದ ಹೊರತು ಅವರಿಗೆ ಮಾತುಕತೆ ನಡೆಸಲು ಆಸಕ್ತಿ ಇಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಸಂಸತ್ತಿನಲ್ಲಿನ ಮೋದಿಯವರು ನೀಡಿದ ಮೌಖಿಕ ಆಶ್ವಾಸನೆಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ಅಂತಹ ಬೆಲೆಯನ್ನು ಖಾತರಿಪಡಿಸಬೇಕೆಂದು ರೈತರ ಸರಳ ಬೇಡಿಕೆಯಾಗಿದೆ

- Advertisement -
- Advertisement -

ನಮ್ಮ ಪ್ರಧಾನಿ ನರೇಂದ್ರ ಮೋದಿ ಗೌರವಾನ್ವಿತ ವ್ಯಕ್ತಿ. ಅವರು ಹೇಳಿದ್ದನ್ನು ಮಾಡುತ್ತಾರೆ. ಜನರೇ ಅವರನ್ನು ಅರ್ಥಮಾಡಿಕೊಳ್ಳುವುದಿಲ್ಲ, ಅಷ್ಟೇ!

ಮೋದಿ ತಮ್ಮ ಭರವಸೆಗಳನ್ನು ಉಳಿಸಿಕೊಳ್ಳುತ್ತಾರೆ. ಭಾರತೀಯ ಆರ್ಥಿಕತೆಯಿಂದ ಕಪ್ಪು ಹಣವನ್ನು ತೊಡೆದುಹಾಕುವ ಭರವಸೆ ನೀಡಿದ್ದರು. 2016 ರಲ್ಲಿ, ಅವರು ಡಿಮೋನಿಟೈಸೇಶನ್ ಎಂಬ ಕ್ಷಿಪ್ರ ದಾಳಿಯೊಂದಿಗೆ ತಮ್ಮ ಭರವಸೆಯನ್ನು ಉಳಿಸಿಕೊಂಡರು. ಸ್ಪಷ್ಟವಾಗಿ ರಾತ್ರೋರಾತ್ರಿ, ದೊಡ್ಡ ಉದ್ಯಮಗಳು ತಮ್ಮ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಸಾಧ್ಯವಾಯಿತು, ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ’ಹಿಂದಿರುಗದ ಸಾಲದ’ ಆಸ್ತಿಗಳ (ನಾನ್ ಪರ್ಫಾಮಿಂಗ್ ಅಸ್ಸೆಟ್ಸ್) ಹೊರೆ ತೀವ್ರವಾಗಿ ಏರುವುದನ್ನು ಕಂಡವು. ಇದರ ಫಲಿತಾಂಶ ಎಲ್ಲರಿಗೂ ಕಾಣುವಂತೆ ಇತ್ತು. ಅನೌಪಚಾರಿಕ ಮತ್ತು ಅಸಂಘಟಿತ ವಲಯದ ಹಲವರಿಗೆ ಮಾತ್ರ ಇದನ್ನು ನೋಡಲು ಸಾಧ್ಯವಾಗಲಿಲ್ಲ. ಕಾರಣ, ಅವರ ವ್ಯವಹಾರಗಳು ಈ ಕ್ಷಿಪ್ರ ದಾಳಿಯನ್ನು ಎದುರಿಸಿ ಬದುಕುಳಿಯಲೇ ಇಲ್ಲ!

PC : COUNTERVIEW.ORG

ಇದು ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದದ್ದು ಕೂಡ, ಮೋದಿಯವರ ನಡೆಸಿದ ಮತ್ತೊಂದು ಕ್ಷಿಪ್ರ ದಾಳಿಯಂತೆಯೇ ಇತ್ತು; ನಾಲ್ಕು ಗಂಟೆಗಳ ನೋಟಿಸ್‌ನೊಂದಿಗೆ ಹಠಾತ್ ಲಾಕ್‌ಡೌನ್ ಮತ್ತು ತಮ್ಮ ಪಾತ್ರೆಗಳನ್ನು ಹೊಡೆಯುವ ಮೂಲಕ ಮತ್ತು ನಂತರ ದೀಪಗಳನ್ನು ಬೆಳಗಿಸುವ ಮೂಲಕ ಕೊವಿಡ್-19 ವಿರುದ್ಧ ಹೋರಾಡಲು ನಾಗರಿಕರಿಗೆ ಔಪಚಾರಿಕ ಸಲಹೆ. ಯಾವುದೇ ಉದ್ಯೋಗ ಮತ್ತು ಹಣವಿಲ್ಲದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ನಡೆಸಿದ ಸುದೀರ್ಘ ಪಾದಯಾತ್ರೆಯಲ್ಲಿ ಬಾಲ್ಕನಿಗಳೂ ಇರಲಿಲ್ಲ ಅಥವಾ ಬಡಿಯಲು ಪಾತ್ರೆಗಳು ಸಹ ಇರಲಿಲ್ಲ. ಅವರಲ್ಲಿ ಕೆಲವರು, ಮೋದಿಯವರ ಸಲಹೆಯಂತೆ ವೈರಸ್ ವಿರುದ್ಧ ಹೋರಾಡುವ ಮೊದಲು, ತಮ್ಮ ಹಳ್ಳಿಗಳಿಗೆ ಹೋಗುವ ದಾರಿಯಲ್ಲಿ ನಿಧನರಾದರು.

ಆಗ ನಮ್ಮ ಪ್ರಧಾನಿ ಎರಡು ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದರು. ಹಠಾತ್ ಮತ್ತು ತೀವ್ರವಾದ ಲಾಕ್‌ಡೌನ್ ಮುಸುಕಿನ ಹಿಂದೆ ಅವರು ಈಗಾಗಲೇ ಇದನ್ನು ಮಾಡಿದ್ದಾರೆ. ಮೋದಿ ಸರಳ ವ್ಯಕ್ತಿಯಾಗಿದ್ದು, ಅವರ ಸಾಧನೆಗಳ ಬಗ್ಗೆ ಕೊಚ್ಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ನಿಖರವಾಗಿ 227 ದಿನಗಳಲ್ಲಿ ರೈತರ ಸಂಪತ್ತು ದ್ವಿಗುಣಗೊಂಡಿದೆ ಎಂದು ದೇಶ ತಿಳಿದಿರಬೇಕು!

ಇತ್ತೀಚಿನ ಆಕ್ಸ್‌ಫ್ಯಾಮ್ ವರದಿಯಿಂದ ನಾವು ತಿಳಿದಿದ್ದೇನೆಂದರೆ, “ಮಾರ್ಚ್ 18 ಮತ್ತು ಅಕ್ಟೋಬರ್ 31ರ ನಡುವೆ, ಭಾರತದ ಅತಿ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಅತಿದೊಡ್ಡ ಷೇರುದಾರರಾದ ಮುಖೇಶ್ ಅಂಬಾನಿ ಅವರ ಸಂಪತ್ತು ದ್ವಿಗುಣವಾಗಿರುವುದಕ್ಕೂ ಹೆಚ್ಚು ವೃದ್ಧಿಯಾಗಿದೆ. ಅದು ಈ ಅವಧಿಯಲ್ಲಿ 36.2 ಬಿಲಿಯನ್ ಡಾಲರ್‌ನಿಂದ 78.3 ಬಿಲಿಯನ್ ಡಾಲರ್‌ಗೆ ಏರಿತು. ಅಂಬಾನಿಯ ಸಂಪತ್ತು ಭಾರತದ ಎರಡನೇ ಶ್ರೀಮಂತ ವ್ಯಕ್ತಿಗಿಂತ ಮೂರು ಪಟ್ಟು ಹೆಚ್ಚಾಗಿದೆ, ಎರಡನೇ ಶ್ರೀಮಂತನೆಂದರೆ ಗೌತಮ್ ಅದಾನಿ, ಲಾಕ್‌ಡೌನ್ ಸಮಯದಲ್ಲಿ ಅವರ ನಿವ್ವಳ ಮೌಲ್ಯವೂ ಹೆಚ್ಚಾಗಿದೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಭಾರತೀಯ ಆರ್ಥಿಕತೆಯು ತೀವ್ರ ಸಂಕುಚಿತವಾಗುತ್ತಿರುವ ಸಮಯದಲ್ಲಿ ಇವರುಗಳ ಸಂಪತ್ತಿನ ಸ್ಫೋಟವು ಗುರುತ್ವಾಕರ್ಷಣೆಯ ನಿಯಮವನ್ನೂ ಧಿಕ್ಕರಿಸುತ್ತದೆ.

ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಅಪಾರ ರೀಟೇಲ್ ಮತ್ತು ಸಂಗ್ರಹಣೆ (ಸಿಲೋ) ಹಿತಾಸಕ್ತಿಗಳನ್ನು ಹೊಂದಿರುವ ಬಿಲಿಯನೇರ್ ಜೋಡಿ ಅಂಬಾನಿ ಮತ್ತು ಅದಾನಿ ಗೌರವಾನ್ವಿತ ರೈತರು ಎಂದು ಸರಳ ಮನುಷ್ಯನಾದ ಪ್ರಧಾನ ಮಂತ್ರಿ ಉಲ್ಲೇಖಿಸಲಿಲ್ಲ. ಈ ಇಬ್ಬರು ’ರೈತರ’ ಆದಾಯವನ್ನು ಭಾರತದ ಉಳಿದ ರೈತರ ಆದಾಯಕ್ಕೆ ಸೇರಿಸಿದಾಗ, ರೈತರ ಸರಾಸರಿ ಆದಾಯವು ದುಪ್ಪಟ್ಟಿಗಿಂತ ಹೆಚ್ಚಾಗಿ ಜಿಗಿತ ಕಂಡಿರುವುದನ್ನು ಸುಲಭವಾಗಿ ನೋಡಬಹುದು.

ರೈತರಲ್ಲಿ ಇಂತಹ ಸಂಪತ್ತಿನ ಸೃಷ್ಟಿಯನ್ನು, ಈಗಾಗಲೇ ಎಲ್ಲಾ ಕಾರ್ಪೊರೆಟ್ ಪರವಾದ ಮಾರುಕಟ್ಟೆ ಆಧಾರಿತ ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿರಬಹುದು. ಇವರಲ್ಲಿ ಕೆಲವರು ಭಾರತದಲ್ಲಿ ಮತ್ತು ಇತರರು ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನಲ್ಲಿದ್ದಾರೆ. ಅದಕ್ಕಾಗಿಯೇ ಅವರು ಮೋದಿಯವರ ಹೊಸ ಕೃಷಿ ನೀತಿಗಳಿಗೆ ಬೆಂಬಲ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಗಟ್ಟಿ ಧ್ವನಿಯಲ್ಲಿ ಮತ್ತು ವಿಶ್ವಾಸದಿಂದ ಮಾತನಾಡುತ್ತಾರೆ.

ರೈತರಿಗೆ ಆದಾಯದ ಸ್ವಲ್ಪ ರಕ್ಷಣೆ ನೀಡುತ್ತಿದ್ದ, ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿನೀತಿಗಳು ದೂರವಿಟ್ಟಿವೆ. ಮುಕ್ತ ಮಾರುಕಟ್ಟೆ ಬೆಲೆಗಳು ಮಾತ್ರ ನ್ಯಾಯ ಒದಗಿಸಬಲ್ಲವು ಎಂದು ನಂಬಿದ ಮೋದಿ ಬೆಂಬಲ ಬೆಲೆಯನ್ನು ರೈತರ ಭವಿಷ್ಯದ ಏಳಿಗೆಗೆ ಅಡ್ಡಿ ಎಂದು ಎಣಿಸಿದ್ದಾರೆ. ಅವರ ಮೂರು ಹೊಸ ಕಾನೂನುಗಳನ್ನು ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ರಚಿಸಲು ವಿನ್ಯಾಸಗೊಳಿಸಲಾಗಿದೆ.

ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರು, ಸರಳ ಅಂಕಗಣಿತವು ತಮ್ಮ ಸರಾಸರಿ ಆದಾಯವನ್ನು ಅಗಾಧವಾಗಿ ಹೆಚ್ಚಿಸುತ್ತದೆ ಎಂಬುದನ್ನು ಕಾಣಬೇಕು. ಆದ್ದರಿಂದ ಅವರು ತಮ್ಮ ಸಮುದಾಯಕ್ಕೆ ಇಬ್ಬರು ಹೊಸ ಕಾರ್ಪೊರೆಟ್ ಸದಸ್ಯರನ್ನು ಸ್ವಾಗತಿಸಬೇಕು. ಪ್ರಧಾನಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ವ್ಯವಹರಿಸಿದ್ದರಿಂದ ಅವರಿಬ್ಬರ ಬಗ್ಗೆ ಭರವಸೆ ನೀಡಬಹುದು. ಈಗ ಅಂಬಾನಿ ಮತ್ತು ಅದಾನಿಗೆ ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ಸರ್ಕಾರಿ ಕೆಲಸಗಳ ಒಪ್ಪಂದಗಳನ್ನು ನೀಡುವುದರೊಂದಿಗೆ ಅವರ ನಡುವಿನ ಬಾಂಧವ್ಯ ಇನ್ನಷ್ಟು ಆಳವಾಗಿದೆ.

ಸರಳ ಅಂಕಗಣಿತದ ಲೆಕ್ಕಾಚಾರದಿಂದ ಹರಿಯುವ ಪ್ರಯೋಜನವನ್ನು ರೈತರು ಏಕೆ ನೋಡುತ್ತಿಲ್ಲ ಎಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಭಾರತದ ಗಣ್ಯರು ಸಹ ಗೊಂದಲಕ್ಕೊಳಗಾಗಿದ್ದಾರೆ. ಅಲ್ಲದೆ, ಈ ಎಲ್ಲಾ ಗಣ್ಯರು ಕೂಡ ಷೇರು ಬೆಲೆಗಳ-ವಿಶೇಷವಾಗಿ ಅಂಬಾನಿ ಮತ್ತು ಅದಾನಿ ನಡೆಸುವ ಕಂಪನಿಗಳ- ಷೇರುಗಳ ಏರಿಕೆಯಿಂದಾಗಿ ಮತ್ತಷ್ಟು ಶ್ರೀಮಂತರಾಗಿದ್ದಾರೆ. ಅದೃಷ್ಟದ ಈ ಏರಿಕೆಯನ್ನು ಭಾರತದಲ್ಲಿ ಮತ್ತು ವಿದೇಶದಲ್ಲಿ ಸ್ಟಾಕ್ ದಲ್ಲಾಳಿಗಳು ಗುರುತಿಸಿದ್ದಾರೆ. ಅಲ್ಪ ಆದಾಯಕ್ಕಾಗಿ ರೈತರು ಮಾತ್ರ ತಮ್ಮ ಹೊಲಗಳಲ್ಲಿ ಶ್ರಮಿಸುವುದಕ್ಕಿಂತ ಷೇರುಗಳನ್ನು ಹೊಂದುವ ಅನುಕೂಲವನ್ನು ನೋಡಲು ಹಠಮಾರಿಗಳಂತೆ ನಿರಾಕರಿಸುತ್ತಿದ್ದಾರೆ.

PC : BBC

ಈ ದಿನಗಳಲ್ಲಿ ನಮ್ಮ ರಾಷ್ಟ್ರೀಯ ಗುಪ್ತಚರ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿರುವ ಪ್ರಕಾರ, ಭಯೋತ್ಪಾದಕರು, ಖಲಿಸ್ತಾನಿಗಳು (ಪ್ರತ್ಯೇಕ ರಾಷ್ಟ್ರವನ್ನು ಕೋರುವ ಸಿಖ್ಖರು), ನಗರ ನಕ್ಸಲರು (ಮಾವೋವಾದಿಗಳು) ಮತ್ತು ವಿದೇಶಿ ಪಿತೂರಿಗಳು ಭಾರತವನ್ನು ನಾಶಮಾಡಲು ಕೋವಿಡ್-19 ನೊಂದಿಗೆ ಸ್ಪರ್ಧಿಸುವ ಮಾರಕ ವೈರಸ್‌ಗಳಾಗಿವೆ.

ಈ ವೈರಸ್‌ಗಳೆಲ್ಲವೂ ರಾಷ್ಟ್ರ ವಿರೋಧಿ ಅಲ್ಲದೆ ಹೋದರೆ ಸರ್ಕಾರ ವಿರೋಧಿ ಖಂಡಿತಾ; ಸರ್ಕಾರ ವಿರೋಧಿ ಅಲ್ಲದಿದ್ದರೆ ಖಂಡಿತವಾಗಿಯೂ ಸರ್ಕಾರ ನೀತಿಗಳ ವಿರೋಧಿಗಳು. ಇವರೆಲ್ಲ ರೈತರ ಆಂದೋಲನಕ್ಕೆ ನುಸುಳುತ್ತಿದ್ದಾರೆ ಮತ್ತು ವಿಚಿತ್ರವಾದ ಸಮಸ್ಯೆ ಎಂದರೆ ರೈತರು ಅವರಂತೆಯೇ ಆಗುತ್ತಿದ್ದಾರೆ.

ಮಾಜಿ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆಯೇ ಮೋದಿಯವರಿಗೂ ಮಾಧ್ಯಮ ವೈರಸ್ ಎಷ್ಟು ಅಪಾಯಕಾರಿ ಎಂದು ತಿಳಿದಿದೆ. ನ್ಯಾಯಾಲಯ ವಿಚಾರಣೆಗೆ ಕಾಯುತ್ತಿರುವ ಜೈಲಿನಲ್ಲಿರುವ ಭಾರತೀಯ ಮಾವೋವಾದಿಗಳ ಕಂಪ್ಯೂಟರ್‌ಗಳಲ್ಲಿ ರಾಜಿ ಮಾಡಿಕೊಂಡ, ಅನಧಿಕೃತವಾಗಿ ಸೇರಿಸಲ್ಪಟ್ಟ ಸಾಕ್ಷ್ಯಗಳ ಸುದ್ದಿಯನ್ನು ’ದ ವಾಷಿಂಗ್ಟನ್ ಪೋಸ್ಟ್’ ಇತ್ತೀಚೆಗೆ ಪ್ರಕಟಿಸಿದೆ.

ಅಮೆರಿಕದಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರನ್ನು ಅಧ್ಯಕ್ಷಗಾದಿಯಿಂದ ಇಳಿಸಿದ್ದ ವಾಟರ್‌ಗೇಟ್ ಹಗರಣವನ್ನು ಬಯಲುಮಾಡಿದ್ದ ’ದಿ ಪೋಸ್ಟ್’ನ ಇಂತಹ ವರದಿಗಳು ಸಹಜವಾಗಿ ಮತ್ತೊಂದು ’ವಿದೇಶಿ ವಿನಾಶಕಾರಿ ಸಿದ್ಧಾಂತ’ ಎಂದು ಮೋದಿ ನಮ್ಮನ್ನು ಈ ಬಗ್ಗೆ ಸರಿಯಾಗಿಯೇ ಎಚ್ಚರಿಸಿದ್ದಾರೆ.

ಅದೇನೇ ಇದ್ದರೂ, ನಾವು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಬಹುದು, ಏಕೆಂದರೆ ನಾವು 56 ಇಂಚುಗಳಷ್ಟು ಅಳತೆಯ ಎದೆ ಇರುವ, ತಮ್ಮ ಆದರ್ಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಬಲವಾದ ಪ್ರಧಾನಮಂತ್ರಿಯ ಸುರಕ್ಷಿತ ಕೈಯಲ್ಲಿದ್ದೇವೆ,

ಆದ್ದರಿಂದ, ಪಾಠ ಕಲಿಯಲು ನಿರಾಕರಿಸುವ ಕೆಟ್ಟ ಶಾಲಾ ವಿದ್ಯಾರ್ಥಿಗಳ ಗುಂಪಿನಂತೆ ರೈತರು ವರ್ತಿಸಿದಾಗ ಮೋದಿಯವರ ಆಯ್ಕೆ ಏನಾಗಿತ್ತು? ರೈತರನ್ನು ಬಂಧಿಸುವ ಮೂಲಕ ಅವರಿಗೆ ಪಾಠ ಕಲಿಸುವುದು. ಅವರಲ್ಲಿ ಕೆಲವರನ್ನು ಸಣ್ಣದೊಂದು ಅನುಮಾನದ ಮೇಲೆ ಅಥವಾ ಯಾವುದೇ ಅನುಮಾನವಿಲ್ಲದೆ ಬಂಧಿಸಲಾಗುತ್ತಿದೆ.

ಇದಲ್ಲದೆ, ಲೋಹದ ಮುಳ್ಳುಗಳು, ಮುಳ್ಳುತಂತಿ, ಸಿಮೆಂಟ್ ಬ್ಲಾಕ್‌ಗಳು ಮತ್ತು ಕಂದಕಗಳ ಜೊತೆಗೆ ಭಾರಿ ಪ್ರಮಾಣದ ಪೊಲೀಸ್ ಉಪಸ್ಥಿತಿಯು ಸಿಂಘು ಮತ್ತು ದೆಹಲಿಯ ಇತರ ಗಡಿ ಪ್ರದೇಶಗಳಲ್ಲಿನ ಪ್ರತಿಭಟನಾನಿರತ ರೈತರನ್ನು ಸುತ್ತುವರಿದಿದೆ, ಇದರ ಪರಿಣಾಮವಾಗಿ, ಅವರು ದೈಹಿಕ ಚಲನವಲನವನ್ನು ನಿಯಂತ್ರಿಸಲಾಗಿದೆ. ಇಡೀ ಪ್ರಭುತ್ವ ಶಕ್ತಿಯ ಬೆಂಬಲದೊಂದಿಗೆ ಪ್ರಧಾನಮಂತ್ರಿ ರೈತರಿಂದ ಬರುವ ಯಾವುದೇ ಸವಾಲನ್ನು-ವಿಶೇಷವಾಗಿ ದೆಹಲಿಯ ಕಡೆಗಿನ ಅವರ ಮೆರವಣಿಗೆಯನ್ನು- ಎದುರಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ,

ಇದಕ್ಕೆ ವಿರುದ್ಧವಾಗಿ, ಪ್ರತಿಭಟನಾನಿರತ ಪುರುಷರು, ಮಹಿಳೆಯರು ಮತ್ತು ಮಕ್ಕಳು ಶಾಂತಿಯುತ ಗುಂಪುಗಳಾಗಿವೆ. ರೈತರ ಶಸ್ತ್ರಾಸ್ತ್ರಗಳು ಅವರ ಟ್ರಾಕ್ಟರುಗಳು ಮಾತ್ರ. ಅವರು ಎಂದಿಗೂ ಗೆಲ್ಲಲು ಸಾಧ್ಯವಾಗದ ಅಸಮಾನ ಹೋರಾಟದಂತೆ ಇದು ಕಾಣಿಸುತ್ತಿದೆ.

ಇನ್ನೂ, ಈ ಚಕಮಕಿ ಮುಂದುವರೆದಂತೆ, ಅದು ಮೋದಿಯವರಿಗೆ ಕಡಿಮೆ ಮತ್ತು ಇನ್ನೂ ಕಡಿಮೆ ಅನುಕೂಲಕರವಾಗುತ್ತಿದೆ. ರೈತರು ಹಠಮಾರಿ ಮತ್ತು ದೃಢ ನಿಶ್ಚಯವನ್ನು ಹೊಂದಿರುವುದು ಮಾತ್ರವಲ್ಲ, ಈ ಹೋರಾಟವನ್ನು ಎದುರಿಸಲು ಅವರು ವಿರೋಧಾಭಾಸದ ಮಾರ್ಗವನ್ನು ಸಹ ಕಂಡುಕೊಂಡಿದ್ದಾರೆ.

ದೆಹಲಿಗೆ ಮೆರವಣಿಗೆ ನಡೆಸಲು ರೈತರು ಆಸಕ್ತಿ ಹೊಂದಿಲ್ಲ. ಸರ್ಕಾರ ನಿಜವಾದ ಆಸಕ್ತಿಯನ್ನು ತೋರಿಸದ ಹೊರತು ಅವರಿಗೆ ಮಾತುಕತೆ ನಡೆಸಲು ಆಸಕ್ತಿ ಇಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಸಂಸತ್ತಿನಲ್ಲಿನ ಮೋದಿಯವರು ನೀಡಿದ ಮೌಖಿಕ ಆಶ್ವಾಸನೆಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ಅಂತಹ ಬೆಲೆಯನ್ನು ಖಾತರಿಪಡಿಸಬೇಕೆಂದು ರೈತರ ಸರಳ ಬೇಡಿಕೆಯಾಗಿದೆ.

ದೆಹಲಿಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಯಾವುದೇ ಆತುರದಲ್ಲಿಲ್ಲ ಎಂದು ತಿಳಿದು ಮೋದಿ ಎಚ್ಚರಗೊಂಡಿದ್ದಾರೆ. ರೈತರು ನೆರೆಯ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಿಖ್ ಮತ್ತು ಜಾಟ್ ರೈತರ ಬೆಂಬಲವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಕಿಸಾನ್ ಮಹಾಪಂಚಾಯತ್‌ಗಳು- 10 ರಿಂದ 12 ಹಳ್ಳಿಗಳ ಪ್ರತಿಭಟನಾನಿರತ ರೈತರ ಸಭೆ- ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಭಾರಿ, ಉತ್ಸಾಹಭರಿತ ಜನಸಂದಣಿಯನ್ನು ಸೆಳೆಯುತ್ತಿವೆ.

ಅಂತೆಯೇ, ದಕ್ಷಿಣ ರಾಜ್ಯಗಳಾದ ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ದೆಹಲಿ ಪ್ರತಿಭಟನೆಯನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯ ರೈತರು ಆಂದೋಲನಕ್ಕೆ ಸೇರುತ್ತಿದ್ದಾರೆ.

ಪಶ್ಚಿಮ ಬಂಗಾಳ, ಒಡಿಶಾ ಮತ್ತು ಇತರ ಪೂರ್ವ ರಾಜ್ಯಗಳಲ್ಲಿ ರೈತ ಪ್ರತಿಭಟನೆ ವ್ಯಾಪಕ ಬೆಂಬಲವನ್ನು ಪಡೆದ ನಂತರ, ಮೋದಿ ಮುಖ್ಯಸ್ಥರಾಗಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ’ಜನಪ್ರಿಯತೆಯು’ ಮತ್ತೊಂದು ಗಂಭೀರ ಹೊಡೆತವನ್ನು ಸಹಿಸಿಕೊಳ್ಳಬೇಕಿದೆ.

ಭಾರತದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ರೈತರು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಜನರನ್ನು ವಿಭಜಿಸುವ ಜಾತಿ, ಧರ್ಮ ಮತ್ತು ವರ್ಗದ ಗಡಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ.

ರೈತರ ಹಿಂದೆ ಒಂದಾಗುವುದು ಮತ್ತು ಮುಳುಗುವುದು ಈಗ ವಿರೋಧ ಪಕ್ಷಗಳಿಗೆ ಬಿಟ್ಟಿದ್ದು. ಈಗ ಕೇವಲ ಮೂರು ಕೃಷಿ ಕಾನೂನುಗಳಲ್ಲ ಮುಳುಗಿಸುವುದಲ್ಲ, ಆದರೆ ಕಾನೂನುಗಳನ್ನು ಅಂಗೀಕರಿಸಿದ ಮೋದಿಯವರ ಸರ್ಕಾರವನ್ನೂ ಕೂಡ – ಪ್ರಜಾಸತ್ತಾತ್ಮಕವಾಗಿ.

ಪ್ರಧಾನಿ ಮೋದಿ ರೈತರನ್ನು ಸುತ್ತುವರಿಯಲು ಯೋಜಿಸಿದ್ದರು. ಆದರೆ ರೈತರು ಈಗ ಅವರ ಸರ್ಕಾರವನ್ನು ಸುತ್ತುವರೆದಿದ್ದಾರೆ.

ಅಮಿತ್ ಬಾಧುರಿ

ಅಮಿತ್ ಬಾಧುರಿ
ಸಂಶೋಧಕರು ಮತ್ತು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕ; ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ’ಕ್ಲಿಯರ್ ಫೇಮ್ ಪ್ರಾಧ್ಯಾಪಕ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಹತ್ತಿಕ್ಕುವ ವಿದ್ಯಮಾನ ಸಂಭವಿಸಿದಾಗ ಅವರು ೨೦೨೦ರಲ್ಲಿ ಜೆಎನ್‌ಯುಗೆ ರಾಜೀನಾಮೆ ನೀಡಿದರು.


ಇದನ್ನೂ ಓದಿ: ಭಾರತದ ರೈತ ಹೋರಾಟಕ್ಕೆ ಅಮೆರಿಕದ 87 ಸಂಘಟನೆಗಳ ಬೆಂಬಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2025ಕ್ಕೆ ಬಿಜೆಪಿ ಸಂಪೂರ್ಣ ಮೀಸಲಾತಿಯನ್ನು ರದ್ದುಗೊಳಿಸಲಿದೆ: ರೇವಂತ್ ರೆಡ್ಡಿ

0
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ವಿರುದ್ಧ ಸಮರ ಸಾರಿವೆ ಎಂದು ಆರೋಪಿಸಿರುವ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಮೀಸಲಾತಿ ರದ್ದುಗೊಳಿಸುವ...