Homeಮುಖಪುಟ'ಅಪಸ್ವರಗಳನ್ನು ಕಮ್ಮಿ ಮಾಡಿಕೊಂಡು 'ಒಳ ಮೀಸಲಾತಿ' ಅನುಷ್ಠಾನಕ್ಕೆ ಗಮನ ಕೊಡಬೇಕು..'; ದೇವನೂರ ಮಹದೇವ ಸಂದರ್ಶನ

‘ಅಪಸ್ವರಗಳನ್ನು ಕಮ್ಮಿ ಮಾಡಿಕೊಂಡು ‘ಒಳ ಮೀಸಲಾತಿ’ ಅನುಷ್ಠಾನಕ್ಕೆ ಗಮನ ಕೊಡಬೇಕು..’; ದೇವನೂರ ಮಹದೇವ ಸಂದರ್ಶನ

- Advertisement -
- Advertisement -

“ಅಂಬೇಡ್ಕರ್‌ವಾದ” ಮಾಸಿಕಕ್ಕಾಗಿ ಸಂಪಾದಕ ಡಾ. ರವಿಕುಮಾರ್ ಬಾಗಿ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನ

ಪ್ರಶ್ನೆ: ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು?

ದೇಮ: ಒಳಮೀಸಲಾತಿ ಬಗ್ಗೆ ಯಾರೇ ಎಷ್ಟೇ ಹೋರಾಟ ಮಾಡಿದರೂ, ಸಂಸತ್ ಆಗಲಿ ಅಥವಾ ಸುಪ್ರೀಂ ಕೋರ್ಟಿನ ವಿಸ್ತೃತ ಪೀಠವಾಗಲಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ನಮ್ಮ ಸಂಸತ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇಲ್ಲದ ಇಂಥಹ ಸಂದರ್ಭದಲ್ಲಿ, ಸುಪ್ರೀಂ ಕೋರ್ಟಿನ ಏಳು ಜನರ ವಿಸ್ತೃತ ಪೀಠವು ಒಳಮೀಸಲಾತಿ ಪರವಾಗಿ ತೀರ್ಪು ನೀಡಿ, ಹಸಿರು ನಿಶಾನೆ ತೋರಿದೆ. ಏಳು ನ್ಯಾಯಾಧೀಶರ ಪೀಠವು 6:1 ಬಹುಮತದಲ್ಲಿ ಪರಿಶಿಷ್ಠ ಜಾತಿಗಳ ಒಳಮೀಸಲಾತಿಯನ್ನು ನೀಡುವುದರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಇಷ್ಟಾಗುವುದರ ಹಿನ್ನೆಲೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಒಳಮೀಸಲಾತಿಗಾಗಿ ಸತತವಾಗಿ ನಡೆದ ಹೋರಾಟಗಳು ಹಾಗೂ ಅದು ಉಂಟುಮಾಡಿದ ವಾತಾವರಣವು ತನ್ನೆಲ್ಲಾ ಮಿತಿಗಳ ನಡುವೆ ಒತ್ತಡ ತಂದಿರುವುದನ್ನು ಗಮನಿಸಬೇಕು. ಈಗ ಸುಪ್ರೀಂ ಕೋರ್ಟ್ ನ ವಿಸ್ತ್ರತ ಪೀಠದ ಈ ತೀರ್ಪಿನಿಂದಾಗಿ ಷೆಡ್ಯೂಲ್ಡ್ ಕ್ಯಾಸ್ಟ್‌ನ ಒಳಕ್ಷೋಭೆ ಕಮ್ಮಿ ಆದಂತಾಯ್ತು. ಸುಪ್ರೀಂ ಕೋರ್ಟ್ ನ ತೀರ್ಪನ್ನು ಸ್ವಾಗತಿಸುವೆ.

ಪ್ರಶ್ನೆ: ಒಳಮೀಸಲಾತಿ ಜಾರಿ ಮಾಡುವ ಸಂದರ್ಭದಲ್ಲಿ ಕ್ರೀಮೀಲೆಯರ್ (ಕೆನೆಪದರ) ಅನ್ನು ಪರಿಗಣಿಸಬಹುದು ಎಂದೂ ಸಹ ಸುಪ್ರೀಂ ಕೋರ್ಟ್ ಹೇಳಿದೆ. ಇದರ ಅಗತ್ಯವಿಲ್ಲ ಎಂದೂ, ಇದು ದಲಿತರನ್ನು ಒಡೆಯುವ ಕೇಂದ್ರ ಸರ್ಕಾರದ ಇನ್ನೊಂದು ತಂತ್ರವೆಂಬ ಅಭಿಪ್ರಾಯವೂ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಮ: ನೆನಪಿಡಿ; ಕೆನೆಪದರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ. ಒಳಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಕೆನೆಪದರವನ್ನು ಅಗತ್ಯವಿದ್ದರೆ ಅನುಸರಿಸಬಹುದು ಎಂದು ಹೇಳಿದೆಯೇ ಹೊರತು, ಅಗತ್ಯವಾಗಿ ಪರಿಗಣಿಸಬೇಕೆಂದು ಜಡ್ಜ್‌ಮೆಂಟ್ ಮಾಡಿಲ್ಲ. ತೀರ್ಪು ನೀಡಿದ್ದರೆ ಇದಕ್ಕೆ ಮುಖಾಮುಖಿಯಾಗಬಹುದಿತ್ತು. ಹೀಗಿರುವಾಗ ಇಲ್ಲದ್ದನ್ನು ಎದುರಾಳಿಯಾಗಿಟ್ಟುಕೊಂಡು ಯಾಕೆ ಗುದ್ದಾಡಬೇಕು? ಬದಲಾಗಿ ಒಳಮೀಸಲಾತಿ ಅನುಷ್ಠಾನಕ್ಕೆ ಎದುರಾಗಬಹುದಾದ ಸಮಸ್ಯೆಗಳನ್ನು ಸಹನೆಯಿಂದ ನಿವಾರಿಸಿಕೊಳ್ಳುತ್ತ ಅಪಸ್ವರಗಳನ್ನು ಆದಷ್ಟೂ ಕಮ್ಮಿ ಮಾಡಿಕೊಂಡು ಅನುಷ್ಠಾನದ ಕಡೆಗೆ ಈಗ ಗಮನ ಕೊಡಬೇಕಾಗಿದೆ.

ಆಮೇಲೆ, ನಿಮ್ಮ ಇದೇ ಪ್ರಶ್ನೆಯಲ್ಲಿ, ಸುಪ್ರೀಂ ಕೋರ್ಟ್ ನ ಕೆಲ ನ್ಯಾಯಾಧೀಶರು ಕೆನೆಪದರ ಪರಿಗಣಿಸಬಹುದು ಎಂದು ಹೇಳಿರುವುದಕ್ಕೆ, ಇದು ದಲಿತರನ್ನು ಒಡೆಯುವ ಕೇಂದ್ರ ಸರ್ಕಾರದ ತಂತ್ರವಿರಬೇಕೆಂದು ಶಂಕೆ ಹೇಳುತ್ತೀರಿ. ಸುಪ್ರೀಂ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದರೆ ನಾನೂ ಅನುಮಾನಿಸುತ್ತಿದ್ದೆನೇನೊ. ತೀರ್ಪು ನೀಡಿಲ್ಲವಾದ್ದರಿಂದ ಅನುಮಾನಿಸುವುದಿಲ್ಲ. ಇಂಥ ಪ್ರಶ್ನೆ, ಉತ್ತರಗಳಲ್ಲೆ ನಾವು ಕಳೆದುಹೋಗುತ್ತಿದ್ದೇವೆ.

ಪ್ರಶ್ನೆ: ಒಳಮೀಸಲಾತಿಗೆ ವಿರುದ್ಧವಾಗಿ ಉತ್ತರ ಭಾರತದಲ್ಲಿ ಚಮ್ಮಾರರು ಹೋರಾಟ ಮಾಡುತ್ತಿದ್ದಾರೆ ಅವರಿಗೆ ತಮ್ಮ ಸಲಹೆ ಏನು?

ದೇಮ: ಹೌದು, ಒಳಮೀಸಲಾತಿಗೆ ವಿರುದ್ಧವಾಗಿ ಉತ್ತರ ಭಾರತದಲ್ಲಿ ಚಮ್ಮಾರರ ಹೋರಾಟ ಇನ್ನು ಮೇಲೆ ಹೆಚ್ಚಲೂಬಹುದು. ಆದರೆ ಇದು ಅನಿರೀಕ್ಷಿತವಲ್ಲ. ತುಂಬಾ ಹಿಂದೆಯೇ ಈ ಬಗ್ಗೆ ಮಾತಾಡಿದ್ದೆ. ಹೀಗಿದ್ದೂ, ಒಳಮೀಸಲಾತಿಗೆ ಅಪಸ್ವರ, ಪ್ರತಿಭಟನೆ- ಉತ್ತರ ಭಾರತ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಕಾಣಿಸಿಕೊಳ್ಳಬಹುದು.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ತದನಂತರ, ಒಳಮೀಸಲಾತಿ ಬೇಕೆಂಬ ಆಕಾಂಕ್ಷಿಗಳ ನೈತಿಕ ಬೇಡಿಕೆಯು ಈಗ ಹಕ್ಕಾಗಿದೆ. ಎಲ್ಲರೂ ಒಪ್ಪಿಕೊಂಡರೆ ಆರೋಗ್ಯಕರ. ಯಾರಿಗೂ ಬೇಡ ಎಂದು ಹೇಳುವ ನೈತಿಕತೆಯಾಗಲಿ ಹಕ್ಕಾಗಲಿ ಈಗ ಇರುವುದಿಲ್ಲ. ಅಪಸ್ವರ ಇರುವವರು ತಮ್ಮ ಒಳಪಂಗಡಕ್ಕೆ ಏನು ಬೇಕು ಎಂದು ಕೇಳಬಹುದಷ್ಟೆ. ಮತ್ತೊಮ್ಮೆ ಹೇಳುವೆ- ಇನ್ನೊಬ್ಬರಿಗೆ ಒಳಮೀಸಲಾತಿ ಬೇಡ ಅನ್ನುವುದಕ್ಕೆ ಯಾರಿಗೂ ಹಕ್ಕಾಗಲಿ, ನೈತಿಕತೆಯಾಗಲಿ ಇರುವುದಿಲ್ಲ.

ಪ್ರಶ್ನೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಮಾತು ಕೊಟ್ಟಿತ್ತು. ಆದರೆ ಈಗ ಅದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಿರುವಾಗ ಸರ್ಕಾರಕ್ಕೆ ಯಾವ ರೀತಿ ಒತ್ತಡ ಹಾಕಬೇಕು?

ದೇಮ: ಒಂದು ವ್ಯವಸ್ಥೆ, ಒಂದು ಸರ್ಕಾರದ ನಡಿಗೆಯನ್ನು ಸರಳಗೊಳಿಸಿ ನೋಡುತ್ತಿರುವುದರಿಂದ ನಿಮಗೆ ಹೀಗೆ ಅನ್ನಿಸುತ್ತಿರಬಹುದು. ಯಾವುದೇ ಒಂದು ಕುಟುಂಬ ಅಥವಾ ಸರ್ಕಾರವು ಅಪಸ್ವರಗಳು ಇರುವ ಸಮಸ್ಯೆ ಬಗೆಹರಿಸಿಕೊಳ್ಳುವಾಗ, ಎಲ್ಲರನ್ನೂ ಒಲಿಸಿಕೊಂಡು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಒಳಮೀಸಲಾತಿ ಬೇಡ ಅನ್ನುವ ಸಚಿವರು, ಶಾಸಕರು- ಪಕ್ಷವನ್ನೂ ಒಮ್ಮತಕ್ಕೆ ತಂದು ಅನುಷ್ಠಾನಗೊಳಿಸಬೇಕಾಗುತ್ತದೆ. ಹೀಗೆಲ್ಲಾ ಸರ್ಕಸ್ ಮಾಡದಿದ್ದರೆ ಸರ್ಕಾರವೇ ಅಲ್ಲಾಡಲೂಬಹುದು. ಇದನ್ನು ಅರ್ಥ ಮಾಡಿಕೊಂಡು ನಾವು ಸರ್ಕಾರದ ಮೇಲೆ ಮೊದಲು ನೈತಿಕ ಒತ್ತಡ ತರಬೇಕಾಗಿದೆ. ಜೊತೆಗೇ ಜನಾಭಿಪ್ರಾಯ ರೂಪಿಸಬೇಕಾಗುತ್ತದೆ.

ಇಲ್ಲಿ, ಹೋರಾಟಗಾರರು ಪ್ರತಿಕ್ರಿಯಾತ್ಮಕವಾಗಿರಬಾರದು. ಯಾರೇ ಏನೇ ಹೇಳಲಿ ಆ ಕಡೆ ನೋಡದೆ ತಾವು ಹೇಳಬೇಕಾಗಿರುವುದಷ್ಟನ್ನು ಮಾತ್ರ ಹೇಳಬೇಕು. ಜೊತೆಗೆ ಹಂತ ಹಂತವಾಗಿ ಹೋರಾಟವನ್ನು ತೀವ್ರ ಮತ್ತು ವ್ಯಾಪಕಗೊಳಿಸುತ್ತಾ ಹೋಗಬೇಕು.

ಆಮೇಲೂ ಈ ಸರ್ಕಾರಕ್ಕೆ ಅನುಷ್ಠಾನಗೊಳಿಸುವುದು ಕಷ್ಟ ಅನ್ನಿಸಿದರೆ, (1) ಯಾವ ಜನಪ್ರತಿನಿಧಿಗಳು ಇದಕ್ಕೆ ಕಾರಣರೋ, ಅವರ ಮೇಲೆ ಕಣ್ಣಿಡಬೇಕು. ಮುಂದಿನ ಚುನಾವಣೆಯಲ್ಲಿ ಅವರೊ, ಅವರ ಸಂತಾನವೊ ಗೆಲ್ಲದಂತೆ ವಾತಾವರಣ ಸೃಷ್ಟಿಸಬೇಕು. (2) ಕೊನೆಗೆ, ತಮಗೆ ಮೀಸಲಾತಿ ಬೇಕೆನ್ನುವ ಒಳಪಂಗಡವು ‘ನಮಗೆ ಒಳಮೀಸಲಾತಿ ಮೊದಲು ತನ್ನಿ’ ಎಂದು ಡಿಮ್ಯಾಂಡ್ ಇಡಬೇಕಾಗುತ್ತದೆ. ಇದಕ್ಕೆ ಪ್ರಬಲ ವ್ಯಾಪಕ ಹೋರಾಟ ರೂಪಿಸಬೇಕಾಗುತ್ತದೆ.

ಪ್ರಶ್ನೆ: ಒಳಮೀಸಲಾತಿಯು ದಲಿತರ ಐಕ್ಯತೆಯನ್ನು ಮುರಿಯುತ್ತದೆ ಎಂಬ ವಾದವಿದೆ. ಹಾಗೆಯೇ ಒಳಮೀಸಲಾತಿಯು ದಲಿತರ ಐಕ್ಯತೆಯನ್ನು ಸಾಧಿಸುತ್ತದೆ ಎಂಬ ವಾದವೂ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಮ: ಒಳಮೀಸಲಾತಿಯು ದಲಿತರ ಐಕ್ಯತೆಯನ್ನು ಮುರಿಯುತ್ತದೆ ಅಥವಾ ಸಾಧಿಸುತ್ತದೆ- ಎರಡೂ ನಿಜವಿರಬಹುದೇನೋ? ನಾವು ನಡೆದುಕೊಳ್ಳುವುದರ ಮೇಲೆ ಇದು ನಿಂತಿದೆ ಅನ್ನಿಸುತ್ತದೆ. ಈ ಹಿಂದೆ ಒಳಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಉಂಟಾದ ದ್ವೇಷ, ಅಸೂಯೆ, ಅನುಮಾನಗಳು ಕಹಿ ಉಳಿಸಿದೆ. ಆಗ ಉಂಟಾದ ಗಾಯದ ಗುರುತು ಇನ್ನೂ ಇದೆ. ಕರ್ನಾಟಕದಲ್ಲಿ ಮಾದಾರ v/s ಹೊಲಾರ ಆಗಿಬಿಟ್ಟಿತು. ಪರಸ್ಪರ ಶತ್ರು ಎಂಬಂತೆ ಆಗಿಬಿಟ್ಟಿತ್ತು. ಇದೆಲ್ಲದರ ಪರಿಣಾಮ- ಮಾದಾರ ಮತ್ತು ಹೊಲಾರ ಈ ಇಬ್ಬರೂ ರಾಜಕೀಯ ಪ್ರಾತಿನಿಧ್ಯದ ಊರಾಚೆ ಎಸೆಯಲ್ಪಟ್ಟರು. ದಲಿತರನ್ನು ಬೇರೆಯವರು ರಾಜಕೀಯ ಅಸ್ಪೃಶ್ಯರನ್ನಾಗಿಸಿದ್ದಲ್ಲ, ತಾವೇ ಮಾಡಿಕೊಂಡರು. ಐಕ್ಯತೆ ಮುರಿಯಿತು. ಸುಸ್ತಾಗಿ, ಈಗ ಮತ್ತೆ ಒಡನಾಟ ಚಿಗುರುತ್ತಿದೆ. ಇನ್ನು ಮುಂದಾದರೂ ‘ನಾನು ಹೇಳಿದ್ದನ್ನೇ ಹೇಳಬೇಕು, ಹೇಳಿದ ರೀತಿಯಲ್ಲೆ ಹೇಳಬೇಕು’ ಎಂದು ಅಪಕ್ವವಾಗಿ ಯಾವುದೇ ಕೆಟಗರಿಯವರೂ ವಾದಿಸಬಾರದು.

ಒಳಮೀಸಲಾತಿ ಇದ್ದೂ ದಲಿತರ, ತಳ ಸಮುದಾಯಗಳ ಐಕ್ಯತೆಯನ್ನು ಉಳಿಸಬಹುದಾದ ಸಾಧ್ಯತೆ- ಅವರು ಒಟ್ಟಾಗಿ ಉಳಿದೆಲ್ಲಾ ಶೋಷಿತ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆಯಲು ಅರಿವು ಮೂಡಿಸುವುದರಲ್ಲಿದೆ. ಎಲ್ಲಾ ಕ್ಷೇತ್ರಗಳ ಪ್ರಾತಿನಿಧ್ಯಕ್ಕೂ ಒಟ್ಟಾಗಿ ಹೋರಾಡಬೇಕಾಗಿದೆ. ಸಹಭಾಗಿ ಪ್ರಜಾಪ್ರಭುತ್ವ (Participatory Democracy) ಮುನ್ನೆಲೆಗೆ ತರಬೇಕಾಗಿದೆ. ಖಾಸಗಿಯಲ್ಲೂ ಮೀಸಲಾತಿಗೆ ಒತ್ತಡ ಹೇರಬೇಕಾಗಿದೆ. ಇಲ್ಲಿ ಸ್ಪೃಶ್ಯ-ಅಸ್ಪೃಶ್ಯ ತರಬಾರದು. ಇರುವ ಯಾರನ್ನೂ ಎಸ್‌ಸಿ ಗುಂಪಿಗೆ ಸಲ್ಲ ಅನ್ನಬಾರದು. ಎಸ್‌ಸಿ ಗುಂಪು ಎಚ್ಚೆತ್ತು ರಾಜಕೀಯ ಪ್ರಜ್ಞೆ ದಕ್ಕಿಸಿಕೊಂಡರೆ, ಮತ್ತಿತರ ಶೋಷಿತರನ್ನೂ ಜೊತೆಗೂಡಿಸಿಕೊಂಡು ಒಕ್ಕೊರಲಿನಿಂದ ಅದು ಹೇಳಿದ ಮಾತುಗಳು ಸರ್ಕಾರದಲ್ಲಿ ನಡೆಯುತ್ತದೆ. ಯಾವುದೇ ಪ್ರಾತಿನಿಧ್ಯಗಳಲ್ಲೂ ತಳ ಸಮುದಾಯಗಳಿಗೆ ಅಷ್ಟೊಂದು ವಂಚನೆ ನಡೆಯಲಾರದು- ಈ ರೀತಿ ಆಲೋಚಿಸುತ್ತಿರುವೆ.

ಪ್ರಶ್ನೆ: ದಲಿತರು ಐಕ್ಯಗೊಂಡು ಹೋರಾಡಬೇಕಾದ ಹಲವು ಹೋರಾಟಗಳಿವೆ. ಈ ನಿಟ್ಟಿನಲ್ಲಿ ಈ ಹೊತ್ತಿಗೆ ಹೋರಾಟವನ್ನು ಹೇಗೆ ರೂಪಿಸಬೇಕು?

ದೇಮ: ನಾನೀಗ ‘ಜಂಗಮ ಕಲೆಕ್ಟೀವ್ಸ್’ನ ರಂಗ ಪ್ರಯೋಗಗಳು ಹಾಗೂ ಈ ಎಳೆಯರ ಗ್ರಹಿಕೆ, ಅಭಿವ್ಯಕ್ತಿ, ಆಲೋಚನೆಗಳ ಕಡೆ ನೋಡುತ್ತಿರುವೆ. ‘ದಕ್ಲ ದೇವಿ ಕಥಾ’ ಆಗಲಿ, ‘ಬಾಬ್ ಮಾರ‍್ಲೆ ಫ್ರಂ ಕೋಡಿಹಳ್ಳಿ’ ಆಗಲಿ ಕೇವಲ ನಾಟಕಗಳಾಗಿ ಉಳಿಯುವುದಿಲ್ಲ. ನಾಟಕದ ಎಲ್ಲೆ ಮೀರುತ್ತದೆ. ಕಂಪನಗಳನ್ನು ಉಂಟುಮಾಡುತ್ತ, ಚಲಿಸುತ್ತಾ ಸಮಾಜವನ್ನು ಆಳ್ವಿಕೆ ಮಾಡುತ್ತಿರುವ ಮೌಲ್ಯಗಳ ಬುಡ ಅಲ್ಲಾಡಿಸತೊಡಗುತ್ತದೆ.

ಈ ಹಿಂದೆ, ದಲಿತ ಸಂಘರ್ಷ ಸಮಿತಿಯು ದಲಿತ ಕೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಅವರ ಜನ್ಮದಿನಾಚರಣೆಯನ್ನು ಆಚರಿಸಲು ಆರಂಭಿಸಿದಾಗ, ಇತರೆ ಸಮುದಾಯಗಳಿಂದ ಉಂಟಾದ ಪ್ರತಿರೋಧ, ದೌರ್ಜನ್ಯ, ದಲಿತರಿಗೆ ಉಂಟುಮಾಡಿದ ಗಾಯಗಳು ಒಂದೆರಡಲ್ಲ. ಛಲ ಬಿಡದೆ ದಸಂಸ ಅಂಬೇಡ್ಕರ್ ಜನ್ಮ ದಿನಾಚರಣೆಗೆ ಒಂದು ಆಂದೋಲನ ಸ್ವರೂಪ ನೀಡಿತು. ಮೊದಮೊದಲು ಬುಡಮೇಲು ಕೃತ್ಯದಂತೆ ಕಂಡಿದ್ದ ಅಂಬೇಡ್ಕರ್ ದಿನಾಚರಣೆ, ನಿಧಾನವಾಗಿ ಇತರೆಯರಿಂದಲೂ ಒಪ್ಪಿತವಾಯ್ತು. ಅಷ್ಟೇಕೆ ಈಗ ಇತರೆಯವರೂ ಅಂಬೇಡ್ಕರ್ ಅವರನ್ನು ಒಳಗೊಳ್ಳುತ್ತಿದ್ದಾರೆ. ಆದರೆ ಇಷ್ಟಾಗುವುದಕ್ಕೆ ಹೆಚ್ಚೂ ಕಮ್ಮಿ ಅರ್ಧ ಶತಮಾನ ಹಿಡಿಯಿತು. ಇರಲಿ.. ಮತ್ತೆ ಜಂಗಮ ಕಲೆಕ್ಟೀವ್ಸ್ ಗೆ ಬರುವೆ. ಅಯಾಸ್ಕಾಂತದಂತೆ ಇದು ಎಲ್ಲರನ್ನೂ ಸೆಳೆಯುತ್ತಿದೆ.

ಈ ಸಮಾಜವು ಮಾನವೀಯವಾಗಿ ರೂಪಾಂತರವಾಗಲು, ಈ ಹಿಂದೆ ದಲಿತ ಸಂಘರ್ಷ ಸಮಿತಿ ಹೋರಾಟಕ್ಕೆ ದಶಕಗಳು ಹಿಡಿದರೆ, ಇಂದು ಜಂಗಮ ಕಲೆಕ್ಟೀವ್‌ಗೆ ಒಂದು ದಿನ ಸಾಕು- ಈ ಜಿಗಿತ ಸಿಕ್ಕಿದೆ. ನಾವು ಕಾಣಬೇಕಾಗಿದೆ- ಜಂಗಮ ಕಲೆಕ್ಟೀವ್ ನಾಟಕಗಳು ಮುಗಿದ ಮೇಲೆ ನಡೆಯುವ ಸಂವಾದಗಳು ಗಹನವಾಗಿವೆ. ಅಸಹಜ ಸಾಮಾಜಿಕ/ಸಾಂಸ್ಕೃತಿಕ ಮೌಲ್ಯಗಳ ಸಂಕೋಲೆಯಿಂದ ಬಿಡುಗಡೆ ಪಡೆಯಲು ಹಾತೊರೆಯುತ್ತಿರುವಂತೆ ಇಡೀ ಸಭೆ ಕಾಣಿಸುತ್ತದೆ. ಗಮನಿಸಿ- ಇಲ್ಲಿ ದಲಿತ ಮಾತ್ರವಲ್ಲ, ತಳ ಸಮುದಾಯ ಮಾತ್ರವಲ್ಲ, ತಾವು ಮೇಲು ಅಂದುಕೊಂಡವರೂ ಎಲ್ಲರೂ ಮಾನವೀಯವಾಗಲು, ಸಹಜವಾಗಲು ತಹತಹಿಸುತ್ತಿರುವಂತೆ ಕಾಣಿಸುತ್ತದೆ. ಹೀಗೆಯೇ, ಈ ತಂಡದ ಜೊತೆಗೆ ಕನ್ನಡ ಪ್ಲಾನೆಟ್ ಮತ್ತಿತರ ಚಾನೆಲ್‌ಗಳಲ್ಲಿ ಪ್ರಸಾರವಾಗಿರುವ ಸಂದರ್ಶನಗಳೂ ಚೇತೋಹಾರಿಯಾಗಿವೆ.

ಈ ಸೋಜಿಗಕ್ಕೆ ಕೆ.ಪಿ.ಲಕ್ಷ್ಮಣ್ ಎಂಬ ಹುಡುಗ, ಈ ಹುಡುಗನೊಳಗೆ ಇರುವ ಲೋಕಜ್ಞಾನ, ಅರಿವಿನ ವಿಸ್ತಾರ, ಈ ಯಾವುದನ್ನೂ ಥಿಯರಿ ಮಾಡದೆ ಜೀವನ ಪ್ರವಾಹದಲ್ಲಿ ತಾನು ಕಂಡದ್ದನ್ನು ಗ್ರಹಿಸಿದ್ದನ್ನು ತಪದ ಕುಲುಮೆಯಲ್ಲಿ ಆಕಾರ ನೀಡುವ ದಾರ್ಶನಿಕತೆ ಕಾರಣವೆನ್ನಿಸುತ್ತದೆ. ಇವ ದಾರ್ಶನಿಕನೆ. ಈತನೊಡನೆ ಇರುವ ಅಸಾಧಾರಣ ಪ್ರತಿಭೆಯ ಕಲಾವಿದರೂ ಈ ದಿಕ್ಕಲ್ಲೆ ಇದ್ದಾರೆ. ಹಾಗಾಗೇ ಕರ್ನಾಟಕದ ಎಚ್ಚರದ ಪ್ರಜ್ಞೆ- ‘ಜಂಗಮ ಕಲೆಕ್ಟೀವ್ಸ್’ ಜೊತೆಗೆ ಒಂದಾಗುವ ಅಪೂರ್ವ ಕ್ರಿಯೆ ಜರುಗುತ್ತಿದೆ.

ಕಷ್ಟಪಟ್ಟು ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ- ‘ಜಂಗಮ ಕಲೆಕ್ಟೀವ್ಸ್’ ಆಂದೋಲನ ಇಡೀ ಸಮಾಜವನ್ನೇ ಕೂಡಿಸುತ್ತ ಹೆಜ್ಜೆ ಇಡುತ್ತಿರುವಾಗ, ತಳಸಮುದಾಯಗಳ ಹೋರಾಟ ಐಕ್ಯತೆ ಪಡೆಯುವಲ್ಲಿ ಏನು ಕೊರತೆ ಇದೆ? ಬಹುಶಃ ಎಲ್ಲಾ ಸಮಾಜಮುಖಿ ಹೋರಾಟಗಳು ‘ಜಂಗಮ ಕಲೆಕ್ಟೀವ್ಸ್’ನಂತೆ, ಸಾಂಸ್ಕೃತಿಕ ಕಣ್ಣುಗಳನ್ನೂ ಪಡೆಯಬೇಕಾಗಿದೆ. ಈ ಎಲ್ಲಾ ಮಾತುಗಳನ್ನು ನನ್ನ ಅರಿವಿನ ಮಿತಿಯಲ್ಲಿ ಹೇಳುತ್ತಿರುವೆ.

ಪ್ರಶ್ನೆ: ಒಳಮೀಸಲಾತಿಯು ದಲಿತ ಸಮುದಾಯವನ್ನು ಛಿದ್ರಗೊಳಿಸದಂತೆ ಮುನ್ನಡೆಯಬೇಕಾದ ದಾರಿ ಯಾವುದು?

ದೇಮ: ಮೇಲೆ ನೋಡಿ!

ಡಾ. ರವಿಕುಮಾರ್ ಬಾಗಿ

ಇದನ್ನೂ ಓದಿ;

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...