ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು 46 ದಿನ ಪೂರೈಸಿದೆ. ಸತತ ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ಸಮಿತಿಯು ನಿರ್ಧರಿಸಿದೆ.
ಧರಣಿಯ ಸ್ಥಳದಲ್ಲಿ 74 ನೇ ಗಣರಾಜ್ಯೋತ್ಸವವನ್ನು ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾಕುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಎನ್.ವೆಂಕಟೇಶ್‌ರವರು ಮಾತನಾಡಿ, “ಒಳಮೀಸಲಾತಿ ಜಾರಿ ಆಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಬಿಜೆಪಿ ಪಕ್ಷವು ಕೇವಲ ಮಾತುಗಳ ಮೂಲಕ ಹೊಟ್ಟೆ ತುಂಬಿಸುತ್ತಿದೆಯೆ ಹೊರತು ಒಳಮೀಸಲಾತಿ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಅವರು ಮಾಡುತ್ತಿರುವ ಮೋಸಕ್ಕೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ದಲಿತ ಸಮುದಾಯಗಳೆಲ್ಲ ಒಂದಾಗಿ ಇಂದು ಈ ಹೋರಾಟ ನಡೆಸುತ್ತಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಬೇಕಿರುವುದು ಸಂವಿಧಾನದ ಆಶಯ. ಆದರೆ ಆಳುವ ಸರ್ಕಾರಗಳು ಸಂವಿಧಾನವನ್ನೆ ಗಾಳಿಗೆ ತೂರಿವೆ. ಹಾಗಾಗಿ ಹೋರಾಟವೊಂದೆ ನಮಗುಳಿದಿರುವ ದಾರಿ. ಚುನಾವಣೆ ಸಂದರ್ಭದಲ್ಲಿ ಈ ಸರ್ಕಾರಕ್ಕೆ ಪಾಠ ಕಲಿಸಲು ದಲಿತ ಸಮುದಾಯ ನಿರ್ಧರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿನ ಗಣರಾಜ್ಯೋತ್ಸವ ಆಚರಣೆ ವೇಳೆ ಒಳ ಮೀಸಲಾತಿ ಹೋರಾಟವನ್ನು ಮುನ್ನಡೆಸುತ್ತಿರುವ ಹೋರಾಟಗಾರ ಅಂಬಣ್ಣ ಅರೋಲಿಕರ್ ಸಂವಿಧಾನ ಪೀಠಿಕೆ ಓದಿದರು. ಎಸ್.ಮಾರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆನಂತರ ಸಭೆ ಸೇರಿ ಮೂರು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
1. ಸಾಮಾಜಿಕ ನ್ಯಾಯದ ಉಳಿವಿಗಾಗಿ ಸಂವಿಧಾನವನ್ನು ಸಂರಕ್ಷಿಸಿಕೊಳ್ಳುವುದು ದಲಿತ ಚಳವಳಿಯ ಆದ್ಯತೆಯಾಗಿರುವುದರಿಂದ ಒಳಮೀಸಲಾತಿ ಹೋರಾಟದ ಜೊತೆಗೇ ಸಂವಿಧಾನ ಸಂರಕ್ಷಣಾ ಹೋರಾಟಗಳನ್ನು ರೂಪಿಸಲು ನಿರ್ಧರಿಸಲಾಯಿತು.
2. ಮುಂದಿನ ಚುನಾವಣೆಯಲ್ಲಿ ವಚನಭ್ರಷ್ಟ, ದಲಿತ ವಿರೋಧಿ, ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಮತ್ತು ಅದಕ್ಕಾಗಿ ಫೆಬ್ರವರಿ ಮೊದಲ ವಾರದಿಂದ ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಾ ಪರಿಶಿಷ್ಟ ಜಾತಿಗಳ ನಾಯಕರ ಪ್ರವಾಸ ಹಮ್ಮಿಕೊಳ್ಳುವುದಾಗಿ ತೀರ್ಮಾನಿಸಲಾಯಿತು.
3. ಮಾದಿಗ ಸಂಬಂಧಿತ ತ್ರಿಮತಸ್ಥ (ಸಮಗಾರ, ಮೋಚಿ, ಮಚ್ಚಗಾರ) ಸಮಯದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಒಕ್ಕರಲಿನಿಂದ ಒತ್ತಾಯಿಸಲಾಯಿತು.
ಸಭೆಯಲ್ಲಿ ಹೋರಾಟಗಾರಾದ ಹೆಣ್ಣೂರು ಶ್ರೀನಿವಾಸ್, ಬಸವರಾಜ ಕೌತಾಳ್, ಆರ್.ಮೋಹನರಾಜ್, ಸಿ.ದಾನಪ್ಪ ಮದೋಗಲ್, ಎಂ.ಗುರುಮೂರ್ತಿ, ಕೇಶವಮೂರ್ತಿ, ಕರ್ನಾಟಕ ಜನಶಕ್ತಿಯ ಗೌರಿ, ಶಿವರಾಜ ಅಕ್ಕರಕಿ, ಗೌಡಗೆರೆ ಮಾಯುಶ್ರೀ, ಬಿ.ಆರ್.ಭಾಸ್ಕರ್ ಪ್ರಸಾದ್, ನಾಗಮಣಿ, ಕರಿಯಪ್ಪ ಗುಡಿಮನಿ, ಕನಕೇನಹಳ್ಳಿ ಕೃಷ್ಣಪ್ಪ, ಹೇಮರಾಜ್, ಪುಷ್ಪಲತ, ವೆಂಕಟೇಶ್, ನಂದಕುಮಾರ್, ಕರ್ನಾಟಕ ರಾಜ್ಯ ತ್ರಿಮತಸ್ಥ ಸಮಾಜ ಪರಿಷತ್ ಅಧ್ಯಕ್ಷ ಗುರುರಾಜ್ ಬೇಡಿಕರ್, ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಬಿ.ಎಲ್.ಹನುಮಂತಪ್ಪ, ಸಹಬಾಳೆ ಸಂಸ್ಥೆಯ ಮಹಮದ್ ಯೂಸೂಫ್ ಖನಿ ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ ; ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ


