Homeಕರ್ನಾಟಕದೇವನಹಳ್ಳಿ: ಭೂಮಿ ಕೊಡುವುದಿಲ್ಲ ಎಂದು ದಾಖಲೆ ನೀಡಿದ ಶೇ.80 ರಷ್ಟು ರೈತರು

ದೇವನಹಳ್ಳಿ: ಭೂಮಿ ಕೊಡುವುದಿಲ್ಲ ಎಂದು ದಾಖಲೆ ನೀಡಿದ ಶೇ.80 ರಷ್ಟು ರೈತರು

- Advertisement -
- Advertisement -

ಕಳೆದ ಹತ್ತು ದಿನಗಳಿಂದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಗ್ರಾಮ ಸಭೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 13 ಹಳ್ಳಿಗಳ ಶೇ.73 ರಿಂದ ಶೇ.80 ರಷ್ಟು ರೈತರು ತಮ್ಮ ಭೂಮಿ ಕೊಡುವುದಿಲ್ಲ ಎಂದು ಸಹಿ ಮಾಡಿದ್ದಾರೆ ಎಂದು ಇಂದು ನಡೆದ ‘ಗ್ರಾಮ ಸಂಕಲ್ಪ ಸಮಾವೇಶ’ದಲ್ಲಿ ರೈತರು ತಿಳಿಸಿದರು.

ಚನ್ನರಾಯಪಟ್ಟಣ ನಾಡ ಕಚೇರಿ ಮುಂಭಾಗ ನಡೆದ ಸಮಾವೇಶದಲ್ಲಿ 13 ಹಳ್ಳಿಗಳ ಪ್ರತಿನಿಧಿಗಳು ಭೂಮಿ ಕೊಡುವುದಿಲ್ಲ ಎಂದು ಘೋಷಿಸಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡರು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಮುಖಂಡರಾದ ಮೀನಾಕ್ಷಿ ಸುಂದರಂ, “ನಾವೇ ಅಧಿಕಾರಿಕ್ಕೆ ತಂದ ಸರ್ಕಾರ ನಮ್ಮ ವಿರುದ್ಧ ತೀರ್ಮಾನ ತೆಗೆದುಕೊಂಡರೆ, ಅಂಥ ಜನವಿರೋಧಿ ಸರ್ಕಾರವನ್ನು ಉರುಳಿಸಬೇಕಾಗುತ್ತದೆ. ಸರ್ಕಾರ ನಮ್ಮ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡರೆ, ಅದೇ ಅಂತಿಮಲ್ಲ” ಎಂದು ಹೇಳಿದರು.

“ಎಕರೆಗೆ ಮೂರೂವರೆ ಕೋಟಿ ರೂಪಾಯಿ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಿದೆ. ಅದು ಯಾರ ಹಣ? ಅದು ನಮ್ಮದೇ ತೆರಿಗೆ ಹಣವಲ್ಲವೇ? ನೀವು ರೈತರಿಗೆ ಮೂರೂವರೆ ಕೋಟಿ ಹಣ ಕೊಟ್ಟು ಕೈಗಾರಿಕೋದ್ಯಮಿಗಳಿಗೆ ಕಡಿಮೆ ಹಣಕ್ಕೆ ಭೂಮಿ ಕೊಡುತ್ತೀರಾ. ನಮ್ಮ ತೆರಿಗೆ ಹಣವನ್ನು ಲೂಟಿ ಮಾಡುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು” ಎಂದು ಪ್ರಶ್ನಿಸಿದರು.

“ನಮ್ಮ ರೈತರಿಗೆ ಬೆಳೆಗೆ ಬೆಂಬಲ ನೀಡದ ನೀವು, ಯಾವುದೋ ದೇಶದಿಂದ ಬರುವ ಕೈಗಾರಿಕೋದ್ಯಮಗಳಿಗೆ ತೆರಿಗೆ ಸೇರಿದಂತೆ ಎಲ್ಲ ಹಂತದಲ್ಲಿ ವಿನಾಯಿತಿ ನೀಡುತ್ತಿದ್ದೀರಾ. ನೀವು ರೈತರಿಗೆ ಯಾಕೆ ಬೆಂಬಲ ನೀಡುವುದಿಲ್ಲ? ಈ ಅನ್ಯಾಯವನ್ನು ಪ್ರಶ್ನಿಸುವುದಕ್ಕಾಗಿಯೇ ಇಲ್ಲಿನ ರೈತರು ಹೋರಾಟ ಮಾಡುತ್ತಿದ್ದಾರೆ” ಎಂದು ಸಚಿವ ಎಂ.ಬಿ. ಪಾಟೀಲ್‌ ವಿರುದ್ಧ ಕಿಡಿಕಾರಿದರು.

“ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅವಕಾಶವಿದೆ ಎಂದು ಕೈಗಾರಿಕಾ ಸಚಿವರು ವ್ಯಂಗ್ಯವಾಗಿ ಹೇಳಿದ್ದಾರೆ. ಆದರೆ, ಚಳವಳಿಯೊಂದು ನಿರಂತರವಾಗಿ ನಡೆಯುತ್ತಿದ್ದರೆ, ಅದು ಕಿವುಡು ಕಿವಿಗಳನ್ನೂ ಕೇಳುವಂತೆ ಮಾಡುತ್ತದೆ. ಪ್ರಜಾಪ್ರಭುತ್ವ ಎಂದರೆ ಪ್ರತಿಭಟನೆ ಮಾಡುದಷ್ಟೇ ಅಲ್ಲ, ಪ್ರಜಾಪ್ರಭುತ್ವ ಎಂದರೆ ಹೋರಾಟಗಾರರು ಮತ್ತು ರೈತರು ಹೇಳಿದ್ದನ್ನೂ ಕೇಳಿಸಿಕೊಳ್ಳುವುದು” ಎಂದು ಸಚಿವರಿಗೆ ಕಿವಿಮಾತು ಹೇಳಿದರು.

“ರೈತರಿಲ್ಲದೆ ಯಾರೂ ಇಲ್ಲ, ಕಾರ್ಮಿಕ ವರ್ಗ ಕೂಡ ರೈತರ ಜೊತೆಗಿದೆ. ನಾವು ಭೂಮಿ ಕೊಡಲ್ಲ ಎಂದು ನಿರ್ಧಾರಕ್ಕೆ ಬಂದಿದ್ದೇವೆ; ಇದರಲ್ಲಿ ಬೇರೆ ಯಾವುದೇ ಚೌಕಾಸಿಗೆ ಅವಕಾಶ ಇಲ್ಲ. ಭೂಮಿ ನಮ್ಮದು ನಾವು ಕೊಡುವುದಿಲ್ಲ. ನಾವು ರೈತರ ಜೊತೆಗೆ ನಿಲ್ಲುತ್ತೇವೆ. ನಾಳೆ ನಾವು 1198ನೇ ದಿನಕ್ಕೆ ಕಾಲಿಡುತ್ತೇವೆ; ಇದಕ್ಕೆ ಪೂರ್ಣವಿರಾಮ ಹಾಕುತ್ತೇವೆ” ಎಂದರು.

ಸಾಮಾಜಿಕ ಕಾರ್ಯಕರ್ತರಾದ ಎಸ್‌.ಆರ್‌. ಹಿರೇಮಠ್‌ ಮಾತನಾಡಿ, “ಚನ್ನರಾಯಪಟ್ಟಣದ ರೈತರಿಗೆ ಇಂದು ಇಡೀ ದೇಶದ ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗುತ್ತಿದೆ. ಅಭಿವೃದ್ಧಿ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ಕೆಲವು ತಜ್ಞರು ಕೂತು ಪರಿಸರದ ಬಗ್ಗೆ ‘ನಾರಿಕರ ವರದಿ’ ಸಿದ್ಧಪಡಿಸಿದ್ದೇವೆ. ನೈಸರ್ಗಿಕ ಸಂಪನ್ಮೂಲಗಳೇ ನಿಜವಾದ ಸಂಪತ್ತು ಎಂಬುದನ್ನು ಘೋಷಣೆ ಮಾಡಿದ್ದೇವೆ; ಕಾರ್ಖಾನೆಗಳ ಸ್ಥಾಪನೆಯಲ್ಲ. ಪ್ರಕೃತಿಗೆ ಹತ್ತಿರವಿರುವವರು ಅದನ್ನು ನಿರ್ವಹಣೆ ಮಾಡಬೇಕು. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಸ್ವಾರ್ಥ ರಾಜಕಾರಣಿಗಳ ಕೈಗೆ ಹೋಗಬಾರದು” ಎಂದರು.

“ನಮ್ಮಿಂದ ಆಯ್ಕೆಯಾದ ಸರ್ಕಾರಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು, ಇಂದು ಸರ್ಕಾರಗಳು ಮಾಡುತ್ತಿರುವುದು ಸಂವಿಧಾನ ಬಾಹಿರ. ಅವರೆಲ್ಲಾ ಸಾರ್ವಜನಿಕ ಸೇವಕರು, ನಾವೇ ಇದರ ಮಾಲೀಕರು. ಎಲ್ಲರಿಗೂ ಇಂದು ಪರಿಸರ ಬಹಳ ಮುಖ್ಯವಾಗಿದೆ. ಪರಿಸರ ಮಾಲಿನ್ಯವಾಗಿಲ್ಲ, ಇಂದು ಅದು ತೀವ್ರ ಬಿಕ್ಕಟ್ಟಾಗಿದೆ. ಅದನ್ನು ಗಮನಿಸುವ ನಾಯಕತ್ವ ನಮಗೆ ಬೇಕಿದೆ” ಎಂದು ಅವರು ಹೇಳಿದರು.

“ಸಂವಿಧಾನದ ಚೌಟಕಟ್ಟಿನಲ್ಲಿ ಕೆಲಸ ಮಾಡುವ ನಾಯಕತ್ವ ನಮಗೆ ಬೇಕಿದೆ; ಪ್ರತಿಯೊಬ್ಬರಿಗೂ ಗೌರವದ ಬದುಕು ಕಟ್ಟಿಕೊಡಬೇಕು. ಆದ್ದರಿಂದ, ನಾವೆರಲ್ಲರೂ ಸೇರಿ ಹೋರಾಟ ಮಾಡಬೇಕು. ಗಾಂಧಿಯವರ ಉಪ್ಪಿನ ಸತ್ಯಾಗ್ರಹ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರದ ಮಾದರಿಯಲ್ಲಿ ಚಳವಳಿ ಮಾಡಬೇಕು. ಅವರ ಹೋರಾಟಗಳು ಹೊಸತಕ್ಕೆ ನಾಂದಿ ಹಾಡಿತು” ಎಂದರು.

ಸರಕು ಬಿಕರಿಯಾಗುತ್ತದೆ, ಬದುಕು ಬಿಕರಿಯಾಗುವುದಿಲ್ಲ

ರಾಜ್ಯ ರೈತರ ಸಂಘದ ನಾಯಕರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ದೇವನಹಳ್ಳಿಯ ಚನ್ನರಾಯಪಟ್ಟಣ ಇಂದು ಇಡೀ ದೇಶಕ್ಕೆ ಪರಿಚಿತವಾಗಿದೆ. ನೈತಿಕತೆ ಹಾಗೂ ಅಸ್ಮಿತೆ ಇಟ್ಟುಕೊಂಡು ನಡೆಸಿದ ದೊಡ್ಡ ಭೂಮಿ ಹೋರಾಟ ಇದಾಗಿದೆ. ಇಷ್ಟು ದೀರ್ಘಕಾಲ ಚಲಬಿಡದೆ ಹೋರಾಟ ನಡೆಸಿಕೊಂಡು ಬಂದಿರುವುದು ಸಣ್ಣ ವಿಷಯವಲ್ಲ. ಸರಕು ಬಿಕರಿಯಾಗುತ್ತದೆ, ಬದುಕು ಬಿಕರಿಯಾಗುವುದಿಲ್ಲ; ಮಾರಾಟಗಾರರಿಗೆ ಭೂಮಿ ಕೂಡ ಒಂದು ಸರಕು; ರೈತರಿಗಲ್ಲ” ಎಂದು ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಹೇಳಿದರು.

“ಕೈಗಾರಿಕೆಗಾಗಿ ನಂಜನಗೂಡಿನಲ್ಲಿ ಸಹ ಬೇಕಾಬಿಟ್ಟು ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ನಮ್ಮ ಜೊತೆಗೆ ಹೋರಾಟ ಮಾಡುತ್ತಿದ್ದ ಕೆಲ ರೈತರು ಹೆಚ್ಚು ಬೆಲೆ ಸಿಕ್ಕ ಬಳಿಕ ಭೂಮಿ ಕೊಡಲು ಒಪ್ಪಿಕೊಂಡಿದ್ದರು. ಆದರೆ, ಇಲ್ಲಿ ಹೆಚ್ಚಿನ ಪರಿಹಾರಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಅದಕ್ಕಾಗಿಯೇ ಇದೊಂದು ಸತ್ವಯುತ ಹೋರಾಟ ಎಂದರೆ ತಪ್ಪಾಗುವುದಿಲ್ಲ. ಸಾಹಿತಿಗಳು, ಕಲಾವಿದರು, ದಲಿತ ಚಳವಳಿ ಹಾಗೂ ಬುದ್ದಿಜೀವಿಗಳು ಸೇರಿದಂತೆ ದೆಹಲಿ ಮಟ್ಟದಲ್ಲೂ ಚನ್ನರಾಯಪಟ್ಟಣ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಚನ್ನರಾಯಪಟ್ಟಣ ಇಂದು ವಿಶ್ವಮಟ್ಟದಲ್ಲಿ ಹೆಸರಾಗಿದ್ದು, ಹಾಗೇ ಉಳಿಯಬೇಕಾದರೆ ನಾವರಲ್ಲರೂ ಒಗ್ಗಟ್ಟಾಗಿ ಇರಬೇಕು” ಎಂದರು.

“ರೈತರ ಅಸಹಾಯಕತೆ ಬಳಸಿಕೊಳ್ಳುವ ಕೆಲವು ಶಕ್ತಿಗಳಿವೆ, ಭೂಮಿ ಕೊಡುತ್ತೇವೆ ಎಂದು ಹೇಳಿದವರೂ ಸಹ ಅಸಹಾಯಕರು ಇರಬಹುದು. ಆದರೆ, ನಮ್ಮ ಹೋರಾಟವನ್ನು ಗೆದ್ದೇಗೆಲ್ಲುತ್ತೇವೆ. ಸಂಕಲ್ಪ ಸಮಾವೇಶ 13 ಹಳ್ಳಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಇಡೀ ರಾಜ್ಯದ ಕೃಷಿ ಭೂಮಿ, ಜಲಮೂಲ, ಅರಣ್ಯ ಹಾಗೂ ಖನಿಜ ಸಂಪತ್ತು ಉಳಿಸುವುದಕ್ಕಾಗಿಯೇ ಮಾಡುತ್ತಿರುವ ಹೋರಾಟ. ಇದಕ್ಕೆಲ್ಲಾ ಪ್ರೇರಣೆಯೇ ಚನ್ನರಾಯಪಟ್ಟಣ ಭೂಮಿ ಹೋರಾಟ. ನಾವೆಲ್ಲರೂ ನಾಳೆ ಗೆದ್ದೇಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಭಿಮಾನ ಹಾಗೂ ಘನತೆಯ ಬದುಕಿಗೆ ಭೂಮಿ ಬೇಕು: ಗುರುಪ್ರಸಾದ್ ಕೆರಗೋಡು

“ಇಲ್ಲಿನ ರೈತ ತಾಯಂದರಿರು ಮನದ್ದು ಮಾಡದೇ ಇದ್ದಿದ್ದರೆ, ಇಷ್ಟೊತ್ತಿದೆ ಈ ಹೋರಾಟ ಇಷ್ಟು ಗಟ್ಟಿಯಾಗಿ ನಿಲ್ಲುತ್ತಿರಲಿಲ್ಲ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಮಹಿಳೆಯರನ್ನು ಶ್ಲಾಘಿಸಿದರು.

“ಬದುಕಿಗೆ ಭೂಮಿ ಬೇಕು ಎನ್ನುತ್ತಾರೆ. ಆದರೆ, ಸ್ವಾಭಿಮಾನ ಹಾಗೂ ಘನತೆಯ ಬದುಕಿಗೆ ಭೂಮಿ ಬೇಕೇಬೇಕು. ಹಳ್ಳಿಗಾಡಿನ ಭೂಹೀನರು ಅದನ್ನೇ ಯಾವಾಗಲೂ ಬಯಸುತ್ತಾರೆ. ಇದು ಸಂಕಲ್ಪ ಸಮಾವೇಶ ಎಂದು ಕರೆದಿದ್ದೀರಾ, 13 ಹಳ್ಳಿಗಳು ಸಂಕಲ್ಪ ಮಾಡಿದ್ದೀರಾ, ಮಹಿಳೆಯರು ಮುಂದೆ ನಿಂತು ಮಾಡಿದ ಹೋರಾಟಕ್ಕೆ ಎಂದಿಗೂ ಸೋಲಾಗಿಲ್ಲ; ನಾಳೆ ನಾವು ಗೆದ್ದೇಗೆಲ್ಲುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೆ.ಎಚ್‌. ಮುನಿಯಪ್ಪ ಅವರ ಮಾತುಗಳು ಭಿನ್ನವಾಗಿವೆ. ಹಸಿರು ವಲಯ ಎಂದು ಘೋಷಣೆ ಮಾಡುವ ಬೆದರಿಕೆ ಹಾಕಲಾಗುತ್ತದೆ. ಭೂಮಿ ಮಾಲೀಕರು ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅದನ್ನೆಲ್ಲಾ ಹೇಳುವುದಕ್ಕೆ ನೀವ್ಯಾರು? ಭೂಮಿ ನೀವೇ ಕೊಟ್ಟಿದ್ದರೆ ಹೀಗೆಲ್ಲಾ ಹೇಳಿದಂತೆ ಕೇಳಬಹುದಿತ್ತು. ಆದರೆ, ಈ ಭೂಮಿ ನಮ್ಮದು. ನೀವು ಸ್ವಾಧೀನ ಕೈಬಿಟ್ಟರೆ ಇದು ಹಸಿರು ವಲಯವಾಗಿಯೇ ಉಳಿಯುತ್ತದೆ. ನಾವೆಲ್ಲರೂ ರೈತರ ಜೊತೆಗಿರುತ್ತೇವೆ, ಈ ಹೋರಾಟವನ್ನು ಗೆದ್ದೇ ಗೆಲ್ಲುತ್ತೇವೆ” ಎಂದರು.

ನಂಜುಡಸ್ವಾಮಿ ಹೆಸರೇಳುವ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳಲಿ

ಪ್ರೊ. ನಂಜುಡಸ್ವಾಮಿ ಮತ್ತು ರೈತ ಸಂಘದ ಹೆಸರೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಚಾಮರಸ ಮಾಲಿ ಪಾಟೀಲ್ ಹೇಳಿದರು.

“ಇಲ್ಲಿನ ಭೂಮಿ ಇಷ್ಟೊಂದು ಸಮೃದ್ಧವಾಗಿದೆ ಎಂದು ನಾನೇ ನೋಡಿದೆ; ದ್ರಾಕ್ಷಿ ಸೇರಿದಂತೆ ಎಲ್ಲ ತರಕಾರಿ ಬೆಳೆಯುವುದನ್ನೂ ನಾನು ಇಂದು ನೋಡಿದೆ” ಎಂದರು.

“ಆಂಧ್ರಪ್ರದೇಶದಲ್ಲಿ ಕಿಯಾ ಕಂಪನಿಗೆ ನೀಡಿದ್ದು ಬರಡು ಭೂಮಿ. ಕಿಯಾದಲ್ಲಿ ನಮ್ಮ ಮಕ್ಕಳಿಗೆ ಕೆಲಸ ಕೊಡುವುದಿಲ್ಲ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಜಗನ್ ರೆಡ್ಡಿ ಚಿಕ್ಕಪ್ಪ ನನಗೆ ಹೇಳಿದ್ದರು. ಇಲ್ಲಿಯೂ ಸಹ ನಮ್ಮವರಿಗೆ ಕಂಪನಿಗಳು ಕೆಲಸ ಕೊಡುವುದಿಲ್ಲ” ಎಂದರು.

“ಹಿಂದೆಯೂ ಸಹ ಮಲ್ಲಪ್ಪ ಶೆಟ್ಟಿ, ಮೀರ್‌ ಸಾಧಿಕ್‌ ಅಂತವರೂ ಕೂಡ ದ್ರೋಹದ ಕೆಲದ ಮಾಡಿದ್ದಾರೆ. ಇಲ್ಲಿಯೂ ಕೂಡ ಅಂತಹ ಪ್ರಸಂಗ ನಡೆದಿದೆ. ನಾವೇ ನಿಜವಾದ ರೈತರು ಎಂದು ಕೆಲವರು ಪಹಣಿ ಹಿಡಿದು ಹೇಳಿದ್ದಾರೆ. ಅನ್ನ ತಿನ್ನುವ ಬಾಯಿಗೆ ಮಣ್ಣು ಹಾಕಿಕೊಳ್ಳುವ ಕೆಲಸ ಮಾಡಿಕೊಳ್ಲಬೇಡಿ” ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ ಎಂದರು.

“ನಾಳೆ 1777 ಎಕರೆ ಸ್ವಾಧೀನವನ್ನು ಕೈಬಿಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರೆ ಒಳ್ಳೆಯದು. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ನಾವು ಉತ್ತರ ಕರ್ನಾಟಕದ ರೈತರ ಜೊತೆಗೂಡಿ ಸೋಲಿಸುತ್ತೇವೆ. ಸಿದ್ದರಾಮಯ್ಯ ನಾವು ಸಮಾಜವಾದಿ, ರೈತ ಸಂಘ, ನಂಜುಡಸ್ವಾಮಿ ಅನುಯಾಯಿ ಎಂದು ಹೇಳುತ್ತಾರೆ. ಆ ಮಾತನ್ನು ಅವರು ಮತ್ತೆ ಹೇಳಬೇಕಾದರೆ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ವ್ಯತಿರಿಕ್ತ ತೀರ್ಮಾನ ಮಾಡಿದರೆ ನಿಮ್ಮ ದುರಾಡಳಿತದ ಬಗ್ಗೆ ರಾಜ್ಯದ ಹಳ್ಳಿ ಹಳ್ಳಿಗಳ ಜನರಿಗೆ ತಿಳಿಸುತ್ತೇವೆ; ನಿಮ್ಮ ಅಧಿಕಾರದ ವಿರುದ್ಧ ಕೆಲಸ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಎಚ್‌.ಆರ್. ಬಸವರಾಜಪ್ಪ ಮಾತನಾಡಿ, “60-70ರ ದಶಕದಲ್ಲಿ ಭೂಮಿ ಇಲ್ಲದೇ ಇದ್ದ ಕೃಷಿ ಕಾರ್ಮಿಕನೋರ್ವ ನನಗೂ ಭೂಮಿ ಬೇಕು ಎಂದು ಕಾತರಿಸುತ್ತಿದ್ದ, ಕೆಲವರು ಭೂ ಮಾಲೀಕರ ಬಳಿ ಗೇಣಿ ಮಾಡುತ್ತಿದ್ದರು. ಉಳುವವನೇ ಭೂಮಿ ಒಡೆಯ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು; ಈ ಹೋರಾದಿಂದ ಕಾಯ್ದೆಯಾದ ಬಳಿಕ ಹಲವರಿಗೆ ಭೂಮಿ ಸಿಕ್ಕಿದೆ. ನೆಮ್ಮದಿ ಎಂಬುದು ಹಣದಿಂದ ಬರುವುದಲ್ಲ, ನಮ್ಮ ರೈತರು ಹಿಂದಿನಿಂದಲೂ ನೆಮ್ಮದಿಯಾಗಿಯೇ ಬದುಕುತ್ತಿದ್ದಾರೆ; ಬೇರೆ ಯಾವುದಕ್ಕೂ ನಾವು ಆಸೆಪಟ್ಟವರಲ್ಲ” ಎಂದರು.

“60 ರ ದಶಕದಲ್ಲಿ ಈ ದೇಶದಲ್ಲಿ ಅನ್ನವೇ ಇರಲಿಲ್ಲ, ಅಮೆರಿಕ ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದರು. ಇಂದು ದೇಶಕ್ಕೆ ಬೇಕಾಗಿರುಷ್ಟು ಅನ್ನ ಬೆಳೆದು ಹಂಚಿಕೊಂಡು ಉಣ್ಣುತ್ತಿದ್ದೇವೆ. ರೈತ ಕುಲ ಎಂದಿಗೂ ಬೇಡಿದ ಕುಲವಲ್ಲ, ಇದು ಕೊಟ್ಟ ಕುಲ. ಎಲ್ಲ ಜೀವರಾಶಿಗಳನ್ನೂ ಸಾಕಿಸಲುಹಿದ ಕುಲ, ರೈತನೇ ಈ ದೇಶದ ಮಾಲೀಕ” ಎಂದು ಹೇಳಿದರು.

“ಇಷ್ಟುದಿನ ನೀವು ಒಗ್ಗಟ್ಟಾಗಿ ಹೋರಾಟ ಮಾಡಿದ್ದೀರಿ, ನಿಮಗೆ ನಮ್ಮ ಎಲ್ಲ ಸಂಘಟನಗಳಿಂದ ಅಭಿನಂದನೆ ಸಲ್ಲಿಸುತ್ತೇವೆ. ರೈತರ ಒಗ್ಗಟ್ಟನ್ನು ಒಡೆಯುವ ಕೆಲಸ ಆರಂಭವಾಗಿದೆ. ಇಂತವರು ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಇದ್ದಾರೆ. ನಮ್ಮಲ್ಲಿ ಒಡಕು ಬರದಿದ್ದರೆ ಸೋಲಾಗುವುದೇ ಇಲ್ಲ. ಇಲ್ಲಿ ಯಾವುದೇ ಒಡಕಾಗಿಲ್ಲ; ಆದ್ದರಿಂದ ಗೆಲುವು ಖಚಿತ. ಈ ಹೋರಾಟ ಇಂದು ರಾಜ್ಯ-ರಾಷ್ಟ್ರ ಮಟ್ಟದ ಗಮನ ಸೆಳೆದಿದೆ” ಎಂದರು.

“ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯ ರಾಜಕಾರಣಿ ಆಗಿದ್ದಾರೆ. ಈ ಹೋರಾಟದಲ್ಲಿ ಅವರು ದುಡುಕಿ ರೈತರಿಗೆ ಮೋಸ ಮಾಡಿದರೆ ಚರಿತ್ರೆಯಲ್ಲಿ ಅವರ ಪಕ್ಷ ಮತ್ತು ಸರ್ಕಾರ ಅಳಿಸಿಹೋಗುತ್ತದೆ ಎಂಬ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ. ಭೂಸ್ವಾಧೀನ ಕೈಬಿಡುವ ವಿಶ್ವಾಸವಿದೆ. ಕೈಗಾರಿಕಾ ಮಂತ್ರಿ ಮತ್ತು ಉಸ್ತುವಾರಿ ಮಂತ್ರಿ ಮಾತು ಕೇಳಿಕೊಂಡು ಸ್ವಾಧೀನ ಕೈಬಿಡದಿದ್ದರೆ, ನೀವು ನಾಶವಾಗುವ ಜೊತೆಗೆ ಸರ್ಕಾರವೂ ಸರ್ವನಾಶವಾಗುತ್ತದೆ. ಇಲ್ಲಿನ ರೈತರು ಮತ್ತು ನಾವು ಹೋರಾಟ ಕೈಬಿಡುವ ಮಾತೇ ಇಲ್ಲ” ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಇಂದಿರಾ ಕೃಷ್ಣಪ್ಪ, ಬಡಗಲಪುರ ನಾಗೇಂದ್ರ, ಎಸ್‌.ಆರ್‌. ಹಿರೇಮಠ್‌, ಟಿ.ಯಶವಂತ್, ಮೀನಾಕ್ಷಿ ಸುಂದರಂ, ಗುರುಪ್ರಸಾದ್ ಕೆರಗೋಡು, ಕೆವಿ ಭಟ್, ಚಾಮರಸ ಪಾಟೀಲ್, ಎಚ್.ಆರ್. ಬಸವರಾಜಪ್ಪ, ಮುಖ್ಯಮಂತ್ರಿ ಚಂದ್ರು, ದೇವಿ, ಚುಕ್ಕಿ ನಂಜುಂಡಸ್ವಾಮಿ, ಕಾಳಪ್ಪ, ಅಪ್ಪಣ್ಣ, ಜಿಜಿ ನಾರಾಯಣಸ್ವಾಮಿ, ಆಂಜನೇಐ ರೆಡ್ಡಿ, ನೂರ್ ಶ್ರೀಧರ್, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ರಮೇಶ್‌ ಚೀಮಾಚನಹಳ್ಳಿ ಸೇರಿದಂತೆ ಹಲವರಿದ್ದರು.

ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ: ‘ಗ್ರಾಮ ಸಂಕಲ್ಪ ಸಮಾವೇಶ’ದಲ್ಲಿ ಒಗ್ಗಟ್ಟು ಪ್ರದರ್ಶಿಸಿದ 13 ಹಳ್ಳಿಗಳ ರೈತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -