Homeಮುಖಪುಟದೇವನೂರು ಮತ್ತು ದೊರೆಸ್ವಾಮಿಯವರಿಂದ ಸ್ಪೀಕರ್ ರಿಗೆ ದೂರು ಸಲ್ಲಿಕೆ

ದೇವನೂರು ಮತ್ತು ದೊರೆಸ್ವಾಮಿಯವರಿಂದ ಸ್ಪೀಕರ್ ರಿಗೆ ದೂರು ಸಲ್ಲಿಕೆ

ಈ ಪತ್ರವನ್ನೇ ದೂರು ಎಂದು ತಿಳಿದುಕೊಂಡು ಕ್ರಮ ಜರುಗಿಸಬೇಕೆಂದು ಅವರು ಕೋರಿದ್ದಾರೆ.

- Advertisement -

||ನಾನು ಗೌರಿ ಡೆಸ್ಕ್||

ಶಾಸಕರ ರಾಜೀನಾಮೆ, ಪಕ್ಷಾಂತರ ಸಾಧ್ಯತೆ, ಅನರ್ಹತೆಯ ಅರ್ಜಿ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ವಿಧಾನಸಭಾಧ್ಯಕ್ಷರಿಗೆ ಖಾರವಾದ ಪತ್ರವನ್ನು ಬರೆದಿದ್ದಾರೆ. ರಾಜೀನಾಮೆ ಕೊಟ್ಟಿರುವ ಶಾಸಕರು ಹೊಣೆಗೇಡಿತನವನ್ನು ಪ್ರದರ್ಶಿಸಿದ್ದಾರಲ್ಲದೇ, ತಮಗೆ ಮತ ನೀಡಿದವರಿಗೆ ದ್ರೋಹವೆಸಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಪತ್ರವನ್ನೇ ದೂರು ಎಂದು ತಿಳಿದುಕೊಂಡು ಕ್ರಮ ಜರುಗಿಸಬೇಕೆಂದು ಅವರು ಕೋರಿದ್ದಾರೆ. ಪತ್ರದ ಪೂರ್ಣ ಪಾಠ ಈ ಕೆಳಕಂಡಂತಿದೆ.

ಇವರಿಗೆ,
ಸನ್ಮಾನ್ಯ ಸಭಾಧ್ಯಕ್ಷರು
ಕರ್ನಾಟಕ ವಿಧಾನಸಭೆ
ಬೆಂಗಳೂರು

ಮಾನ್ಯರೇ,
ವಿಷಯ: ಶಾಸಕರು ತಮ್ಮ ಆತ್ಮವನ್ನೂ ನಮ್ಮ ಮತವನ್ನೂ ಮಾರುತ್ತಿರುವ ಹೊತ್ತಿನಲ್ಲಿ
ರಾಜ್ಯದ ಹಾಗೂ ರಾಜಕಾರಣದ ಘನತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ
ಮೇಲಿದೆ

ಈ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಅತ್ಯಂತ ಆಘಾತಕಾರಿಯಾಗಿವೆ. ಪಕ್ಷಾಂತರಗಳು ಎಲ್ಲಿಂದ ಎಲ್ಲಿಗೆ ಆಗುತ್ತಿದ್ದರೂ ಇದಕ್ಕೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಕಾರಣವೆಂದೇ ನಾವು ಭಾವಿಸುತ್ತೇವೆ. ದೇಶದ ಸಂಸದೀಯ ಪ್ರಜಾತಂತ್ರವು ಕೊರತೆಗಳಿಂದ ಕೂಡಿರಬಹುದು. ಆದರೆ, ಸಂವಿಧಾನ ನಿರ್ಮಾತೃಗಳು ಮುಂಬರುವ ಪೀಳಿಗೆಗಳ ಮೇಲೆ ವಿಶ್ವಾಸವಿಟ್ಟು ಕೆಲವು ಅವಕಾಶಗಳನ್ನು ನೀಡಿದ್ದರು. ಅವುಗಳ ದುರುಪಯೋಗ ಮಾಡಿಕೊಂಡು ನಡೆದ ಅನೈತಿಕ ಪಕ್ಷಾಂತರಗಳನ್ನು ತಡೆಯುವ ಉದ್ದೇಶದಿಂದ ಪಕ್ಷಾಂತರ ನಿಷೇಧ ಕಾಯ್ದೆಯು 1985ರಲ್ಲಿ ಜಾರಿಗೆ ಬಂದಿತು. ನಂತರದಲ್ಲಿ 2003ರಲ್ಲಿ ಅದಕ್ಕೆ ತಿದ್ದುಪಡಿಯೂ ಬಂದಿತು.

ಆದರೆ, ಎಲ್ಲಾ ಕಾಯ್ದೆಗಳಿಂದಲೂ ನುಸುಳಿಕೊಳ್ಳುವ ರೀತಿಯಲ್ಲಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇನ್ನೂ ಹೆಚ್ಚಿನ ಅಧಿಕಾರ ಪಡೆದುಕೊಂಡು ಇನ್ನೊಂದು ಪಕ್ಷದಿಂದ ಸ್ಪರ್ಧಿಸುವ ಹೊಸದೊಂದು ಪ್ರಕ್ರಿಯೆಗೆ ನಮ್ಮ ರಾಜ್ಯ ಕರ್ನಾಟಕವೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು ನಾವು ತಲೆತಗ್ಗಿಸುವ ವಿಚಾರವಾಗಿದೆ. ಇಂದು ಅಂತಹ ಇನ್ನೊಂದು ಸಂದರ್ಭ ನಮ್ಮ ರಾಜ್ಯದಲ್ಲಿ ಈಗ ಉಂಟಾಗಿದೆ. ಮೇಲೆ ಹೇಳಿರುವಂತೆ ಇದರ ಹೊಣೆಯನ್ನು ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಹೊತ್ತುಕೊಳ್ಳಬೇಕಿದೆ.


ಇಂದು ಆಮಿಷ, ಒತ್ತಡ ಅಥವಾ ಇನ್ನಾವುದೋ ಕಾರಣಕ್ಕೆ ಸ್ವಹಿತಾಸಕ್ತಿಗಾಗಿ ಪಕ್ಷ ಬದಲಾಯಿಸುತ್ತಿರುವವರು ತಮ್ಮ ಆತ್ಮವನ್ನೂ, ತಮಗೆ ಮತ ನೀಡಿದ ಮತದಾರರ ಮತವನ್ನೂ ಮಾರಿಕೊಂಡಂತೆ ಎಂದೇ ನಾವು ಭಾವಿಸುತ್ತೇವೆ. ಶಾಸಕರಿಗೆ ರಾಜೀನಾಮೆ ನೀಡುವ ಹಕ್ಕು ಇದೆ ಎಂಬುದು ವಾಸ್ತವ. ಆದರೆ, ಇದನ್ನು ಕೇವಲ ತಾಂತ್ರಿಕ ವಿಚಾರವನ್ನಾಗಿ ನೋಡದೇ ಸಾರ್ವಜನಿಕ ರಾಜಕೀಯ ನೀತಿ ಸಂಹಿತೆಯ ಭಾಗವಾಗಿ ನೋಡಬೇಕಿದೆ. ಇಂದು ನಡೆಯುತ್ತಿರುವುದು ಪಕ್ಷಾಂತರವೇ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮತದಾರರು ಅಭ್ಯರ್ಥಿ ಮಾತ್ರವಲ್ಲದೇ ಪಕ್ಷಕ್ಕೂ ಮತ ನೀಡಿರುತ್ತಾರೆ. ಹಲವು ಸಾರಿ ಅಭ್ಯರ್ಥಿ ಇಷ್ಟವಿಲ್ಲದಿದ್ದರೂ ಪಕ್ಷಕ್ಕೇ ಮತ ನೀಡಿರುವ ಸಾಧ್ಯತೆ ಇರುತ್ತದೆ. ಜೊತೆಗೆ ಐದು ವರ್ಷಕ್ಕೆಂದು ಅವರಿಗೆ ಮತ ನೀಡಿರುತ್ತಾರೆ. ಅದನ್ನು ಪೂರೈಸುವ ಹೊಣೆಗಾರಿಕೆಯೂ ಆಯ್ಕೆಯಾದವರದ್ದಾಗಿರುತ್ತದೆ. ಅನಾರೋಗ್ಯ, ಸಾವು ಇತ್ಯಾದಿ ಕಾರಣಗಳನ್ನು ಬಿಟ್ಟು ಇನ್ನಾವ ಕಾರಣಕ್ಕೆ ತೆರವು ಮಾಡಿದರೂ ಅದು ಹೊಣೆಗೇಡಿತನವಾಗುತ್ತದೆ. ಈಗ ನಡೆಯುತ್ತಿರುವುದು ಹೊಣೆಗೇಡಿತನ ಮಾತ್ರವಲ್ಲಾ, ದ್ರೋಹವೂ ಹೌದು. ರಾಜೀನಾಮೆ ನೀಡಿದವರು ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೂ ನಿಲ್ಲಬಾರದು, ಯಾವುದೇ ಅಧಿಕಾರದ ಸ್ಥಾನಗಳನ್ನೂ ಹೊಂದಬಾರದು ಎಂಬ ನಿಯಮವೂ ಜಾರಿಯಾಗಬೇಕಿದೆ.

ಈ ಸ್ವೇಚ್ಛಾಚಾರವು ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಯಲ್ಲಿಯೇ, ಕಾಯ್ದೆಗೆ ಹೆಗ್ಗಣಗಳಂತೆ ಬಿಲ ಕೊರೆದು, ಅದನ್ನೇ ಬುಡಮೇಲು ಮಾಡುವ ಕೃತ್ಯವಾಗಿದೆ. ಇದನ್ನು ವಿಧಾನಸಭಾಧ್ಯಕ್ಷರು ಗಂಭೀರವಾಗಿ ಪರಿಗಣಿಸಬೇಕಿದೆ.

ಇವೆಲ್ಲದರಿಂದ ಈಗಾಗಲೇ ಸಮಾಜದ ಮುಂದೆ ಪಾತಾಳಕ್ಕಿಳಿದಿರುವ ರಾಜಕೀಯ ವ್ಯವಸ್ಥೆಯ ಆತ್ಮವೇ ದಾಳಿಗೊಳಗಾಗುತ್ತಿದೆ. ಆದ್ದರಿಂದ ಇದನ್ನು ಸರಿಪಡಿಸಲು ಬೇಕಾದ ಎಲ್ಲಾ ಕ್ರಮಗಳನ್ನು ನೀವು ತೆಗೆದುಕೊಳ್ಳಲೇ- ಬೇಕೆಂದು ನಿಮ್ಮನ್ನು ಒತ್ತಾಯಿಸುತ್ತಿದ್ದೇವೆ. ಅಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ತಾವು, ತಮ್ಮ ವ್ಯಕ್ತಿಗತ ನಿಲುವುಗಳೇನಾಗಿದ್ದರೂ ತಪ್ಪಾದ ಮತ್ತು ಆತುರದ ನಿರ್ಧಾರಕ್ಕೆ ಬರಬಾರದೆಂಬುದು ನಮ್ಮ ಆಗ್ರಹ. ಇದನ್ನೇ ನೀವು ನಮ್ಮ ದೂರು ಎಂದೂ ಪರಿಗಣಿಸಬೇಕೆಂದು ಕೋರುತ್ತೇವೆ.

ಅಗತ್ಯವಿದ್ದರೆ ಉನ್ನತ ನ್ಯಾಯಾಲಯಗಳಿಗೂ ಹೋಗುವ ಮೂಲಕ ಸಂವಿಧಾನವನ್ನು ಕಾಪಾಡುವ ಹೊಣೆ ಹಾಗೂ ಅಧಿಕಾರ ಹೊಂದಿರುವ ನ್ಯಾಯಾಧೀಶರಲ್ಲೂ ಮನವಿ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅಂತಹ ಪರಿಸ್ಥಿತಿ ಬಾರದಂತೆ, ಸಂವಿಧಾನಬದ್ಧ ಅಧಿಕಾರ ಹೊಂದಿರುವ ತಾವು ಪರಿಣಾಮಕಾರಿಯಾದ ಕ್ರಮ ತೆಗೆದುಕೊಳ್ಳುತ್ತೀರೆಂದು ಆಶಿಸುತ್ತೇವೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿಗಳು

ದೇವನೂರ ಮಹಾದೇವ ಎಚ್.ಎಸ್.ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Gowri is still alive, who will inspire the coming generations. Devanur mahadev and h s doreswamy are pure souls fearless souls who have rightful thoughts for society. We welcome their opinions on today’s politics and hope it will be followed.

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial