ಮೈಸೂರು ಜಾಗೃತ ಪ್ರಜ್ಞೆ ನಿದ್ದೆ ಮಾಡುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿ ಎನ್‌ಟಿಎಂ ಶಾಲೆ ಉಳಿವಿಗಾಗಿ ಸತತವಾಗಿ, ವೈವಿಧ್ಯಮಯವಾದ ಜನ ಸಮೂಹದಿಂದ ನಡೆಯುತ್ತಿರುವ ಈ ಆಂದೋಲನವೇ ಸಾಕ್ಷಿ. ಈ ಶಾಲೆಯ ನೆಲವನ್ನು ಮೈಸೂರು ಮಾತ್ರವಲ್ಲದೇ ಇಡೀ ಸಂವೇದನಾಶೀಲ ಭಾರತವೇ ಕಾಪಾಡಿಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವರವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಎನ್‌ಟಿಎಂ ಶಾಲೆ ಉಳಿವಿಗಾಗಿ ಒಡನಾಡಿ ಸೇವಾ ಸಂಸ್ಥೆ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, “ಎನ್‌ಟಿಎಂ ಶಾಲೆಯ ಈ ನೆಲಕ್ಕೆ ಒಂದು ನೆನಪಿದೆ. ಒಂದು ಆಶಯವಿದೆ. ಒಂದು ಜೀವಚೈತನ್ಯವಿದೆ. ಇದಕ್ಕೆ ಬೆಲೆ ಕಟ್ಟಲಾಗದು. ಯಾಕೆಂದರೆ 140 ವರ್ಷಗಳ ಹಿಂದೆಯೇ ಭಾರತದ ಸಮಾಜದಲ್ಲಿ ಅಆಇಈ ಸೋಕದ ಹೆಣ್ಣು ಮಕ್ಕಳಿಗಾಗಿಯೇ ಒಂದು ಶಾಲೆ ಆರಂಭಿಸುವುದೆಂದರೆ, ಇದು ಸಾಮಾನ್ಯ ಸಂಗತಿಯಲ್ಲ, ನೆನಪಿಟ್ಟುಕೊಳ್ಳೋಣ- ಇದು ಭಾರತದಲ್ಲಿ ಪ್ರಪ್ರಥಮ. ಹಾಗಾಗಿಯೇ ಇದು ಮೈಸೂರಿನ ಹೆಮ್ಮೆ. ಈಗ ನಮ್ಮ ಮುಂದಿರುವ ಸವಾಲು – ಎನ್‌ಟಿಎಂ ಶಾಲೆಯ ನೆಲವನ್ನು, ಅದರ ಆಶಯವನ್ನು ಮೈಸೂರು ಮಾತ್ರವಲ್ಲ, ಇಡೀ ಕರ್ನಾಟಕ ಅಷ್ಟೇ ಏಕೆ ಸಮೃದ್ಧಶೀಲ ಭಾರತವೇ ಕಾಪಾಡಿಕೊಳ್ಳಬೇಕಿದೆ” ಎಂದರು.
ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ
“ನನಗೆ ಇನ್ನೂ ಅರ್ಥವಾಗದೇ ಉಳಿದಿರುವುದು ಏನೆಂದರೆ ಅದೇ ರಾಮಕೃಷ್ಣ ಆಶ್ರಮದ ನಡವಳಿಕೆ. ಹೇಳಿಕೇಳಿ ಇವರು ವೈರಾಗ್ಯ ಮೂರ್ತಿಗಳು. ಇಂಥವರು ಇಂದು ಯಾವ ಒಂದು ರೂಢಿಯನ್ನು ಹುಟ್ಟು ಹಾಕುತ್ತಿದ್ದಾರೆ? ಎನ್‌ಟಿಎಂ ಶಾಲಾ ಆವರಣಕ್ಕೆ ವಿವೇಕಾನಂದರು ಬಂದಿದ್ದರು, ಹಾಗಾಗಿ ಆ ಜಾಗ ಆಶ್ರಮಕ್ಕೆ ಬೇಕು ಎಂದು ವಾದ ಮಾಡುವುದಾದರೆ, ಇದು ಎಂಥಹ ಸಂದೇಶ ನೀಡುತ್ತದೆ? ಯಾವ ಸ್ವಾಮಿಯನ್ನು, ಯಾವ ಯತಿಯನ್ನು, ಯಾವ ವಿರಕ್ತರನ್ನೂ, ಯಾವ ಮಹಾತ್ಮರನ್ನು ಮನೆಗೆ ಕರೆಯಬಾರದಪ್ಪ. ನಾಳೆ ಆ ಸ್ಥಳಕ್ಕೆ ಬೆಲೆ ಬಂದಾಗ ಆ ಮಹಾತ್ಮರ ಅನುಯಾಯಿಗಳು ನಮ್ಮ ಸ್ವಾಮೀಜಿ ಈ ಸ್ಥಳಕ್ಕೆ ಬಂದಿದ್ರು, ಈ ಜಾಗ ಆಶ್ರಮಕ್ಕೆ ಬೇಕು ಎಂದು ಪಟ್ಟು ಹಿಡಿದರೆ? ನಾನು ಹೇಳುತ್ತಿರುವುದು ಅತಿ ಅನ್ನಿಸುತ್ತಿರಬಹುದು. ಆದರೆ ಈ ಭಾವನೆ ಜನಮಾನಸದಲ್ಲಿ ಒಂದು ಗಳಿಗೆಯಾದರೂ ಬಂದು ಹೋಗಬಾರದಲ್ಲವೆ? ವಿವೇಕಾನಂದರ ಬಗ್ಗೆಯಂತೂ ಬರದೇ ಕಾಡದು, ಆದರೆ ಇಂಥಹದೊಂದು ಶಂಕೆಯನ್ನು ರಾಮಕೃಷ್ಣಾಶ್ರಮದ ಹಾಲಿ ವೈರಾಗ್ಯ ಮೂರ್ತಿಗಳು ಹುಟ್ಟುಹಾಕಿಬಿಟ್ಟರು. ಇದಾಗಬಾರದಿತ್ತು. ತುಂಬಾ ನೊಂದು ಹೇಳುತ್ತಿರುವೆ” ಎಂದು ವಿಷಾಧ ವ್ಯಕ್ತಪಡಿಸಿದರು.
ಶಾಲೆ ಉಳಿಯಬೇಕೆಂಬ ಆಶಯದೊಂದಿಗೆ ಒಡನಾಡಿ ಮಕ್ಕಳು ಅಭಿನಯಿಸಿದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು. ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರರಾದ ಪ.ಮಲ್ಲೇಶ್, ಪ್ರೊ.ಬಿ.ಕೆ ಸುಮಿತ್ರಾ ಬಾಯಿ, ಸ.ರ ಸುದರ್ಶನ್, ಅಭಿರುಚಿ ಗಣೇಶ್, ಡಿ.ಹೊಸಹಳ್ಳಿ ಶಿವು, ಸ್ಟ್ಯಾನ್ಲಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ಸ್ವಾರ್ಥಪರ ಯೋಗಿ – ಭೋಗಿಗಳಿಂದ ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಸಬೇಕು


