ಕೊಲೆ ಪ್ರಕರಣವೊಂದರಲ್ಲಿ ಸತ್ಯಾಂಶಗಳನ್ನು ಮರೆಮಾಚಿದ ಆರೋಪದ ಮೇಲೆ ಮಧ್ಯಪ್ರದೇಶ ಹೈಕೋರ್ಟ್ ಭೋಪಾಲ್ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮಾಯಾಂಕ್ ಅವಸ್ಥಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಡಿಐಜಿ ಅವಸ್ಥಿ ಅವರಿಗೆ “ನೆಲದ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ. ಅವರು ತಮ್ಮ ಸ್ವಇಚ್ಛೆಯಂತೆ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಅಭ್ಯಾಸ ಹೊಂದಿದ್ದಾರೆ” ಎಂದು ನ್ಯಾಯಮೂರ್ತಿ ಜಿ.ಎಸ್ ಅಹ್ಲುವಾಲಿಯಾ ಆದೇಶ ನೀಡುವ ವೇಳೆ ಹೇಳಿದ್ದಾರೆ.
ದಾತಿಯಾ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿರುವ ಅರ್ಜಿದಾರರಾದ ಮನ್ವೇಂದ್ರ ಸಿಂಗ್ ಗುರ್ಜರ್, ಘಟನೆಯ ದಿನಾಂಕ ಮತ್ತು ಸ್ಥಳದ ಬಗ್ಗೆ ಪ್ರಾಸಿಕ್ಯೂಷನ್‌ನ ಹೇಳಿಕೆಗಳನ್ನು ಪ್ರಶ್ನಿಸಿ 2018ರಲ್ಲಿ ಅರ್ಜಿ ಸಲ್ಲಿಸಿದ್ದರು.
ಘಟನೆ ನಡೆದ ಸ್ಥಳದಲ್ಲಿ ಹತ್ಯೆಗೀಡಾಗಿದ್ದ ವ್ಯಕ್ತಿ ಹಾಗೂ ಸಾಕ್ಷಿದಾರರು ಉಪಸ್ಥಿತರಿರಲಿಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನದ ಭಾಗವಾಗಿ ಕರೆ ವಿವರ ದಾಖಲೆಗಳನ್ನು ಸಂರಕ್ಷಿಸಿಡಬೇಕು ಎಂದು ಅರ್ಜಿದಾರ ಮನ್ವೇಂದರ್ ಸಿಂಗ್ ಗುರ್ಜರ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಕುರಿತು ಪ್ರತಿವಾದ ಮಂಡಿಸಿದ ಅವಸ್ಥಿ, ಈ ಅರ್ಜಿ ತೀರ್ಮಾನವಾಗುವ ಹೊತ್ತಿಗೆ ನಾನು ನನ್ನ ಹುದ್ದೆಯಿಂದ ವರ್ಗಾವಣೆಗೊಂಡಿದ್ದೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವ ಯಾವ ಅಧಿಕಾರವೂ ನನಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ನಿರ್ದಿಷ್ಟ ಮೊಬೈಲ್ ಸಂಖ್ಯೆಗಳ ಕರೆ ವಿವರಗಳು, ಸ್ಥಳಗಳು ಮತ್ತು ಸಿಮ್ ಅನ್ನು ಸಂರಕ್ಷಿಸಿಡಬೇಕು ಎಂದು ವಿಚಾರಣಾ ನ್ಯಾಯಾಲಯ ಆದೇಶಿಸಿರುವುದು ಹಾಗೂ ಈ ವಿವರಗಳನ್ನು ಸೆಪ್ಟೆಂಬರ್ 17, 2018ರಂದು ಅವಸ್ಥಿಗೆ ಇಮೇಲ್ ಮೂಲಕ ರವಾನಿಸಿರುವುದನ್ನು ಮತ್ತು ಅವಸ್ಥಿ ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿರುವುದು ಹೈಕೋರ್ಟ್ ಗಮನಿಸಿದೆ.
ಇಂತಹ ವ್ಯಕ್ತಿಗಳನ್ನು ಪೊಲೀಸ್ ಇಲಾಖೆಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ? ಎಂಬುವುದರ ಕುರಿತು ತೀರ್ಮಾನಿಸಬೇಕು ಎಂದು ಮಧ್ಯಪ್ರದೇಶ ಪೊಲೀಸ್ ಮಹಾ ನಿರ್ದೇಶಕರಿಗೂ ನ್ಯಾಯಾಲಯ ಸೂಚಿಸಿದೆ.
41 ದಲಿತ ಕುಟುಂಬಗಳಿಗೆ ಸರಕಾರವೇ ಪುನರ್ವಸತಿ ಕಲ್ಪಿಸಿದ ಸ್ಥಳದಿಂದ ಜಾಗ ಖಾಲಿ ಮಾಡಲು ನೋಟಿಸ್


