ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿಕಾಯಿದೆ ವಿರುದ್ಧವಾಗಿ ನಡೆದಿರುವ ನೂರಾರು ಹೋರಾಟ ಸಭೆಗಳು ಶಾಂತಿಯುತವಾಗಿ ನಡೆದವು. ನಾವು ಫೆಬ್ರವರಿ ತಿಂಗಳಲ್ಲಿ ನಡೆಸಿದ 4 ದಿನಗಳ ಮೋದಿ ವಿರುದ್ಧದ ಧರಣಿಯೂ ಶಾಂತಿಯುತವಾಗಿ ನಡೆಯುತ್ತಿತ್ತು ಆದರೆ ದುರದೃಷ್ಟವಶಾತ್ ಎರಡು ಕಡೆಗಳಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟದ ಸ್ಥಳಗಳಲ್ಲಿ ಇಬ್ಬರು ಅಪ್ರಬುದ್ಧ ಯುವತಿಯರು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಯ ವಿನಾಕಾರಣ ಕೂಗಿ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಚಳವಳಿಯನ್ನು ಯಶಸ್ವಿಗೊಳಿಸಬೇಕೆಂಬುದು ಬೆಂಗಳೂರು ಮೊದಲುಗೊಂಡು ಇಲ್ಲಿಯವರೆಗೆ ನಡೆದಿರುವ ಎಲ್ಲಾ ಹೋರಾಟಗಳನ್ನು ರೂಪಿಸುವವರ ಆಶಯವೇ ಹೊರತು, ಚಳವಳಿಯನ್ನು ವಿಫಲಗೊಳಿಸುವುದಲ್ಲ. ರಾಷ್ಟ್ರವಿರೋಧಿ ಘೋಷಣೆ ಹಾಕುವವರನ್ನು ಮತ್ತು ಆ ರೀತಿ ಮಾತನಾಡುವವರನ್ನು ಕರೆದು ಮಾತನಾಡಿಸುವುದನ್ನು ಈ ಸಭೆಗಳನ್ನೂ ನಡೆಸುವವರು ಬಯಸುವುದೇ ಇಲ್ಲ. ಅಮೂಲ್ಯಳನ್ನೆ ತೆಗೆದುಕೋಳ್ಳಿ ಆಕೆ ಮೊದಲು ನಡೆದ ಎರಡು ಸಭೆಗಳಲ್ಲಿ ಯಾವುದೇ ರಾಷ್ಟ್ರವಿರೋಧಿ ಮಾತುಗಳನ್ನು ಆಡಿಲ್ಲ. ಆದ್ದರಿಂದಲೇ ಸ್ವಾತಂತ್ರ್ಯ ಉದ್ಯಾನದ ಸಭೆಗೆ ಸಂಘಟಿತರು ಆಕೆಯನ್ನು ಮಾತನಾಡಲು ಆಹ್ವಾನಿಸಿರಬಹುದು. ಅಂತಹದರಲ್ಲಿ ಸಂಘಟಕರನ್ನು ಅಪರಾಧಿಸ್ಥಾನದಲ್ಲಿ ನಿಲ್ಲಿಸುವುದು ಒಪ್ಪತಕ್ಕ ಮಾತಲ್ಲ.
ಸರ್ವೋಚ್ಛ ನ್ಯಾಯಾಲಯ ಹೇಳಿತು. “ಸರ್ಕಾರದ ನಿಲುವನ್ನು ವಿರೋಧಿಸುವ ಹಕ್ಕನ್ನು ನಮ್ಮ ರಾಜ್ಯಾಂಗ ಪ್ರಜೆಗೆ ನೀಡಿದೆ. ಅದಕ್ಕಾಗಿ ಸಭೆ ಸಮ್ಮೇಳನಗಳನ್ನು ಹೋರಾಟವನ್ನು ಆಯೋಜಿಸುವುದು ಪ್ರಜೆಯ ಹಕ್ಕು. 144ನೇ ಸೆಕ್ಷನ್ ಹಾಕಿ ಶಾಂತಿಯುತವಾಗಿ ನಡೆಯುವ ಹೋರಾಟವನ್ನು ಹತ್ತಿಕ್ಕುವುದು, ಲಾಠಿ ಚಾರ್ಜ್ ಮಾಡುವುದನ್ನು, ಬಂದೂಕು ಹಿಡಿದು ಹೋರಾಟಗಾರರ ಮೇಲೆ ಪ್ರಯೋಗ ಮಾಡುವುದನ್ನು ಪೊಲೀಸರು ಮಾಡುವಂತಿಲ್ಲ” ಎಂದೂ ತಾಕೀತು ಮಾಡಿದೆ. ಈ ತೀರ್ಪು ಸರ್ಕಾರದ ಸ್ವೇಚ್ಛಾಚಾರವನ್ನು ತಡೆಹಿಡಿದಿದೆ. ಹೀಗಾಗಿ ಅನ್ಯಮಾರ್ಗಗಳಿಂದ ಹೋರಾಟ ನಡೆಸುವುದನ್ನು ಹತ್ತಿಕ್ಕಲು ಸರ್ಕಾರ ಆಲೋಚನೆ ಮಾಡುತ್ತಿದೆ. ಕರ್ನಾಟಕ ಸರ್ಕಾರದ ಗೃಹ ಸಚಿವರು ಕೈಗೊಂಡಿರುವ ಕ್ರಮಗಳು ಕೂಡ ಇದೇ ಆಗಿದೆ.
ಚಳವಳಿಗೆ ಬರುವವರನ್ನ ಯಾರು ಕೂಡ ಬಿಜೆಪಿ ಸಭೆಗಳಿಗೆ ಕರೆತರುವಂತೆ ಲಾರಿಗಳಲ್ಲಿ ಬಸ್‍ಗಳಲ್ಲಿ ಕರೆತರುವುದಿಲ್ಲ. ಸ್ವಯಂಪ್ರೇರಣೆಯಿಂದ ಜನ ತಾವಾಗಿಯೇ ಬರುತ್ತಾರೆ. ಹೀಗೆ ಬಂದವರಲ್ಲಿ ಯಾರು, ಯಾರು ಸಾರ್ವಜನಿಕರು ಎಂಬುದನ್ನು ಪತ್ತೆ ಹಚ್ಚಿ ಅವರನ್ನು ಹೋರಾಟದ ಸ್ಥಳದಿಂದ ಹೊರಹಾಕುವುದು ಪೊಲೀಸರ ಜವಾಬ್ದಾರಿ. ಹೋರಾಟಕ್ಕೆ ಬಂದವರಲ್ಲಿ ಕೆಲ ಗಣ್ಯರನ್ನು ಹೋರಾಟ ಸಮಿತಿಯವರು ಮಾತನಾಡಲು ಪ್ರಾರ್ಥಿಸಬಹುದು. ಅವರು ಬೇರೆಕಡೆ ನಡೆಯುವ ಹೋರಾಟ ಸಭೆಗಳಲ್ಲಿ ಘನತೆಗೌರವದಿಂದ ಮಾತನಾಡಿದ್ದರೆ ಮಾತ್ರ ಅವರನ್ನ ಮಾತನಾಡಲು ಕರೆಯುತ್ತಾರೆ. ಹಾಗಿದ್ದೂ ಹೀಗೆ ಕರೆದವರಲ್ಲಿ ಯಾರಾದರು ರಾಷ್ಟ್ರದ್ರೋಹದ ಮಾತನಾಡಿದರೆ ಅವರ ಮೇಲೆ ಖಟ್ಲೆ ಹೂಡಬಹುದು. ಆದರೆ ಅವರ ತಪ್ಪಿಗೆ ಹೋರಾಟ ನಡೆಸುವ ಮುಖ್ಯಸ್ಥರನ್ನೂ ಸಮಿತಿಯ ಸದಸ್ಯರನ್ನೂ ತಪ್ಪಿತಸ್ಥರಂತೆ ಕಾಣುವುದು ಯಾವ ನ್ಯಾಯ?
ವಿವಿಧ ಕಡೆಗಳಲ್ಲಿ ಹೋರಾಟವನ್ನು ಸಂಘಟಿಸಿರುವ ಕೆಲವರನ್ನು ಅಪರಾಧಿಗಳಂತೆ ಕಾಣುತ್ತಿರುವುದು, ಆ ಮೂಲಕ ಇತರೆ ಸಂಘಟನೆ ಮಾಡುತ್ತಿರುವವರಲ್ಲಿ ಹೆದರಿಕೆ ಉಂಟುಮಾಡುವುದರ ಮೂಲಕ ಸಿಎಎ ಮುಂತಾದ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುವ ಎಲ್ಲರನ್ನು ಭಯಭೀತಿಗೆ ಒಳಪಡಿಸಿ ದೇಶಾದ್ಯಂತ ನಡೆಯುತ್ತಿರುವ ಸಾವಿರಾರು ಚಳವಳಿಗಳನ್ನು ಏಕಕಾಲಕ್ಕೆ ಸ್ಥಗಿತಗೊಳಿಸುವ ಹುನ್ನಾರಕ್ಕೆ ಕೈ ಹಾಕಿರುವ ಗೃಹಸಚಿವರ ಗೆಯ್ಮೆಗೆ ಧಿಕ್ಕಾರ.
ಕರ್ನಾಟಕದಲ್ಲೆ ಸಿಎಎ, ಎನ್‌ಆರ್‌ಸಿ ವಿರುದ್ಧ ಇದುವರೆಗೆ 175 ದೊಡ್ಡ ಸಣ್ಣ ಹೋರಾಟಗಳೂ ವಿವಿಧ ಸ್ಥಳಗಳಲ್ಲಿ ನಡೆದಿವೆ. ಭಾರತದಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಈ ಚಳವಳಿ ನಡೆಯುತ್ತಿದೆ. ಈ ರೀತಿಯ ಬೆದರಿಕೆ ಹಾಕಿ ಹೋರಾಟವನ್ನು ಸ್ಥಗಿತ ಗೊಳಿಸುವುದು ಆಗದ ಮಾತು.
ಪೌರತ್ವ ತಿದ್ದುಪಡಿಕಾಯ್ದೆ ಅಸಂಖ್ಯಾತ ಹಿಂದುಗಳು ಎಸ್.ಟಿ, ಎಸ್.ಸಿಗಳೂ, ಮಹಮದೀಯರು, ಕ್ರಿಶ್ಚಿಯನ್ನರು ಮುಂತಾದ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ. ಆ ಮೂಲಕ ಅವರನ್ನೆಲ್ಲ ಭಾರತದ ಎರಡನೆಯ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತದೆ. ಪೌರತ್ವವಿಲ್ಲದ ತಬ್ಬಲಿಗಳಾಗುತ್ತಾರೆ ಈ ಜನ. ಆದ್ದರಿಂದ ಈ ಹೋರಾಟ ಅವರಿಗೆ ಜೀವನ್ಮರಣದ ಹೋರಾಟ. ಸರ್ಕಾರ ಈ ಹೋರಾಟವನ್ನೂ ಹತ್ತಿಕ್ಕಲು ಏನೇ ಪ್ರಯತ್ನ ಮಾಡಿದರೂ ಈ ಹೋರಾಟ ನಿಲ್ಲದು.
ಜನತೆಗೆ ಮೋದಿ ಸರ್ಕಾರ ಅಪಾರವಾದ ಆಶ್ವಾಸನೆಗಳನ್ನು ಕೊಟ್ಟು ಮತ ಕಸಿದುಕೊಂಡಿತು. ಆ ಆಶ್ವಾಸನೆಗಳೆಲ್ಲ ಹುಸಿಯಾದವು. ಹತಾಶತಾದ ಜನ ಸರ್ಕಾರದ ವಿರುದ್ಧ ತಿರುಗಿಬಿದ್ದಾರೆಂಬ ಭಯದಿಂದ ಮೋದಿ ಮತ್ತು ಶಾ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಈ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಸಂಚು ಹೂಡಿದ್ದಾರೆ. ಇದು ಮತದಾರರೆಲ್ಲರಿಗೆ ಮನವರಿಕೆಯಾಗಿದೆ. ಕೆಲವರನ್ನು ಕೆಲವು ಕಾಲ ಯಾಮಾರಿಸಬಹುದು, ಎಲ್ಲರನ್ನು ಎಲ್ಲಾ ಕಾಲದಲ್ಲಿ ಯಾಮಾರಿಸಲು ಸಾಧ್ಯವಿಲ್ಲ.
ಆದ್ದರಿಂದ ಮತದಾರ ಇಂದು ಕೇಳುತ್ತಿದ್ದಾನೆ, “ಪ್ರಧಾನಿ ಮೋದಿಯವರೇ ನಿಮ್ಮ ರಾಜ್ಯಭಾರದಲ್ಲಿ ಸಮಸ್ಯೆಗಳ ಸರಮಾಲೆ ತಲೆಹಾಕಿವೆ. ಅವುಗಳಿಗೆಲ್ಲಕ್ಕೂ ನೀವೆ ಜವಾಬ್ದಾರರು, ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಕೊನೆಗಾಣಿಸಿ ಜನಸಾಮಾನ್ಯರನ್ನು ಕಾಡುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಿ. ಅದಾಗದಿದ್ದರೆ ಸಿಂಹಾಸನ ತೆರವುಮಾಡಿ” ಎಂದು.


