ನಾಪತ್ತೆಯಾಗಿದ್ದ 23 ವರ್ಷದ ಯುವತಿಯ ಶವ ಬುಧವಾರ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೋಲೋಡಿ ಅರಣ್ಯದಲ್ಲಿ ಪತ್ತೆಯಾಗಿದೆ. ಧರ್ಮಸ್ಥಳ ಸಮೀಪದ ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮಲೆಕುಡಿಯಾ ಅವರ ಪುತ್ರಿಯಾಗಿರುವ ತೇಜಸ್ವಿನಿ ಫೆಬ್ರವರಿ 22 ರಂದು ನಾಪತ್ತೆಯಾಗಿದ್ದು, ವಿಷ ಸೇವನೆಯಿಂದ ಸಾವು ಸಂಭವಿಸಿದೆ ಎನ್ನಲಾಗಿದೆ.
ಮೃತ ಯುವತಿಯು 4 ವರ್ಷಗಳಿಂದ ಉಜಿರೆಯ ಮನೆಯೊಂದರಲ್ಲಿ ಕೆಲಸಕ್ಕಿದ್ದು, ಕಳೆದ ನಾಲ್ಕು ತಿಂಗಳಿನಿಂದ ಮಧ್ಯಾಹ್ನದ ನಂತರ ಉಜಿರೆಯ ಕಂಪ್ಯೂಟರ್ ಕೇಂದ್ರದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯಲು ಹೋಗಿಬರುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?
ಫೆಬ್ರವರಿ 22 ರಂದು ಸಂಜೆ ಕಂಪ್ಯೂಟರ್ ತರಗತಿ ಮುಗಿಸಿ ನೆರಿಯದಲ್ಲಿನ ತಮ್ಮ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿಯು ನಾಪತ್ತೆಯಾಗಿದ್ದಳು. ಊರೆಲ್ಲಾ ಹುಡುಕಾಡಿರುವ ಕುಟುಂಬ ಸದಸ್ಯರು ಫೆಬ್ರವರಿ 23 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ‘ಸುದ್ದಿ ಬೆಳ್ತಂಗಡಿ ನ್ಯೂಸ್’ ವೆಬ್ ಪೋರ್ಟಲ್ ವರದಿ ಮಾಡಿದೆ.
ಫೆಬ್ರವರಿ 22 ರಂದು ಸಂಜೆ ಮನೆಗೆ ಹೊರಟಿದ್ದ ಯುವತಿಯನ್ನು ಅವರ ಅಕ್ಕ ಸುಮಂಗಳ ಎಂಬವರು ಕಂಡಿದ್ದು, ಅವರನ್ನು ತಾನು ಪ್ರಯಾಣಿಸುತ್ತಿದ್ದ ಜೀಪಿನಲ್ಲಿ ಹತ್ತಿಸಿ ಮನೆಯ ಬಳಿ ಇಳಿಸಿ ಹೋಗಿದ್ದರಾದರೂ, ಯುವತಿಯು ಮನೆಗೆ ಹೋಗಿಲ್ಲ ಎಂದಿದ್ದಾರೆ.
ನಾಪತ್ತೆಯಾಗಿ 9 ದಿನಗಳ ನಂತರ ಅವರ ಮನೆಯ ಸಮೀಪದ ಕೋಲೋಡಿ ಕಾಡಿನಲ್ಲಿ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯ ಬ್ಯಾಗ್‌ನಲ್ಲಿ ಅಡಿಕೆ ಮರದ ಕೊಳೆರೋಗಕ್ಕೆ ಔಷಧಿಯಾಗಿ ಹಾಕಲಾಗುವ ಮೈಲುತುತ್ತು ಪತ್ತೆಯಾಗಿದ್ದು, ಯುವತಿ ಆತ್ಮಹತ್ಯೆ ಮಾಡಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆಗೆ ನಾನುಗೌರಿ.ಕಾಂ ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆ ಮಾಡಿತ್ತಾದರೂ, ಠಾಣಾ ಸಿಬ್ಬಂದಿಗಳು ಕರೆ ಸ್ವೀಕರಿಸಿಲ್ಲ.
ಇದನ್ನೂ ಓದಿ: ಸಂಗಮೇಶ್ ಅಗೌರವ ತೋರಿಸಿಲ್ಲ, ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ- ಸಿದ್ದರಾಮಯ್ಯ


