Homeಕರ್ನಾಟಕಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

- Advertisement -
- Advertisement -

ಬರಗೂರು, ಕರ್ನಾಟಕವನ್ನು ಆಂಧ್ರ ಪ್ರದೇಶ-ತೆಲಂಗಾಣಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಿಂದ ಮೂರು ಕಿ.ಮೀ. ಸನಿಹದ ಗ್ರಾಮ. ಸುನೀತ ಈಗಷ್ಟೇ ಪಿ.ಯು.ಸಿ ಮುಗಿಸಿ, ಪದವಿ ಮೆಟ್ಟಿಲೇರಿದ ಸುಮಾರು 19 ವರ್ಷದ ಯುವತಿ. ದಾನಪ್ಪ ಸುಮಾರು 22 ವರ್ಷದ ಟ್ರ್ಯಾಕ್ಟರ್ ಚಾಲಕ. ಇವರಿಬ್ಬರೂ ಇದೇ ಗ್ರಾಮದವರು. ಜಾತಿ ಹಿನ್ನೆಲೆಯಲ್ಲಿ ಸುನೀತ ಕುರುಬರ ಹುಡುಗಿಯಾದರೆ, ದಾನಪ್ಪ ಮಾದಿಗರ ಹುಡುಗ.

ಈ ಇಬ್ಬರೂ ಅವರವರಷ್ಟಕ್ಕೆ ಇದ್ದಿದ್ದರೆ ಈಗ ಅವರ ಬಗ್ಗೆ ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಆದರೆ ಇವರಿಬ್ಬರೂ ಪ್ರೇಮಿಸಿದ ’ಅಪರಾಧ’ಕ್ಕೆ ಹೀಗಾಗುತ್ತದೆ ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆಗಿದ್ದಿಷ್ಟು. ಕಳೆದ ಮೂರು ವರ್ಷಗಳಿಂದಲೂ ಜಾರಿಯಲ್ಲಿದ್ದ ಇವರ ’ಪ್ರೇಮ’ ಹುಡುಗಿಯ ಕುಟುಂಬದ ಜಾತಿ ಗರ್ವಕ್ಕೆ ಪೆಟ್ಟುಕೊಟ್ಟಿತು. ಹಾಗೆಂದೇ ತಮ್ಮ ಜಾತಿಯ ’ಹೆಚ್ಚುಗಾರಿಕೆ’ಯನ್ನು ಉಳಿಸಿಕೊಳ್ಳಲು ಅವರು ಆ ಹುಡುಗನನ್ನು ’ಮುಗಿಸಿ’ಬಿಟ್ಟರು. ಅಷ್ಟೇ, ದಾನಪ್ಪ ಊರಾಚೆ ರಸ್ತೆ ಪಕ್ಕದ ಗದ್ದೆಯಲ್ಲಿ ಹೆಣವಾದ.

ಈ ಸುನೀತಳ ಅಪ್ಪ, ಮರಿಬಸಪ್ಪನೂ ಶ್ರೀಮಂತನೇನಲ್ಲ. ಜಮೀಂದಾರನಾಗಲಿ, ರಾಜಕಾರಣಿಯಾಗಲಿ, ವ್ಯಾಪಾರಸ್ಥನಾಗಲಿ ನೌಕರಿ ಮಾಡುವಾತನಾಗಲಿ ಅಲ್ಲ. ಒಂದು ಎಕರೆ ತುಂಡುಭೂಮಿ ಇಟ್ಟುಕೊಂಡು ಅಷ್ಟರ ಆಧಾರದಲ್ಲಿ ಜೀವನ ಸಾಗಿಸಲು ಆಗದೇ ಊರವರ ಹೊಲಗದ್ದೆಗಳಲ್ಲಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಕೃಷಿ ಕೂಲಿಕಾರ. ದಾನಪ್ಪನ ಅಪ್ಪ ಹನುಮಂತಪ್ಪನಿಗೆ ಇಷ್ಟೂ ಜಮೀನಿಲ್ಲದೇ ಕೂಲಿ ಮಾಡಿಯೇ ಅನ್ನ ಕಂಡುಕೊಳ್ಳಬೇಕಿದ್ದ ಬಡವ. ಹುಡುಗಿ ಸುನೀತ, ಹುಡುಗ ದಾನಪ್ಪನ ಕುಟುಂಬಗಳೆರಡೂ ಬಡತನರೇಖೆಯ ಕೆಳಗೆ ಬಾಳು ಸಾಗಿಸುವಲ್ಲಿ ಸಮಾನವಾಗಿದ್ದರೂ ಜಾತಿ ಎಂಬುದು ಅವರ ನಡುವೆ ಆತನಕ ಬಿರುಕು ಮೂಡಿಸಿದ್ದಷ್ಟಕ್ಕೆ ಸಾಕಾಗದೇ ಪ್ರೇಮದ ಸಂದರ್ಭದಲ್ಲಿ ದ್ವೇಷ ಹುಟ್ಟುವಂತೆ ಮಾಡಿತು. ಈ ಜಾತಿ, ಕೂಲಿಕಾರನನ್ನು ಕೊಲೆಗಾರನನ್ನಾಗಿಸಿತು. ಹೊಲಗದ್ದೆಗಳಲ್ಲಿ ದುಡಿಮೆಯಲ್ಲಿರಬೇಕಾಗಿದ್ದ ತಂದೆ ಮರಿಬಸಪ್ಪ ತನ್ನ ಹೆಂಡತಿ ಲಲಿತಮ್ಮ, ಮಗಳು ಸುನೀತಾರ ಜೊತೆಗೆ ಈಗ ಜೈಲಿನಲ್ಲಿದ್ದಾನೆ. ಬಡತನ ಇವರಿಗೆ ಇರಲು ಮಣ್ಣಿನ ಮನೆಯನ್ನಾದರೂ ನೀಡಿತ್ತು. ಜಾತಿ ಈ ಕುಟುಂಬವನ್ನು ಇದೀಗ ಜೈಲಿನಲ್ಲಿರಿಸಿದೆ.

ಘಟನೆಯ ಬಳಿಕ..

ಇಷ್ಟೆಲ್ಲಾ ಆದ ಬಳಿಕ, ಮುಂದೇನಾಗಬೇಕೋ ಅದು ’ಮಾಮೂಲಿ’ಯಂತೆ ನಡೆದೇ ಇದೆ. ಅಂದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್.ಐ.ಆರ್ ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಸಂಬಂಧಿಸಿದ ಇನ್ನು ನಾಲ್ವರನ್ನು ’ಶಂಕಿತರೆಂದು’ ದಾಖಲಿಸಿದ ಪೊಲೀಸರು ಅವರನ್ನು ಬಂಧಿಸಲು ನಿರಾಕರಿಸಿದ್ದಾರೆ. ಈ ನಾಲ್ವರನ್ನೂ ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ-ಸಂಘಟನೆಗಳ ನೇತೃತ್ವದಲ್ಲಿ ಬರಗೂರಿನ ದಲಿತರು ತಾಲೂಕು ಕೇಂದ್ರ ಕಾರಟಗಿಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ತಹಸೀಲ್ದಾರರಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಕರ್ನಾಟಕ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರೈತ ಸಂಘ-ಎ.ಐ.ಕೆ.ಕೆ.ಎಸ್, ಅ.ಭಾ.ಗ್ರಾಮೀಣ ಕೃಷಿ ಕಾರ್ಮಿಕ ಸಂಘ, ಬಿ.ವಿ.ಎಸ್, ಭೀಮ್ ಆರ್ಮಿ, ಅಂಬೇಡ್ಕರ್ ಸೇನೆ, ಮೊದಲಾದ ಸಂಘಟನೆಗಳು ’ದಲಿತ ದಮನಿತರ ಒಕ್ಕೂಟ’ವನ್ನು ರಚಿಸಿಕೊಂಡು ’ಜನ ಜಾಗೃತಿ ಆಂದೋಲನ’ವನ್ನು ಆರಂಭಿಸಿವೆ.

ಪ್ರಗತಿಪರ ಸಂಘಟನೆಗಳು ಈ ಜಾಥಾಕ್ಕೆ ಬೆಂಬಲ ನೀಡಿದ್ದು ’ಕೊಪ್ಪಳ ಚಲೋ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ರೂಪಿಸುತ್ತಿದ್ದಾರೆ. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ನಾಯಕಿ, ಜನಪರ ಚಿಂತಕಿ ಕೆ.ನೀಲಾ ಮೃತನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿ ಸ್ಪಂದಿಸಿದ್ದಾರಲ್ಲದೇ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. ಎಲ್ಲ ಆರೋಪಿಗಳನ್ನೂ ಬಂಧಿಸಬೇಕೆಂದು ಆಗ್ರಹಿಸಿ ಗಂಗಾವತಿ ತಾಲೂಕಿನ ಸಿ.ಪಿ.ಐ.ಎಂ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ. ಇನ್ನು, ಸರಕಾರದ ಮಟ್ಟದಲ್ಲಿ ತಕ್ಷಣಕ್ಕೆ ದೊರೆತ ಸ್ಪಂದನೆ ಎಂಬಂತೆ, ಸಮಾಜ ಕಲ್ಯಾಣ ಇಲಾಖೆಯು “ಮರ್ಯಾದೆಗೇಡು ಹತ್ಯೆ”ಗೀಡಾದ ದಾನಪ್ಪನ ಕುಟುಂಬಕ್ಕೆ ನಾಲ್ಕು ಲಕ್ಷ, ಹನ್ನೆರಡು ಸಾವಿರದ, ಐನೂರು ರೂ ಪರಿಹಾರದ ಚೆಕ್ಕನ್ನು ನೀಡಿದೆ. ಇನ್ನೂ ಸ್ವಲ್ಪ ಮೊತ್ತ ಈ ಕುಟುಂಬಕ್ಕೆ ಸರಕಾರದಿಂದ ಬರುವ ಭರವಸೆ ದೊರೆತಿದೆ. ಇನ್ನುಳಿದಂತೆ, ಯಥಾರೀತಿ ತನಿಖೆ ನಡೆಯುತ್ತಿದೆ.

ಪ್ರಥಮ ವರ್ತಮಾನ ವರದಿಯಲ್ಲಿರುವಂತೆ:

ಕಾರಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಥಮ ವರ್ತಮಾನ ವರದಿಯಂತೆ, ಈ ಘಟನೆಯು 22.06.21ರ ರಾತ್ರಿ 11 ಗಂಟೆಯಿಂದ 23.06.21ರ ಬೆಳಗಿನ 7.30ರ ನಡುವೆ ನಡೆದಿದೆ. ಕೊಲೆಗೀಡಾದ ದಾನಪ್ಪನ ತಂದೆ, ಫಿರ್ಯಾದುದಾರನ ಹೆಸರು ಕರಿ ಹನುಮಂತಪ್ಪ, ವೃತ್ತಿ ರೈತ, ಜಾತಿ ಮಾದಿಗ, ಧರ್ಮ ಹಿಂದು, ರಾಷ್ಟ್ರೀಯತೆ ಇಂಡಿಯಾ ಎಂದು ನಮೂದಾಗಿದೆ.

ಕೊಲೆಯಾದ ದಾನಪ್ಪನ ತಂದೆಯ ಮಾತಿನಲ್ಲಿರುವಂತೆ “ಮಗನನ್ನು ಕೊಲೆ ಮಾಡಿರುತ್ತಾರೆ, ಮಗನಿಗೆ ಎಡಗಾಲಿನ ಮೂಳೆ ಮುರಿದಂತೆ ಗಾಯವಾಗಿರುತ್ತದೆ. ಈ ಕೊಲೆಯನ್ನು ಮರಿಬಸಪ್ಪ, ಈತನ ಮಗಳು ಸುನೀತಾ, ಹೆಂಡತಿ ಲಲಿತಮ್ಮ, ಅಳಿಯ ಹುಲುಗಪ್ಪ, ಇವರುಗಳು ಸೇರಿ ಮಾಡಿದ್ದಾರೆ”. ದೂರಿನಲ್ಲಿ ಅವರು ಹೇಳುವುದು: “ನನ್ನ ಮಗ ದುಡಿಯಲು ಹೋಗಿ ನನ್ನ ಕುಟುಂಬವನ್ನು ನಿರ್ವಹಿಸುತ್ತಿದ್ದನು. ನಮ್ಮ ಕುಟುಂಬ ದಾನಪ್ಪನ ದಿನಗೂಲಿಯ ಮೇಲೆ ಅವಲಂಬನೆಯಾಗಿತ್ತು. ಈಗ ದಾನಪ್ಪನ ಕೊಲೆಯಿಂದಾಗಿ ನಮ್ಮ ಕುಟುಂಬ ಬೀದಿ ಪಾಲಾಗಿದೆ”.

ಪ್ರೇಮವನ್ನು ಕೊಂದ ಜಾತಿಯ ಪಾತ್ರ, ಚಿತ್ರ

ಈ ಕೊಲೆಯಾಗಿರುವುದು ಪ್ರೇಮದ ಕಾರಣಕ್ಕೆ ಎಂಬುದು ಅರ್ಧಸತ್ಯ ಅಥವಾ ಅಸಲೀ ಸತ್ಯವನ್ನು ಮರೆಮಾಚುವ ಮುಸುಕು ಮಾತ್ರ. ಇಲ್ಲಿ ನಿಜವಾದ ಕೊಲೆಗಾರನೆಂದರೆ ಜಾತಿ. ಮರಿಬಸಪ್ಪ, ಈ ಜಾತಿ ಕ್ರೌರ್‍ಯದ ಕೈಯ ಅಸ್ತ್ರಮಾತ್ರ. ಜಾತಿಮೂಲದ ಸಾಮಾಜಿಕ ವ್ಯವಸ್ಥೆಯ ಪಿತೂರಿಯಿಂದ ಸೃಷ್ಟಿಯಾದ ಹುಸಿ ’ಮರ್ಯಾದೆ’ ಎಂಬ ಪ್ರಚೋದನೆಯಿಂದ ಈ ಬಡ ಮರಿಬಸಪ್ಪ ಕೊಲೆಗಾರನಾಗುವಂತಾಗಿದೆ. ಈ ಜಾತಿ ವ್ಯವಸ್ಥೆಯೇ ಈತನಲ್ಲಿ ತಾನು ’ಅವರಿಗಿಂತ’ ಮೇಲಿನವನು ಎಂಬ ’ಗರ್ವ’ ಮೂಡಿಸಿದೆ. ಈ ಗರ್ವದಿಂದಲೇ ತಾನು ಜೈಲು ಸೇರಿದರೂ ಸರಿ, ಜಾತಿ ಉಳಿಸಿಕೊಳ್ಳಬೇಕೆಂದು ತನ್ನದಷ್ಟೇ ಅಲ್ಲ, ಮಗಳ ಬಾಳನ್ನೂ ಹಾಳು ಮಾಡಿ ಈತನೀಗ ಜೈಲು ಸೇರಿದ್ದಾನೆ.

ಬರಗೂರೆಂಬ, ಊರು-ಸಮಾಜದ ಜಾತಿ ನಕಾಶೆಯಲ್ಲಿ ಈ ಮರಿಬಸಪ್ಪ ತೀರಾ ಮೇಲಿನವನಲ್ಲದಿದ್ದರೂ ನಕಾಶೆಯ ಕೆಳಗಿರುವ ಮಾದಿಗ ಸಮುದಾಯಕ್ಕೆ ಹೋಲಿಸಿದರೆ ಮೇಲಿನವನು! ಹಾಗೆ ನೋಡಿದರೆ, ಈ ಪುಟ್ಟ ಗ್ರಾಮದ ಮಟ್ಟಕ್ಕೆ ಜಾತಿಯಲ್ಲಿ ಉಳಿದವುಗಳಿಗಿಂತ ಅತ್ಯಂತ ಮೇಲಿನದು ಲಿಂಗಾಯತ. ಆದರೆ ಈ ಸಮುದಾಯದ ಮನೆಗಳು ನಾಲ್ಕೈದು ಮಾತ್ರ. ನಾಯಕರ ಮನೆಗಳೂ ಏಳೆಂಟು ಅಷ್ಟೆ. ಸಂಖ್ಯಾ ಬಲದಲ್ಲಿ ಪ್ರಥಮ ಸ್ಥಾನದಲ್ಲಿರುವವರು ಕುರುಬರು. ಬಹುಸಂಖ್ಯಾತರೆಂಬ ಕಾರಣಕ್ಕೆ ಜಾತಿ ಮಾನದಂಡದಲ್ಲಿ ಹಿಂದುಳಿದವರು ಇಲ್ಲಿ ಮೇಲಿನವರು. ಆದರೆ ಕಡಿಮೆ ಸಂಖ್ಯೆಯಲ್ಲಿದ್ದರೂ ಲಿಂಗಾಯತರು ಜಾತಿಯಲ್ಲಿ ಕಡಿಮೆಯವರಲ್ಲವಾದ್ದರಿಂದ, ಬಹುತೇಕ ಸಮಬಲದ ಸಂಖ್ಯೆಯಲ್ಲಿರುವ ದಲಿತರು ಹಿಂದುಳಿದವರಿಂದ ದಮನಿತರು. ಈ ದಮನವೇ ಇಲ್ಲಿ ದಾನಪ್ಪನನ್ನು ಬಲಿ ತೆಗೆದುಕೊಂಡಿದೆ.

ಜಾತಿ ಎಂಬ ’ಮತ್ತು’ ನೆತ್ತಿಗೇರದೇ ಇದ್ದಿದ್ದರೆ ಸುನೀತ ಮತ್ತು ದಾನಪ್ಪ ಚೆಂದದ ಬಾಳ್ವೆ ಮಾಡುತ್ತಿದ್ದರು. ಆದರೆ ಜಾತಿಗರ್ವ, ಪ್ರೇಮವನ್ನು ಕೊಂದಿದೆ. ಪ್ರೇಮಿ ಸತ್ತು, ಅಪ್ಪನ ಕ್ರೌರ್ಯದಲ್ಲಿ ಮಗಳೂ ಪಾಲುದಾರಳೆಂದು ಆರೋಪಿಸಲ್ಪಟ್ಟ ಸುನೀತಾ ಕೂಡ ಜಾತಿ ಸಂಚಿಗೆ ಬಲಿಯಾಗಿ ದೈಹಿಕವಾಗಿ ಸೆರೆಮನೆಯಲ್ಲಿದ್ದು ವಿರಹ ಅನುಭವಿಸುತ್ತಿದ್ದಾಳೆ. ಪಾಪ, ಬಡವ, ಮರಿಬಸಪ್ಪ, ಕೊಲೆಗಾರನೆಂಬ ಕಿರೀಟತೊಟ್ಟು ಕಂಬಿ ಎಣಿಸುತ್ತಿದ್ದಾನೆ.

ಇಲ್ಲಿ ಅಸಲೀ ಕೊಲೆಗಾರ ಯಾರು? ಮರಿಬಸಪ್ಪನೋ ಆತನ ತಲೆಹೊಕ್ಕು ಕುಣಿಸುತ್ತಿರುವ ಜಾತಿಯೋ? ಮರಿಬಸಪ್ಪನೇನೋ ಜೈಲಿನಲ್ಲಿದ್ದಾನೆ. ಆದರೆ ಜಾತಿ ಎಂಬುದು ಕಣ್ಣಿಗೆ ಕಾಣದೆ ಮೆರವಣಿಗೆ ಹೊರಟಿದೆ. ಜಾತಿ ಕಾರಣದ ವ್ಯಕ್ತಿಗೆ ಶಿಕ್ಷೆಯಾಗಬಹುದು. ಆದರೆ ’ಜಾತಿ’ ಯನ್ನು ಶಿಕ್ಷಿಸುವ ಅಸ್ತ್ರ ನಮ್ಮಲ್ಲಿದೆಯೇ?

ದಲಿತ ದಮನ ನಿರಂತರ ವರ್ತಮಾನ

ಬರಗೂರಿನ ಮರ್ಯಾದೆಗೇಡು ಹತ್ಯೆ ಪ್ರಕರಣ ಮಾತ್ರವಲ್ಲ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಅನಿಯಂತ್ರಿತವಾಗಿ ದಲಿತರ ದಮನ ಮತ್ತು ಕೊಲೆಯಂತಹ ಘಟನೆಗಳು ನಡೆಯುತ್ತಲೇ ಬಂದಿವೆ. ಶ್ರೀರಾಮನಗರ ಮತ್ತು ಮರಳಿ ಗ್ರಾಮಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ಘಟನೆಗಳು ಸಂಭವಿಸಿವೆ. ಯಲಬುರ್ಗಾ ತಾಲೂಕಿನ ವಜ್ರಬಂಡಿ, ಹೊಸಳ್ಳಿ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆದಿವೆ. ಕೊಪ್ಪಳ ತಾಲೂಕಿನ ಗುಳದಳ್ಳಿ, ಮೈನಹಳ್ಳಿಗಳಲ್ಲಿ ದಲಿತರ ಮೇಲೆ ಸುಳ್ಳು ಕೌಂಟರ್ ಕೇಸ್‌ಗಳನ್ನು ಹಾಕಿ ಕಿರುಕುಳ ಕೊಡಲಾಗಿದೆ. ಕೆಲ ವರ್ಷಗಳ ಹಿಂದೆ ಹೊಸಗುಡ್ಡ ಎಂಬಲ್ಲಿ ದಲಿತ ಮಹಿಳೆಯ ಕೊಲೆಯಾಗಿ ಪ್ರಕರಣ ಮುಚ್ಚಿಹೋಗಿದೆ. ಗಂಗಾವತಿ ಪಕ್ಕದ ಮರಕುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿಷೇಧದ ವಿರುದ್ಧ ಸುದೀರ್ಘ ಹೋರಾಟ ಮಾಡಲಾಗಿದೆ. ಹಗೇದಾಳ್ ಎಂಬ ಗ್ರಾಮದಲ್ಲಿ ದಲಿತ ಯುವಕರಿಂದ ಸಿಗರೇಟು ಪ್ಯಾಕ್ ತರಿಸಿ ಒಳಗಿನ ಸಿಗರೇಟು ಮುಟ್ಟಿದ್ದಾನೆ ಎಂಬ ಕಾರಣಕ್ಕೆ ಅವಾಚ್ಯವಾಗಿ ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಹೀಗೆ ಒಂದೆರಡಲ್ಲ, ಬೆಳಕಿಗೆ ಬಾರದ ಘಟನೆಗಳೆಷ್ಟೋ ದಿನನಿತ್ಯ ನಡೆಯುತ್ತಲೇ ಇವೆ. ಈ ಎಲ್ಲ ದೌರ್ಜನ್ಯಗಳಿಗೆ ಕಾರಣವಾಗಿರುವುದು ಕೇವಲ “ಜಾತಿ” ಎಂಬ ಅಂಶ. ಈ ದಮನಗಳಿಗೆ ನಿರಂತರ ಬಲಿಯಾಗುತ್ತಿರುವವರು ದಲಿತರು.

ಬಿ. ಪೀರ್‌ಬಾಷ

ಬಿ. ಪೀರ್‌ಬಾಷ
ಕವಿ, ಲೇಖಕ ಮತ್ತು ಹೋರಾಟಗಾರರಾದ ಬಿ. ಪೀರ್ ಭಾಷರವರು ಮೂಲತಃ ಹೂವಿನ ಹಡಗಲಿಯವರಾಗಿದ್ದು ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನೆಲೆಸಿದ್ದಾರೆ. ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ ಮತ್ತು ಮುಸ್ಲಿಂ ಲೇಖಕರ ಚಾವಡಿಗಳಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಅವರ ಪ್ರಸಿದ್ದ ಕವನ ಸಂಕಲನವಾಗಿದೆ.


ಇದನ್ನೂ ಓದಿ: ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಲೇಖನವನ್ನು ಡಾಬಸ್ಪೇಟೆ ವಾಯ್ಸ್‌ ಕನ್ನಡ ಮಾಸಪತ್ರಿಕೆಯ ಆಗಸ್ಟ್‌ ೨೦೨೧ರ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...