ವಿಶ್ವದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾದ ’ಧಾರಾವಿ ಸ್ಲಂ’ ನಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ತೆಗೆದುಕೊಂಡ ಪ್ರಯತ್ನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಸಾಂಕ್ರಾಮಿಕದ ವಿರುದ್ದ ರಾಷ್ಟ್ರೀಯ ಏಕತೆ ಮತ್ತು ಜಾಗತಿಕ ಒಗ್ಗಟ್ಟಿನೊಂದಿಗೆ ಸಮುದಾಯದ ತೊಡಗಿಸಿಕೊಳ್ಳುವಿಕೆಯ ಅಗತ್ಯವನ್ನು ಅದು ಒತ್ತಿಹೇಳಿದೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿರುವ ಧಾರವಿ ಕೊಳೆಗೇರಿ 2.5 ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು ದೊಡ್ಡದಿದೆ ಹಾಗೂ ಅಲ್ಲಿ 6.5 ಲಕ್ಷ ಜನರು ವಾಸಿಸುತ್ತಿದ್ದಾರೆ. ಕಿರಿದಾದ ಲೇನ್‌ಗಳು ಮತ್ತು ತೆರೆದ ಚರಂಡಿಗಳನ್ನು ಹೊಂದಿರುವ ಕೊಳೆಗೇರಿಯಲ್ಲಿ ಜನರು ಗುಡಿಸಲುಗಳು ಮತ್ತು ಶಿಥಿಲಗೊಂಡ ಕಟ್ಟಡಗಳಲ್ಲಿ ವಾಸಿಸುತ್ತಿದ್ದಾರೆ.
ಮಾರ್ಚ್ 11 ರಲ್ಲಿ ಮುಂಬೈಯ ಮೊದಲ ಕೊರೊನಾ ಪ್ರಕರಣ ವರದಿಯಾದ ಸುಮಾರು ಮೂರು ವಾರಗಳ ನಂತರ, ’ಧಾರಾವಿ ಕೊಳೆಗೇರಿ’ ಯಲ್ಲಿ ಮೊದಲ ಕೊರೊನಾ ಪತ್ತೆಯಾಗಿದ್ದರು.
ಶುಕ್ರವಾರ ಜಿನೇವಾದಲ್ಲಿ ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ’’ಸಾಂಕ್ರಮಿಕ ಹರಡುವುದು ತೀವ್ರವಾಗಿದ್ದರೂ ಸಹ ಅದನ್ನು ಮತ್ತೆ ನಿಯಂತ್ರಣಕ್ಕೆ ತರಬಹುದು ಎಂದು ಪ್ರಪಂಚದಾದ್ಯಂತದ ಅನೇಕ ಉದಾಹರಣೆಗಳಿವೆ.
ಇಟಲಿ, ಸ್ಪೇನ್ ಮತ್ತು ದಕ್ಷಿಣ ಕೊರಿಯಾ ಅಲ್ಲದೆ ಮುಂಬೈ ಮಹಾನಗರದ ಜನದಟ್ಟನೆಯ ಪ್ರದೇಶವಾದ ಧಾರವಿ ಸಹ ಇದಕ್ಕೆ ಉದಾಹರಣೆಯಾಗಿದೆ” ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.
ಒಮ್ಮೆ ನಗರದ ಕೊರೊನಾ ಹಾಟ್‌ಸ್ಪಾಟ್ ಆಗಿದ್ದ ದಾರಾವಿಯಲ್ಲಿ ಜೂನ್ 9 ರಂದು ಕೇವಲ ಒಂಬತ್ತು ಹೊಸ ಸೋಂಕುಗಳು ಪತ್ತೆಯಾಗಿದೆ. ಇದುವರೆಗೆ ಅಲ್ಲಿ ಒಟ್ಟು ಪ್ರಕರಣ 2,347 ವರದಿಯಾಗಿದೆ. ಮುಂಬೈಯಲ್ಲಿ 88,000 ಕೊರೊನಾ ಪ್ರಕರಣಗಳು ಮತ್ತು 5,129 ಸಾವುಗಳು ದಾಖಲಾಗಿವೆ.
ಪ್ರಸ್ತುತ ಧಾರವಿಯಲ್ಲಿ ಕೇವಲ 291 ಸಕ್ರಿಯ ಕೊರೊನಾ ಪ್ರಕರಣಗಳು ಹೊಂದಿದ್ದು, 1,815 ರೋಗಿಗಳು ಇದುವರೆಗು ಚೇತರಿಸಿಕೊಂದ್ದಾರೆ.
ಶನಿವಾರ ಭಾರತದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8.2 ಲಕ್ಷವನ್ನು ತಲುಪಿದ್ದು, 27,114 ಹೊಸ ಪ್ರಕರಣಗಳು ವರದಿಯಾಗಿದೆ ಹಾಗೂ ಇದುವರೆಗೆ 22,123 ಜನರು ಮೃತಪಟ್ಟಿದ್ದಾರೆ.
ಓದಿ: ಡಾ.ಬಿ.ಆರ್.ಅಂಬೇಡ್ಕರ್‌ರವರ ಮುಂಬೈ ಮನೆ ‘ರಾಜ್‌ಗೃಹ’ ಮೇಲೆ ದಾಳಿ, ಧ್ವಂಸ


